Breaking News

ಕುಡಿಯುವ ನೀರಿನ ಕರ ವಸೂಲಿ ಸಿಬ್ಬಂದಿಯ ಅವ್ಯವಹಾರ: ಸಾರ್ವಜನಿಕರಿಂದ ದೂರು: ಸಿಬ್ಬಂದಿಯ ಅಮಾನತಿಗೆ ನೆಕ್ಕಿಲಾಡಿ ಗ್ರಾ.ಪಂ. ನಿರ್ಣಯ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಕುಡಿಯುವ ನೀರಿನ ಕರ ವಸೂಲಿಗಾರರು ಅವ್ಯವಹಾರ ನಡೆಸಿದ್ದು, ಇವರು ವಂಚನೆ ನಡೆಸಿದ ಬಗ್ಗೆ ಕುಡಿಯುವ ನೀರು ಬಳಕೆದಾರರು ಗ್ರಾ.ಪಂ.ಗೆ ದೂರು ನೀಡಿದ್ದಾರೆ. ಆದ್ದರಿಂದ ಅವರನ್ನು ಕೆಲಸದಿಂದ ಅಮಾನತು ಮಾಡುವ ಕುರಿತಾಗಿ ಸದಸ್ಯರೆಲ್ಲಾ ಒಕ್ಕೊರಲ ನಿರ್ಣಯ ಮಂಡಿಸಿದರು.

ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ. ಪಿಡಿಒ ಜಯಪ್ರಕಾಶ್, ಗ್ರಾ.ಪಂ.ನ ನೀರಿನ ಕರ ವಸೂಲಿ ಸಿಬ್ಬಂದಿ ಶ್ರೀಮತಿ ಚಿತ್ರಾವತಿ ಅವರು ಕರ್ತವ್ಯಲೋಪವೆಸಗಿದ ಬಗ್ಗೆ ಜಿ.ಪಂ.ಗೆ ಬರೆಯಲಾಗಿತ್ತು. ಇದೀಗ ಇವರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಜಿ.ಪಂ. ಗ್ರಾ.ಪಂ.ಗೆ ನಿರ್ದೇಶನ ನೀಡಿದೆ. ಈ ನಡುವೆ ಪಂಚಾಯತ್ ವ್ಯಾಪ್ತಿಯ ಹಲವು ಕುಡಿಯುವ ನೀರಿನ ಬಳಕೆದಾರರು ಇವರು ಕುಡಿಯುವ ನೀರಿನ ಕರ ವಸೂಲಿ ಮಾಡಿ ಗ್ರಾ.ಪಂ.ಗೆ ಕಟ್ಟದಿರುವ ಬಗ್ಗೆ ದಾಖಲೆ ಸಮೇತ ಗ್ರಾ.ಪಂ.ಗೆ ದೂರು ನೀಡಿ, ಇವರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ನೀರಿನ ಕರ ವಸೂಲಿ ಮಾಡಿದರೂ, ರಶೀದಿ ನೀಡದಿರುವುದು, ಗ್ರಾಹಕರಿಂದ ನೀರಿನ ಕರ ವಸೂಲಿ ಮಾಡಿ ಅದಕ್ಕೆ ಅವರಿಗೆ ಕೆಂಪು ಬಣ್ಣದ ಸ್ವೀಕೃತಿ ರಶೀದಿ ನೀಡುವ ಬದಲು, ಅವರಿಗೆ ಬಿಳಿ ಬಣ್ಣದ ಡಿಮಾಂಡ್ ರಶೀದಿಯಲ್ಲಿ ಸ್ವೀಕೃತಿ ನೀಡಿ, ಆ ಹಣವನ್ನು ಗ್ರಾ.ಪಂ.ಗೆ ಕಟ್ಟದೆ ಇರುವುದು ಕಂಡು ಬಂದಿದೆ. ಇವರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಸದಸ್ಯರು ತೀರ್ಮಾನಿಸಬೇಕು ಎಂದರು.

