Home_Page_Advt
Home_Page_Advt
Home_Page_Advt

ವಿಟ್ಲ ಠಾಣಾ ಹೆಡ್‌ಕಾನ್‌ಸ್ಟೇಬಲ್‌ಗೆ ಕೊರೋನಾ ದೃಢ | ಮಹಾರಾಷ್ಟ್ರದಿಂದ ಬಂದಿದ್ದ ಕರೋಪಾಡಿಯ ಯುವಕನ ಸಂಪರ್ಕದಿಂದ ಹರಡಿದ ಸೋಂಕು

Puttur_Advt_NewsUnder_1
Puttur_Advt_NewsUnder_1
  • ಠಾಣೆಯ ಎಸ್‌ಐ ಸಹಿತ 13 ಸಿಬ್ಬಂದಿ ಸೇರಿ ಸಂಪರ್ಕದಲ್ಲಿದ್ದ 20 ಮಂದಿಗೆ ಕ್ವಾರಂಟೈನ್

ವಿಟ್ಲ: ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ೪೨ ವರ್ಷ ವಯಸ್ಸಿನ ಹೆಡ್‌ಕಾನ್‌ಸ್ಟೇಬಲ್ ಓರ್ವರಿಗೆ ಕೊರೋನಾ ಸೋಂಕು ತಗುಲಿರುವುದು ಮೇ ೨೪ರಂದು ದೃಢಪಟ್ಟಿದೆ. ಇವರಿಗೆ ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ಕರೋಪಾಡಿಯ ವ್ಯಕ್ತಿಯೋರ್ವರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ವರದಿಯಾಗಿದ್ದು ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ಗೆ ಕೊರೋನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಠಾಣಾ ಎಸ್.ಐ., ಸಹಿತ ೧೩ ಮಂದಿ ಸಿಬ್ಬಂದಿ ಹಾಗೂ ಇವರ ನೇರ ಸಂಪರ್ಕಕ್ಕೆ ಬಂದಿದ್ದ ೭ ಮಂದಿ ಸೇರಿ ಒಟ್ಟು ೨೦ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮೇ ೧೫ರಂದು ಬೆಳಗ್ಗಿನ ಜಾವ ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ಕರೋಪಾಡಿಯ ವ್ಯಕ್ತಿಯೋರ್ವರು ಕ್ವಾರಂಟೈನ್‌ಗೆ ಹೋಗುವ ಮುನ್ನ ವಿಟ್ಲ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಹೆಡ್‌ಕಾನ್‌ಸ್ಟೇಬಲ್ ಹಾಗು ಕಾನ್‌ಸ್ಟೇಬಲ್ ಓರ್ವರು ವಿಚಾರಿಸಿ ಬಳಿಕ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಅವರಿಗೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿದ್ದರು. ಮೇ ೧೮ರಂದು ಇವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತನ ಟ್ರಾವೆಲ್ ಹಿಸ್ಟರಿ ಆಧಾರದಲ್ಲಿ ಆತ ಠಾಣೆಗೆ ಆಗಮಿಸಿದ್ದ ವೇಳೆ ಆತನೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಸಿಬ್ಬಂದಿಗಳ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಮೇ ೨೪ರಂದು ಇದರ ವರದಿ ಬಂದಿದ್ದು ಹೆqಕಾನ್‌ಸ್ಟೇಬಲ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೋರ್ವ ಸಿಬ್ಬಂದಿಯು ಕ್ವಾರಂಟೈನ್‌ನಲ್ಲಿದ್ದಾರೆ.

