Home_Page_Advt
Home_Page_Advt
Home_Page_Advt

ಇನ್ನೂ ತೆರೆದುಕೊಳ್ಳದ ಉಭಯ ರಾಜ್ಯಗಳ ಗಡಿ: ವಿದ್ಯಾರ್ಥಿಗಳ ಪೋಷಕರಲ್ಲಿ ಹೆಚ್ಚಿದ ಆತಂಕ – ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಜನತೆ

Puttur_Advt_NewsUnder_1
Puttur_Advt_NewsUnder_1

✍️ನಿಶಾಕಿರಣ್ ಬಾಳೆಪುಣಿ

ವಿಟ್ಲ: ರಾಜ್ಯದಲ್ಲಿ ಲಾಕ್‌ಡೌನ್ ಬಹುತೇಕ ಸಡಿಲವಾಗಿ ಜನಸಂಚಾರ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಅಂತರ್ರಾಜ್ಯ ಗಡಿಯಲ್ಲಿ ಸಂಚಾರ ನಿರ್ಬಂಧ ಮುಂದುವರಿದಿರುವ ಕಾರಣ ಗಡಿ ಪ್ರದೇಶದ ಜನರ ಸಹಿತ ಕರ್ನಾಟಕ – ಕೇರಳದ ವಿವಿಧೆಡೆ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕಾಗಿ ತೆರಳುವ ಜನರಲ್ಲಿ ಆತಂಕ ಮನೆ ಮಾಡಿದೆ. ಇತ್ತ ಕೇರಳ ಹಾಗೂ ಕರ್ನಾಟಕ ರಾಜ್ಯಗಳೆರಡು ಗಡಿ ವಿವಾದಕ್ಕೆ ಸಂಬಂಧಿಸಿ ಮುಸುಕಿನ ಗುದ್ದಾಟವನ್ನು ಮುಂದುವರೆಸುತ್ತಿರುವಂತೆ ಕಾಣುತ್ತಿದ್ದು, ನೆರೆಯ ರಾಜ್ಯಗಳನ್ನು ಅವಲಂಬಿಸಿರುವ ಕರ್ನಾಟಕ, ಕೇರಳ ರಾಜ್ಯದ ಜನರ ಹಾಗೂ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.

ಕೊರೋನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಮುಂದೂಡಲಾಗಿದ್ದ ಕರ್ನಾಟಕದ ರಾಜ್ಯದ ದ್ವಿತೀಯ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸಲು ದಿನ ನಿಗದಿ ಪಡಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್‌ರವರು ಆದೇಶ ಹೊರಡಿಸಿರುವ ಬೆನ್ನಲ್ಲೆ ಕರ್ನಾಟಕದ ಶಾಲೆಗಳಲ್ಲಿ ಕಲಿಯುತ್ತಿರುವ ಕೇರಳದ ವಿದ್ಯಾರ್ಥಿಗಳ ಹೆತ್ತವರ ಮನದಲ್ಲಿ ಆತಂಕ ಮನೆ ಮಾಡಿದೆ. ಇತ್ತ ಪರೀಕ್ಷೆಗೆ ದಿನ ನಿಗದಿ ಪಡಿಸಲಾಗಿದೆ ಆದರೆ ಕೇರಳ-ಕರ್ನಾಟಕ ರಾಜ್ಯಗಳು ತಮ್ಮ ತಮ್ಮ ಗಡಿಗಳನ್ನು ಮುಚ್ಚುಗಡೆಗೊಳಿಸಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಿ ಅನ್ಯ ರಾಜ್ಯಗಳ ವಾಹನಗಳು, ಜನರು ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳು ಪರೀಕ್ಷೆಗೆ ತೆರಳುವುದಾದರೂ ಹೇಗೆ ಎನ್ನುವ ಪ್ರಶ್ನೆ ವಿದ್ಯಾರ್ಥಿಗಳ ಪೋಷಕರದ್ದಾಗಿದೆ. ವಿದ್ಯಾರ್ಥಿಗಳ ಈ ಸಮಸ್ಯೆಯನ್ನು ಉಭಯ ರಾಜ್ಯಗಳು ಗಂಭೀರವಾಗಿ ಪರಿಗಣಿಸದಿರುವುದು ವಿಪರ್‍ಯಾಸವಾಗಿದೆ.

