Home_Page_Advt
Home_Page_Advt
Home_Page_Advt

ಬರೋಬ್ಬರಿ 16 ಜಾನುವಾರುಗಳನ್ನು ಸಾಕುತ್ತಿರುವ ಮಹಿಳೆ…! ಸರ್ವೆಯ ದುರ್ಗಾವತಿಯವರ ಹೈನುಗಾರಿಕೆಯ ಯಶೋಗಾಥೆ

Puttur_Advt_NewsUnder_1
Puttur_Advt_NewsUnder_1

ವಿಶೇಷ ವರದಿ: ಯೂಸುಫ್ ರೆಂಜಲಾಡಿ

  • ಇಳಿ ವಯಸ್ಸಲ್ಲೂ ದೇಸಿ ಗೋ ತಳಿ ಸಂರಕ್ಷಣೆ ಮೂಲಕ ಮಾದರಿ

ಪುತ್ತೂರು: ಅಬ್ಬಬ್ಬಾ…! ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 16 ಜಾನುವಾರುಗಳನ್ನು ಇಲ್ಲೊಬ್ಬರು ವಿಧವೆ ಸಾಕಿ ಸಲಹುತ್ತಿದ್ದಾರೆ ಎಂದರೆ ನಂಬುತ್ತೀರಾ…? ನಂಬಲಸಾಧ್ಯವಾದರೂ ನಂಬಲೇಬೇಕು. ಸರ್ವೆ ಗ್ರಾಮದ ಆಳ್‌ಮಜಲುವಿನ 62 ವರ್ಷ ಪ್ರಾಯದ ದುರ್ಗಾವತಿ ಅವರೇ ತನ್ನ ಮನೆಯಲ್ಲಿ 16 ಜಾನುವಾರುಗಳನ್ನು ಸಾಕುತ್ತಿರುವ ಅಪರೂಪದ ಮಹಿಳೆ.

