ಕೊರೊನಾ ನಿಗ್ರಹಕ್ಕೆ ಸಹಕಾರಿಗಳ ಆರ್ಥಿಕ ಸ್ಪಂದನೆಗೆ ಡಾ|| ರಾಜೇಂದ್ರ ಕುಮಾರ್ ಮನವಿ

Puttur_Advt_NewsUnder_1
Puttur_Advt_NewsUnder_1
  • ಎಸ್‌ಸಿಡಿಸಿಸಿ ಬ್ಯಾಂಕಿನಿಂದ ರೂ.1 ಕೋಟಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ರೂ.50 ಲಕ್ಷ ನೆರವು
  • ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನಿಂದ 50,000 ಮಾಸ್ಕ್

ಮಂಗಳೂರು: ಕೋವಿಡ್-19 ಎಂಬ ವೈರಾಣು ಜಗತ್ತಿನಾದ್ಯಂತ ಹರಡುತ್ತಿರುವ ಸಾಂಕ್ರ್ರಾಮಿಕ ರೋಗದಿಂದ ಗಣನೀಯ ಪ್ರಮಾಣದಲ್ಲಿ ಜನರು ಸಾವಿಗೀಡಾಗುತ್ತಿದ್ದು, ಈ ರೋಗವನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಸಮಾರೋಪಾದಿ ಕ್ರಮಕೈಗೊಂಡಿರುತ್ತದೆ. ಈ ಸಂದರ್ಭದಲ್ಲಿ ಮನುಷ್ಯನ ಬದುಕು ಮುಖ್ಯವಾಗಿದ್ದು ಈ ಮಾನವೀಯತೆಯ ಕಾರ್ಯವನ್ನು ದೇಶದ ಪ್ರಧಾನ ಮಂತ್ರಿಗಳು ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಕೈಗೊಂಡಿರುವ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಸಹಕಾರಿ ಕ್ಷೇತ್ರವು ಕೈಜೋಡಿಸುವ ಅಗತ್ಯವಿದೆ. ಈ ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರೂ.೧ ಕೋಟಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ರೂ.೫೦ ಲಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಂದು ದಿನದ ವೇತನವನ್ನು ನೀಡಲಾಗುವುದು. ಮಾತ್ರವಲ್ಲದೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನಿಂದ ೫೦೦೦೦ ಮಾಸ್ಕನ್ನು ನೀಡಲಾಗುವುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿ ಸಂಘ, ಸಂಸ್ಥೆಗಳು, ಉದ್ಯಮಿಗಳು ಹಾಗೂ ಸಮಸ್ತ ಜನತೆ ಈ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಹೆಚ್ಚಿನ ಆರ್ಥಿಕ ನೆರವನ್ನು ನೀಡುವಂತೆ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|| ಎಮ್.ಎನ್.ರಾಜೇಂದ್ರ ಕುಮಾರ್‌ರವರು ಮನವಿ ಮಾಡಿಕೊಂಡಿದ್ದಾರೆ.


