ಕೊಯಿಲ-ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆ ದುರವಸ್ಥೆ | ಮರು ಡಾಮರೀಕರಣ ಕಾಮಗಾರಿ ನಡೆಯುವುದು ಎಂತು..?

Puttur_Advt_NewsUnder_1
Puttur_Advt_NewsUnder_1
  • 2 ವಿಧಾನ ಸಭಾ ಕ್ಷೇತ್ರದಲ್ಲಿರುವ 9 ಕಿ.ಮೀ. ರಸ್ತೆ.
  • 3 ಗ್ರಾಮಗಳ ಜನತೆಯ ಪ್ರಮುಖ ಸಂಪರ್ಕ ರಸ್ತೆ.
  • ಹೊಂಡ-ಗುಂಡಿಯಾಗಿ ಮಳೆ ಸುರಿಯುತ್ತಿದ್ದಂತೆ ಕೆಸರು ಗದ್ದೆಯಂತಾಗುವ ರಸ್ತೆ

ವಿಶೇಷ ವರದಿ/ಚಿತ್ರಗಳು: ಸಿದ್ದಿಕ್ ನೀರಾಜೆ.
ಉಪ್ಪಿನಂಗಡಿ: ಕೊಯಿಲ-ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆಯ ಡಾಂಬಾರು ಸಂಪೂರ್ಣವಾಗಿ ಎದ್ದು ಹೋಗಿ ಹೊಂಡ-ಗುಂಡಿ ನಿರ್ಮಾಣವಾಗಿ ಗಾಡಿ ರಸ್ತೆಯಂತಾಗಿ ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಕುಲಗೆಟ್ಟು ಹೋಗಿದೆ. ಅದರಲ್ಲೂ ಮಳೆ ಸುರಿದೊಡನೆ ರಸ್ತೆ ಕೆಸರು ಗದ್ದೆಯಂತಾಗಿ ಮಾರ್ಪಾಡು ಹೊಂದಿ ಜನತೆ ನಡೆದಾಡುವುದಕ್ಕೂ ಸಾಧ್ಯವಿಲ್ಲದ ರೀತಿಯಲ್ಲಿ ದುರವಸ್ಥೆ ಎದುರಾಗಿದ್ದು, ಸಮಸ್ಯೆಯ ಆಗರ ಸೃಷ್ಠಿಯಾಗಿರುವ ಬಗ್ಗೆ ದೂರುಗಳು ವ್ಯಕ್ತವಾಗಿದೆ.

ಕಳೆದ ಹತ್ತಾರು ವರ್ಷಗಳಿಂದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಸಭಾ, ಲೋಕಸಭಾ ಚುನಾವಣೆ ಎದುರಾಗುವ ಸಂದರ್ಭದಲ್ಲಿ ರಾಜಕೀಯ ಪಕ್ಷದ ನಾಯಕರು ಈ ರಸ್ತೆ ಅವ್ಯವಸ್ಥೆಯನ್ನೇ ಮುಂದಿಟ್ಟುಕೊಂಡು ಮತ ಯಾಚಿಸುತ್ತಾ, ಈ ರಸ್ತೆಗೆ ಅನುದಾನ ಮಂಜೂರು ಆಗಿದೆ, ಚುನಾವಣೆ ಮುಗಿದ ಬಳಿಕ ಕಾಮಗಾರಿ ನಡೆಯುತ್ತದೆ ಈ ಬಾರಿ ಈ ರಸ್ತೆಯನ್ನು ಆದ್ಯತೆ ನೆಲೆಯಲ್ಲಿ ಡಾಂಬರೀಕರಣ ಮಾಡಲಾಗುತ್ತದೆ ಎನ್ನುವ ಭರವಸೆ ಬಿಟ್ಟರೆ ರಸ್ತೆ ಡಾಂಬರೀಕರಣ ಆಗಿರುವುದಿಲ್ಲ, ಹೀಗಾಗಿ ಇದೀಗ ಮತ್ತೊಂದು ಮಳೆಗಾಲ ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ಎದುರು ನೋಡುವ ಸಂದರ್ಭದಲ್ಲಿಯಾದರೂ ರಸ್ತೆ ಮರು ಡಾಂಬರೀಕರಣ ಆಗಬಹುದೇ ಎನ್ನುವ ಯಕ್ಷಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
2 ವಿಧಾನ ಸಭಾ ಕ್ಷೇತ್ರದಲ್ಲಿರುವ 9 ಕಿ.ಮೀ. ರಸ್ತೆ:
ಕೊಯಿಲ-ಹಿರೇಬಂಡಾಡಿ-ಉಪ್ಪಿನಂಗಡಿ ಸಂಪರ್ಕದ ೯ ಕಿ.ಮೀ. ಉದ್ದದ ಈ ರಸ್ತೆ ಕೊಯಿಲದಿಂದ ಶಾಖೆಪುರ ತನಕ ಕಡಬ ತಾಲ್ಲೂಕು, ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತು ಶಾಖೆಪುರದಿಂದ ಉಪ್ಪಿನಂಗಡಿ ತನಕ ಪುತ್ತೂರು ತಾಲ್ಲೂಕು ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಕೊಯಿಲ, ಹಿರೇಬಂಡಾಡಿ, ಉಪ್ಪಿನಂಗಡಿ ಗ್ರಾಮಗಳ ಜನತೆಯ ಮುಖ್ಯ ಸಂಪರ್ಕ ರಸ್ತೆಯಾಗಿದೆ. ರಸ್ತೆಯನ್ನು ಅವಲಂಬಿಸಿರುವ ಸಾವಿರಾರು ಮಂದಿ ಗ್ರಾಮಸ್ಥರು ಮತ್ತು ನೂರಾರು ವಾಹನಗಳವರು ದಿನನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂಬ ದೂರುಗಳು ವ್ಯಕ್ತವಾಗಿದೆ.


