HomePage_Banner
HomePage_Banner
HomePage_Banner

ನೆಲ್ಯಾಡಿ: ಕುಸಿದು ಬಿದ್ದ ಮನೆ ಪುನರ್ ನಿರ್ಮಿಸಿ ವೃದ್ಧ ದಂಪತಿಗೆ ಆಸರೆ ಕಲ್ಪಿಸಿದ ನೆಲ್ಯಾಡಿ ಸಮಾನ ಮನಸ್ಕರ ವೇದಿಕೆ

Puttur_Advt_NewsUnder_1
Puttur_Advt_NewsUnder_1
  • ಸಾಥ್ ಕೊಟ್ಟ ಹೊಸಮಜಲು ಅಶ್ವತ್ಥ ಗೆಳೆಯರ ಬಳಗ, ಎಸ್‌ಎಂವೈಎಂ ಸಂಘಟನೆ

ನೆಲ್ಯಾಡಿ: ದುಡಿಯುವ ಮಕ್ಕಳಿದ್ದರೂ ಅವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ವೃದ್ಧ ದಂಪತಿಯ ಕುಸಿದು ಬಿದ್ದ ಮನೆಯನ್ನು ಮಾನವೀಯತೆಯ ನೆಲೆಯಲ್ಲಿ ಪುನರ್ ನಿರ್ಮಾಣಗೊಳಿಸುವ ಮೂಲಕ ನೆಲ್ಯಾಡಿಯ ಸಮಾನ ಮನಸ್ಕರ ವೇದಿಕೆಯೂ ಅವರಿಗೆ ಆಸರೆ ಕಲ್ಪಿಸಿ ಮಾದರಿ ಕೆಲಸ ಮಾಡಿದೆ. ಹೊಸಮಜಲು ಅಶ್ವತ್ಥಗೆಳೆಯರ ಬಳಗ ಹಾಗೂ ನೆಲ್ಯಾಡಿಯ ಎಸ್‌ಎಂವೈಎಂ ಸಂಘಟನೆಯೂ ಈ ಕೆಲಸಕ್ಕೆ ಸಾಥ್ ಕೊಟ್ಟಿದೆ.

ಗಾಳಿ ಮಳೆಗೆ ಕುಸಿದು ಬಿದ್ದ ಮನೆ 

ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ ತಮಗೆ ಸೇರಿದ ೨೬ ಸೆಂಟ್ಸ್ ಜಾಗದಲ್ಲಿ ಬಾಬು ಆಚಾರ್ಯ ಹಾಗೂ ಅವರ ಪತ್ನಿ ಸರೋಜರವರು ಗುಡಿಸಲು ರೀತಿಯ ಮನೆಯಲ್ಲಿ ವಾಸವಾಗಿದ್ದರು. ಈ ದಂಪತಿಗೆ ದುಡಿದು ತಿನ್ನುವ ಇಬ್ಬರು ಮಕ್ಕಳಿದ್ದರೂ ಅವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಬಾಬು ಆಚಾರ್ಯರವರು ವಯೋ ಸಹಜವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು ನಡೆದಾಡಲು ಕಷ್ಟಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಕೆಲ ದಿನಗಳ ಹಿಂದೆ ಸುರಿದ ಭಾರೀ ಗಾಳಿ ಮಳೆಗೆ ಇವರ ಮನೆ ಕುಸಿದು ಬಿದ್ದು ಹಾನಿಗೊಂಡಿತ್ತು. ಇದರಿಂದ ಕಂಗಲಾದ ದಂಪತಿ ಏನೂ ಮಾಡಬೇಕೆಂದು ತೋಚದೇ ಕುಸಿದು ಬಿದ್ದ ಮನೆಯಲ್ಲಿಯೇ ಸ್ವಲ್ಪ ದಿನ ಕಳೆದರು. ಬಳಿಕ ಸಮೀಪದ ಕೃಷಿಕರೋರ್ವರ ಕೋಳಿ ಫಾರ್ಮ್‌ನ ಶೆಡ್‌ನಲ್ಲಿ ದಂಪತಿ ಕೆಲ ದಿನ ಕಳೆದರು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಈ ದಂಪತಿಗೆ ನೆನಪಿಗೆ ಬಂದದ್ದು ನೆಲ್ಯಾಡಿಯ ಜಿ.ಪಂ. ಮಾಜಿ ಸದಸ್ಯ, ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲುರವರು. ಸರೋಜರವರು ಬಾಲಕೃಷ್ಣ ಬಾಣಜಾಲುರವರನ್ನು ಸಂಪರ್ಕಿಸಿ ಕುಸಿದು ಬಿದ್ದ ತಮ್ಮ ಮನೆ ದುರಸ್ತಿಗೊಳಿಸಿಕೊಡುವಂತೆ ಮನವಿ ಮಾಡಿದರು.