೨೦ ಮಂದಿಗೆ ಕ್ವಾರಂಟೈನ್: ಠಾಣಾ ಹೆಡ್‌ಕಾನ್‌ಸ್ಟೇಬಲ್‌ಗೆ ಕೊರೋನಾ ಸೋಂಕು ಇರುವುದು ದೃಢಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಅವರ ಸಂಪರ್ಕದಲ್ಲಿದ್ದ ಠಾಣಾ ಎಸ್‌ಐ, ಸಿಬ್ಬಂದಿಗಳು ಸೇರಿದಂತೆ ಒಟ್ಟು ೨೦ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೇದಾವತಿಯವರ ನೇತೃತ್ವದ ತಂಡ ಠಾಣೆಯ ಎಸ್.ಐ. ಸಹಿತ ೧೩ ಮಂದಿ ಸಿಬ್ಬಂದಿ ಹಾಗೂ ಇವರ ನೇರಸಂಪರ್ಕದಲ್ಲಿದ್ದ ೭ ಮಂದಿ ಸೇರಿ ಒಟ್ಟು ೨೦ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿದೆ. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ರವರ ಸೂಚನೆ ಮೇರೆಗೆ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಗ್ರಾಮಕರಣಿಕ ಪ್ರಕಾಶ್, ಸಿಬ್ಬಂದಿ ಚಂದ್ರಶೇಖರ ವರ್ಮರವರ ತಂಡ ಕಾರ್ಯಾಚರಣೆ ನಡೆಸಿದೆ. ವಿಟ್ಲ ಸಿಪಿಸಿಆರ್‌ಐನಲ್ಲಿರುವ ಅತಿಥಿ ಗೃಹ, ಪೊಲೀಸ್ ವಸತಿ ಸಮುಚ್ಚಯ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸರನ್ನು ಹಾಗೂ ಅವರ ನೇರ ಸಂಪರ್ಕಕ್ಕೆ ಬಂದವರನ್ನು ನಿಗಾದಲ್ಲಿ ಇಡಲಾಗುತ್ತಿದೆ. ಹೊಸ ಮಾರ್ಗ ಸೂಚಿಯಂತೆ ವಿಟ್ಲ ಸೀಲ್‌ಡೌನ್ ಮಾಡುತ್ತಿಲ್ಲ ಎಂದು ವರದಿಯಾಗಿದೆ.

ಕಸಾಯಿಖಾನೆ ದಾಳಿ ಕಾರ್ಯಾಚರಣೆಯಲ್ಲೂ ಭಾಗಿಯಾಗಿದ್ದ ಸಿಬಂದಿ: ಮೇ ೨೧ರಂದು ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಸಮೀಪ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಠಾಣಾ ಎಸ್.ಐ.ಯವರ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ದಾಳಿಯ ತಂಡದಲ್ಲಿ ಇದೀಗ ಕೊರೋನಾ ಪಾಸಿಟೀವ್ ಆಗಿರುವ ಹೆಡ್‌ಕಾನ್‌ಸ್ಟೇಬಲ್ ಸಹ ಭಾಗಿಯಾಗಿದ್ದರು. ಈ ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಪೊಲೀಸರ ಜೊತೆಗೆ ತಾಲೂಕು ಮಟ್ಟದ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಬಳಿಕದ ಬೆಳವಣಿಗೆಯಲ್ಲಿ ವಿಟ್ಲ ಠಾಣೆಗೆ ತನಿಖೆಗಾಗಿ ಜಿಲ್ಲಾಮಟ್ಟದ ಉನ್ನತ ಪೊಲೀಸ್ ಅಧಿಕಾರಿಗಳೂ ಆಗಮಿಸಿದ್ದರು. ಈ ವೇಳೆಯಲ್ಲಿ ಸಿಬ್ಬಂದಿ ಅಧಿಕಾರಿಗಳ ಸಹಿತ ಸಾರ್ವಜನಿಕವಾಗಿ ಹಲವರೊಂದಿಗೆ ಬೆರೆತಿರುವುದಾಗಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿತ ಸಿಬಂದಿಯ ಟ್ರಾವೆಲಿಂಗ್ ಹಿಸ್ಟರಿ ಎಲ್ಲರಲ್ಲೂ ಆತಂಕಕ್ಕೂ ಕಾರಣವಾಗಿದೆ.

ಸಿಬಂದಿಯಿಂದ ಮಾಹಿತಿ ಸಂಗ್ರಹ: ಕೊರೋನಾ ಸೋಂಕು ದೃಢಪಟ್ಟ ಹೆಡ್‌ಕಾನ್‌ಸ್ಟೇಬಲ್ ಯಾರೊಂದಿಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದಾರೆ ಅನ್ನೋ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ವಿಟ್ಲ ಠಾಣಾ ಎಸ್.ಐ. ಸಹಿತ ಠಾಣೆಯ ಸಿಬ್ಬಂದಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇನ್ನು ಪೊಲೀಸ್ ಠಾಣೆಗೆ ಬಂದು ಹೋಗಿರುವವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಹೆಡ್‌ಕಾನ್‌ಸ್ಟೇಬಲ್‌ರವರು ಸಾರ್ವಜನಿಕರ ಜೊತೆಗೆ ನೇರ ಸಂಪರ್ಕವನ್ನು ಹೊಂದಿರುವ ಸಾಧ್ಯತೆಯಿದ್ದು. ವಿಟ್ಲ ಸುತ್ತಮುತ್ತಲ ಪ್ರದೇಶದ ಜನರಿಗೆ ಕೊರೊನಾ ಆತಂಕ ಶುರುವಾಗಿದೆ.

ಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದರು: ಕೊರೋನಾ ಸೋಂಕು ತಾಗಿರುವ ವಿಟ್ಲದ ಹೆಡ್‌ಕಾನ್‌ಸ್ಟೇಬಲ್‌ರವರು ಪುತ್ತೂರು ನೆಹರುನಗರ ಸಮೀಪದ ವಸತಿ ಸಮುಚ್ಛಾಯವೊಂದರ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಅವರು ವಿಟ್ಲಕ್ಕೆ ವರ್ಗಾವಣೆ ಆದ ಬಳಿಕ ಬೆಳ್ಳಾರೆ ಮನೆಯಿಂದ ಹೋಗಿ ಬರುವುದು ಕಷ್ಟ ಎಂದು ಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್‌ಗೆ ಹೋಗುವ ಮುಂಚೆ ವಿಟ್ಲ ಪೊಲೀಸ್ ಠಾಣೆಗೆ ಬಂದಿದ್ದರೋ ಅದೇ ದಿನದಿಂದ ಠಾಣೆಯಲ್ಲಿ ಎಸ್.ಹೆಚ್.ಓ ಆಗಿದ್ದ ಹೆಡ್‌ಕಾನ್‌ಸ್ಟೇಬಲ್ ಪುತ್ತೂರು ಬಾಡಿಗೆ ಮನೆಗೆ ಹೋಗದೆ ಠಾಣೆಯ ವಸತಿ ಗೃಹದಲ್ಲೇ ಕ್ವಾರಂಟೈನ್ ಆಗಿದ್ದರಿಂದ ಅವರು ಪುತ್ತೂರಿನಲ್ಲಿರುವ ಪತ್ನಿ ಮಕ್ಕಳ ಸಂಪರ್ಕ ಹೊಂದಿರಲಿಲ್ಲ.

ಬಾಡಿಗೆ ಮನೆಗೆ ಬೀಗ: ಪತ್ನಿ ಮಕ್ಕಳೊಂದಿಗಿದ್ದ ಹೆಡ್‌ಕಾನ್‌ಸ್ಟೇಬಲ್ ಅವರ ನೆಹರುನಗರದಲ್ಲಿರುವ ಬಾಡಿಗೆ ಮನೆಗೆ ಬೀಗ ಜಡಿಯಲಾಗಿದೆ. ಮನೆಯ ಹತ್ತಿರದವರಿಗೂ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಲಾಖಾ ಜೀಪಿನಲ್ಲಿ ಪತ್ನಿ, ಮಕ್ಕಳು ಬೆಳ್ಳಾರೆಗೆ: ರೋಗಿ ಸಂಖ್ಯೆ ಪಿ. ೧೨೩೩ ರವರ ಎರಡನೇ ಸಂಪರ್ಕಲ್ಲಿದ್ದ ವಿಟ್ಲದ ಹೆಡ್‌ಕಾನ್‌ಸ್ಟೇಬಲ್‌ಗೆ ಕೊರೋನಾ ವೈರಸ್ ಹರಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪುತ್ತೂರು ಬಾಡಿಗೆ ಮನೆಯಲ್ಲಿದ್ದ ಹೆಡ್‌ಕಾನ್‌ಸ್ಟೇಬಲ್ ಅವರ ಪತ್ನಿ ಮತ್ತು ಮಕ್ಕಳನ್ನು ಇಲಾಖೆಯ ರಾಣಿ ಅಬ್ಬಕ್ಕ ಜೀಪಿನಲ್ಲಿ ಬೆಳ್ಳಾರೆ ಸಮೀಪವಿರುವ ಅವರ ಮನೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಬದಲಿ ವ್ಯವಸ್ಥೆ ಮಾಡಲಾಗಿದೆ : ವಿಟ್ಲ ಪೊಲೀಸ್ ಠಾಣಾ ಸಿಬಂದಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಮುಂದಿನ ೪೮ ಗಂಟೆಗಳ ಕಾಲ ಠಾಣೆಯನ್ನು ಮುಚ್ಚಲಾಗುವುದು. ಪಕ್ಕದ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಕೆಲಸ ಕಾರ್ಯಗಳು ನಡೆಯಲಿದ್ದು, ಜನರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಕ್ವಾರಂಟೈನ್‌ಗೆ ತೆರಳಿರುವ ಸಿಬಂದಿಗಳ ಬದಲಿಗೆ ಬಂಟ್ವಾಳದಿಂದ ಸಿಬಂದಿಗಳನ್ನು ಕಳುಹಿಸಿಕೊಡಲಾಗಿದೆ. ಗಡಿ ಭಾಗದ ಚೆಕ್ ಪೋಸ್ಟ್ ಸಹಿತ ಎಲ್ಲಾ ಕೆಲಸ ಕಾರ್ಯಗಳು ಹಿಂದಿನಂತೆಯೇ ನಡೆಯಲಿದೆ.
ಟಿ.ಡಿ ನಾಗರಾಜ್, ವೃತ್ತ ನಿರೀಕ್ಷಕರು, ಬಂಟ್ವಾಳ

