ಕೊರೊನಾ ವೈರಸ್ ಭೀತಿ; ನೆಲ್ಯಾಡಿ ಗ್ರಾ.ಪಂ.ನಲ್ಲಿ ವರ್ತಕರ ಜೊತೆ ಸಭೆ

Puttur_Advt_NewsUnder_1
Puttur_Advt_NewsUnder_1
  • ವ್ಯಾಪಾರ ಸ್ಥಗಿತಕ್ಕೆ ಮನವಿ: ಮಧ್ಯಾಹ್ನದ ವೇಳೆಗೆ ಪೂರ್ಣ ಬಂದ್

ನೆಲ್ಯಾಡಿ: ಮಂಗಳೂರಿನಲ್ಲಿ ಮಾ.22ರಂದು ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಮಾ.31ರ ತನಕ ದ.ಕ.ಜಿಲ್ಲೆ ಸಂಪೂರ್ಣ ಲಾಕ್‌ಡೌನ್‌ಗೆ ಜಿಲ್ಲಾಡಳಿತ ಆದೇಶ ನೀಡಿದ್ದರೂ ಇದಕ್ಕೆ ಕ್ಯಾರೇ ಎನ್ನದೇ ಮಾ.23ರಂದು ಬೆಳಿಗ್ಗೆ ನೆಲ್ಯಾಡಿ ಪೇಟೆಯಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿತ್ತು. ರಿಕ್ಷಾ, ಜೀಪುಗಳ ಓಡಾಟವೂ ಆರಂಭಗೊಂಡಿತ್ತು. ಇದರಿಂದ ಪೇಟೆಯಲ್ಲಿ ಜನದಟ್ಟಣೆಯೂ ಇತ್ತು. ಈ ಮಧ್ಯೆ ನೆಲ್ಯಾಡಿ ಗ್ರಾ.ಪಂ.ನಲ್ಲಿ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾ.ಪಂ.ಆಡಳಿತ ಮಂಡಳಿಯವರು ವರ್ತಕರ ಜೊತೆ ಸಭೆ ನಡೆಸಿ ತುರ್ತು ಸೇವೆಗಳನ್ನು ಹೊರತುಪಡಿಸಿ ಎರಡೂ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಲು ನಿರ್ಧರಿಸಿ ಈ ಬಗ್ಗೆ ಮೈಕ್‌ನಲ್ಲಿ ಪ್ರಚಾರ ಮಾಡಲಾಯಿತು. ಇದಕ್ಕೆ ವರ್ತಕರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು ಮಧ್ಯಾಹ್ನದ ವೇಳೆಗೆ ಪೇಟೆಯಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಆಗಿದ್ದವು.

ಎಂದಿನಂತೆ ವ್ಯಾಪಾರ:
ಕೊರೊನಾ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯಾದ್ಯಂತ ಮಾ.22ರ ರಾತ್ರಿ 9 ಗಂಟೆಯಿಂದ ಮಾ.31ರ ಮಧ್ಯರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ರವರು ಆದೇಶ ನೀಡಿದ್ದರು. ನಿಷೇಧಾಜ್ಞೆ ಅವಧಿಯಲ್ಲಿ ಹಾಲು, ಹಣ್ಣು, ತರಕಾರಿ, ಮಾಂಸ, ಮೀನು, ಪತ್ರಿಕೆ, ಮೆಡಿಕಲ್ ಶಾಪ್, ಆಹಾರ, ಪಡಿತರ, ಸರಕು ಸಾಗಾಣಿಕೆ ಮತ್ತು ಅಗ್ನಿಶಾಮಕ ಸೇವೆ ಸೇರಿ ಕೆಲವೊಂದು ತುರ್ತು ಸೇವೆಗೆ ಅವಕಾಶ ನೀಡಲಾಗಿತ್ತು. ಈ ಆದೇಶವಿದ್ದರೂ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ನೆಲ್ಯಾಡಿ ಪೇಟೆ ಸೇರಿದಂತೆ ಅಸುಪಾಸಿನ ಪೇಟೆಯಲ್ಲಿಯೂ ವ್ಯಾಪಾರ ವಹಿವಾಟುಗಳು ಎಂದಿನಂತೆ ಆರಂಭಗೊಂಡಿತು. ರಿಕ್ಷಾ, ಸರ್ವೀಸ್ ಜೀಪುಗಳ ಓಡಾಟವೂ ನಡೆಯುತ್ತಿತ್ತು. ಇದರಿಂದಾಗಿ ಪೇಟೆಯಲ್ಲಿ ಜನರ ಓಡಾಟವೂ ಎಂದಿನಂತೆ ಇತ್ತು. ದಿನಸಿ ಸೇರಿದಂತೆ ಆಹಾರ ಸಾಮಾಗ್ರಿಗಳ ಖರೀದಿಗಾಗಿ ಜನರು ಅಂಗಡಿಗಳ ಮುಂದೆ ಮುಗಿಬಿದ್ದಿರುವುದು ಕಂಡುಬಂದಿತ್ತು.