ಸಾರಡ್ಕ ಚಿಕ್‌ಪೋಸ್ಟ್‌ನಲ್ಲಿ ವಿಟ್ಲ ಪೊಲೀಸರಿಂದ ವಾಹನ ತಪಸಾಣೆ

ಇಬ್ಬಾಗವಾಯಿತು ಗಡಿ ಜಿಲ್ಲೆಗಳು: ಕಾಸರಗೋಡು ಹಾಗೂ ದಕ್ಷಿಣ ಕನ್ನಡಗಳೆರಡೂ ಗಡಿ ಜಿಲ್ಲೆಗಳಾಗಿರುವ ನಿಟ್ಟಿನಲ್ಲಿ ವ್ಯಾಪಾರ ವ್ಯವಹಾರದಲ್ಲಿ ಎರಡೂ ಜಿಲ್ಲೆಗಳು ಅತ್ತಿಂದಿತ್ತ ಕೊಡು ಕೊಳ್ಳುವ ನೀತಿಯನ್ನು ಅವಲಂಬಿಸುತ್ತಿತ್ತು. ಕಾಸರಗೋಡು ಜಿಲ್ಲೆಯ ಗಡಿ ಭಾಗದ ಜನರು ಆಸ್ಪತ್ರೆಗಳಿಗೆ ದ.ಕ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದರೆ ವಿದ್ಯಾರ್ಥಿಗಳು ಪ್ರತಿಷ್ಠಿತ ವಿದ್ಯಾಸಂಸ್ಥೆಗಳನ್ನು ಅವಲಂಬಿಸಿದ್ದರು. ಆದರೆ ಮಹಾಮಾರಿ ಕೊರೋನಾ ಯಾವಾಗ ಕೇರಳದಲ್ಲಿ ತನ್ನ ಕಬಂಧ ಬಾಹುವನ್ನು ವಿಸ್ತರಿಸಿ ಬಿಟ್ಟಿತೋ ಅಲ್ಲಿಂದ ನೆರೆಯ ದ.ಕ ಜಿಲ್ಲಾಡಳಿತ ತನ್ನ ಗಡಿಗಳನ್ನೆಲ್ಲಾ ಮಣ್ಣು ಹಾಕಿ ಮುಚ್ಚುಗಡೆಗೊಳಿಸಿ ಕೇರಳ-ಕರ್ನಾಟಕದ ಮಧ್ಯೆ ಇರುವ ಸಂಪರ್ಕವನ್ನು ಕಡಿತಗೊಳಿಸಿತ್ತು. ಎಲ್ಲಿಯವರೆಗೆ ಎಂದರೇ ಕೇರಳದ ಯಾವೊಬ್ಬಾ ರೋಗಿಯನ್ನು ದ.ಕ ಜಿಲ್ಲೆಯ ಆಸ್ಪತ್ರೆಗಳಲ್ಲಿ ದಾಖಲಿಸದಂತೆ ಫರ್ಮಾನು ಹೊರಡಿಸಿತ್ತು. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಮಂಜೇಶ್ವರ ತಾಲೂಕಿನ ಸಹಿತ ಕಾಸರಗೋಡು ಜಿಲ್ಲೆಯಿಂದ ಬಂದ ಆಂಬುಲೆನ್ಸ್‌ಗಳನ್ನು ತಲಪಾಡಿಯಲ್ಲಿ ಗಡಿದಾಟಲು ಬಿಡದ ಪರಿಣಾಮವಾಗಿ ಜೀವಗಳು ಬಲಿಯಾಗುವಂತಾಯಿತು. ಕೇರಳ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರಿಗಿಂತ ಹೆಚ್ಚಿನ ಜನರು ತುರ್ತು ಸಂದರ್ಭದಲ್ಲಿ ಮಂಗಳೂರಿನ ಆಸ್ಪತ್ರೆ ಸಿಗದೆ ಬಲಿಯಾದರು ಎಂದು ಹೇಳಲಾಗುತ್ತಿದ್ದು ಇದರಿಂಗಾಗಿ ಕಂಗೆಟ್ಟ ಕೇರಳ ಸರಕಾರ ಕರ್ನಾಟಕದ ಈ ಕಠೋರ ನೀತಿಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್‌ನ ಆದೇಶದಿಂದ ತೃಪ್ತರಾಗದ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳ ತಲುಪಿತ್ತು. ಅಲ್ಲಿ ವಾದ ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಮಹತ್ತರವಾದ ತೀರ್ಪೊಂದನ್ನು ಪ್ರಕಟಮಾಡಿ ಪ್ರಕರಣವನ್ನು ಸುಖಾಂತ್ಯಗೊಳಿಸಿತ್ತು. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಬಿಡದೆ ಕೆಲವರ ಸಾವಿಗೆ ಕಾರಣವಾಗಿದ್ದ ದ.ಕ ಜಿಲ್ಲಾಡಳಿತದ ವಿರುದ್ಧ ಸಮರ ಸಾರಲು ಹೊರಟ ಕೇರಳ ಸರಕಾರ ಇತ್ತ ಕೇರಳದಲ್ಲಿರುವ ತನ್ನ ಎಲ್ಲಾ ಗಡಿಗಳನ್ನು ಮುಚ್ಚಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಗೊಳಿಸಿ ಅನ್ಯ ರಾಜ್ಯದಿಂದ ವಾಹನ ಸಹಿತ ಜನ ಕೇರಳಕ್ಕೆ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತು. ಆರಂಭದಲ್ಲಿ ತನ್ನ ಜಿಲ್ಲೆಯ ಜನರ ರಕ್ಷಣೆಯ ದೃಷ್ಟಿಯಿಂದ ದ.ಕ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರದಿಂದಾಗಿ ಅನ್ಯೋನ್ಯವಾಗಿದ್ದ ಎರಡು ಜಿಲ್ಲೆಗಳು ಬೇರ್ಪಟ್ಟು ಇದೀಗ ಮುಸುಕಿನ ಗುದ್ದಾಟ ನಡೆಸುತ್ತಿರುವುದು ವಿಪರ್ಯಾಸವಾಗಿದೆ.