ಒಂದೆರಡು ಜಾನುವಾರುಗಳನ್ನೇ ಸಾಕಲು ಹಿಂದೆ-ಮುಂದೆ ನೋಡುವ ಕಾಲವಿದು. ಅದೆಷ್ಟೋ ಮಂದಿ ಇದ್ದ ಗೋವುಗಳನ್ನೂ ಇನ್ನೊಬ್ಬರಿಗೆ ಮಾರಾಟ ಮಾಡಿ ಗೋ ಸಾಕಾಣಿಕೆ ಕ್ಷೇತ್ರದಿಂದ ದೂರವುಳಿಯುತ್ತಿದ್ದಾರೆ. ನಾಲ್ಕೈದು ಜಾನುವಾರುಗಳನ್ನು ಸಾಕುವವರು ಕೆಲಸಕ್ಕೆ ಜನ ಇಟ್ಟುಕೊಳ್ಳುವುದು ಕಂಡು ಬರುತ್ತಿದೆ. ಆದರೆ ಅವೆಲ್ಲಕ್ಕಿಂತ ಈ ಮಹಿಳೆ ತದ್ವಿರುದ್ಧವಾಗಿದ್ದಾರೆ. ವೃದ್ಧಾಪ್ಯದಲ್ಲೂ 16 ಜಾನುವಾರುಗಳನ್ನು ತಾವೊಬ್ಬರೇ ಸಾಕುತ್ತಾ, ಪಾಲನೆ ಮಾಡುತ್ತಾ ಹೈನುಗಾರಿಕಾ ಕ್ಷೇತ್ರಕ್ಕೆ ಮತ್ತು ನಾಗರಿಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ದುರ್ಗಾವತಿ ಅವರು ಕಳೆದ 20 ವರ್ಷಗಳಿಂದ ಜಾನುವಾರುಗಳನ್ನು ಸಾಕುತ್ತಿದ್ದು ಸುಮಾರು 20 ರಷ್ಟು ಜಾನುವಾರುಗಳನ್ನು ಸಾಕುತ್ತಿದ್ದರು. ಕೆಲವು ಜಾನುವಾರುಗಳು ಸತ್ತ ಹಿನ್ನೆಲೆಯಲ್ಲಿ ಸದ್ಯಕ್ಕೆ 16 ಜಾನುವಾರುಗಳನ್ನು ಸಾಕುತ್ತಿದ್ದಾರೆ. ತಮ್ಮ ಮನೆಯ ಬಳಿಯೇ ಮೂರು ಹಟ್ಟಿ ಮಾಡಿ ಅದರಲ್ಲಿ ಸಾಕುತ್ತಿದ್ದಾರೆ. ಹಗಲು ಹೊತ್ತಲ್ಲಿ ಮನೆಯ ಪಕ್ಕ ಕಟ್ಟಿ ಹಾಕಿ ಸಾಕುತ್ತಿದ್ದಾರೆ. ಹಸುವಿನಿಂದ ಸಿಗುವ ಹಾಲನ್ನು ಭಕ್ತಕೋಡಿ ಹಾಲು ಸೊಸೈಟಿಗೆ ಮಾರಾಟ ಮಾಡುವ ಇವರು ಅದರಿಂದ ಹೇಳಿಕೊಳ್ಳುವಂತಹ ವರಮಾನವನ್ನೇನೂ ಪಡೆಯುತ್ತಿಲ್ಲ. ಆದರೂ ತನ್ನ ಜಾನುವಾರು ಸಾಕಾಣಿಕಾ ಕಾಯಕವನ್ನು ಮಾತ್ರ ನಿಯ್ಯತ್ತಿನಿಂದ ಮಾಡಿಕೊಂಡು ಬಂದಿದ್ದಾರೆ. ದುರ್ಗಾವತಿ ಅವರು ಶಾಲಾ ಮೆಟ್ಟಿಲು ಹತ್ತಿಲ್ಲ, ಆದರೆ ಅವರ ಸಾಧನೆಯೊಂದು ಇಂದು ಎಲ್ಲರೂ ಅವರತ್ತ ನೋಡುವಂತಾಗಿದೆ. ತನ್ನ ಶ್ರದ್ಧೆ, ಶ್ರಮದ ಮೂಲಕ ಸಮಾಜಕ್ಕೆ ಮಾದರಿ ಮತ್ತು ಸ್ಪೂರ್ತಿದಾಯಕ ಕಾರ್ಯ ಮಾಡುವ ಮೂಲಕ ಸದ್ದಿಲ್ಲದೇ ಸುದ್ದಿಯಾಗುತ್ತಿದ್ದಾರೆ.

ಎಲ್ಲ ಜಾನುವಾರುಗಳೂ ದಷ್ಠಪುಷ್ಠವಾಗಿವೆ:
ಅಂದ ಹಾಗೆ ದುರ್ಗಾವತಿ ಅವರು ದಿನನಿತ್ಯ ಜಾನುವಾರುಗಳ ಕೆಲಸದಲ್ಲೇ ತೊಡಗಿಕೊಂಡಿರುತ್ತಾರೆ. ಅದು ಬಿಟ್ಟರೆ ಅವರಿಗೆ ಅನ್ಯ ಕಸುಬಿಲ್ಲ, 12 ದನ ಹಾಗೂ 4 ಹೋರಿ ಇವರು ಸಾಕುತ್ತಿದ್ದಾರೆ. ದನದ ಹಾಲನ್ನು ಡಿಪ್ಪೋಗೆ ಮಾರಾಟ ಮಾಡಿ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಬೆಳಿಗ್ಗೆಯಿಂದ ರಾತ್ರಿ ವರೆಗೂ ಇವರು ಜಾನುವಾರುಗಳ ಪಾಲನೆಯಲ್ಲೇ ಕಾಲ ಕಳೆಯುತ್ತಾರೆ, ಎಲ್ಲ ಜಾನುವಾರುಗಳೂ ದಷ್ಠಪುಷ್ಠವಾಗಿದೆ, ತಾನು ಒಂದು ಹೊತ್ತಿನ ಊಟ ಮಾಡದಿದ್ದರೂ ಜಾನುವಾರುಗಳ ಹೊಟ್ಟೆ ತುಂಬಿಸುವುದನ್ನು ಮಾತ್ರ ದುರ್ಗಾವತಿಯವರು ಎಂದೂ ಕಮ್ಮಿ ಮಾಡಿಲ್ಲ. ತಾನು ಹಾಲಿಗಾಗಿ ಅಥವಾ ದುಡ್ಡು ಮಾಡುವ ಉದ್ದೇಶಕ್ಕೆ ಜಾನುವಾರುಗಳನ್ನು ಸಾಕುತ್ತಿಲ್ಲ ಎನ್ನುವ ದುರ್ಗಾವತಿಯವರು ಯಾವುದೇ ಜಾನುವಾರುಗಳನ್ನು ಇದುವರೆಗೆ ಮಾರಾಟ ಮಾಡಿಲ್ಲ, ಮುಂದಕ್ಕೆ ಮಾರಾಟ ಮಾಡುವುದೂ ಇಲ್ಲ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಗೋಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಸಾಕಲಾಗುತ್ತದೆ. ಗೋ ಶಾಲೆಯಲ್ಲಿರುವ ಜಾನುವಾರುಗಳು ಸೊರಗಿಕೊಂಡಿರುವುದೇ ಹೆಚ್ಚು, ಗೋ ಶಾಲೆಗಳಲ್ಲಿ ಜಾನುವಾರುಗಳು ಅಷ್ಟೊಂದು ದಷ್ಠಪುಷ್ಠವಾಗಿ ಮತ್ತು ಆರೋಗ್ಯಕರವಾಗಿ ಇರುವುದಿಲ್ಲ ಎಂಬ ಆರೋಪವೂ ಇದೆ. ಆದರೆ ದುರ್ಗಾವತಿ ಎಂಬ ವಿಧವೆ ಅವೆಲ್ಲವನ್ನೂ ಪ್ರಶ್ನಿಸುವಂತೆ ಮಾಡಿದ್ದಾರೆ. ಮಾತ್ರವಲ್ಲ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ದೇಸಿ ಗೋ ತಳಿಯ ಸಂರಕ್ಷಣೆ:
ದೇಸಿ ತಳಿ ಹಸುಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಅವುಗಳ ನಿರ್ವಹಣಾ ಕಷ್ಟ ಮತ್ತು ಹಾಲಿನ ಉತ್ಪಾದನೆ ಕಡಿಮೆ ಎನ್ನುವ ಕಾರಣಕ್ಕೆ ರೈತರು, ಕೃಷಿಕರೂ ಅದರ ಸಾಕಾಣಿಕೆಯಿಂದ ಅಲ್ಪ ದೂರವುಳಿಯುವ ಪ್ರಸಂಗ ನಡೆಯುತ್ತಿದೆ. ಇಳುವರಿ, ಆದಾಯವೇ ಪ್ರಮುಖವಾಗುತ್ತಿರುವ ಇಂದಿನ ಯುಗದಲ್ಲಿ ಆದಾಯದ ಉದ್ದೇಶ ಬದಿಗಿಟ್ಟು ದೇಸಿ ತಳಿ ಜಾನುವಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕುತ್ತಿರುವ ದುರ್ಗಾವತಿ ಅವರ ಕಾರ್ಯ ಮೆಚ್ಚುವಂತದ್ದು. ಅಳಿವಿನಂಚಿನಲ್ಲಿರುವ ದೇಸಿ ಗೋತಳಿಯ ನೈಜವಾದ ಸಂರಕ್ಷಣೆ ದುರ್ಗಾವತಿ ಮಾಡುತ್ತಿದ್ದಾರೆ ಎನ್ನವುದು ಮಾತ್ರ ಸತ್ಯ.

