ದೇಶದಾದ್ಯಂತ ತಾಂಡವವಾಡುತ್ತಿರುವ ಕೊರೊನಾ ಗ್ರಾಮೀಣ ಭಾಗದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕಂಟಕ

Puttur_Advt_NewsUnder_1
Puttur_Advt_NewsUnder_1

ಲೋಕೇಶ್ ಬನ್ನೂರು

 

  • ತರಕಾರಿ ಬೆಳೆಗೆ ಮಾರುಕಟ್ಟೆಯೇ ಇಲ್ಲ !
  • ಅಡಿಕೆ ಈಗ ಯಾರಿಗೂ ಬೇಡವೇ !
  • ಅಸಂಘಟಿತ ವಲಯದ ಕಾರ್ಮಿಕರು ಕಂಗಾಲು !


ಪುತ್ತೂರು: ದೇಶದಾದ್ಯಂತ ಯಾಕೆ ಜಗತ್ತಿನಾದ್ಯಂತ ತಾಂಡವವಾಡುತ್ತಿರುವ ಕೊರೊನಾ ವೈರಸ್ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. ಗ್ರಾಮೀಣ ಭಾಗದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕಂಟಕ ತಂದಿರುವ ಈ ಕೊರೊನಾ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದಂತೆ ಮಾಡಿದೆ.

ಕೊರೊನಾ ಭೀತಿಯಿಂದ ಮಾ.೨೨ರಂದು ಪ್ರಧಾನಿಯವರ ಕರೆಯಂತೆ ಜನತಾ ಕರ್ಫ್ಯೂ ಒಂದು ಯಶಸ್ವಿಯಾದರು ನಂತರ ಇಡೀ ದೇಶವನ್ನೇ ಲಾಕ್‌ಡೌನ್ ಮಾಡುವ ಮೂಲಕ ಕೊರೊನಾ ಮಾರಿಯನ್ನು ಹಿಮ್ಮೆಟ್ಟಿಸುವ ಕೆಲಸ ನಡೆಯುತ್ತಿದೆ. ಆದರೆ ಇಲ್ಲಿ ಜನತೆಯ ಸ್ಪಂಧನೆ ಸಮರ್ಪಕವಾಗಿಲ್ಲ. ಈ ನಡುವೆ ಗ್ರಾಮೀಣ ಭಾಗದ ರೈತರು-ಕೂಲಿ ಕಾರ್ಮಿಕರ ಬದುಕು ಅತಂತ್ರಗೊಂಡಿದೆ.

ಫೆಬ್ರವರಿ ತಿಂಗಳಿನಿಂದ ಎಪ್ರಿಲ್ ತನಕ ಗ್ರಾಮೀಣ ಭಾಗದ ಬಹುತೇಕ ರೈತರು ತರಕಾರಿ ಬೆಳೆಯುವುದು ರೂಢಿ. ಗ್ರಾಮೀಣ ಭಾಗದಲ್ಲಿರುವ ಗದ್ದೆಗಳ ಕೊಯ್ಲು ನಡೆದ ನಂತರ ಗದ್ದೆಯಲ್ಲಿ ಸೌತೆ, ತೊಂಡೆಕಾಯಿ, ಹರಿವೆ ಮತ್ತಿತರ ತರಕಾರಿಗಳನ್ನು ಬೆಳೆದ ರೈತರು ಕೊರೊನಾ ಸಮಸ್ಯೆಯಿಂದ ಮಾರುಕಟ್ಟೆ ಇಲ್ಲದೆ ಪರದಾಡುತ್ತಿದ್ದಾರೆ. ಎಷ್ಟೋ ಮಂದಿ ರೈತರು ತಮ್ಮ ತರಕಾರಿಗಳನ್ನು ಹೊತ್ತುಕೊಂಡು ಮನೆ ಮನೆಗೆ ಹೋಗುತ್ತಿದ್ದಾರೆ. ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗದೆ ಸಮಸ್ಯೆಗೊಳಗಾಗಿದ್ದಾರೆ. ಸೋಮವಾರ ಪುತ್ತೂರಿನಲ್ಲಿ ನಡೆಯುವ `ವಾರದಸಂತೆ’ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಬಂದ್ ಆಗಿರುವ ಪರಿಣಾಮ ರೈತರು ಉತ್ಪನ್ನಗಳು ಹಾಳಾಗುತ್ತಿರುವುದನ್ನು ಕಂಡು ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ಅನಿವಾರ್ಯವಾಗಿದೆ.