ಸದಸ್ಯ ಎನ್. ಪ್ರಶಾಂತ್ ಈ ಸಂದರ್ಭ ಮಾತನಾಡಿ, ಈ ರೀತಿಯ ವಂಚನೆಯನ್ನು ಸಹಿಸಲು ಸಾಧ್ಯವಿಲ್ಲ. ಕೆಲವರು ಈ ಸಿಬ್ಬಂದಿಗೆ ಬಾಹ್ಯವಾಗಿ ಇವರ ಈ ರೀತಿಯ ಕೆಲಸಕ್ಕೆ ಪ್ರೋತ್ಸಾಹ ನೀಡಿದ್ದರಿಂದಲೇ ಈ ರೀತಿಯಾಗಿದೆ. ಆದ್ದರಿಂದ ಆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದರು. ಸದಸ್ಯೆ ಅನಿ ಮಿನೇಜಸ್, ಉಪಾಧ್ಯಕ್ಷ ಅಸ್ಕರ್ ಅಲಿ ಕೂಡಾ ಇದಕ್ಕೆ ಧನಿಗೂಡಿಸಿದರು. ಅವರನ್ನು ವಜಾ ಮಾಡುವ ನಮ್ಮ ನಿಲುವಿಗೆ ಯಾರದ್ದಾದರೂ ಆಕ್ಷೇಪಗಳಿದ್ದರೆ, ಅದನ್ನು ಹೇಳಿ ಎಂದರು. ಆದರೆ ಈ ಸಂದರ್ಭ ಯಾರೂ ಮಾತನಾಡದೇ ಎಲ್ಲರೂ ಈ ಸಿಬ್ಬಂದಿಯನ್ನು ವಜಾ ಮಾಡುವ ನಿರ್ಣಯವನ್ನು ಒಕ್ಕೊರಲಿನಿಂದ ಅಂಗೀಕರಿಸಿದರು. ಈ ಸಂದರ್ಭ ಸದಸ್ಯೆ ಸತ್ಯವತಿ ಪೂಂಜಾ ಮಾತನಾಡಿ, ನೀರಿನ ಕರ ವಸೂಲಿ ಸಿಬ್ಬಂದಿಯ ಮನೆಗೆ ಗ್ರಾ.ಪಂ.ನಿಂದ ಕುಡಿಯುವ ನೀರಿನ ಸಂಪರ್ಕ ಪಡೆದ ಬಗ್ಗೆ ಪುಸ್ತಕದಲ್ಲಿ ದಾಖಲೆ ಇದೆಯೇ ಎಂಬ ಬಗ್ಗೆ ಮೊದಲು ಪರಿಶೀಲನೆ ನಡೆಸಿ ಎಂದರು.

ಬೀತಲಪ್ಪುವಿನಲ್ಲಿ ಹಲವರು ಕುಡಿಯುವ ನೀರಿನ ಬಿಲ್ ಬಾಕಿಯಿರಿಸಿಕೊಂಡಿದ್ದಾರೆ. ಇಲ್ಲಿ ಪ್ರದೇಶದಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಹಲವಾರು ಅನಧಿಕೃತ ಸಂಪರ್ಕಗಳು ಇದ್ದಿರುವ ಸಾಧ್ಯತೆಯಿದೆ ಎಂಬ ಬಗ್ಗೆ ಚರ್ಚೆಯಾದಾಗ, ಇಲ್ಲಿಯ ಸಂಪರ್ಕ ಪೈಪ್ ಹಳೆಯದಾಗಿದ್ದು, ಅದನ್ನು ಬದಲಾವಣೆ ಮಾಡೋಣ. ಆಗ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿದ್ದರೆ ಗೊತ್ತಾಗುತ್ತದೆ. ಹೊಸ ಪೈಪ್‌ಲೈನ್ ಆದಾಗ ಬಿಲ್ ಬಾಕಿವುಳಿಸಿಕೊಂಡವರಿಗೆ ಸಂಪರ್ಕ ಕೊಡುವುದು ಬೇಡ. ಅವರು ಹಣ ಕಟ್ಟಿ ಮತ್ತೆ ಸಂಪರ್ಕ ಪಡೆಯಲಿ ಎಂಬ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು. ಈ ಸಂದರ್ಭ ಸದಸ್ಯೆ ಸತ್ಯವತಿ ಪೂಂಜಾ ಮಾತನಾಡಿ, ನೀರಿನ ಸಂಪರ್ಕ ಕಡಿತಗೊಳಿಸಿದರೆ, ಬೀತಲಪ್ಪು ಅಂಗನವಾಡಿ ಬಳಿಯಿರುವ ಟ್ಯಾಂಕ್‌ನಿಂದ ಅವರು ನೀರು ತೆಗೆದುಕೊಂಡು ಹೋಗುವ ಸಾಧ್ಯತೆಯಿದೆ. ಆದ್ದರಿಂದ ಅಲ್ಲಿರುವ ಟ್ಯಾಂಕ್ ಅನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದರು. ಇದಕ್ಕೆ ಅನಿ ಮಿನೇಜಸ್ ಮಾತನಾಡಿ, ನೀರು ಜೀವನದ ಅತ್ಯವಶ್ಯಕ ವಸ್ತು. ಅದು ಪ್ರತಿಯೋರ್ವ ನಾಗರಿಕನಿಗೆ ನೀಡುವುದು ಗ್ರಾ.ಪಂ.ನ ಕರ್ತವ್ಯ ಕೂಡಾ. ಅಂಗನವಾಡಿ ಬಳಿಯ ಟ್ಯಾಂಕ್‌ನಿಂದ ಕೊಡಪಾನದಲ್ಲಿ ಕೊಂಡು ಹೋಗುವುದಕ್ಕೆ ಯಾವುದೇ ಆಕ್ಷೇಪ ಬೇಡ. ಅನಧಿಕೃತ ಸಂಪರ್ಕ ಪಡೆದು ಕೃಷಿ ಸೇರಿದಂತೆ ಇತರ ಉದ್ದೇಶಕ್ಕಾಗಿ ಅನಗತ್ಯವಾಗಿ ನೀರನ್ನು ಪೋಲು ಮಾಡುವುದಕ್ಕೆ ಮಾತ್ರ ಕಡಿವಾಣ ಹಾಕೋಣ. ಅಂಗಡಿನವಾಡಿ ಬಳಿ ಇರುವ ಟ್ಯಾಂಕ್ ಅನ್ನು ತೆರವುಗೊಳಿಸುವುದು ಬೇಡ ಎಂದರು. ಪ್ರಶಾಂತ್ ಕೂಡಾ ಇದನ್ನು ಬೆಂಬಲಿಸಿ ಮಾತನಾಡಿದರು.

