ಸಂಪಾದಕೀಯ: ಪ್ರಧಾನಿ ಮೋದಿಯವರ ಜನತಾ ಕರ್ಫ್ಯೂ ಕರೆಗೆ ಅಭೂತಪೂರ್ವ ಜನ ಮನ್ನಣೆ ದೊರಕಿದೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
    ಡಾ.ಯು.ಪಿ ಶಿವಾನಂದ [email protected]

ಕೊರೋನಾದ ಈ ಕತ್ತಲಿನಿಂದ ಹೊರಬರಲು ದ.ಕೊರಿಯಾದ ಚಿಕಿತ್ಸಾ ಮಾದರಿ ಮತ್ತು ಮಹಾತ್ಮ ಗಾಂಧಿಯವರ ಸಮಾಧಿಯ ಮೇಲಿನ ಬರಹ ದಾರಿ ದೀಪವಾಗಬಹುದೇ?

ಕೊರೋನಾ ವೈರಸ್ ನಿಯಂತ್ರಣ ಮತ್ತು ನಿರ್ಮೂಲನೆಯ ಬಗ್ಗೆ ಗೌರವಾನ್ವಿತ ಪ್ರಧಾನಿ ಮೋದಿಯವರು ಜನತೆಗೆ ನೀಡಿದ ಕರೆ ಅತ್ಯಂತ ಪ್ರಭಾವಿ ಭಾಷಣವಾಗಿದ್ದು, ಇಡೀ ದೇಶದ ಜನತೆ ಅದಕ್ಕೆ ಕೈಜೋಡಿಸಿದ್ದಾರೆ. ಆ ಭಾಷಣದಲ್ಲಿಯ ಮಾತುಗಳಾದ ‘ಸಂಕಲ್ಪ, ಸಂಯಮ, ಸೋಷಿಯಲ್ ಡಿಸ್ಟೆಂನ್ಸ್ ಮತ್ತು ತಮ್ಮಿಂದ ಇತರರಿಗೆ ಹರಡದಂತೆ ನೋಡಿಕೊಳ್ಳುವ ಜವಾಬ್ಧಾರಿ’ ಯಾವುದೇ ವೈದ್ಯರ ಮಾತಿಗಿಂತ, ಕೊರೋನಾದ ತಜ್ಞರ ವಿವರಣೆಗಿಂತ ಸ್ಪಷ್ಟವಾಗಿದ್ದು, ಹೆಚ್ಚು ಪರಿಣಾಮಕಾರಿಯಾಗಿ ಜನರ ಮನಸ್ಸನ್ನು ತಟ್ಟಿದೆ. ಆದುದರಿಂದ ಸ್ವಯಂಪ್ರೇರಿತರಾಗಿ ಜನತೆ ಅದನ್ನು ಅನುಸರಿಸಿದ್ದಾರೆ. ಅಂತಹ ದೊಡ್ಡ ಸಾಧನೆ ನಮ್ಮಲ್ಲಿ ಹಿಂದೆ ಆಳಿದ ಯಾವುದೇ ಪ್ರಧಾನಿಗೆ ಸಾಧ್ಯವಾಗಿಲ್ಲ. ಇನ್ನು ಮುಂದೆ ಬರುವ ಪ್ರಧಾನಿಗೆ ಸಾಧ್ಯವಾಗಲಾರದು ಎಂದು ಹೇಳಿದರೆ ತಪ್ಪಾಗಲಾರದು.