ಕರ್ನಾಟಕದ ಶಾಸಕರ ಗಮನ ಸೆಳೆಯುವ ಪ್ರಯತ್ನ: ಗಡಿ ಭಾಗದ ಮಂಜೇಶ್ವರ ತಾಲೂಕಿನ ಕೆಲವೊಂದು ನಾಯಕರು ದ.ಕ ಜಿಲ್ಲೆಯ ಕೆಲ ಬಿಜೆಪಿ ಶಾಸಕರ ಸಹಿತ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಮುಂದಿನ ದಿನಗಳಲ್ಲಿ ಪರೀಕ್ಷೆ ಬರೆಯಲಿರುವ ದ್ವಿತೀಯ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಗಡಿಮಚ್ಚುಗಡೆಯಿಂದಾಗಿ ಅವರಿಗಾಗುವ ಸಮಸ್ಯೆಯನ್ನು ಸರಿಪಡಿಸುವಂತೆ ಮನವರಿಕೆ ಮಾಡಿದ್ದಾರೆ. ಮಾತ್ರವಲ್ಲದೆ ಉಭಯ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಯ ಬಗ್ಗೆಯೂ ಅವರು ತಿಳಿಸಿದ್ದು, ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವುದಾಗಿ ಉಸ್ತುವಾರಿ ಸಚಿವರು ಭರವಸೆ ನಿಡಿದ್ದಾರೆ ಎನ್ನಲಾಗಿದೆ.