ಗ್ರಾ.ಪಂ.ನಲ್ಲಿ ಸಭೆ:
ಕೊರೊನಾ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತಂತೆ ಚರ್ಚಿಸಲು ವರ್ತಕರೊಂದಿಗೆ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾ.ಪಂ.ಆಡಳಿತ ಸಮಿತಿಯ ಜಂಟಿ ಸಭೆ ಬೆಳಿಗ್ಗೆ ನೆಲ್ಯಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು, ವಿಶ್ವವನ್ನೇ ಬೆಚ್ಚಿಬೀಳಿಸಿರುವ ಮಾರಕ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಾವು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಲ್ಲಿ ಜನ ದಟ್ಟಣೆ ನಿಯಂತ್ರಣ ಸಾಧ್ಯವಿಲ್ಲ. ಅಂಗಡಿಗಳು ಬಂದ್, ವಾಹನಗಳ ಓಡಾಟ ಸ್ಥಗಿತಗೊಂಡಲ್ಲಿ ಜನ ದಟ್ಟಣೆಯೂ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ‍್ಯತೆ ಇದೆ ಎಂದರು. ಬಳಿಕ ಸಭೆಯಲ್ಲಿದ್ದ ವರ್ತಕರು, ಜನಪ್ರತಿನಿಧಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾಡಳಿತದ ಆದೇಶದಂತೆ ತುರ್ತು ಸೇವೆಗಳನ್ನು ಹೊರತುಪಡಿಸಿ ಪೇಟೆಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮೈಕ್ ಮೂಲಕ ಪ್ರಚಾರ ಮಾಡುವ ನಿರ್ಧಾರಕ್ಕೆ ಬರಲಾಯಿತು. ಸಭೆಯಲ್ಲಿ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ಪಿಡಿಒ ಮಹೇಶ್, ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷೆ ಉಮಾವತಿ, ಸದಸ್ಯರುಗಳಾದ ಜಯಾನಂದ ಬಂಟ್ರಿಯಾಲ್, ಅಬ್ದುಲ್ ಹಮೀದ್, ಉಷಾ ಜೋಯಿ, ಉಮಾವತಿ, ಫ್ಲೋರಿನಾ ಡಿ.ಸೋಜ, ಮೋಹಿನಿ, ಕೆ.ಪಿ.ಅಬ್ರಹಾಂ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯ, ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್ಸ್‌ಟೇಬಲ್ ಹರಿಶ್ಚಂದ್ರ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ಪದಾಧಿಕಾರಿಗಳಾದ ಜೋಸ್ ಕೆ.ಜೆ.ನೆಲ್ಯಾಡಿ, ಮಹಮ್ಮದ್ ಹನೀಫ್, ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಜೆಸಿಐ ಅಧ್ಯಕ್ಷ ಶಿವಪ್ರಸಾದ್ ಸೇರಿದಂತೆ ವರ್ತಕರು ಉಪಸ್ಥಿತರಿದ್ದರು. ಪಿಡಿಒ ಮಂಜುಳ ಎನ್.,ಸ್ವಾಗತಿಸಿ, ಕಾರ್ಯದರ್ಶಿ ದೇವರಾಜ್‌ರವರು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಮಧ್ಯಾಹ್ನದ ವೇಳೆಗೆ ಬಂದ್:
ಗ್ರಾ.ಪಂ.ನಿಂದ ಮೈಕ್‌ನ ಮೂಲಕ ಪ್ರಚಾರ ಮಾಡಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಯಿತು. ವಾಹನಗಳ ಓಡಾಟವನ್ನೂ ಸ್ಥಗಿತಗೊಳಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ವರ್ತಕರು ಅಂಗಡಿಗಳನ್ನು ಬಂದ್ ಮಾಡಲಾರಂಭಿಸಿದರು. ಮಧ್ಯಾಹ್ನದ ವೇಳೆಗೆ ಹೋಟೆಲ್, ದಿನಸಿ ಅಂಗಡಿಗಳು ಸೇರಿದಂತೆ ಸಂಪೂರ್ಣ ಪೇಟೆ ಬಂದ್ ಆಯಿತು. ಗ್ರಾಮ ಪಂಚಾಯತ್ ಕಚೇರಿ, ಸರಕಾರಿ ಕಚೇರಿಗಳು, ಸಹಕಾರ ಸಂಘಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಪೆಟ್ರೋಲ್ ಪಂಪ್‌ಗಳು ಎಂದಿನಂತೆ ಕಾರ‍್ಯನಿರ್ವಹಿಸಿವೆ. ಬಸ್ಸು, ಖಾಸಗಿ ವಾಹನಗಳ ಓಡಾಟ ಸ್ಥಗಿತಗೊಂಡಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ವಾಹನ ಸಂಚಾರ ವಿರಳವಾಗಿತ್ತು. ಗೋಳಿತ್ತೊಟ್ಟು, ಉದನೆ ಸೇರಿದಂತೆ ಇತರ ಸಣ್ಣಪುಟ್ಟ ಪೇಟೆಗಳೂ ಸಂಪೂರ್ಣ ಬಂದ್ ಆಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.