ದಕ್ಷಿಣ ಕೋರಿಯದ ಚಿಕಿತ್ಸಾ ಮಾದರಿ ಅನುಸರಿದರೆ, ಬಂದ್‌ನ ಅವಶ್ಯಕತೆಯಿಲ್ಲ: ಚೀನಾದ ಉವಾಂಗ್‌ನಲ್ಲಿ ಈ ಕೊರೋನಾ ವೈರಸ್ ಎಂಬ ಕಾಯಿಲೆ ಬಂದಾಗ ಅದನ್ನು ಅವರು ಅಲ್ಲಿಂದ ಹರಡದಂತೆ ಮಾಡಲು ಕೈಗೊಂಡ ಚಿಕಿತ್ಸಾ ಕ್ರಮಗಳನ್ನು ನಾವೂ ಅನುಸರಿಸಬಹುದು. ಕೇವಲ ಹತ್ತು ದಿವಸಗಳಲ್ಲಿ 1400 ಹಾಸಿಗೆಯ ಆಸ್ಪತ್ರೆಯನ್ನು ತೆರೆದದ್ದು ಮಾತ್ರವಲ್ಲ, ಅಲ್ಲಿರುವ ಎಲ್ಲರನ್ನು ಪರೀಕ್ಷೆಗೆ ಮತ್ತು ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿ, ಅದು ಹರಡದಂತೆ ಮಾಡಿ, ೧೪೦ ಕೋಟಿ ಜನರಿರುವ ಆ ದೇಶವನ್ನು ರಕ್ಷಿಸಿದ್ದಾರೆ. ಈ ರೋಗವನ್ನು ಹರಡದಂತೆ ತಡೆಯುವುದರಲ್ಲಿ ಪರೀಕ್ಷಾ ಕೇಂದ್ರಗಳು ಮತ್ತು ಐಸೊಲೇಷನ್ ವಾರ್ಡ್‌ಗಳು ಅತ್ಯಂತ ಅವಶ್ಯವೆಂದು ಎಲ್ಲರೂ ತಿಳಿದಿದ್ದಾರೆ. ದ.ಕೊರಿಯಾ ಸರಕಾರ ಯಾವುದೇ ಸಾರ್ವಜನಿಕ ಲಾಕ್ ಡೌನ್ ಇಲ್ಲದೆ ಜನರನ್ನು ಕೊರೋನಾದಿಂದ ರಕ್ಷಿಸುತ್ತಿದೆ. ಐದು ಕೋಟಿ ಜನರಿರುವ ದೇಶದಲ್ಲಿ ಮೂರು ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲಿಯ ಮಂತ್ರವೇ ಕೊರೋನಾಕ್ಕೆ ಪರೀಕ್ಷೆ – ಪರೀಕ್ಷೆ-ಪರೀಕ್ಷೆ. ಕೊರೋನಾ ಪೀಡಿತರಿಗೆ ಐಸೋಲೇಶನ್ ಮತ್ತು ಚಿಕಿತ್ಸೆ

ಕೊರೋನಾ ಚಿಕಿತ್ಸೆಗಾಗಿ ಅಲ್ಲಲ್ಲಿ ಪರಿಶೀಲನಾ ಕೇಂದ್ರಗಳ ಅವಶ್ಯಕತೆ: ಚಂದ್ರನಲ್ಲಿಗೆ ಪ್ರಯಾಣಿಸುವ ಶಕ್ತಿಯನ್ನು, ತಂತ್ರಜ್ಞಾನವನ್ನು ಆಟಂಬಾಂಬ್ ತಯಾರಿಕೆಯ ತಂತ್ರಜ್ಞಾನವನ್ನು ಹೊಂದಿರುವ ನಮಗೆ ದೇಶದ ಎಲ್ಲಾ ರಾಜ್ಯಗಳ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಕೇಂದ್ರಗಳಲ್ಲಿಯೂ ಕೋರೋನಕ್ಕೆ ಪರೀಕ್ಷಾ ಮತ್ತು ಚಿಕಿತ್ಸಾ ಕೆಂದ್ರ ತೆರೆಯುವ ಸಾಮರ್ಥ್ಯವಿಲ್ಲವೇ? ಖಂಡಿತಾ ಇದೆ. ಸರಕಾರಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಸಾಮರ್ಥ್ಯವಿಲ್ಲದಿದ್ದರೂ, ಸ್ಥಳೀಯ ಜನರ ಸಹಕಾರ, ಆರ್ಥಿಕ ಬೆಂಬಲದಿಂದ ಮತ್ತು ವೈದ್ಯರುಗಳ ಸಹಾಯ ಹಸ್ತದಿಂದ ಅದನ್ನು ಮಾಡಬಹುದು. ಪ್ರಧಾನಿ ಮೋದಿಯವರ ಕರೆಗೆ ಇಡೀ ದೇಶವೇ ಸ್ಪಂದಿಸುವುದರಿಂದ ಈ ಮನವಿಯನ್ನು ಅವರ ಮುಂದಿರಿಸಲು ಬಯಸುತ್ತೇನೆ.

