ಪುತ್ತೂರಿನ ಡಾ.ಸನತ್‌ಕೃಷ್ಣ ಮುಳಿಯ ನೇತೃತ್ವದಲ್ಲಿ ಕಾರ್ಯಾಚರಣೆ ತುಮಕೂರಿನಲ್ಲಿ ನರಭಕ್ಷಕ ಚಿರತೆ ಸೆರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತುಮಕೂರಲ್ಲಿ ನಾಲ್ವರನ್ನು ಬಲಿಪಡೆದುಕೊಂಡಿದ್ದ ನರಭಕ್ಷಕ ಚಿರತೆಯನ್ನು, ಪುತ್ತೂರು ಮೂಲದ ಅರಿವಳಿಕೆ ತಜ್ಞ ಡಾ.ಸನತ್‌ಕೃಷ್ಣ ಮುಳಿಯ ನೇತೃತ್ವದಲ್ಲಿ ಅರಣ್ಯ ಇಲಾಖಾ ತಂಡ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.


ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಂದಿಯನ್ನು ಬಲಿಪಡೆದುಕೊಂಡಿದ್ದ ನರಭಕ್ಷಕ ಚಿರತೆ ಜಿಲ್ಲೆಯ ಜನತೆಯಲ್ಲಿ ಭೀತಿ ಉಂಟು ಮಾಡಿತ್ತು.ಚಿರತೆಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖಾ ತಂಡ ಅವಿರತ ಶ್ರಮವಹಿಸಿತ್ತಾದರೂ ಫಲಕಾರಿಯಾಗಿರಲಿಲ್ಲ. ತುಮಕೂರು ತಾಲೂಕಿನ ಹಾಲನೂರು ಸಮೀಪ ಹೇಮಾವತಿ ಚಾನಲ್ ಮೇಲೆ ಓಡಾಡುತ್ತಿದ್ದ ಜನರ ಕಣ್ಣಿಗೆ ಚಿರತೆ ಬಿದ್ದಿತ್ತಾದರೂ ಜನರನ್ನು ಕಂಡು ಗಾಬರಿಗೊಂಡು ಸೇತುವೆ ಕೆಳಗೆ ಅವಿತುಕೊಂಡಿತು.ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.ಅವರು ಕಾರ್ಯಾಚರಣೆ ನಡೆಸಿದರೂ ಚಿರತೆಯನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ.


ಜೀವಂತ ಸೆರೆಸಿಗದೇ ಇದ್ದ ನರಭಕ್ಷಕ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ಹೊರಡಿಸಲಾಗಿತ್ತು.ಆದರೂ ವಾರ ಕಳೆದರೂ ಚಿರತೆ ಯಾರ ಕಣ್ಣಿಗೂ ಬೀಳದೆ ಜನತೆಯ ನೆಮ್ಮದಿ ಕೆಡಿಸಿತ್ತು.4 ಆನೆ, 25 ಅರಣ್ಯ ಸಿಬಂದಿ, 4 ಮಾವುತರು, 4 ಕಾವಾಡಿಗಳು,4 ಎಸ್‌ಟಿಎಫ್ ಸಿಬಂದಿ, ಇಬ್ಬರು ಶಾರ್ಪ್ ಶೂಟರ್ ಅಲ್ಲದೆ ಹಾಸನದ ಅರವಿಳಿಕ ತಜ್ಞ ಡಾ.ಮುರಳಿ ಸೇರಿದಂತೆ 40 ಮಂದಿಯ ತಂಡ ಅರಣ್ಯ ಇಲಾಖೆ ನೇತೃತ್ವದಲ್ಲಿ ಹಗಲಿರುಳೆನ್ನದೆ ಚಿರತೆ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು.ಆದರೂ ನರಭಕ್ಷಕ ಚಿರತೆ ಪತ್ತೆಯಾಗಿರಲಿಲ್ಲ.ಚಿರತೆಯ ಹೆಜ್ಜೆ ಜಾಡು ಹಿಡಿದು ಹೋದರೂ ಫಲಕಾರಿಯಾಗಲಿಲ್ಲ.ಆದರೂ ಅರಣ್ಯ ಇಲಾಖೆ ಪ್ರಯತ್ನ ಮುಂದುವರಿಸಿತ್ತು.ಇತ್ತ ಜನತೆಯ ಕಣ್ಣಿಗೆ ಬಿದ್ದಿದ್ದ ಚಿರತೆ ಸೇತುವೆಯ ಅಡಿಯಲ್ಲಿ ಅವಿತು ಕುಳಿತಿತ್ತು.
ಡಾ.ಸನತ್‌ಕೃಷ್ಣ ಆಗಮನ: ಅರಣ್ಯ ಇಲಾಖಾ ತಂಡ ಎಷ್ಟೇ ಪ್ರಯತ್ನ ನಡೆಸಿದರೂ ಚಿರತೆಯನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ.ಬಳಿಕ ಶಾರ್ಪ್‌ಶೂಟರ್ ಕೂಡಾ ಆಗಿರುವ ಅರಿವಳಿಕೆ ತಜ್ಞ ಡಾ.ಸನತ್‌ಕೃಷ್ಣ ಮುಳಿಯ ಅವರನ್ನು ಡೆಹ್ರಾಡೂನ್‌ನಿಂದ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು.ಶಾರ್ಪ್‌ಶೂಟರ್ ಅಕ್ರಂ ಅವರನ್ನೂ ಸ್ಥಳಕ್ಕೆ ಕರೆಸಿ ಕಾರ್ಯಾಚರಣೆ ಮುಂದುವರಿಸಲಾಗಿತ್ತು.ಡಾ.ಸನತ್‌ಕೃಷ್ಣ ಅವರು ಸೇತುವೆ ಕೆಳಗೆ ಅಡಗಿದ್ದ ಚಿರತೆಗೆ ಅರಿವಳಿಕೆ ಚುಚ್ಚುಮದ್ದನ್ನು ಶೂಟ್ ಮಾಡಿ ನೀಡುವಲ್ಲಿ ಯಶಸ್ವಿಯಾದ ಬಳಿಕ ಚಿರತೆಯನ್ನು ಸೆರೆಹಿಡಿಯಲಾಯಿತು.

ಡೆಹ್ರಾಡೂನ್‌ನಲ್ಲಿ ವೈಲ್ಡ್ ಲೈಫ್ ಹೆಲ್ತ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಪ್ರೊಜೆಕ್ಟ್ ವೆಟರಿನೇರಿಯನ್ ಆಗಿರುವ ಡಾ.ಸನತ್‌ಕೃಷ್ಣ ಅವರು ವೃತ್ತಿಯಲ್ಲಿ ಅರಿವಳಿಕೆ ತಜ್ಞರು.2013ರಲ್ಲಿ ನರಭಕ್ಷಕ ಹುಲಿಯೊಂದನ್ನು ಇವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿತ್ತು.ಮುಳಿಯ ಕೇಶವ ಭಟ್-ಉಷಾಕೇಶವ ಭಟ್ ಅವರ ಪುತ್ರನಾಗಿರುವ ಡಾ.ಸನತ್‌ಕೃಷ್ಣ ಮುಳಿಯ ಅವರು ಮುಳಿಯ ಕೃಷ್ಣ ಭಟ್ ಮತ್ತು ಕಾವೇರಿಕೃಷ್ಣ ಭಟ್ ಅವರ ಮೊಮ್ಮಗ, ವಿವೇಕಾನಂದ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.