ಹತ್ತಾರು ಸಂಸ್ಥೆಗಳಿರುವ ಪ್ರದೇಶ:
ಕೊಯಿಲದಿಂದ ಉಪ್ಪಿನಂಗಡಿ ಮಧ್ಯೆ ಕೊಯಿಲ ಮತ್ತು ಹಿರೇಬಂಡಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ೧ ಸರ್ಕಾರಿ ಪ್ರೌಢ ಶಾಲೆ, ೨ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ೧ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಕಚೇರಿ, ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ಕಚೇರಿ, ೨ ಹಾಲು ಉತ್ಪಾದಕರ ಸಹಕಾರಿ ಸಂಘ, ಮೂರ್ತೆದಾರರ ಸಹಕಾರಿ ಸಂಘದ ಶಾಖಾ ಕಚೇರಿ, ೧ ದೇವಸ್ಥಾನ, ೨ ಭಜನಾ ಮಂದಿರ, ೪ ಮಸೀದಿ ಸೇರಿದಂತೆ ಹತ್ತಾರು ಸಂಸ್ಥೆಗಳು ಈ ರಸ್ತೆ ಹಾದು ಹೋಗುವ ಪ್ರದೇಶದಲ್ಲಿ ಇದ್ದು, ಇದೊಂದು ಅತೀ ಅಗತ್ಯದ ಪ್ರಮುಖ ರಸ್ತೆಯಾಗಿದ್ದು, ೩ ಗ್ರಾಮಗಳ ಜನರು ಇದನ್ನು ಅವಲಂಬಿತರಾಗಿದ್ದಾರೆ.
25 ವರ್ಷಗಳ ಹಿಂದೆ ಡಾಂಬರೀಕರಣ ನಡೆದಿದ್ದು:
ಸುಳ್ಯ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಕೊಯಿಲದಿಂದ ಶಾಖೆಪುರ ತನಕದ ರಸ್ತೆ ಸುಮಾರು ೨೫ ವರ್ಷಗಳ ಹಿಂದೆ ಸಂಪೂರ್ಣ ಡಾಂಬರೀಕರಣ ಆಗಿರುವುದು ಬಿಟ್ಟರೆ ಕೆಲವೊಮ್ಮೆ ತೇಪೆ ಕಾಮಗಾರಿ ನಡೆದಿದ್ದು, ಅದು ಒಂದೇ ಮಳೆಗೆ ಕೊಚ್ಚಿ ಹೋಗಿ ಮತ್ತೆ ಹೊಂಡ ಎದ್ದು ಕಾಣುವಂತಿತ್ತು. ಉಪ್ಪಿನಂಗಡಿಯಿಂದ ಶಾಖೆಪುರ ತನಕದ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೦೧೨ರಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮರು ಡಾಂಬರೀಕರಣ ನಡೆದಿತ್ತು. ಆದರೆ ತೀರಾ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕೇವಲ ಒಂದೇ ವರ್ಷದಲ್ಲಿ ಹೊಂಡ-ಗುಂಡಿ ತುಂಬಿ ಹೋಗಿ ನಡೆಸಲಾದ ಕಾಮಗಾರಿ ನಿಷ್ಪ್ರಯೋಜಕವಾಗಿತ್ತು, ಈ ರೀತಿಯಾಗಿಯೂ ರಸ್ತೆ ಕಡೆಗಣಿಸಲ್ಪಟ್ಟಿದ್ದು, ಈ ನಿಟ್ಟಿನಲ್ಲಿ ಶೀಘ್ರ ರಸ್ತೆ ಮರುಡಾಮರೀಕರಣ ಆಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