ನೈಜ ಗೋ ಪ್ರೇಮಿ:
ತಾನು ಸಾಕುತ್ತಿರುವ 16 ಜಾನುವಾರುಗಳಿಗೂ ಕಷ್ಟಪಟ್ಟು ಹುಲ್ಲು, ಆಹಾರಗಳನ್ನು ನೀಡಿ ಅದನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಬೆಳಿಗ್ಗೆ, ಮದ್ಯಾಹ್ನ ಮತ್ತು ಸಂಜೆ ದೂರದ ಪ್ರದೇಶಗಳಿಂದ ಹುಲ್ಲು ತಂದು ಹಾಕಿ ಅವುಗಳನ್ನು ಸಾಕುತ್ತಿದ್ದಾರೆ, ನೈಸರ್ಗಿಕವಾದ ಹುಲ್ಲು, ಆಹಾರವನ್ನು ಮಾತ್ರ ಅವರು ನೀಡುತ್ತಾರೆ, ಅನಕ್ಷರಸ್ಥರಾಗಿದ್ದರೂ, ಆರ್ಥಿಕ ಸ್ಥಿತಿ ಗಟ್ಟಿಯಿಲ್ಲದಿದ್ದರೂ ಇವರ ಗೋ ಪ್ರೇಮ ಮಾತ್ರ ಮೆಚ್ಚುವಂತದ್ದು. ದೇಸೀ ತಳಿಯ ಗೋ ಸಂರಕ್ಷಣೆ ವಿಚಾರ ನೋಡಿದರೂ ದುರ್ಗಮ್ಮ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇವರು ಜಾನುವಾರುಗಳನ್ನು ಸಾಕುತ್ತಾ ಅದರಲ್ಲಿ ಸಂತೋಷವನ್ನು ಅನುಭವಿಸುತ್ತಿದ್ದಾರೆ. ದುರ್ಗಾವತಿ ಅವರ ಪತಿ ಚಂದು ಪೂಜಾರಿ  ದೈವಾಧೀನರಾಗಿದ್ದಾರೆ. ಇವರ ನಾಲ್ವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ. ಇವರ ಮನೆಯಲ್ಲಿ ಸುಮಾರು 85 ವರ್ಷ ಪ್ರಾಯದ ಅವರ ತಾಯಿ ಮುತ್ತಮ್ಮ ಬಿಟ್ಟರೆ ಬೇರೆ ಯಾರೂ ಇಲ್ಲ. 16ಜಾನುವಾರುಗಳು ಇರುವ ಕಾರಣ ದುರ್ಗಾವತಿಯವರಿಗೆ ದಿನಪೂರ್ತಿ ಎಲ್ಲಿಗೂ ಹೋಗುವಂತಿಲ್ಲ, ಹೋದರೂ ಕೂಡಲೇ ಮನೆ ಕಡೆ ಬರಲೇಬೇಕಾಗಿದೆ. 16 ಜಾನುವಾರುಗಳನ್ನು ಸಾಕುವುದರ ಜೊತೆಗೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಉತ್ತಮ ರೀತಿಯಲ್ಲಿ ಮದುವೆ ಮಾಡಿಸಿಕೊಟ್ಟಿರುವ ಇವರ ಕಾರ್ಯಕ್ಕೆ ಸ್ಥಳೀಯರು ಕೂಡಾ ಶಹಬ್ಬಾಸ್ ಹೇಳುತ್ತಿದ್ದಾರೆ.

ನೀರಿನ ಸಮಸ್ಯೆ:
ಗ್ರಾ.ಪಂ ಯೋಜನೆಯ ನೀರು ಲಭ್ಯವಿದ್ದರೂ ಸಣ್ಣ ಟ್ಯಾಂಕ್ ಇರುವುದರಿಂದ ಇವರಿಗೆ ನೀರು ಸಾಕಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ಇದ್ದ ನೀರಿನಲ್ಲೇ ಎಲ್ಲವನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಸರಕಾರವಾಗಲೀ, ಸಂಬಂಧಪಟ್ಟ ಇತರರಾಗಲೀ ಬೋರ್‌ವೆಲ್ ವ್ಯವಸ್ಥೆ ಮಾಡಿ ಕೊಟ್ಟಿದ್ದರೆ ಇವರ ಜಾನುವಾರು ಸಾಕಾಣಿಕೆಗೆ ಸಹಕಾರಿಯಾದೀತು ಎನ್ನುವ ಅಭಿಪ್ರಾಯ ಸ್ಥಳೀಯವಾಗಿ ವ್ಯಕ್ತವಾಗಿದೆ.

