- ವರ್ತಕರಿಗೆ ತೊಂದರೆ ಆದರೆ ಇಮಿಡಿಯಟ್ ಹೇಳಿ
- ಸರಕು ವಾಹನಗಳಿಗೆ, ಸಿಬಂದಿಗಳಿಗೆ ಪಾಸ್ ವ್ಯವಸ್ಥೆ
ಪುತ್ತೂರು: ಕೊರೊನಾ ವೈರಸ್ ಸೋಂಕು ಹರಡದಂತೆ ಪ್ರಧಾನ ಮಂತ್ರಿಯವರು ೨೧ ದಿನಗಳ ಲಾಕ್ಡೌನ್ ಮಾಡಿದ್ದಾರೋ ಅದಕ್ಕೆ ಪೂರಕವಾಗಿ ಜನರಿಗೆ ದಿನವಾಹಿ ಅಗತ್ಯ ವಸ್ತುಗಳ ಕೊರತೆ ಆಗಬಾರದು ಮತ್ತು ಸಾರ್ವಜನಿಕರಿಗೂ ಸಮಸ್ಯೆ ಆಗಬಾರದು. ಒಂದು ವೇಳೆ ಏನೆ ಸಮಸ್ಯೆ ಬಂದರೂ ಇಮಿಡಿಯಟ್ ನಮಗೆ ತಿಳಿಸಿ. ಸರಕು ವಾಹನಗಳಿಗೆ ಮತ್ತು ನಿಮ್ಮ ಸಿಬಂದಿಗಳಿಗೆ ಪಾಸ್ ಮಾಡಿಸಿಕೊಳ್ಳಿ ಎಂದು ದ.ಕಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್. ಲಕ್ಷ್ಮೀಪ್ರಸಾದ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಅವರು ವರ್ತಕರಿಗೆ ಸಲಹೆ ನೀಡಿದ್ದಾರೆ.
ಪುತ್ತೂರಿನ ದಿನಸಿ ವ್ಯಾಪಾರಸ್ಥರು, ಸಂತೆ ಮಾರುಕಟ್ಟೆ ತರಕಾರಿ ವ್ಯಾಪಾರಸ್ಥರು, ದಿನವಾಹಿ ದಿನಸಿ, ಮೆಡಿಕಲ್ ಶಾಪ್, ಪೆಟ್ರೋಲ್ ಪಂಪ್, ಅಡುಗೆ ಅನಿಲ ಸೇರಿದಂತೆ ಒಟ್ಟು ವರ್ತಕರೊಂದಿಗೆ ಅವರು ಮಾ.೨೫ರಂದು ರಾತ್ರಿ ಪುತ್ತೂರು ದರ್ಬೆಯಲ್ಲಿರುವ ನಿರೀಕ್ಷಣಾ ಮಂದಿರದಲ್ಲಿ ಮಾತುಕತೆ ನಡೆಸಿ ಯಾವುದೇ ಸಮಸ್ಯೆ ಬಾರದಂತೆ ಸಮಾಲೋಚನೆ ತಮ್ಮ ಕಡೆಯಿಂದಾಗುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಇಷ್ಟರ ತನಕ ತರಕಾರಿ, ದಿನಸಿ ಸಾಮಾಗ್ರಿಗಳು, ತರಕಾರಿ, ಹಣ್ಣು, ಮೆಡಿಸಿನ್, ವಿದ್ಯುತ್, ನೀರಿನ ಸೌಲಭ್ಯಗಳು ಸರಿಯಾಗಿ ನಡೆಯುತ್ತಿದೆ. ಇವೆಲ್ಲ ಸರಿಯಾಗಿ ಪ್ಲಾನ್ನಲ್ಲಿ ನಡೆಯುತ್ತಾ ಇಲ್ಲವೋ ಎಂದು ವರ್ತಕರೊಂದಿಗೆ ಮಾಹಿತಿ ಪಡೆದು ಕೊಂಡಿದ್ದು, ಕೆಲವೊಂದು ಸಮಸ್ಯೆ ಇರುವುದನ್ನು ನಾಳೆಯ ಒಳಗಡೆ ಬಗೆ ಹರಿಸಲಾಗುವುದು. ಯಾವುದೇ ಕಾರಣಕ್ಕೂ ಅಗತ್ಯ ವಸ್ತುಗಳ ಸರಬರಾಜು ನಿಲ್ಲುವುದಿಲ್ಲ. ಮನೆಯಲ್ಲಿ ಎಷ್ಟು ದಿನಸಿ ಸಾಮಾಗ್ರಿಗಳು ಬೇಕೆಂಬ ಕುರಿತು ಸರಕಾರದ ಕಡೆಯಿಂದ ವ್ಯವಸ್ಥೆ ಮಾಡಲಾಗುತ್ತಿದೆ. ಜನರು ಯಾವುದೇ ಭಯ ಪಡುವ ಅಗತ್ಯವಿಲ್ಲ. ೨೧ ದಿನ ಎಲ್ಲಾ ಸೌಲಭ್ಯಗಳು ಸಪ್ಲಾಯಿ ಇದೆ. ಈ ನಿಟ್ಟಿನಲ್ಲಿ ಜನರು ಮನೆಯಲ್ಲೇ ಇದ್ದು ಸಾಮಾಜಿಕ ಅಂತರ ಕಾಯ್ದು ಕೊಳ್ಳಿ. ಮನೆಯವರ ಹತ್ತಿರವೂ ಸಾಮಾಜಿಕ ಅಂತರ ಕಾಯ್ದು ಕೊಳ್ಳಿ ಎಂದು ಎಸ್ಪಿ ಬಿ.ಎಮ್. ಲಕ್ಷ್ಮೀಪ್ರಸಾದ್ ಹೇಳಿದರು.
