ದಿಗ್ಭಂಧನದಲ್ಲಿರುವ ಕಲ್ಲೇರಿ ಜನತಾ ಕಾಲನಿಗೆ ವಿಶೇಷ ಪ್ಯಾಕೇಜ್‌ಗೆ ಒತ್ತಾಯ

Puttur_Advt_NewsUnder_1
Puttur_Advt_NewsUnder_1

ಮಾಸ್ಕ್ ಇಲ್ಲ; ಗ್ಲೌಸ್ ಇಲ್ಲ: ಎಲ್ಲಿ ಹೋಯಿತು ಸರಕಾರದ ಪ್ಯಾಕೇಜ್ – ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಪ್ರಶ್ನೆ

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಜನತಾ ಕಾಲನಿಯ ಯುವಕನೋರ್ವನಿಗೆ ಕೆರೋನಾ ಸೋಂಕು ಬಂದಿದ್ದು, ಆದ್ದರಿಂದ ಈ ಪ್ರದೇಶವನ್ನು ದಿಗ್ಭಂಧನಕ್ಕೊಳಪಡಿಸಲಾಗಿದೆ. ಆದ್ದರಿಂದ ಇಲ್ಲಿನ ಸ್ಥಿತಿ ತೀರಾ ಸಂಕಷ್ಟಮಯವಾಗಿದ್ದು, ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದೆ. ಆದ್ದರಿಂದ ಇವರಿಗೆ ತುರ್ತಾಗಿ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ತಣ್ಣೀರುಪಂಥ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತದ ಸೂಚನೆಯಂತೆ ಕಲ್ಲೇರಿ ಜನತಾ ಕಾಲನಿಯ 150 ಮನೆಗಳಿಗೆ ದಿಗ್ಭಂಧನ ವಿಧಿಸಲಾಗಿದೆ. ದಿಗ್ಭಂಧನ ವಿಧಿಸಿ ನಾಲ್ಕು ದಿನವಾಗಿದೆ. ಇಲ್ಲಿರುವವರೆಲ್ಲಾ ಬಡವರಾಗಿದ್ದು, ದಿನಕೂಲಿ ಕಾರ್ಮಿಕರಾಗಿದ್ದಾರೆ. ಈಗ ಅವರಿಗೆ ಮನೆಯಿಂದ ಹೊರಗೆ ಬರದಂತ ಸ್ಥಿತಿ ಎದುರಾಗಿದೆ. ಗ್ರಾ.ಪಂ.ನೊಂದಿಗೆ 10ರಿಂದ 15 ಸ್ವಯಂ ಸೇವಕರ ತಂಡದವರು ಕೈಜೋಡಿಸಿ ಅವರಿಗೆ ದಿನಸಿ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಕೆಲವು ಮನೆಯವರಲ್ಲಿ ದಿನಸಿ ಸಾಮಗ್ರಿಗೂ ಹಣವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಈವರೆಗೆ ಗ್ರಾ.ಪಂ. ವತಿಯಿಂದ ಅವರಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಕೆಲವು ರೈತರು ಹಾಲು, ತರಕಾರಿಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಒಂದು ತಂಡ ದಿಗ್ಭಂಧನ ವಿಧಿಸಿದ ಕಾಲನಿಯ ಒಳಗಿದ್ದು, ಹೊರಗಿನಿಂದ ತರುವ ಸಾಮಗ್ರಿಗಳನ್ನು ಅಲ್ಲಿಯ ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ, ಪಿಡಿಒ ಸೇರಿದಂತೆ ಸ್ವಯಂ ಸೇವಕರು, ಗ್ರಾ.ಪಂ. ಸದಸ್ಯರು ಶಕ್ತಿ ಮೀರಿ ದುಡಿಯುತ್ತಿದ್ದಾರೆ. ಈ ಊರಿನವರೊಂದಿಗೆ ಸ್ವಯಂ ಸೇವಕರು ಸಂಪರ್ಕ ಹೊಂದಿರುವುದರಿಂದ ಇವರ‍್ಯಾರಿಗೂ ಮನೆಗೆ ಹೋಗದಂತೆ ನಿರ್ಬಂಧಿಸಲಾಗಿದೆ. ಇವರಿಗೆ ಬೇರೆಯೇ ವಸತಿ, ಆಹಾರದ ವ್ಯವಸ್ಥೆ ಮಾಡಲಾಗಿದೆ. ಇದೆಲ್ಲಾ ಖರ್ಚು ವೆಚ್ಚಗಳನ್ನು ಗ್ರಾ.ಪಂ. ಈವರೆಗೆ ನೋಡಿಕೊಂಡಿದೆ. ಒಂದು ಕಡೆ ಕೊರೊನಾ ವೈರಸ್ ನಿಂದ ತೊಂದರೆಗೀಡಾದವರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಇಲ್ಲಿಗೆ ಈವರೆಗೆ ಕನಿಷ್ಟ ಒಂದು ಮಾಸ್ಕ್ ಆಗಲಿ, ಗ್ಲೌಸ್ ಆಗಲಿ, ಸ್ಯಾನಿಟೈಸರ್ ಆಗಲಿ ತಲುಪಿಲ್ಲ. ಈವರೆಗೆ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆಯನ್ನು ಗ್ರಾ.ಪಂ. ಮಾಡಿದೆ. ಕಾಲನಿಯ ಒಳಗಡೆ ಓಡಾಡುವ ಸ್ವಯಂ ಸೇವಕರ ವಾಹನಗಳಿಗೆ ಡಿಸೇಲ್, ಪೆಟ್ರೋಲ್ ಸೌಲಭ್ಯವನ್ನು ನಾವೇ ಒದಗಿಸಿದ್ದೇವೆ. ಆದರೆ ಗ್ರಾ.ಪಂ. ಕೂಡಾ ತನ್ನ ಇತಿ ಮಿತಿ ಅರಿತು ಖರ್ಚು ಮಾಡಬೇಕಾಗಿದೆ. ಆದ್ದರಿಂದ ಇದೀಗ ನಿರ್ಬಂಧದಲ್ಲಿರುವವರ ಮುಂದಿನ ಆಹಾರದ ಅಗತ್ಯತೆಯನ್ನು ನಿಭಾಯಿಸುವುದೇ ಸಮಸ್ಯೆಯಾಗಿ ಬಿಟ್ಟಿದೆ ಎಂದು ಅವಲತ್ತುಕೊಂಡಿದ್ದಾರೆ.