ಅಡಿಕೆ ಈಗ ಯಾರಿಗೂ ಬೇಡವೇ !: ಜೆಲ್ಲೆಯಲ್ಲಿ ರೈತರನ್ನು ಕಾಪಾಡುವ ಏಕೈಕ ಬೆಳೆಯಾದ ಅಡಿಕೆಗೆ ಮಾರುಕಟ್ಟೆಯೇ ಇಲ್ಲದಂತಾಗಿದೆ. ಕೆಜಿಯೊಂದಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ರೂ.೨೬೫ ಗಳಿಗೆ ಮಾರಾಟವಾಗುತ್ತಿದ್ದ ಅಡಿಕೆ ಈಗ ಯಾರಿಗೂ ಬೇಡವಾಗಿದೆ. ಬಂದ್ ನಡುವೆಯೂ ಬೆಳಗ್ಗಿನ ಹೊತ್ತು ಅಲ್ಲೊಂದು ಇಲ್ಲೊಂದು ಅಡಿಕೆ ಅಂಗಡಿಗಳು ರೈತರಿಂದ ಅಡಕೆ ಖರೀದಿ ಮಾಡಿದರೂ ಅಡಿಕೆ ಬೆಲೆ ರೂ.೨೨೦ಕ್ಕೆ ಇಳಿದಿದೆ. ಅಡಿಕೆ ಮಾರುಕಟ್ಟೆ ಬಂದ್ ಹಾಗೂ ಧಾರಣೆ ಕುಸಿತದಿಂದ ಅಡಿಕೆ ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಅಡಿಕೆ ವ್ಯಾಪಾರಿಗಳಿಗೂ ವ್ಯಾಪಾರವೇ ಇಲ್ಲದೆ ಪರದಾಡುತ್ತಿದ್ದಾರೆ. ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಸಹಕಾರಿ ಬ್ಯಾಂಕ್ ಗಳಿಗೆ ಸಾಲದ ಕಂತು ಮರುಪಾವತಿ ಮಾಡಬೇಕಾದ ರೈತ ಅಡಕೆಗೆ ಮಾರುಕಟ್ಟೆ ಇಲ್ಲದ ಕಾರಣ ಸಾಲದ ಕಂತು ಪಾವತಿಸಲು ಸಾಧ್ಯವೇ ಇಲ್ಲದಂತಾಗಿದೆ. ರಾಜ್ಯ ಸರಕಾರ ಸಾಲದ ಕಂತು ಮರುಪಾವತಿ ಮಾಡಲು ಅವಧಿ ಮುಂದುವರಿಸಿದ್ದರೂ ಗ್ರಾಮೀಣ ಭಾಗದ ಕೆಲವು ಸಹಕಾರಿ ಬ್ಯಾಂಕ್ ಗಳು ಜನರಿಗೆ ಒತ್ತಡ ತರುತ್ತಿವೆ ಎಂಬ ಆರೋಪವೂ ಜನರಿಂದ ವ್ಯಕ್ತವಾಗಿದೆ.

ಅಸಂಘಟಿತ ವಲಯದ ಕಾರ್ಮಿಕರು ಕಂಗಾಲು: ಕಟ್ಟಡ ಕಾರ್ಮಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರು ಕೊರೊನಾ ಭೀತಿ ಹಿನ್ನಲೆಯಲ್ಲಿ ನಡೆಯುತ್ತಿರುವ ಬಂದ್ ನಿಂದ ದೊಡ್ಡ ಪೆಟ್ಟು ತಿಂದಿದ್ದಾರೆ. ಉಣ್ಣುವ ಅನ್ನಕ್ಕೂ ತತ್ವಾರ ಬರುವಂತಹ ಸ್ಥಿತಿ ಕೆಲವೇ ದಿನಗಳಲ್ಲಿ ನಡೆದಿದ್ದು, ಎಪ್ರಿಲ್ ೧೪ ವರೆಗೆ ಇದೇ ರೀತಿ ಲಾಕ್‌ಡೌನ್ ಆಗಿರುವ ಹಿನ್ನಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಯಾವುದೇ ಭಾಗದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಯಾರೂ ಕೆಲಸಕ್ಕೆ ಕರೆಯುವುದಿಲ್ಲ ಎನ್ನುವ ಸ್ಥಿತಿ ಇವರದ್ದಾಗಿದೆ. ಗ್ರಾಮೀಣ ಭಾಗದಲ್ಲಿ ಎಷ್ಟೋ ಮನೆಗಳು ಕಾರ್ಮಿಕರ ಸಮಸ್ಯೆಯಿಂದ ಅರ್ಧದಲ್ಲಿಯೇ ನಿಂತಿದೆ. ತಾಲೂಕಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಈ ಕಟ್ಟಡ ಕಾರ್ಮಿಕರು ಹೋಗಬೇಕಾಗಿದ್ದು, ೧೧ ಗಂಟೆಯ ನಂತರ ರಸ್ತೆಯಲ್ಲಿ ಹೋಗದಂತೆ ಪೊಲೀಸರು ತಡೆಯುವ ಭಯದಿಂದ ಕಟ್ಟಡ ಕಾರ್ಮಿಕರಿಗೆ ಪ್ರಸ್ತುತ ಕೆಲಸವೇ ಇಲ್ಲದಂತಾಗಿದೆ. ವಾಹನ ಸೌಕರ್ಯವಿಲ್ಲದ ಕಾರಣ ಈ ಕಾರ್ಮಿಕರು ದಿನನಿತ್ಯದ ಆಹಾರಕ್ಕೂ ಪರದಾಟ ನಡೆಸುವ ಸ್ಥಿತಿ ಕೇವಲ ೪ ದಿನಗಳಲ್ಲಿ ಉಂಟಾಗಿದೆ. ಇನ್ನು ೨೧ ದಿನಗಳ ಕಾಲ ಅನಿವಾರ್ಯವಾಗಿ ಮನೆಯಲ್ಲಿ ಉಳಿಯಬೇಕಾದ ಸ್ಥಿತಿ ಇರುವುದರಿಂದ ಬದುಕಿನ ಆತಂಕದಲ್ಲಿ ಕಾರ್ಮಿಕರಿದ್ದಾರೆ.

ವಾಸ್ತವವಾಗಿ ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯುವ ಹಿನ್ನಲೆಯಲ್ಲಿ ೨೧ ದಿನಗಳ ಕಾಲ ದೇಶವನ್ನು ಲಾಕ್‌ಡೌನ್ ಮಾಡಿರುವುದನ್ನು ಕಾರ್ಮಿಕರೂ ಸ್ವಾಗತಿಸುತ್ತಿದ್ದರೂ, ಕೆಲಸವೇ ಇಲ್ಲದೆ ಬದುಕುವ ದಾರಿಯನ್ನು ತಿಳಿಯದೆ ಗೊಂದಲಕ್ಕೆ ಒಳಗಾಗಿದ್ದಾರೆ. ಕಟ್ಟಡ ನಿರ್ಮಾಣ ಅರ್ಧದಲ್ಲಿ ನಿಂತ ಪರಿಣಾಮ ಕಟ್ಟಡ ನಿರ್ಮಿಸುತ್ತಿರುವ ಮಾಲಕರ ಪರಿಸ್ಥಿತಿಯೂ ಚಿಂತಾಜನಕ ಸ್ಥಿತಿಯತ್ತ ವಾಲುತ್ತಿದೆ.

ಆಸ್ಪತ್ರೆಗೂ ಎಂಟ್ರಿ ಇಲ್ಲ!: ಕಟ್ಟಡ ಕಾರ್ಮಿಕರು ಸೇರಿದಂತೆ ಅನೇಕ ಮಂದಿ ತೀರ ಬಡತನದಲ್ಲಿದ್ದು ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ದಾಖಲಿಸಲಾಗಿದೆ ಎಂಬ ತಪ್ಪು ಅಭಿಪ್ರಾಯದಿಂದ ಸಣ್ಣಪುಟ್ಟ ಜ್ವರ ಬಾದೆಗೆಂದು ಸರಕಾರಿ ಆಸ್ಪತ್ರೆಗೆ ಹೋಗದೆ ಖಾಸಗಿ ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾದ ಭಯದಿಂದ ರೋಗಿಗಳು ತಪ್ಪು ತಪ್ಪು ಮಾಹಿತಿ ನೀಡಿ ದಾಖಲಾಗುತ್ತಿದ್ದಾರೆಂಬ ಆತಂಕದಿಂದ ಜ್ವರ ಎಂದು ಬಂದವರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆಂಬ ಆರೋಪವೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಕೊರೊನಾ ಭಯ ಎಲ್ಲರ ಮನದಲ್ಲೂ ಭಯ ಹುಟ್ಟಿಸಿದ್ದಂತೂ ನಿಜ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.