ಪರದೇಶದಿಂದ ಬಂದವರಿಗೆ ಪರಿಶೀಲನೆ ಮಾಡಿಯೇ ಒಳಗೆ ಬಿಡಬೇಕಿತ್ತು, ಬಿಡಬೇಕು: ದೇಶದೊಳಗೆ ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ವಿಧಾನಗಳಿಗೆ ಎಲ್ಲರ ಬೆಂಬಲ ಅಗತ್ಯ. ಇದು ಪರದೇಶಗಳಿಂದ ಬಂದವರಿಂದ ಹರಡಿದ ಮತ್ತು ಹರಡುವ ಕಾಯಿಲೆಯಿಂದ ಅವರನ್ನು ಪರಿಶೀಲಿಸಿ ಬಿಡುವ ಮತ್ತು ದೇಶದೊಳಗೆ ಕೂಡ ಅದು ಹರಡದಂತೆ ಮಾಡುವ ಕಟ್ಟುನಿಟ್ಟಿನ ಕ್ರಮ ಅತ್ಯವಶ್ಯ. (ಇದು ಭಾರತದ ಕಾಯಿಲೆ ಆಗದೆ ಹೊರದೇಶದಿಂದ ಬಂದ ವೈರಸ್ ಆಗಿರುವುದರಿಂದ ಅವುಗಳನ್ನು ಬಾರದಂತೆ ತಡೆಯುತ್ತಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಹೇಳುವವರಿದ್ದಾರೆ). ದೇಶದ ಒಳಗಿನ ಗ್ರಾಮ ಗ್ರಾಮದ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ ಸಂಶಯಿತರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಭಯದ ನಿವಾರಣೆ ಮಾಡಬೇಕು. ಅದರ ಬದಲು ಭಯ ಹುಟ್ಟಿಸಿ ವ್ಯವಹಾರವನ್ನು ಸ್ಥಗಿತಗೊಳಿಸುವ ವಾತಾವರಣ ಉಂಟುಮಾಡಬಾರದು. ಆ ರೀತಿ ಮಾಡಿದರೆ ವ್ಯವಹಾರದಲ್ಲಿ ಕೋಟಿಗಟ್ಟಲೆ ಹಣ ನಷ್ಟವಾಗಬಹುದು. ಅದನ್ನು ಮಾಡದೆ ಆ ಹಣವನ್ನು ರೋಗದ ಚಿಕಿತ್ಸೆಗೆ, ತಡೆಗಟ್ಟುವುದಕ್ಕೆ ಪರಿಶೀಲನೆಗೆ ಉಪಯೋಗಿಸುವಂತೆ ಎಲ್ಲಾ ಸರಕಾರಗಳಿಗೆ ಕರೆ ನೀಡಬೇಕೆಂದು ಆಶಿಸುತ್ತೇವೆ. ಉದಾಹರಣೆಗಾಗಿ, ಪುತ್ತೂರಿನಲ್ಲಿಯ ವ್ಯವಹಾರ ಸ್ಥಗಿತಗೊಂಡರೆ ದಿನನಿತ್ಯ ಕೋಟ್ಯಾಂತರ ರೂ. ನಷ್ಟವಾಗುತ್ತದೆ. ರಾಜ್ಯದಲ್ಲಿ, ದೇಶದಲ್ಲಿ ಸಾವಿರಾರು ಕೋಟಿಗಳು ನಷ್ಟವಾಗಬಹುದು. ಆದುದರಿಂದ ವ್ಯವಹಾರವನ್ನೇ ಬಂದ್ ಮಾಡುವ ಬದಲು ಆ ನಷ್ಟವಾಗುವ ಹಣವನ್ನು ಉಪಯೋಗಿಸಿ ಲ್ಯಾಬ್‌ಗಳನ್ನು (ಪರೀಕ್ಷಾ ಕೇಂದ್ರಗಳನ್ನು) ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು, ರೋಗಿಗಳನ್ನು ಐಸೋಲೇಟ್ ಮಾಡಲು ಉಪಯೋಗಿಸಿದರೆ ಅದರಿಂದ ಶಾಶ್ವತ ಪರಿಹಾರವಾಗಬಹುದು ಎಂದು ನಮ್ಮ ಅನಿಸಿಕೆ. ಸದ್ಯಕ್ಕೆ ಲಾಕ್‌ಡೌನ್ ದಾರಿ ಎಂದು ಕಂಡು ಬಂದರೂ ಭಾರತದಲ್ಲಿ ದ.ಕೊರಿಯಾದ ಮಾದರಿಯನ್ನು ಮಾಡದಿದ್ದರೆ ಎಷ್ಟು ದಿವಸ ಎಂದು ಕೊರೋನಾಕ್ಕೆ ಹೆದರಿ ಲಾಕ್ ಡೌನ್ ಮಾಡಿ ಇರಬಹುದು. ಕೊರೊನಾ ಖಾಯಿಲೆ ಈ ತಿಂಗಳ ೩೧ಕ್ಕೆ ನಿವಾರಣೆಯಾಗುತ್ತದೆಯೇ? ಪುನಃ ಖಾಯಿಲೆ ಬಂದರೆ ಏನು ಮಾಡುವುದು ಎಂದು ಚಿಂತಿಸಬೇಕಲ್ಲವೇ?. ಅದಕ್ಕಾಗಿ ಈ ಮನವಿಯನ್ನು ಪ್ರಧಾನಿಯವರ ಮತ್ತು ರಾಜ್ಯ ಸರಕಾರದ ಮುಂದಿಡಲು ಬಯಸುತ್ತೇನೆ.

ಹಸಿದವನಿಗೆ ಅನ್ನವೇ ದೇವರು: ಹೀಗೆ ಮುಂದುವರಿದರೆ, ಜೀವನಕ್ಕೆ ಕಷ್ಟವಾಗಬಹುದು: ನಮ್ಮ ದೇಶದಲ್ಲಿ ದಿನನಿತ್ಯ ದುಡಿದರೂ ಜೀವನಕ್ಕೆ ಸಾಕಾಗುವುದಿಲ್ಲ ಎಂಬ ಪರಿಸ್ಥಿತಿ ಹಲವಾರು ಜನರಲ್ಲಿ ಇರುವಾಗ, ಹಲವಾರು ದಿನಗಳ ಲಾಕ್‌ಡೌನ್ ನಡೆದರೆ ಆ ಸಾರ್ವಜನಿಕ ಬಂದ್‌ನಿಂದ ಆಗುವ ತೊಂದರೆಗಳಿಗೆ, ಸ್ಥಗಿತಗೊಳ್ಳುವ ವ್ಯವಹಾರಗಳಿಂದ ಉಂಟಾಗುವ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವೇನು? ಈಗಾಗಲೇ ಇರುವ ಹಲವಾರು ರೋಗಗಳಿಗೆ ಅನ್ನ, ನೀರು, ಔಷಧಿ ಮತ್ತು ಮೆಡಿಕಲ್‌ಕೇರ್ ದೊರಕದಿದ್ದರೆ ಏನಾಗಬಹುದು. ಈ ಹೊಡೆತದಿಂದ, ಆರ್ಥಿಕ ಸಮಸ್ಯೆಯಿಂದ ಚೇತರಿಸಲು