ಗಡಿ ಭಾಗದ ಜನರ ಸಮಸ್ಯೆ ಅರ್ಥೈಸದ ಉದ್ಯೋಗದಾತರು: ಮಂಗಳೂರಿನ ಕೆಲವು ಉದ್ಯೋಗದಾತ ಸಂಸ್ಥೆಗಳು ಕಾಸರಗೋಡಿನಲ್ಲಿರುವ ಕಾರ್ಮಿಕರು ಹಾಗೂ ಸಿಬಂದಿಗಳಿಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ಗಡಿ ಪರಿಸ್ಥಿತಿ ಬಗ್ಗೆ ಅವರಿಗೆ ತಿಳಿಸಿದರೂ ಒಪ್ಪಿಕೊಳ್ಳುತ್ತಿಲ್ಲ. ಕೆಲಸಕ್ಕೆ ಹಾಜರಾಗದಿದ್ದರೆ ರಾಜೀನಾಮೆ ಕೊಡಿ ಎಂದು ಉದ್ಯೋಗದಾತರು ಹೇಳುತ್ತಿದ್ದಾರೆ ಎಂದು ಹೆಚ್ಚಿನ ಕಾರ್ಮಿಕರು ಹಾಗೂ ಸಿಬಂದಿ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆಯನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ನಾವು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ ಎಂದು ಗಡಿ ಭಾಗದ ಜನರು ಹೇಳುತ್ತಿದ್ದಾರೆ. ದುಡಿದು ಜೀವನ ಸಾಗಿಸುವ ಪರಿಸ್ಥಿತಿಯಲ್ಲಿರುವ ನಾವುಗಳು ಲಾಕ್ ಡೌನ್ ಬಳಿಕದ ದಿನಗಳಲ್ಲಿ ಕಂಗೆಟ್ಟಿದ್ದೇವೆ. ಆದರೆ ಇದೀಗ ಕೆಲಸ ಆರಂಭವಾಗಿದ್ದರೂ ಗಡಿಮುಚ್ಚುಗಡೆಯಿಂದಾಗಿ ಕೆಲಸಕ್ಕೆ ತೆರಳಲಾಗದೆ ಕಂಗೆಟ್ಟಿದ್ದೇವೆ. ಗಡಿ ಮುಚ್ಚುಗಡೆ ನಡೆಸಿ ಶೀತಲ ಸಮರ ನಡೆಸುತ್ತಿರುವ ಉಭಯ ರಾಜ್ಯಗಳು ನಮ್ಮ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿವೆ ಎನ್ನುವುದು ಗಡಿ ಭಾಗದ ಜನರ ಆರೋಪವಾಗಿದೆ.

ತಿರುಗೇಟು ನೀಡಿದ ಕೇರಳ: ಆರಂಭದಲ್ಲಿ ಕೇರಳ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ವ್ಯಾಪಕವಾಗಿತ್ತು. ಇದನ್ನೆ ನೆಪವಾಗಿಟ್ಟ ದ.ಕ ಜಿಲ್ಲಾಡಳಿತ ತನ್ನೆಲ್ಲಾ ಗಡಿಯನ್ನು ಮುಚ್ಚುಗಡೆಗೊಳಿಸಿತ್ತು. ಮಾತ್ರವಲ್ಲದೆ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಜಿಲ್ಲೆಗೆ ಕರೆತರುವುದನ್ನೂ ನಿಷೇಧಿಸಿತ್ತು. ಅತ್ಯಲ್ಪ ದಿನಗಳಲ್ಲಿ ಕೊರೋನ ಸೊಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಾ ಹೋಗಿ ಸಹಜ ಸ್ಥಿತಿಗೆ ಮರಳಿದ ಕೇರಳ ಮಾದರಿ ರಾಜ್ಯವಾಯಿತು. ಈ ಮಧ್ಯೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಇದನ್ನೇ ನೆಪವಾಗಿಟ್ಟ ಕೇರಳ ಸರಕಾರ ಕರ್ನಾಟಕ ಹಿಂದೆ ಕಲಿಸಿದ ಪಾಠವನ್ನೇ ಮುಂದುವರಿಸಿತು. ತನ್ನೆಲ್ಲಾ ಗಡಿಯನ್ನು ಮುಚ್ಚುಗಡೆಗೊಳಿಸಿ ಅನ್ಯರಾಜ್ಯದವರಿಗೆ ಸಂಚಾರ ನಿಷೇದ ಹೇರಿತು. ಈ ಮುಸುಕಿನ ಗುದ್ದಾಟ ಎಲ್ಲಿಯವರೆಗೆ ಬಂದು ನಿಂತಿದೆ ಎಂದರೆ ಕರ್ತವ್ಯ ನಿಮಿತ್ತ ತೆರಳುವ ಕರ್ನಾಟಕದ ಪೊಲೀಸರನ್ನು ಕೇರಳ ಪೊಲೀಸರು ತಮ್ಮ ಗಡಿದಾಟಲು ಸಮ್ಮತಿಸುತ್ತಿಲ್ಲ. ಇದರಿಂದಾಗಿ ಕೆಂಡಾ ಮಂಡಲರಾಗಿರುವ ಕನಾಟಕದ ಪೊಲೀಸರು ಗಡಿಭಾಗದಲ್ಲಿರುವ ಕೇರಳಿಗರ ಮೇಲೆ ತಮ್ಮ ಸವಾರಿ ಮಾಡುತ್ತಿದಾರೆ ಎನ್ನುವ ಆರೋಪ ಗಡಿಭಾಗದಿಂದ ಕೇಳಿಬರುತ್ತಿದೆ. ಇನ್ನಾದರೂ ಉಭಯ ಜಿಲ್ಲೆಗಳ ಜಿಲ್ಲಾಡಳಿತ ಎಚ್ಚೆತ್ತು ಗಡಿವಿವಾದಕ್ಕೆ ತೆರೆ ಎಳೆಯದಿದ್ದಲ್ಲಿ ಗಡಿಭಾಗದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದರಲ್ಲಿ ಸಂದೇಹವಿಲ್ಲ.