ಸಮಾಜ ಗುರುತಿಸಬೇಕಾಗಿದೆ:
ಸಮಾಜದ ವಿವಿಧ ಸ್ತರಗಳನ್ನು ಗುರುತಿಸಿ ಸರಕಾರ ರಾಜ್ಯೋತ್ಸವದಂತಹ ಪ್ರಶಸ್ತಿಗಳನ್ನು ಪ್ರಕಟಿಸುತ್ತಿದೆ. ಆ ಸಂದರ್ಭ ಇಂತಹ ಶ್ರಮಿಕ ವರ್ಗದ ಮಹಿಳೆಯರನ್ನೂ ಪರಿಗಣನೆಗೆ ತೆಗೆದುಕೊಂಡು ಇಂತವರಿಗೆ ನಿಜವಾಗಿಯೂ ಅತ್ಯುತ್ತಮ ಪ್ರಶಸ್ತಿಗಳು ದೊರಕಬೇಕಾಗಿದೆ ಎಂದು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ತಿಳಿಸಿದ್ದಾರೆ.

 

ಸಂಬಂಧಪಟ್ಟವರು ಗಮನಹರಿಸುವರೇ…?
ದುರ್ಗಾವತಿ ಅವರು 16 ಜಾನುವಾರುಗಳನ್ನು ಸಾಕುತ್ತಿದ್ದರೂ ಮುಂಡೂರು ಗ್ರಾ.ಪಂ ಮೂಲಕ ಎನ್‌ಆರ್‌ಜಿ ಯೋಜನೆಯಡಿಯಲ್ಲಿ ಒಂದು ಹಟ್ಟಿ ರಚನೆಯಾದದ್ದು ಬಿಟ್ಟರೆ ಇದುವರೆಗೂ ಯಾರಿಂದಲೂ ನಯಾ ಪೈಸೆಯ ಸಹಕಾರವಾಗಲೀ, ಪ್ರೋತ್ಸಾಹವಾಗಲೀ ದೊರಕಿಲ್ಲ. ಪಶು ಸಂಗೋಪನೆ ಇಲಾಖೆಯಾಗಲೀ, ಹಾಲು ಉತ್ಪಾದಕರ ಸಹಕಾರ ಸಂಘವಾಗಲೀ ಯಾರೂ ಇವರನ್ನು ಕನಿಷ್ಠ ಗುರುತಿಸುವ ಕಾರ್ಯವನ್ನೂ ಮಾಡಿಲ್ಲ. 16 ಜಾನುವಾರುಗಳನ್ನು ಸಾಕುವುದೆಂದರೆ ಸಣ್ಣ ವಿಚಾರವೇನಲ್ಲ. ಅದೂ ಓರ್ವ ವಿಧವೆಯಾಗಿ, ವೃದ್ಧೆಯಾಗಿ, ಅನಕ್ಷರಸ್ಥೆಯಾಗಿ ದುರ್ಗಾವತಿ ಮಾಡುತ್ತಿರುವ ಕಾರ್ಯ ದೊಡ್ಡ ಸಾಧನೆಯೇ ಸರಿ. ಕೇವಲ ಹಾಲು ಉತ್ಪಾದನೆ, ಹಣ ಸಂಪಾದನೆ ನನ್ನ ಉದ್ದೇಶವಲ್ಲ, ಜಾನುವಾರುಗಳ ಸಾಕಾಣಿಕೆ ಮತ್ತು ಅದನ್ನು ದಷ್ಠಪುಷ್ಠವಾಗಿರುವಂತೆ ನೋಡಿಕೊಳ್ಳುವುದೇ ನನ್ನ ಉದ್ದೇಶ ಎನ್ನುವ ಅವರ ಮಾತು ಎಂತವರನ್ನು ಆಕರ್ಷಿಸುತ್ತದೇ ಇರದು. ದುರ್ಗಾವತಿ ಅವರ ಜಾನುವಾರು ಸಾಕಾಣಿಕೆಯ ಯಶೋಗಾಥೆಗೆ ಅಗತ್ಯ ಸಹಕಾರ ದೊರೆಯಬೇಕಾಗಿದೆ. ಸಂಬಂಧಪಟ್ಟ ಇಲಾಖೆ, ಸಹಕಾರ ಸಂಘ, ಸಂಘ ಸಂಸ್ಥೆಗಳು ಇವರನ್ನು ಪ್ರೋತ್ಸಾಹಿಸಿ ಇವರ ಜಾನುವಾರು ಸಾಕಾಣಿಕೆಯ ಸಾಹಸಕ್ಕೆ ಮತ್ತು ದೇಸಿ ಗೋ ತಳಿ ಸಂರಕ್ಷಣೆಯ ಇವರ ಕಾರ್ಯಕ್ಕೆ ಬೆಂಬಲ ನೀಡಬೇಕಾಗಿದೆ. ಸಂಬಂಧಪಟ್ಟವರು ಇನ್ನಾದರೂ ಇವರ ಬಗ್ಗೆ ಗಮನ ಹರಿಸುತ್ತಾರಾ ಕಾದು ನೋಡಬೇಕಾಗಿದೆ.

