ಪುತ್ತೂರು: ತಾನು ಮಾರುಕಟ್ಟೆಯಿಂದ ಖರೀದಿಸಿದ ತರಕಾರಿಗಳಿಂದ ಸಿಕ್ಕ ಬೀಜಗಳನ್ನು ಸಂಗ್ರಹಿಸಿ, ಒಣಗಿಸಿ ಮಳೆ ಬರುವ ಸಮಯದಲ್ಲಿ ಮಣ್ಣಿನಲ್ಲಿ ಹಾಕಿ ಹವ್ಯಾಸಕ್ಕಾಗಿ ಬೆಳೆದ ತರಕಾರಿ ಇದೀಗ ತನ್ನ ದೈನಂದಿನ ಅಡುಗೆಗೆ ಉಪಯೋಗ ಆಗುತ್ತಿದೆ ಎಂದಾಗ ಒಂದು ಕ್ಷಣ ಸಿಗುವ ನೆಮ್ಮದಿ ಅಲ್ಲಿ ಇಲ್ಲಿ ತಿರುಗಾಟ, ಮನರಂಜನೆಯ ಮೂಲಕ ಸಿಗದು. ಅದೂ ಅಲ್ಲದೆ ವಿದೇಶದಲ್ಲಿ ನಾನು ತರಕಾರಿ ಬೆಳೆದೆ ಎಂದಾಗ ಮತ್ತಷ್ಟು ಸಂತೋಷ.
ಹೌದು ಇದು ಪುತ್ತೂರು ಮೂಲದ ಉರ್ಲಾಂಡಿ ನಿವಾಸಿ ವಿದೇಶದಲ್ಲಿ ಉದ್ಯೋಗಿಯಾಗಿರುವ ವಿನುತ್ ಬೊಳುವಾರು ಅವರು ತಾನು ಹವ್ಯಾಸಕ್ಕಾಗಿ ಬೆಳೆದ ತರಕಾರಿ ಇದೀಗ ತನ್ನ ದೈನಂದಿನ ಬಳಕೆಗೆ ಉಪಯೋಗ ಆಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ವಿನುತ್ ಬೊಳುವಾರು ಅವರು ಕಳೆದ 6 ವರ್ಷಗಳಿಂದ ದುಬೈಯಲ್ಲಿರುವ ಅಸಲ್ಕೈಮಾ ಎಂಬ ಸ್ಥಳದಲ್ಲಿ ಯತಿಸಲಾತ್ ಎಂಬ ಸಂಸ್ಥೆಯಲ್ಲಿ ಟೆಲಿಕಾಮ್ ನೆಟ್ವರ್ಕ್ ಟೆಕ್ನೀಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಅಡುಗೆಗಾಗಿ ಮಾರುಕಟ್ಟೆಯಿಂದ ಖರೀದಿಸಿದ ತರಕಾರಿಯಿಂದ ಬೀಜಗಳನ್ನು ಸಂಗ್ರಹಿಸಿ ಅದನ್ನು ಒಣಗಿಸಿ ಮಳೆ ಬರುವ ಸಮಯದಲ್ಲಿ ಮಣ್ಣಿನಲ್ಲಿ ಹಾಕಿ ನೋಡಿದಾಗ ಬಹಳ ಚೆನ್ನಾಗಿ ತರಕಾರಿ ಬೆಳೆದಿದ್ದು, ಅದನ್ನೇ ತನ್ನ ದಿನ ನಿತ್ಯದ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಈಗಾಗಲೇ ಚೀನಿಕಾಯಿ, ಕುಂಬಳಕಾಯಿ, ಟೊಮೆಟೋ, ಮೆಣಸು ಬೆಳೆ ಕೃಷಿ ಮಾಡಿದ ಅವರಿಗೆ ತನ್ನ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟೂ ತರಕಾರಿ ತಾನು ಬೆಳೆದ ಕೃಷಿಯಿಂದಲೇ ಪಡೆಯುತ್ತಿದ್ದಾರೆ. ವಿನುತ್ ಬೊಳುವಾರು ಅವರು ಪುತ್ತೂರು ಉರ್ಲಾಂಡಿ ನಿವಾಸಿ ಕೀರ್ತನ ಇಲೆಕ್ಟ್ರಿಕಲ್ಸ್ನ ಮಾಲಕ ಬಾಲಕೃಷ್ಣ ಗೌಡ ಮತ್ತು ಅಮಿತಾ ದಂಪತಿ ಪುತ್ರ.
ಹವ್ಯಾಸವಾಗಿ ತರಕಾರಿ ಬೆಳೆದೆ
ಮಾರುಕಟ್ಟೆಯಿಂದ ಖರೀದಿಸಿದ ತರಕಾರಿಯಲ್ಲಿ ಬೀಜಗಳನ್ನು ಸಂಗ್ರಹಿಸಿ ತರಕಾರಿ ಬೆಳೆದೆ. ಚೆನ್ನಾಗಿ ಬೆಳೆ ಬಂತು. ಅದರಲ್ಲೂ ಚೀನಿಕಾಯಿ ಸುಮಾರು 8 ಕೆ.ಜಿಯಷ್ಟು ಚೆನ್ನಾಗಿ ಬೆಳೆದಿತ್ತು. ಸಣ್ಣ ಕೈತೋಟ ಮಾಡಿದೆ. ಪ್ರಥಮ ಹಂತದಲ್ಲಿ ಯಶಸ್ವಿ ಕಂಡ ಹಿನ್ನೆಲೆಯಲ್ಲಿ ಇದೀಗ 2ನೇ ಬಾರಿಗೆ ತರಕಾರಿ ಬೆಳೆಯುತ್ತಿದ್ದೇನೆ. ಟೆಲಿಕಾಮ್ ನೆಟ್ವರ್ಕ್ ಟೆಕ್ನೀಷಿಯನ್ನ ಟೀಮ್ ರನ್ ಮಾಡುವ ನಡುವೆ ಬಿಡುವಿನ ಸಂದರ್ಭ ತರಕಾರಿ ಬೆಳೆಯುತ್ತಿದ್ದೇನೆ. ಪ್ರಸ್ತುತ ಇಲ್ಲಿ ಸಂಜೆ ಗಂಟೆ 6 ರಿಂದ ಬೆಳಿಗ್ಗೆ ಗಂಟೆ 6ರ ತನಕ ಲಾಕ್ಡೌನ್ ಇದೆ. ಆದರೂ ಟೆಲಿಕಮ್ಯುನಿಕೇಷನ್ ವರ್ಕ್ಗೆ ಲಾಕ್ಡೌನ್ ನಡುವೆಯೂ ಕೆಲಸ ಮಾಡಬೇಕು. ಇದರ ಜೊತೆಗೆ ತರಕಾರಿ ಬೆಳೆಗೂ ಪ್ರಾಮುಖ್ಯ ಕೊಡುತ್ತಿದ್ದೇನೆ . ೨ನೇ ಬಾರಿಗೆ ಬದನೆ, ಮೆಣಸು, ಟೊಮೆಟೋ ಕೃಷಿ ಮಾಡುತ್ತಿದ್ದೇನೆ – ವಿನುತ್ ಬೊಳುವಾರು
Supper, great job
Very inspiring