ಸಂಪ್ಯ ಠಾಣೆಗೂ ಬಂದಿದ್ದರು …!
ವಿಟ್ಲ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಕ್ವಾರಂಟೈನ್ ಅವಧಿಯಲ್ಲಿ ವಿಟ್ಲ ಠಾಣೆಯ ವಸತಿ ಗೃಹದಲ್ಲಿದ್ದರೂ ಯಾವುದೋ ಕ್ರೈಂ ವಿಚಾರಕ್ಕೆ ಸಂಬಂಧಿಸಿ ಠಾಣೆಯ ಸಿಬಂದಿಯೊಬ್ಬರೊಂದಿಗೆ ಸಂಪ್ಯ ಪೊಲೀಸ್ ಠಾಣೆಗೂ ಇತ್ತೀಚೆಗೆ ಬಂದು ಹೋಗಿದ್ದರೆಂಬ ಮಾಹಿತಿ ಇದೆ. ಅದೂ ಅಲ್ಲದೆ ಹೆಡ್‌ಕಾನ್‌ಸ್ಟೇಬಲ್ ಅವರು ಸಂಪ್ಯ ಠಾಣೆಯಲ್ಲೂ ಕೆಲ ವರ್ಷಗಳ ಹಿಂದೆ ಕರ್ತವ್ಯ ನಿರ್ವಹಿಸಿದ್ದರಿಂದ ಅಲ್ಲಿನ ಕೆಲವು ಸಿಬಂದಿಗಳ ಪರಿಚಯದ ಮೇಲೆ ಸಂಪರ್ಕ ಬೆಳೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹೆಡ್‌ಕಾನ್‌ಸ್ಟೇಬಲ್‌ರವರ ಚಲನವಲನದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

2 ದಿನ ಪೊಲೀಸ್ ಠಾಣೆ ಕ್ಲೋಸ್
ಠಾಣಾ ಸಿಬಂದಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯನ್ನು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿಯವರ ನೇತೃತ್ವದ ತಂಡ ಸ್ಯಾನಿಟೈಸ್ ಮಾಡಿದೆ. ಮುಂದಿನ ೪೮ ಗಂಟೆಗಳ ಕಾಲ ಪೊಲೀಸ್ ಠಾಣೆಯನ್ನು ಮುಚ್ಚಲಾಗಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಪಕ್ಕದ ಕೊಠಡಿಯೊಂದರಲ್ಲಿ ಕೆಲಸ ಕಾರ್ಯಗಳು ನಡೆಯಲಿದ್ದು, ಜನರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಠಾಣಾ ಎಸ್.ಐ. ಸೇರಿ ೧೩ ಮಂದಿ ಸಿಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್‌ನಲ್ಲಿರುವ ಸಿಬ್ಬಂದಿಗಳು ಮರಳಿ ಬರುವ ತನಕ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ಸಂಚಾರಿ ಠಾಣಾ ಪೊಲೀಸರು ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಬಂಟ್ವಾಳ ಸಂಚಾರಿ ಠಾಣಾ ಎಸ್.ಐ ರಾಜೇಶ್ ವಿಟ್ಲಕ್ಕೆ:
ವಿಟ್ಲ ಠಾಣಾ ಎಸ್.ಐ. ಕ್ವಾರಂಟೈನ್‌ನಲ್ಲಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಈ ಹಿಂದೆ ಪ್ರೊಬೆಷನರಿಯಾಗಿ ವಿಟ್ಲದಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಎಸ್.ಐ ಆಗಿ ಕರ್ತವ್ಯ ಆರಂಭಿಸಿದ ರಾಜೇಶ್ ಕೆ.ವಿ. ಯವರನ್ನು ನೇಮಿಸಲಾಗಿದೆ.

