ಕೊರೋನ ಮುನ್ನೆಚ್ಚರಿಕೆ: ಜನತಾ ಕರ್ಫ್ಯೂಗೆ ಸ್ತಬ್ದಗೊಂಡ ಗ್ರಾಮೀಣ ಪ್ರದೇಶ

  • ಅಂಗಡಿ ಮುಂಗಟ್ಟು ಬಂದ್, ರಸ್ತೆ ಖಾಲಿ ಖಾಲಿ, ಮನೆಯಿಂದ ಹೊರಗೆ ಬಾರದ ಜನರು

ಪುತ್ತೂರು: ಪ್ರಪಂಚವನ್ನೇ ಹಿಂಡಿ ಹಿಪ್ಪೆ ಮಾಡಲು ಹೊರಟಿರುವ ಮಹಾಮಾರಿ ಕೊರೋನ ವೈರಸ್ ವಿರುದ್ಧ ದೇಶದಲ್ಲಿ ನಡೆದ ಒಂದು ದಿನದ ಜನತಾ ಕರ್ಫ್ಯೂಗೆ ಇಡೀ ದೇಶವೇ ಬೆಂಬಲ ಸೂಚಿಸಿದೆ. ಮಹಾಮಾರಿ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾ.೨೨ ರಂದು ಜನತಾ ಕರ್ಫ್ಯೂಗೆ ಆದೇಶ ನೀಡಿದ್ದರು. ಆದಿತ್ಯವಾರ ಒಂದು ದಿನ ಬೆಳಿಗ್ಗೆ ೭ ಗಂಟೆಯಿಂದ ರಾತ್ರಿ ೯ ಗಂಟೆಯವರೇಗೆ ಯಾರು ಕೂಡ ಮನೆಯಿಂದ ಹೊರಗೆ ಬಾರದೆ ಮನೆಯಲ್ಲೇ ಇದ್ದುಕೊಂಡು ವೈರಸ್ ವಿರುದ್ಧ ಸಮರ ಸಾರುವಂತೆ ಕರೆ ನೀಡಿದ್ದರು. ಅದರಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಸ್ವತಃ ಕರ್ಫ್ಯೂಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಸಂಪ್ಯ, ಸಂಟ್ಯಾರು, ಕುಂಬ್ರದಿಂದ ಹಿಡಿದು ಗ್ರಾಮೀಣ ಪ್ರದೇಶ ಸಂಪೂರ್ಣ ನಿಶ್ಯಬ್ದವಾಗಿದೆ.

ಅಂಗಡಿ ಮುಂಗಟ್ಟು ಬಂದ್, ರಸ್ತೆ ಖಾಲಿ ಖಾಲಿ
ಗ್ರಾಮೀಣ ಪ್ರದೇಶವಾದ ಸಂಪ್ಯ, ಸಂಟ್ಯಾರು, ಕುಂಬ್ರ, ತಿಂಗಳಾಡಿ, ಕೆಯ್ಯೂರು, ಮಾಡಾವು, ಕಾವು, ಪೆರ್ಲಂಪಾಡಿ, ಈಶ್ವರಮಂಗಲ ಇತ್ಯಾದಿ ಪೇಟೆಗಳು ಸಂಪೂರ್ಣ ಬಂದ್ ಆಗಿದ್ದವು. ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದೇ ಬಂದ್ ಮಾಡಿದ್ದರು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಾ ರಸ್ತೆಗಳು ವಾಹನಗಳಿಲ್ಲದೆ ಖಾಲಿಖಾಲಿಯಾಗಿದ್ದವು. ಬೆರಳೆಣಿಕೆಯ ಕೆಲವೊಂದು ಕಾರು, ಬೈಕ್‌ಗಳು ಮಾತ್ರ ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ಸಂಚರಿಸುತ್ತಿರುವುದನ್ನು ಬಿಟ್ಟರೆ ಉಳಿದಂತೆ ಯಾವುದೇ ವಾಹನಗಳು ಸಂಚರಿಸುತ್ತಿರಲಿಲ್ಲ. ಕುಂಬ್ರ ಮತ್ತು ತಿಂಗಳಾಡಿಯಲ್ಲಿ ಎಟಿಎಂ ಅನ್ನು ಹೊರತು ಪಡಿಸಿದರೆ ಸಂಪೂರ್ಣ ಬಂದ್ ಆಗಿತ್ತು.

ಕೊರೋನ ವೈರಸ್ ಭೀತಿ
ಸದ್ದಿಲ್ಲದೆ ಹರಡುತ್ತಿರುವ ಕೊರೋನ ವೈರಸ್ ಜನರನ್ನು ಎಷ್ಟು ಭಯ ಭೀತಿಗೊಳಿಸಿದೆ ಎಂಬುದು ಇಂದಿನ ಜನತಾ ಕರ್ಫ್ಯೂನಿಂದ ತಿಳಿದು ಬರುತ್ತಿದೆ. ಪ್ರಧಾನಿ ಮೋದಿಯವರು ಕರೆ ನೀಡಿದ್ದರು ಎನ್ನುವುದಕ್ಕಿಂತಲೂ ಜನರು ಕೊರೋನ ವೈರಸ್ ಬಗ್ಗೆ ಭಯಗೊಂಡಿದ್ದಾರೆ. ಈ ಮಹಾಮಾರಿಯನ್ನು ಹೇಗಾದರೂ ಮಾಡಿ ದೇಶದಿಂದ ಓಡಿಸಬೇಕು ಎಂಬ ಪ್ರತಿಜ್ಞೆ ಮಾಡಿಕೊಂಡಿರುವ ಜನರು ಯಾವುದಕ್ಕೂ ತಯಾರಿದ್ದಾರೆ ಎನ್ನುವುದನ್ನು ಜನತಾ ಕರ್ಫ್ಯೂ ತೋರಿಸಿಕೊಟ್ಟಿದೆ. ಒಂದು ದಿನ ಮನೆಯಿಂದ ಹೊರಗೆ ಬರದೇ ಇರುವುದರಿಂದ ಅದೆಷ್ಟೋ ಕೊರೊನ ವೈರಸ್‌ಗಳನ್ನು ಹರಡದಂತೆ ಸಾಯಿಸಬಹುದು ಎಂಬ ವೈದ್ಯರ ಮಾತಿಗೆ ಜನರು ಬೆಲೆ ಕೊಟ್ಟಿದ್ದಾರೆ.ಏನೇ ಆಗಲಿ ಕೊರೋನ ದೇಶವನ್ನು ಬಿಟ್ಟು ತೊಲಗಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.