೧.೭ ಲಕ್ಷ ಕೋಟಿ ರೂ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರಕಾರ

Puttur_Advt_NewsUnder_1
Puttur_Advt_NewsUnder_1

ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್, ೫ ಕೆ.ಜಿ. ಅಕ್ಕಿ, ಗೋಧಿ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ 

ಬೆಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಹರಡುವುದನ್ನು ತಡಗಟ್ಟುವ ಸಲುವಾಗಿ ದೇಶಾದ್ಯಂತ ಎಪ್ರಿಲ್ ೧೪ರವರೆಗೆ ಲಾಕ್‌ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು, ೧.೭ ಲಕ್ಷ ಕೋಟಿ ರೂ ಪರಿಹಾರ ಪ್ಯಾಕೇಜ್ ಘೋಷಿಸಿದರು. ಲಾಕ್‌ಡೌನ್ ಘೋಷಿಸಿರುವುದರಿಂದ ಬಡವರು ಹಾಗೂ ಕಾರ್ಮಿಕರಿಗೆ ನಿತ್ಯ ಬದುಕೇ ಸವಾಲಾಗಿದೆ. ಹೊತ್ತಿನ ಹಸಿವು ನೀಗಿಸಲು ಕೂಲಿ ಮಾಡಿಯೇ ದುಡ್ಡು ಗಳಿಸಬೇಕಾದ ಸ್ಥಿತಿಯಲ್ಲಿ ಕೋಟ್ಯಂತರ ಜನರಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಬಡ ಜನರಿಗಾಗಿಯೇ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಿರ್ಮಲಾ ಸೀತರಾಮನ್‌ರವರ ಹೇಳಿಕೆಗಳು:
* ವಲಸೆ ಬಂದಿರುವ ಕಾರ್ಮಿಕರು, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗಾಗಿ ೧.೭ ಲಕ್ಷ ಕೋಟಿ ರೂ. ಪ್ಯಾಕೇಜ್ ಸಿದ್ಧವಿದೆ. ಯಾರನ್ನೂ ಹಸಿವಿನಿಂದ ಬಳಲಲು ಬಿಡುವುದಿಲ್ಲ.

* ವೈದ್ಯರು, ಪ್ಯಾರಾಮೆಡಿಕ್, ಆರೋಗ್ಯ ಕಾರ್ಯಕರ್ತರಿಗೆ ತಲಾ ೫೦ ಲಕ್ಷ ರೂ. ವಿಮೆ ಯೋಜನೆ.

* ಮಹಿಳಾ ಜನ ಧನ್ ಖಾತೆ ಹೊಂದಿರುವವರು ಪ್ರತಿ ತಿಂಗಳಿಗೆ ೫೦೦ ರೂ. ಪಡೆಯಲಿದ್ದಾರೆ. ಇದು ಮುಂದಿನ ೩ ತಿಂಗಳವರೆಗೂ ಮುಂದುವರಿಯಲಿದೆ. ಇದರಿಂದ ೨೦ ಕೋಟಿ ಮಹಿಳಾ ಖಾತೆದಾರರಿಗೆ ಅನುಕೂಲವಾಗಲಿದೆ.

* ಮುಂದಿನ ೩ ತಿಂಗಳುಗಳ ಕಾಲ ೮೦ ಕೋಟಿ ಬಡ ಜನರಿಗೆ ೫ ಕೆಜಿ ಗೋಧಿ ಅಥವಾ ಅಕ್ಕಿ ಮತ್ತು ೧ ಕೆ.ಜಿ. ಇತರ ಧಾನ್ಯಗಳು ಲಭಿಸಲಿವೆ. ೮೦ ಕೋಟಿ ಫಲಾನುಭವಿಗಳು ಈ ಯೋಜನೆಯಡಿ ಬರಲಿದ್ದಾರೆ. ಈಗಾಗಲೇ ಪ್ರತಿ ವ್ಯಕ್ತಿಗೆ ನಿಗದಿಯಾಗಿರುವ ೫ ಕೆ.ಜಿ ಅಕ್ಕಿ ಅಥವಾ ಗೋಧಿಯ ಜತೆಗೆ ೫ ಕೆ.ಜಿ. ಆಹಾರ ಪದಾರ್ಥ ಉಚಿತವಾಗಿ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ೧ ಕೆ.ಜಿ. ಬೇಳೆ ಕಾಳು ಸಿಗಲಿದೆ.