ಉಭಯ ಜಿಲ್ಲಾಡಳಿತದಿಂದ ಮಾನವೀಯತೆಯ ಕೆಲಸವಾಗಬೇಕಾಗಿದೆ
ಮಂಗಳೂರನ್ನೇ ನಂಬಿರುವ ಮಂಜೇಶ್ವರ, ಕಾಸರಗೋಡಿನವರು, ಪುತ್ತೂರನ್ನೇ ಆಶ್ರಯಿಸಿಕೊಂಡಿರುವ ಪೆರ್ಲ, ಬದಿಯಡ್ಕ ಭಾಗದ ಜನರು, ಸುಳ್ಯವನ್ನು ಆಶ್ರಯಿಸಿಕೊಂಡಿರುವ ಮುಳ್ಳೇರಿಯ, ಕಾಸರಗೋಡಿನವರ ಸಹಿತ ಗಡಿಭಾಗದ ಜನತೆಯ ಬಗ್ಗೆ ರಾಜಕಾರಣಿಗಳ ಸಹಿತ ಜಿಲ್ಲಾಡಳಿತ ಗಮನಹರಿಸದಿರುವುದು ವಿಪರ್ಯಾಸ. ಗಡಿಭಾಗವನ್ನು ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಎರಡೂ ರಾಜ್ಯದ ವ್ಯಾಪ್ತಿಯಲ್ಲಿ ವಾಸವಿರುವ ಕುಟುಂಬಗಳ ಸಂಪರ್ಕವೂ ಕಡಿತಗೊಂಡಿತ್ತು. ಇದೀಗ ಮಂಗಳೂರು ಮತ್ತು ಕಾಸರಗೋಡಿನಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದು, ದೇಶದಲ್ಲಿ ಲಾಕ್‌ಡೌನ್ ಅಂತಿಮಗೊಳ್ಳಲು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿದೆ. ಈ ನಡುವೆ ಕರ್ನಾಟಕ ಸರ್ಕಾರ ಪಿಯುಸಿಯ ಬಾಕಿ ಉಳಿದಿರುವ ಒಂದು ಪರೀಕ್ಷೆಯ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯ ದಿನಾಂಕವನ್ನೂ ಘೋಷಿಸಿದೆ. ಆದರೆ ಉಭಯ ರಾಜ್ಯಗಳ ಮುಸುಕಿನ ಗುದ್ದಾಟದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಮಾತ್ರವಲ್ಲದೆ ಉಭಯ ಜಿಲ್ಲೆಗಳಲ್ಲಿರುವ ವ್ಯಾಪಾರಿಗಳ ಸಹಿತ ಉದ್ಯೋಗಕ್ಕಾಗಿ ತೆರಳುವವರ ಸ್ಥಿತಿಯೂ ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ಉಭಯ ರಾಜ್ಯಗಳು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಅಗತ್ಯ ಕೆಲಸಗಳಿಗಾಗಿ ತೆರಳುವವರಿಗಾಗಿ ಮಾನವೀಯ ನೆಲೆಯಲ್ಲಿ ಗಡಿಯನ್ನು ತೆರೆದುಕೊಡಬೇಕಾಗಿದೆ ಎನ್ನುವುದು ಗಡಿಪ್ರದೇಶದ ಜನರ ಒಕ್ಕೊರಳ ಆಗ್ರಹವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.