9/11ನ ಅರ್ಜಿಗಳು ವಿಲೇ ಆಗದೇ ಪೆಂಡಿಂಗ್ ಆಗಿವೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ ಉತ್ತರಿಸಿದ ಪಿಡಿಒ, ಕಳೆದ ನವೆಂಬರ್‌ನಿಂದ ಬಂದ ಅರ್ಜಿಗಳು ಪೆಂಡಿಂಗ್ ಇವೆ. ಇವುಗಳನ್ನು ಪಂಚತಂತ್ರ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡಬೇಕಾಗಿದೆ. ಈ ಸಂದರ್ಭ ತಂತ್ರಾಂಶ ಸಮಸ್ಯೆ, ಸರ್ವರ್ ಸಮಸ್ಯೆಗಳಿಂದಾಗಿ ಅರ್ಜಿಗಳು ವಿಲೇವಾಗುತ್ತಿವೆ ಎಂದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕೆಲವರು ತಂದು ಕಸ ಸುರಿಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಈಗ ಅಲ್ಲಿರುವ ತ್ಯಾಜ್ಯವನ್ನು ಕ್ಲೀನ್ ಮಾಡಿ ಅಲ್ಲಿ ಬೋರ್ಡ್‌ಗಳನ್ನು ಅಳವಡಿಸುವುದು ಹಾಗೂ ಖಾಸಗಿ ವ್ಯಕ್ತಿಗಳ ಸಹಭಾಗಿತ್ವದಲ್ಲಿ ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಮತ್ತು ಕಸ ತಂದು ಸುರಿಯುವವರನ್ನು ಪತ್ತೆ ಹಚ್ಚಿ ೫ ಸಾವಿರದಿಂದ 25 ಸಾವಿರ ತನಕ ದಂಡ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದರು. ಇದಕ್ಕೆ ಸದಸ್ಯರು ಅನುಮೋದನೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯರಾದ ಶೇಖಬ್ಬ ಎನ್., ಪ್ರಶಾಂತ್ ಎನ್., ಬಾಬು ನಾಯ್ಕ, ಮೈಕಲ್ ವೇಗಸ್, ಅನಿ ಮಿನೇಜಸ್, ಸತ್ಯಾವತಿ ಪೂಂಜಾ, ಯಮುನಾ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು-ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.