ಲಾಕ್‌ಡೌನ್ ಸಮಯದಲ್ಲಿ ವಿಭಿನ್ನ ರೀತಿಯಲ್ಲಿ ರಜಾ ದಿನವನ್ನ ಕಳೆದ ಗುರುಕುಲ ಕಲಾಕೇಂದ್ರದ ಪುಟಾಣಿಗಳು | 45 ದಿನ, 45 ಚಾಲೆಂಜ್ ವಿಷಯದಲ್ಲಿ ಪಾಲ್ಗೊಂಡ ಪುಟಾಣಿಗಳು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೇಸಿಗೆ ರಜೆಗಳೆಂದರೆ ಶಾಲಾ ಮಕ್ಕಳಿಗೆ ಇನ್ನಿಲ್ಲದ ಆನಂದ. ಯಾವಾಗ ಪರೀಕ್ಷೆಗಳು ಮುಗಿಯುತ್ತವೋ ಎಂದು ಮನಸ್ಸಿನಲ್ಲೇ ಅಂದುಕೊಂಡು ಒಂದೊಂದೇ ಪರೀಕ್ಷೆಯ ಒತ್ತಡವನ್ನು ನಿವಾರಿಸಿಕೊಂಡು ಕೊನೆಯ ಪರೀಕ್ಷೆಯ ದಿನವನ್ನು ಎದುರುಗೊಳ್ಳುವ ಮಕ್ಕಳಲ್ಲಿ ಇನ್ನಿಲ್ಲದ ಉತ್ಸಾಹ…


ರಜೆಗಳನ್ನು ಸ್ವಾಗತಿಸಲು ಇನ್ನಿಲ್ಲದ ಕಾತರ..
ಎರಡು ತಿಂಗಳ ಬೇಸಿಗೆ ರಜೆಗಳನ್ನು ಅತ್ಯಂತ ಸಂತೋಷದಿಂದ ಕಳೆಯುವ ಮಕ್ಕಳಿಗೆ ಈ ವರ್ಷ “ಕೊರೊನ” ನಿರಾಸೆ ತಂದಿದ್ದು ಮನೆಯಲ್ಲೇ ಬಂಧಿಯಾದ ಮಕ್ಕಳು ಜಾತ್ರೆ ಗಮ್ಮತ್ತಿಲ್ಲದೆ, ಬೇಸಿಗೆ ಶಿಬಿರಗಳ ಚಟುವಟಿಕೆಯಿಲ್ಲದೆ, ಬಂಧುಗಳ ಭೇಟಿಯಿಲ್ಲದೆ ಮಂಕಾಗಿದ್ದಾರೆ.


ಈ ಕೊರೋನಾದಿಂದಾಗಿ ಮನೆಯಲ್ಲೆ ಉಳಿಯಬೇಕಾಗಿ ಬಂದಿರುವ ಮಕ್ಕಳ ಬಗ್ಗೆ ಹೆತ್ತವರಿಗೆ ಇನ್ನಷ್ಟು ಚಿಂತೆ. ರಜಾ ದಿನಗಳಲ್ಲಿ ಎಲ್ಲಾ ಹೆತ್ತವರ ದೂರು- ಮಕ್ಕಳು ಟಿ.ವಿ, ಮೊಬೈಲ್‌ಗಳಲ್ಲಿ ಮುಳುಗುತ್ತಾರೆ. ಒಮ್ಮೆ ಈ ಶಾಲೆ ಪ್ರಾರಂಭವಾದರೆ ಸಾಕಾಗಿತ್ತು ಅನ್ನೋದು. ಆದರೆ ಇಂತಹ ದೂರನ್ನು ಗುರುಕುಲ ಕಲಾಕೇಂದ್ರದ ಪೋಷಕರು ಯಾವುದೇ ಕಾರಣಕ್ಕೂ ಹೇಳುವಂತಿಲ್ಲ.