ಈ ಸಂಕಷ್ಟಮಯ ಪರಿಸ್ಥಿತಿಯಲ್ಲಿರುವ ಸಂಧರ್ಭದಲ್ಲಿ ಪ್ರಧಾನಮಂತ್ರಿಗಳ ಹಾಗೂ ಮುಖ್ಯಮಂತ್ರಿಗಳ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಗೆ ಕೈಜೋಡಿಸುವುದು ಸಹಕಾರಿಗಳೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಸರಕಾರದ ಜೊತೆ ಸಹಕಾರ ಕ್ಷೇತ್ರವೂ ಕೈಜೋಡಿಸುವ ಮುಖಾಂತರ ವೈದ್ಯಕೀಯ ಸಾಮಾಗ್ರಿಗಳನ್ನು ಹಾಗೂ ಸೋಂಕಿತರ ಚಿಕಿತ್ಸೆಗೆ ಆರ್ಥಿಕ ನೆರವನ್ನು ಸರಕಾರಕ್ಕೆ ನೀಡಬೇಕಾಗಿರುವುದು ಸಹಕಾರಿಗಳೆಲ್ಲರ ಕರ್ತವ್ಯವಾಗಿದೆ ಎಂದವರು ಹೇಳಿದ್ದಾರೆ.
ಈ ಹಿಂದೆ ದೇಶಕ್ಕೆ ಹಾಗೂ ರಾಜ್ಯಕ್ಕೆ ಪ್ರಕೃತಿ ವಿಕೋಪ ಸಂಭವಿಸಿದ ಸಂಧರ್ಭದಲ್ಲಿ ಸಹಕಾರಿಗಳೆಲ್ಲರೂ ಹೆಚ್ಚಿನ ಆರ್ಥಿಕ ನೆರವನ್ನು ನೀಡಿ ಸಾಮಾಜಿಕ ಸ್ಪಂದನೆಯನ್ನು ಮೆರೆದಿರುತ್ತಾರೆ. ಈ ಹಿಂದೆ ೧೯೯೯ರ ಕಾರ್ಗಿಲ್ ಯುದ್ಧದ ಸಂಧರ್ಭದಲ್ಲಿ, ೨೦೦೧ರ ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ, ೨೦೦೪ರ ಸುನಾಮಿ, ೨೦೦೯ರ ಉತ್ತರ ಕರ್ನಾಟಕದ ನೆರೆ ಪರಿಹಾರ, ೨೦೧೩ರ ಉತ್ತರಾಖಂಡ ಜಲಪ್ರಳಯ, ೨೦೧೫ರ ತಮಿಳುನಾಡು ಪ್ರಕೃತಿ ವಿಕೋಪ, ೨೦೧೮ರ ಕೇರಳ ಹಾಗೂ ಕೊಡಗು ನೆರೆ ಸಂತ್ರಸ್ತರಿಗೆ ಹಾಗೂ ೨೦೧೯ರ ಉತ್ತರ ಕರ್ನಾಟಕ, ಕೊಡಗು ಹಾಗೂ ಕರಾವಳಿ ಜಿಲ್ಲೆಗಳ ನೆರೆಪೀಡಿತ ಸಂತ್ರಸ್ತರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳು ಹಾಗೂ ಸಹಕಾರಿ ಸಂಸ್ಥೆಗಳು ಸ್ಪಂದಿಸಿ ಅಪಾರ ದೇಣಿಗೆಯನ್ನು ರಾಜ್ಯ ಸರಕಾರಕ್ಕೆ ಸಮರ್ಪಿಸಿರುವುದನ್ನು ನೆನಪಿಸಿಕೊಂಡ ಡಾ|| ಎಮ್.ಎನ್.ರಾಜೇಂದ್ರ ಕುಮಾರ್‌ರವರು ಈ ಬಾರಿ ಕೊರೋನಾ ವೈರಸ್ ಮಹಾಮಾರಿಯ ನಿಗ್ರಹಕ್ಕೆ ಹೆಚ್ಚಿನ ಆರ್ಥಿಕ ನೆರವನ್ನು ರಾಜ್ಯ ಸರಕಾರಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮನವಿ ಮಾಡಿಕೊಂಡಿದ್ದು ಈ ನಿಟ್ಟಿನಲ್ಲಿ ಸಹಕಾರಿಗಳೆಲ್ಲರೂ, ಸಹಕಾರಿ ಸಂಸ್ಥೆಗಳು, ಉದ್ಯಮಿಗಳು ಹಾಗೂ ಸಮಸ್ತ ಜನತೆ ಒಗ್ಗೂಡಿ ಗರಿಷ್ಠ ದೇಣಿಗೆಯನ್ನು ““SCDCC Bank, Kodialbail Branch A/c No.505/757 COVID-19 Relief Fund” ಖಾತೆಗೆ ನಗದು/ ಚೆಕ್/ ಆರ್.ಟಿ.ಜಿ.ಎಸ್ ಮುಖಾಂತರ ನೀಡುವಂತೆ ಡಾ|| ಎಮ್.ಎನ್.ರಾಜೇಂದ್ರ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಸಂಗ್ರಹವಾದ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ದೇಶಕ್ಕೆ ಬಂದಿರುವ ಕೊರೊನಾ ವೈರಸ್ ಮಹಾಮಾರಿಯನ್ನು ನಿಗ್ರಹಿಸುವ ದೃಷ್ಠಿಯಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಕಾರ್ಯಗಳು ಜನಮೆಚ್ಚುಗೆಯನ್ನು ಪಡೆದಿದ್ದು, ಮುಖ್ಯಮಂತ್ರಿಗಳು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರೊಂದಿಗೆ ವೈದ್ಯಕೀಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮವು ಕೈಜೋಡಿಸಿರುವುದು ಪ್ರಶಂಸನೀಯ. ಸಮಸ್ತ ಸಹಕಾರಿಗಳ ಪರವಾಗಿ ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಡಾ.ರಾಜೇಂದ್ರ ಕುಮಾರ್ ಹೇಳಿದ್ದಾರೆ.

 

ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ 105 ಶಾಖೆಗಳ ವ್ಯವಹಾರದ ಸಮಯವನ್ನು ಬೆಳಿಗ್ಗೆ ೧೦ ಘಂಟೆಯಿಂದ ೨ಘಂಟೆಯವರೆಗೆ ನಿಗದಿಗೊಳಿಸಿರುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಸಹಕಾರ ಸಂಘಗಳಿಗೂ ಇದೇ ಸಮಯದಲ್ಲಿ ವ್ಯವಹಾರವನ್ನು ನಡೆಸುವಂತೆ ಸೂಚಿಸಲಾಗಿದೆ. ರೈತರಿಗೆ ಅಡಿಕೆ ಅಡಮಾನ ಸಾಲ ನೀಡುವುದು ಮತ್ತು ಪಡಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡುವುದರ ಜೊತೆಗೆ ಸಹಕಾರ ಸಂಸ್ಥೆಗಳು ಬ್ಯಾಂಕಿಂಗ್ ಸೇವೆಯನ್ನು ನಿಗದಿತ ಸಮಯದಲ್ಲಿ ನೀಡುವಂತೆಯೂ ಡಾ.ರಾಜೇಂದ್ರ ಕುಮಾರ್ ವಿನಂತಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.