* ಕೊರೋನಾ ವೈರಸ್ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ೩ ತಿಂಗಳವರೆಗೂ ೫೦ ಲಕ್ಷ ರೂ ಮೊತ್ತದ ಆರೋಗ್ಯ ವಿಮೆ ಒದಗಿಸಲಾಗುತ್ತದೆ.

* ನೇರ ನಗದು ವರ್ಗಾವಣೆ ಯೋಜನೆ ಅಡಿಯಲ್ಲಿ ಅಂಗವಿಕಲರು, ರೈತರು ಹಾಗೂ ಬಡ ಪಿಂಚಣಿದಾರರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತದೆ. ೮.೬ ಕೋಟಿ ರೈತರು ಏಪ್ರಿಲ್ ಮೊದಲ ವಾರದಲ್ಲಿ ೨,೦೦೦ ರೂ. ಪಡೆಯಲಿದ್ದಾರೆ.

* ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ ೩ ತಿಂಗಳವರೆಗೂ ಮೂರು ಅನಿಲ ಸಿಲಿಂಡರ್‌ಗಳು ಉಚಿತವಾಗಿ ಪೂರೈಕೆ ಆಗಲಿದೆ. ಇದರಿಂದಾಗಿ ೮ ಕೋಟಿ ಮಹಿಳೆಯರು ಲಾಭ ಪಡೆಯಲಿದ್ದಾರೆ.

* ಹಿರಿಯ ನಾಗರಿಕರು, ವಿಧವೆಯರು, ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತವಾಗಿ ೧,೦೦೦ ರೂ. ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು ೩ ಕೋಟಿ ಜನರಿಗೆ ಇದರಿಂದ ಅನುಕೂಲವಾಗಲಿದೆ.

* ಮುಂದಿನ ೩ ತಿಂಗಳ ಇಪಿಎಫ್ ಮೊತ್ತವನ್ನು (ಸಂಸ್ಥೆಗಳು ಮತ್ತು ಉದ್ಯೋಗಿಗಳ) ಸರ್ಕಾರವೇ ತುಂಬಲಿದೆ.

* ೧೦೦ ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ ೧೫,೦೦೦ ರೂ.ವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಪಿಎಫ್ ಕೊಡುಗೆ.

* ಇಪಿಎಫ್ ಯೋಜನೆಗೆ ತಿದ್ದುಪಡಿ ತರಲಾಗುತ್ತದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ. ೭೫ರಷ್ಟು ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ನೀಡಲಾಗುತ್ತದೆ. ಕಾರ್ಮಿಕರು ೩ ತಿಂಗಳ ಸಂಬಳ ಅಥವಾ ಶೇ. ೭೫ರಷ್ಟು ಮುಂಗಡ ಮೊತ್ತ; ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್ ನೋಂದಾಯಿಸಿರುವ ಸುಮಾರು ೪.೮ ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

* ಕಟ್ಟಡ ನಿರ್ಮಾಣ ಕಾರ್ಮಿಕರ (ನೋಂದಾಯಿತ ೩.೫ ಕೋಟಿ ಕಾರ್ಮಿಕರು) ಪರಿಹಾರಕ್ಕಾಗಿ ರಾಜ್ಯ ಸರ್ಕಾರಗಳು ೩೧,೦೦೦ ಕೋಟಿ ರೂ. ನಿಧಿಯನ್ನು ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

* ಡಿಸ್ಟ್ರಿಕ್ಟ್ ಮಿನೆರಲ್ ಫಂಡ್: ವೈದ್ಯಕೀಯ ಪರೀಕ್ಷೆ, ಆರೋಗ್ಯ ಸೇವೆಗಳಿಗಾಗಿ ರಾಜ್ಯ ಸರ್ಕಾರಗಳು ಈ ಫಂಡ್‌ನ ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಸೂಚಿಸಿದೆ.

* ನರೇಗಾ ಕಾರ್ಯಕ್ರಮದ ಅಡಿಯಲ್ಲಿ ದಿನ ಕೂಲಿಯನ್ನು ರೂ. ೧೮೨ರಿಂದ ರೂ. ೨೦೨ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ೫ ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.