ಯಾಕೆಂದರೆ ಗುರುಕುಲ ಕಲಾಕೇಂದ್ರ ಪುರುಷರಕಟ್ಟೆಯ ಸಂಗೀತ ಶಿಕ್ಷಕಿಯಾಗಿರುವ ಗುರುಪ್ರಿಯ ಕಾಮತ್ ಅವರು ತಮ್ಮ ಸಂಗೀತ ಶಾಲೆಯ ಮಕ್ಕಳಿಗಾಗಿ ವಾಟ್ಸಾಪ್ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿಭಿನ್ನವಾಗಿ ಮಕ್ಕಳು ವಿವಿಧ ವಿಷಯಗಳ ಬಗ್ಗೆ ತಮ್ಮ ಪ್ರೌಢಿಮೆ ವೃದ್ಧಿಸಿಕೊಳ್ಳಲು ನೆರವಾಗುತ್ತಿದ್ದಾರೆ.
ಲಾಕ್‌ಡೌನ್ ಪ್ರಾರಂಭವಾದ ದಿನದಿಂದ ಸುಮಾರು 45 ದಿನ, 45 ವಿಷಯಗಳ ಚಾಲೆಂಜ್‌ಗಳನ್ನು ನೀಡಿ ಅದರಲ್ಲಿ ಮಕ್ಕಳು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.

ಕೊರೋನಾ ವೈರಸ್ ಬಗ್ಗೆ ಮಾಹಿತಿ ಜೊತೆಗೆ ಅದನ್ನು ತಡೆಯಲು ಜನಸಾಮಾನ್ಯರು ತೆಗೆದುಕೊಳ್ಳಬೇಕಾದ ಜಾಗೃತಿ, ಮಗ್ಗಿ ಕಂಠಪಾಠ, ಮನೆಮದ್ದು, ಪರಿಸರದ ಸುತ್ತಮತ್ತಲ ಸ್ವಚ್ಛತೆ, ಚಿತ್ರಕಲೆ, ದಾಸರ ಹಾಡುಗಳು, ಗಿಡ ನೆಟ್ಟು ಪ್ರತಿದಿನ ನೀರು ಹಾಕುವುದು, ಹನುಮಾನ್ ಛಾಲೀಸ ಕಂಠಪಾಠ, ಹಣವನ್ನ ಸಂಗ್ರಹಿಸುವ ಡಬ್ಬಿಯ ರಚನೆ, ಗಾಳಿಪಟ ತಯಾರಿಸಿ ಹಾರಿಸುವುದು, ನನ್ನ ಕೈರುಚಿ-ತಮ್ಮ ಕೈಯಾರೆ ಅಡುಗೆ ಮಾಡುವುದು, ನಮ್ಮ ಕಣ್ಣುಗಳು ಎಂಬ ಶೀರ್ಷಿಕೆಯೊಂದಿಗೆ ತಂದೆ ತಾಯಿಯ ಬಗ್ಗೆ ಕವನ ರಚನೆ, ಕಸದಿಂದ ರಸ, ಕೊರೋನಾಗಾಗಿ ಸೇವೆ ಸಲ್ಲಿಸುವ ಯೋಧರ ಚಿತ್ರಗಳು, ಬಣ್ಣವನ್ನು ಉಪಯೋಗಿಸದೆ ಧಾನ್ಯಗಳಿಂದ ಚಿತ್ರ ಬಿಡಿಸುವುದು, ಭಾವ- ಜನಪದ ಗೀತಾ ಗಾಯನ, ಮಣ್ಣಿನಲ್ಲಿ ಆಕೃತಿ ತಯಾರಿಸುವುದು, ಬಟ್ಟೆಯಿಂದ ತಾವೇ ಮಾಸ್ಕ್ ತಯಾರಿಸುವುದು, ಸ್ವಂತ ಕಥೆ ರಚಿಸುವುದು, ನಮ್ಮ ಗುರಿ ಏನು ಅನ್ನುವುದರ ಬಗ್ಗೆ ಮಕ್ಕಳಿಂದ ವಿಶ್ಲೇಷಣೆ, ದೇಶದಲ್ಲಿರುವ ೨೮ ರಾಜ್ಯಗಳ ಬಗ್ಗೆ ಮಾಹಿತಿ, ಗಾದೆ ಮಾತುಗಳು, ನೃತ್ಯ, ಶಾರ್ಟ್ ವೀಡಿಯೋ ರಚನೆ, ತರಕಾರಿ-ಹಣ್ಣುಗಳ ಹೆಸರು ತಿಳಿಸುವುದು, ಗಿಡಗಳ ಎಲೆಯಿಂದ ಚಿತ್ರ ರಚನೆ, ತರಕಾರಿ/ಹಣ್ಣುಗಳನ್ನುಪಯೋಗಿಸಿ ಚಿತ್ರ ರಚನೆ, ಮದರ್ಸ್ ಡೇ ಆಚರಣೆ, ಹೂಗುಚ್ಛ ರಚನೆ, ಮಿಮಿಕ್ರಿ, ವಿಭಕ್ತ ಮತ್ತು ಅವಿಭಕ್ತ ಕುಟುಂಬದಲ್ಲಿ ಯಾವುದು ಒಳ್ಳೆಯದು ಎಂಬ ವಿಚಾರವಾಗಿ ಚರ್ಚಾಕೂಟ, ಹಳೆಯ ನ್ಯೂಸ್ ಪೇಪರ್ ಉಪಯೋಗಿಸಿ ಹೊಸ ವಸ್ತುವಿನ ರಚನೆ, ಪ್ಲಾಸ್ಟಿಕ್ ಬಳಕೆ ಮಾಡುವಂತೆ ಮಾಹಿತಿ ಸಂಗ್ರಹ, ಕಲ್ಪವೃಕ್ಷದ ಬಗ್ಗೆ ಮಾಹಿತಿ, ಕಾಮಧೇನು ಎಂದು ಕರೆಸಿಕೊಳ್ಳುವ ಗೋವಿನ ಮಹತ್ವ, ಸ್ವದೇಶಿ ವಸ್ತುಗಳನ್ನು ಬಳಸುವಂತೆ ಮಕ್ಕಳಿಂದ ವಿಚಾರಗೋಷ್ಠಿ, ವಿಜ್ಞಾನ ಮಾದರಿ ತಯಾರಿ…ಈ ರೀತಿಯಾಗಿ ಹತ್ತು ಹಲವಾರು ಚಟುವಟಿಕೆಯನ್ನು ನೀಡಿ ಮಕ್ಕಳು ಸಂಪೂರ್ಣವಾಗಿ ತಮ್ಮನ್ನು ತಾವು ಈ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಯಿತು.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ: ಪ್ರತಿದಿನ ಒಂದೊಂದು ವಿಚಾರದ ಬಗ್ಗೆ ಮಕ್ಕಳಿಗೆ ಟಾಸ್ಕ್ ರೀತಿಯಲ್ಲಿ ನೀಡುವುದರಿಂದ ಮಕ್ಕಳು ಈ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೆ ಇದ್ದುಕೊಂಡು ಹಲವಾರು ವಿಚಾರಗಳ ಬಗ್ಗೆ ಮಾಹಿತಿ ಪಡೆಯುವಂತಾಯಿತು, ಮಕ್ಕಳ ಜೊತೆಗೆ ಹೆತ್ತವರಾದ ನಮಗೂ ಹಲವಾರು ವಿಷಯಗಳ ಬಗ್ಗೆ ಕಲಿಯುವಂತಾಯಿತು ಮತ್ತು ನಮ್ಮ ಬಾಲ್ಯದ ನೆನಪುಗಳಾದವು. ಮನೆಯಲ್ಲಿ ಮನೆ ಕೆಲಸ ಮಾಡ್ತಾ ಇದ್ದ ನಾವುಗಳು- ಹಲವಾರು ಚಟುವಟಿಕೆಗಳನ್ನ ನಮ್ಮ ಮಕ್ಕಳ ಜೊತೆ ಸೇರಿ ಮಕ್ಕಳಾಗಿ ಭಾಗವಹಿಸಿದ್ದೇವೆ. ವಿಡಿಯೋಗಳನ್ನ ಮಾಡಿ ಕಳಿಸುವುದರಿಂದ ಮಕ್ಕಳಲ್ಲಿ ಮಾತನಾಡುವ ಶೈಲಿಯ ಜೊತೆಗೆ ಧೈರ್ಯವೂ ಬೆಳವಣಿಗೆಯಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗುರುಕುಲ ಕಲಾಕೇಂದ್ರದ ಸಂಗೀತ ಶಿಕ್ಷಕಿ ತುಂಬಾ ಶ್ರಮಿಸುತ್ತಿದ್ದಾರೆ ಎಂದು ಪೋಷಕರಾದ ಪೂರ್ಣಿಮಾ ನಾವಡಾ ಪುರುಷರಕಟ್ಟೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.