ಒಬ್ಬರು ಇಲ್ಲದಿದ್ದರೆ ಇಬ್ಬರು ಮಾತ್ರ ಬನ್ನಿ:
ಮನೆಯಿಂದ ಆಚೆ ಬಂದಾಗ ಒಬ್ಬರು ಇಲ್ಲದಿದ್ದರೆ ಇಬ್ಬರು ಮಾತ್ರ ಬನ್ನಿ ದಿನಸಿ, ತರಕಾರಿ, ಮೆಡಿಸಿನ್ ತೆಗೆದು ಕೊಳ್ಳಲು ಮನೆಯವರೆಲ್ಲಾ ಬರಬೇಡಿ. ಬಂದ ಮೇಲೆ ಎಷ್ಟು ಕೆಲಸ ಇದೆ ಅಷ್ಟನ್ನೆ ಮಾಡಿ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಬೇಗ ಮನೆಗೆ ತೆರಳಿ. ಯಾರೂ ಕೂಡ ಸಮಯ ಹಾಳು ಮಾಡಬೇಡಿ. ಇಲ್ಲಿ ಎಲ್ಲರ ಜವಾಬ್ದಾರಿ ಇದೆ. ತೊಂದರೆ ಇದ್ದರೆ ಜಿಲ್ಲಾಧಿಕಾರಿಗಳ ಕಂಟ್ರೋಲ್ ರೂಮ್ ೧೦೭೭ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ೧೦೦ ಮತ್ತು ೧೧೨ ಇದೆ. ಅದಕ್ಕೆ ಕಾಲ್ ಮಾಡಿ ಎಂದು ಬಿ.ಎಮ್. ಲಕ್ಷ್ಮೀಪ್ರಸಾದ್ ವಿನಂತಿಸಿದ್ದಾರೆ.
ಅಂಗಡಿ ಸಿಬಂದಿಗಳಿಗೆ ಪಾಸ್ ಸೌಲಭ್ಯ:
ಪೆಟ್ರೋಲ್ ಪಂಪ್, ದಿನಸಿ ಅಥವಾ ಇತರ ಮೆಡಿಕಲ್ನಲ್ಲಿ ವರ್ತಕರಿಗೆ, ಕೆಲಸ ಮಾಡುವ ಸಿಬಂದಿಗಳು ಅಥವಾ ಇದಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ಕೆಲಸ ಮಾಡುವ ಉದ್ದೇಶದಿಂದ ಬರುವಾಗ ಅಡಚಣೆ ಆಗುತ್ತದೆ ಎಂದಿದ್ದರೆ ತಹಶೀಲ್ದಾರ್, ಇನ್ಸ್ಪೆಕ್ಟರ್, ಕಾರ್ಯನಿರ್ವಹಣಾಧಿಕಾರಿ ಸಮಿತಿ ಇದೆ. ಆ ಸಮಿತಿಯ ಮೂಲಕ ನಿಮ್ಮ ಐಡಿ ತೋರಿಸಿ ಪಾಸ್ ಪಡೆದು ಕೊಳ್ಳಬಹುದು. ಈ ಪಾಸ್ನ್ನು ಬೇರೆ ಉದ್ದೇಶಕ್ಕೆ ಉಪಯೋಗಿಸಬೇಡಿ ಎಂದು ಎಸ್ಪಿ ಬಿ.ಎಮ್.ಲಕ್ಷ್ಮೀಪ್ರಸಾದ್ ಹೇಳಿದರು.
ಕುಡಿಯುವ ನೀರು, ವಿದ್ಯುತ್ ಸೌಲಭ್ಯ ನಿರಂತರ:
ಪಂಚಾಯತ್ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಪೂರ್ಣ ರೀತಿಯಲ್ಲಿ ನಡೆಯಲಿದೆ. ಎಲ್ಲಿಯೂ ಅಡಚಣೆ ಆಗದಂತೆ ಕಾರ್ಯ ನಿರ್ವಹಿಸಲಾಗಿದೆ. ಇದರ ಜೊತೆಗೆ ಪಡಿತರ ಸೌಲಭ್ಯದಲ್ಲೂ ತೊಂದರೆ ಆಗುವುದಿಲ್ಲ. ದಿನವಾಹಿ ಸಾಮಾಗ್ರಿಗಳ ಕುರಿತು ವರ್ತಕರ ಜೊತೆ ಮಾತು ಕತೆ ನಡೆಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರಮೇಶ್ ಬಾಬು, ಡಿವೈಎಸ್ಪಿ ದಿನಕರ್ ಶೆಟ್ಟಿ, ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕುಸುಮಾಧರ್, ನಗರ ಪೊಲೀಸ್ ಠಾಣೆ ಎಸ್.ಐ ಜಂಬುರಾಜ್ ಮಹಾಜನ್ ಸೇರಿದಂತೆ ಅಧಿಕಾರಿ ವರ್ಗದವರು ಹಾಗೂ ವರ್ತಕರು, ತರಕಾರಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.