ಸಾಧ್ಯವಾಗದಿರಬಹುದು. ಕೆಲಸ ಕಳೆದುಕೊಂಡು, ಹಣದ ಮುಗ್ಗಟ್ಟು ಉಂಟಾಗಿ ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆಯೂ ಜಾಸ್ತಿಯಾಗಬಹುದು. ಒಂದು ಖಾಯಿಲೆಯಿಂದ ರಕ್ಷಣೆಗಾಗಿ ಇತರ ಖಾಯಿಲೆಗೆ, ದುರ್ಘಟನೆಗೆ ಬಲಿಯಾಗುವ ಸಂಭವ ಬರಬಹುದು. ಅದರ ಪರಿಹಾರಕ್ಕಾಗಿ ಸಣ್ಣ ಮಟ್ಟಿನಲ್ಲಿ ಉ.ಪ್ರ. ಸರಕಾರ ಕಾರ್ಮಿಕರಿಗೆ ತಿಂಗಳಿಗೆ ಒಂದು ಸಾವಿರ ಪರಿಹಾರ ನೀಡುತ್ತಿವೆ. ದೆಹಲಿ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇರಳ ಸರಕಾರ ಈ ಪರಿಸ್ಥಿತಿಯಿಂದ ಹೊರಬರಲು ಜನರಿಗೆ ೨೦ ಸಾವಿರ ಕೋಟಿಯಲ್ಲಿ ಅಗತ್ಯವುಳ್ಳ ಸೇವೆ ನೀಡುತ್ತಿವೆ ಎಂದು ತಿಳಿದುಬಂದಿದೆ. ಆರ್ಥಿಕ ಸಾಮರ್ಥ್ಯವುಳ್ಳ ಇತರ ದೇಶಗಳು ಜನರ ಜೀವನಕ್ಕೆ ತೊಂದರೆ ಆಗದಂತೆ ಬಿಲಿಯನ್ ಗಟ್ಟಲೆ ಡಾಲರ್ ಇರಿಸಿವೆ.

ಮಹಾತ್ಮ ಗಾಂಧಿಯವರ ಸಮಾಧಿಯ ಮೇಲೆ ‘ಸಮಾಜದ ನಾಯಕರು ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಸಮಾಜದ ಕಟ್ಟ ಕಡೆಯ ದುರ್ಬಲ ವ್ಯಕ್ತಿಗೆ ಅದರಿಂದ ಆಗಬಹುದಾದ ತೊಂದರೆ ಮತ್ತು ಒಳಿತಿನ ಬಗ್ಗೆ ಚಿಂತಿಸಿ ನಂತರ ಅದನ್ನು ಅನುಷ್ಠಾನಗೊಳಿಸಬೇಕು’ ಎಂದು ಬರೆದಿದೆ. ಇಂತಹ ಸಂದರ್ಭಗಳಲ್ಲಿ ಆ ಬರಹವನ್ನು ಅನುಸರಿಸಿ ನಮ್ಮ ದೇಶದ ನಾಯಕರು ನಿರ್ಣಯ ತೆಗೆದುಕೊಳ್ಳುವಂತಾಗಲಿ. ಮಹಾತ್ಮ ಗಾಂಧಿಯವರ ೧೫೦ನೇ ಜನ್ಮದಿನದ ಸಂಭ್ರಮದಲ್ಲಿರುವ ನಮ್ಮ ದೇಶದಲ್ಲಿ ಆದು ಅನುಷ್ಠಾನಕ್ಕೆ ಬರಲಿ ಎಂದು ಹಾರೈಸುತ್ತೇನೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.