ಹೆಡ್‌ಕಾನ್‌ಸ್ಟೇಬಲ್ ಪತ್ನಿ, ಮನೆಯವರಿಗೆ ಹೋಂ ಕ್ವಾರಂಟೈನ್
ವಿಟ್ಲ ಠಾಣೆಯ ಹೆಡ್ ಕಾನ್‌ಸ್ಟೇಬಲ್‌ಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬೆಳ್ಳಾರೆಯಲ್ಲಿರುವ ಅವರ ಪತ್ನಿ ಹಾಗೂ ಮನೆಯವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಹೆಡ್‌ಕಾನ್‌ಸ್ಟೇಬಲ್ ಬೆಳ್ಳಾರೆ ಮೂಲದವರಾಗಿದ್ದು ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ಕರೋಪಾಡಿಯ ವ್ಯಕ್ತಿಯೋರ್ವರ ಸಂಪರ್ಕದಿಂದ ಅವರಿಗೆ ಕೊರೋನಾ ಸೋಂಕು ಬಂದಿರುವುದು ದೃಢಪಟ್ಟಿದ್ದು ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಡ್ ಕಾನ್‌ಸ್ಟೇಬಲ್‌ಗೆ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಬೆಳ್ಳಾರೆಯಲ್ಲಿರುವ ಅವರ ಪತ್ನಿ ಹಾಗೂ ಮನೆಯವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿಯಾಗಿದೆ.

ಬೇಜವಬ್ದಾರಿ ಕಾರಣವಾಯಿತೇ…?
ಕ್ವಾರಂಟೈನ್ ಕೇಂದ್ರದ ವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ತಾಲೂಕು ಮಟ್ಟದ ಅಧಿಕಾರಿಯೋರ್ವರ ಬೇಜವಾಬ್ದಾರಿಯಿಂದ ಕೊರೋನಾ ವಿಟ್ಲ ಪೊಲೀಸ್ ಠಾಣೆಯ ಮೆಟ್ಟಲು ಹತ್ತಲು ಮೂಲ ಕಾರಣವೆಂಬ ಆರೋಪ ಕೇಳಿಬರುತ್ತಿದೆ. ಮೇ ೧೫ರಂದು ಬೆಳಗ್ಗಿನ ಜಾವ ವಿಟ್ಲಕ್ಕೆ ಮಹಾರಾಷ್ಟ್ರದ ರಾಯಗಡದಿಂದ ಆಗಮಿಸಿದ ವ್ಯಕ್ತಿಯನ್ನು ನೇರ ದಿಗ್ಬಂಧನಕ್ಕೆ ಒಳಪಡಿಸುವ ಬದಲು ಆತ ವಿಟ್ಲದಲ್ಲಿ ಓಡಾಡುವ ಹಾಗೆ ಮಾಡಲಾಗಿದೆ. ಕ್ವಾರೆಂಟೈನ್‌ಗಾಗಿ ನಿಗದಿಪಡಿಸಲಾಗಿದ್ದ ಕೇಂದ್ರದ ಜವಾಬ್ದಾರಿ ಹೊಂದಿರುವ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ. ಕ್ವಾರೆಂಟೈನ್‌ಗಾಗಿ ನಿಗದಿಪಡಿಸಲಾಗಿದ್ದ ಕೇಂದ್ರಕ್ಕೆ ಬೀಗ ಹಾಕಿರುವುದು ಮಾತ್ರವಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ದೂರವಾಣಿ ಕರೆಯನ್ನು ಸ್ವೀಕರಿಸದೇ ಕರ್ತವ್ಯ ಲೋಪ ಎಸಗಿದ್ದರು ಎಂಬ ಆರೋಪ ಕೇಳಿಬಂದಿದೆ. ಅನಿವಾರ್ಯ ಸ್ಥಿತಿಯಲ್ಲಿ ಆ ವ್ಯಕ್ತಿ ಠಾಣೆಯ ಮೆಟ್ಟಲು ಏರಿದ್ದು, ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿತ್ತು.

 

 

 

 

About The Author

Related posts

1 Comment

  1. Mahesh Alike

    Being a public officer, he should have taken precautionary measures immediately after contacting that patient in police station such as hand wash, sanitisation. Because of his irresponsibility and negligence he invited these worst things.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.