ಗ್ಯಾಸ್, ನೀರಿನ ಸಮಸ್ಯೆ!: ತಣ್ಣೀರುಪಂಥ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದುದರಿಂದ ಬೇಸಿಗೆಯಲ್ಲಿ ಇಲ್ಲಿಗೆ ಈ ಮೊದಲು ಎರಡು ದಿನಕ್ಕೊಮ್ಮೆ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಹಲವು ಕಡೆಗಳಿಗೆ ಒಂದೇ ಕೊಳವೆ ಬಾವಿಯ ನೀರನ್ನು ಅವಲಂಭಿಸಿದ್ದರಿಂದ ಈ ರೀತಿಯ ವ್ಯವಸ್ಥೆ ಇತ್ತು. ಈಗ ಇಲ್ಲಿನವರೆಲ್ಲಾ ಮನೆಯಲ್ಲಿದ್ದು, ಇವರಿಗೆ ಹೆಚ್ಚಿನ ನೀರಿನ ಅಗತ್ಯತೆ ಇದೆ. ಇದನ್ನು ಮನಗಂಡ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ತನ್ನ ಎಂಎಲ್‌ಸಿ ಅನುದಾನದಿಂದ ಇಲ್ಲಿ ಕೊಳವೆ ಬಾವಿಯೊಂದನ್ನು ಮಂಜೂರು ಮಾಡಿದ್ದಾರೆ. ಇದರ ಕೆಲಸಗಳು ಇನ್ನಷ್ಟೇ ಆಗಬೇಕಿದೆ ಎಂದ ತಿಳಿಸಿದ ಅವರು, ಕಳೆದ ನಾಲ್ಕು ದಿನದಿಂದ ಅಡುಗೆ ಅನಿಲದವರು ಈ ಭಾಗಕ್ಕೆ ಬರುತ್ತಿಲ್ಲ. ಇದರಿಂದಲೂ ಸಮಸ್ಯೆಯಾಗಿದ್ದು, ಈ ಬಗ್ಗೆ ದೂರು ನೀಡಿದಾಗ ಇವತ್ತು ಬರಲು ಒಪ್ಪಿಕೊಂಡಿದ್ದಾರೆ. ಬಾರದೇ ಇದ್ದಲ್ಲಿ ಅವರ ಮೇಲೆ ಶಿಸ್ತು ಕ್ರಮಕ್ಕೆ ಗ್ರಾ.ಪಂ.ನಿಂದ ಬರೆಯಲಾಗುವುದು ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.