 

7 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ರೂ.4.60 ಕೋಟಿ ಮಂಜೂರು-ಮಠಂದೂರು: ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿನ್ನಿಕಲ್‌ನಿಂದ ೧.೩ ಕಿ.ಮೀ.ಗೆ ಲೋಕೋಪಯೋಗಿ ಇಲಾಖೆಯಿಂದ ೧.೫೦ ಕೋಟಿ ರೂಪಾಯಿ, ಅಲ್ಲಿಂದ ಮುಂದೆ ೧.೨ ಕಿ.ಮೀ.ಗೆ ಪ್ರಧಾನಮಂತ್ರಿ ಸಡಕ್ ಯೋಜನೆಯಿಂದ ೧.೨೦ ಕೋಟಿ ರೂಪಾಯಿ, ಅಲ್ಲಿಂದ ಮುಂದುವರಿದು ಅರ್ಧ ಕಿ.ಮೀ. ರಸ್ತೆಗೆ ಜಿಲ್ಲಾ ಪಂಚಾಯಿತಿಯಿಂದ ೬೫ ಲಕ್ಷ ರೂಪಾಯಿ ಸೇರಿದಂತೆ ಒಟ್ಟು ೩.೩೫ ಕೋಟಿ ರೂಪಾಯಿ ಮಂಜೂರು ಆಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಕೊರೋನಾದಿಂದಾಗಿ ಕಾಮಗಾರಿ ವಿಳಂಬ: ನನ್ನ ಭಾಗದ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಮುಗಿದಿದೆ, ಈ ಹಿಂದೆಯೇ ಕಾಮಗಾರಿ ಆರಂಭ ಆಗಬೇಕಾಗಿತ್ತು, ಕೊರೋನಾ ಜಾಗೃತಿ ಲಾಕ್‌ಡೌನ್‌ನಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಅದಾಗ್ಯೂ ಸಡಕ್ ಅನುದಾನದ ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದು ಮಠಂದೂರು ತಿಳಿಸಿದ್ದಾರೆ.

1.25 ಕೋಟಿ ರೂ. ಮಂಜೂರು, 6ಕ್ಕೆ ಗುದ್ದಲಿ ಪೂಜೆ-ಅಂಗಾರ: ಕೊಯಿಲದಿಂದ ಆರಂಭಗೊಂಡು ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ತನಕ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ಮಳೆ ಹಾನಿ ಯೋಜನೆ ಅಡಿಯಲ್ಲಿ ೧.೨೫ ಕೋಟಿ ರೂಪಾಯಿ ಅನುದಾನ ಮಂಜೂರು ಆಗಿದ್ದು, ಟೆಂಡರು ಪ್ರಕ್ರಿಯೆ ಮುಗಿದಿದೆ, ಜೂನ್ ೬ರಂದು ಗುದ್ದಲಿ ಪೂಜೆ ನಡೆಯಲಿದೆ ಎಂದು ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ತಿಳಿಸಿದ್ದಾರೆ.

ರಸ್ತೆ 3.5 ಮೀಟರ್ ಇದ್ದುದು, 5.5 ಮೀಟರ್ ಅಗಲ ಆಗಲಿದೆ-ಕಾನಿಷ್ಕ: ಪ್ರಸಕ್ತ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದೆ. ಇದೀಗ ರಸ್ತೆ ೩.೫ ಮೀಟರ್ ಇದ್ದುದು ೫.೫ ಮೀಟರ್ ಆಗಲ ಆಗಲಿದೆ, ಮುಂದೆ ಜಿಲ್ಲಾ ಮುಖ್ಯ ರಸ್ತೆಯಾದ ಬಳಿಕ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಕಾನಿಷ್ಕ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.