ನಾನು ಅದೆಷ್ಟೋ ವರ್ಷಗಳಿಂದ ಜಾನುವಾರುಗಳನ್ನು ಸಾಕುತ್ತಿದ್ದೇನೆ. ಇದರಿಂದ ಹೆಚ್ಚಿನ ಪ್ರಮಾಣದ ವರಮಾನ ಪಡೆಯುವ ಉದ್ದೇಶ ನನಗಿಲ್ಲ. ನಾನು ಸಾಕಿದ ಯಾವುದೇ ಜಾನುವಾರನ್ನು ಇದುವರೆಗೆ ಮಾರಾಟ ಮಾಡಿಲ್ಲ, ಮುಂದಕ್ಕೂ ಮಾರಾಟ ಮಾಡುವುದಿಲ್ಲ. ಜಾನುವಾರುಗಳನ್ನು ಸಾಕುವುದರಲ್ಲಿ ನನಗೆ ಸಂತೋಷ ಸಿಗುತ್ತದೆ. ನಾನೊಬ್ಬಳೇ ಎಲ್ಲವನ್ನೂ ಮಾಡುತ್ತಿದ್ದೇನೆ. ಮನೆಯ ಬಳಿಯೇ ಕಟ್ಟಿ ಹಾಕಿ ಸಾಕುತ್ತಿದ್ದೇನೆ. ನಾನು ಜೀವಿಸುವ ವರೆಗೆ ಹೀಗೆಯೇ ಜಾನುವಾರುಗಳನ್ನು ಸಾಕುತ್ತೇನೆ – ದುರ್ಗಾವತಿ ಆಳ್‌ಮಜಲು

 

ಅಪ್ಪಟ ಮತ್ತು ನೈಜ ಗೋ ಪ್ರೇಮಕ್ಕೆ ದುರ್ಗಾವತಿ ಶ್ರೇಷ್ಠ ಉದಾಹರಣೆಯಾಗಿದ್ದಾರೆ. ಗೋವುಗಳನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತಾ ದೇಸಿ ತಳಿಗಳ ರಕ್ಷಣೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಇವರು ರಾಷ್ಟ್ರಕ್ಕೆ ಮಾದರಿ. ಹಾಲು ಉತ್ಪಾದಕರ ಸಹಕಾರ ಸಂಘ, ಪಶು ಸಂಗೋಪನಾ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಇವರ ನೆರವಿಗೆ ಬರಬೇಕಾಗಿದೆ -ಕಮಲೇಶ್ ಎಸ್.ವಿ, ಅಧ್ಯಕ್ಷರು ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.