ಕೊರೋನಾ ಎಫೆಕ್ಟ್: ವಿಪತ್ತು ನಿರ್ವಹಣಾ ಕಾಯಿದೆ ಜಾರಿ! ಜಿಲ್ಲೆಯಲ್ಲಿ ಸರಕಾರಿ ಸೇವೆ ತಾತ್ಕಾಲಿಕ ಸ್ಥಗಿತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಾಗತಿಕವಾಗಿ ಅಟ್ಟಹಾಸ ಗೈಯುತ್ತಿರುವ ಕೊರೊನಾ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿದ್-19 ರೆಗ್ಯೂಲೇಶನ್-20ರ ನಿಯಮ 12 ಮತ್ತು ವಿಪತ್ತು ನಿರ್ವಹಣೆ ಕಾಯಿದೆ- 2005ರ ಕಲಂನಂತೆ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಆಧಾರ್, ಸ್ಥಿರಾಸ್ತಿ ನೋಂದಣಿ ಸಹಿತ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಸಿಂಧೂ ಬಿ.ರೂಪೇಶ್ ಗುರುವಾರ ಆದೇಶಿಸಿದ್ದಾರೆ.

ಸ್ಥಗಿತಗೊಂಡ ಸೇವೆಗಳು:

*ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ ಮತ್ತು ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಗಳು.

* ಆಧಾರ್ ಸೇವೆ ಒದಗಿಸುತ್ತಿರುವ ಕೇಂದ್ರಗಳಲ್ಲಿನ ಸೇವೆಗಳು.
* ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡಲಾಗುತ್ತಿರುವ ಹೊಸ ವಾಹನ ಚಾಲನಾ ಲೈಸೆನ್ಸ್, ಕಲಿಯುವವರ ಪರವಾನಗಿ ನೋಂದಣಿ (ಡ್ರೈವಿಂಗ್ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಲು ನಿರ್ಬಂಧ ಅನ್ವಯಿಸುವುದಿಲ್ಲ).
* ಉಪನೋಂದಣಾಧಿಕಾರಿಗಳ ಕಚೇರಿಯ ಸ್ಥಿರಾಸ್ತಿ ನೋಂದಣಿ ಸೇವೆಗಳು.
* ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು (ಖಾತಾ, ಸಾರ್ವಜನಿಕ ಹರಾಜುಗಳು, ಗ್ರಾಮಸಭೆ, ಇತರ ಲೈಸೆನ್ಸ್ ನೀಡುವಿಕೆ, ಜನನ- ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ಸೇವೆಗಳು)
* ಸಹಕಾರಿ ಸಂಘಗಳ ಉಪನಿಬಂಧಕರ ಹಾಗೂ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು ಸಹಕಾರ ಇಲಾಖೆಗೆ ಸಂಬಂಸಿದಂತೆ ನೀಡಲಾಗುವ ಸೇವೆಗಳು (ಬ್ಯಾಂಕಿಂಗ್ ಹೊರತುಪಡಿಸಿ).
* ಕೃಷಿ/ ತೋಟಗಾರಿಕೆ/ ಮೀನುಗಾರಿಕೆ ಇಲಾಖೆಯ ವಿವಿಧ ಸೇವೆಗಳು (ರೈತ ಆತ್ಮಹತ್ಯೆ, ರೈತ ಆಕಸ್ಮಿಕ ಮರಣಗಳು ಹಾಗೂ ಇತರ ತುರ್ತು ವಿಷಯಗಳನ್ನು ಹೊರತುಪಡಿಸಿದೆ).
* ಸಮಾಜ ಕಲ್ಯಾಣ ಇಲಾಖೆ/ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳ ಸೇವೆಗಳು.
* ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇವೆಗಳು.
ಷರತ್ತುಗಳು: ಈ ಆದೇಶ ತುರ್ತು ಹಾಗೂ ದಿನನಿತ್ಯದ ಸೇವೆಗಳಾದ ಬ್ಯಾಂಕ್, ಅಂಚೆ ಕಚೇರಿ, ಪೊಲೀಸ್ ಸೇವೆಗಳು, ಅಗ್ನಿಶಾಮಕ ಸೇವೆಗಳು, ದೂರವಾಣಿ ಸೇವೆ, ಇಂಟರ್‍ನೆಟ್, ಕೆಎಸ್‌ಆರ್‌ಟಿಸಿ, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಸ್ವಚ್ಛತೆ ಕಾರ್ಯಕ್ರಮ, ಕುಡಿಯುವ ನೀರು, ವಿದ್ಯುಚ್ಛಕ್ತಿ ಪೂರೈಕೆ, ಒಳಚರಂಡಿ ಸೇವೆ, ದಿನಸಿ ತರಕಾರಿ ಮಾರುಕಟ್ಟೆಗಳು, ಆಸ್ಪತ್ರೆಗಳು, ಪಶು ಆಸ್ಪತ್ರೆ, ಔಷಧ ಅಂಗಡಿಗಳು, ಶವಸಂಸ್ಕಾರ ಹಾಗೂ ತುರ್ತು ಸೇವೆಗಳಿಗೆ ಇದು ಅನ್ವಯವಾಗುವುದಿಲ್ಲ.
ಸ್ಥಗಿತ ಮಾಡಲಾದ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದರೂ, ಆ ಕಚೇರಿಗಳಿಗೆ ರಜೆ ಘೋಷಣೆ ಮಾಡಿರುವುದಿಲ್ಲ ಹಾಗೂ ಸಂಬಂಧಿಸಿದ ಎಲ್ಲ ಸಿಬ್ಬಂದಿ ಕಚೇರಿಯಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು. ಅನಧಿಕೃತ ಗೈರುಹಾಜರಿ ಹಾಗೂ ಕಚೇರಿಯನ್ನು ತೆರೆಯದಿದ್ದಲ್ಲಿ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಕಚೇರಿಗಳಿಗೆ ಅಥವಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರ ಭೇಟಿಯನ್ನು ಸಾಧ್ಯವಾದಷ್ಟು ತಡೆಯುವುದು. ಇದಲ್ಲದೆ ತಾತ್ಕಾಲಿಕವಾಗಿ ನಿರ್ಬಂಧಿಸಲ್ಪಟ್ಟ ಮೇಲಿನ ಸೇವೆಗಳಿಗೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ಒದಗಿಸದ ವ್ಯಕ್ತಿಗಳಿಗೆ ಯಾವುದೇ ಸಂಸ್ಥೆ ಅಥವಾ ಇಲಾಖೆ(ಸರಕಾರಿ, ಖಾಸಗಿಹಾಗೂ ನಿಗಮ ಮಂಡಳಿಗಳು) ಆತನ ಮೇಲೆ ಯಾವುದೇ ಕ್ರಮಕೈಗೊಳ್ಳದಂತೆ ಹಾಗೂ ಆತನಿಗೆ ದಾಖಲಾತಿಗಳನ್ನು ಹಾಜರುಪಡಿಸಲು ಸಾಕಷ್ಟು ಕಾಲಾವಕಾಶವನ್ನು ನೀಡುವಂತೆ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.