ಕ್ಷಿಪ್ರ ಸ್ಪಂದನೆ;
ವೃದ್ಧ ದಂಪತಿಯ ಸಂಕಷ್ಟಕ್ಕೆ ಕೂಡಲೇ ಸ್ಪಂದನೆ ನೀಡಿದ ಬಾಲಕೃಷ್ಣ ಬಾಣಜಾಲುರವರು ನೆಲ್ಯಾಡಿಯಲ್ಲಿ ಈಗಾಗಲೇ ಹತ್ತಾರು ಸಾಮಾಜಿಕ ಕಾರ್ಯಗಳ ಮೂಲಕ ಮುಂಚೂಣಿಯಲ್ಲಿರುವ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ರೆ.ಫಾ.ಡಾ| ವರ್ಗೀಸ್ ಕೈಪುನಡ್ಕರವರ ಗಮನಕ್ಕೆ ಈ ವಿಚಾರವನ್ನು ತಂದರು.
ಅವರು ಸಂಘಟನೆಯ ಸದಸ್ಯರ ಗಮನಕ್ಕೆ ತಂದರು. ವೃದ್ಧ ದಂಪತಿಯ ಸ್ಥಿತಿ ಕಂಡು ಮರಗಿದ ವೇದಿಕೆಯ ಸದಸ್ಯರು ಇವರ ಮನೆ ಪುನರ್ ನಿರ್ಮಾಣಗೊಳಿಸುವ ಸಂಕಲ್ಪ ಮಾಡಿದರು. ಬಳಿಕ ತಂಡದ ಸದಸ್ಯರೆಲ್ಲರೂ ರಾತ್ರಿ ಹಗಲು ಶ್ರಮದಾನ ಮಾಡಲಾರಂಭಿಸಿದರು. ಕುಸಿದು ಬಿದ್ದ ಮನೆಯ ಛಾವಣಿಯನ್ನು ಸ್ಥಳದಿಂದ ತೆರವು ಗೊಳಿಸಿದರು. ತಂಡದ ಅಧ್ಯಕ್ಷರಿಂದ ಹಿಡಿದು ಪ್ರತಿಯೊಬ್ಬರೂ ಮನೆ ಪುನರ್ ನಿರ್ಮಾಣಕ್ಕೆ ಅಗತ್ಯವಾಗಿದ್ದ ಸಿಮೆಂಟ್ ಇಟ್ಟಿಗೆ, ಕಲ್ಲು, ಸಿಮೆಂಟ್, ಮರಳುಗಳನ್ನು ಹೊತ್ತು ಸಾಗಿಸಿದರು. ತಂಡದ ಸದಸ್ಯರದ್ದೇ ಇಂಜಿನಿಯರಿಂಗ್ ವರ್ಕ್ ಶಾಪ್‌ನಲ್ಲಿ ಈ ಮನೆಗೆ ಬೇಕಾದ ಛಾವಣಿಯನ್ನು ಶೀಟ್ ಮತ್ತು ರಾಡ್‌ಗಳ ಮೂಲಕ ಅಳವಡಿಸುವ ಕಾರ್ಯ ನಡೆಯಿತು. ಕುಸಿದ ಮನೆಯ ಗೋಡೆ ರಚನೆಯಾಗಿ ನೆಲ, ಗೋಡೆಗಳಿಗೆ ಸಿಮೆಂಟ್ ಪ್ಲಾಸ್ಟರಿಂಗ್, ಕಿತ್ತು ಹೋಗಿದ್ದ ಗೋಡೆಯ ವಿದ್ಯುತ್ ವಯರಿಂಗ್, ಗೋಡೆಗೆ ಬಣ್ಣ ಬಳಿಯುವ ಕೆಲಸಗಳನ್ನು ಶ್ರಮದಾನದ ಮೂಲಕ ಮಾಡಲಾಯಿತು. ನಾಲ್ಕು ದಿನ ಹಗಲು-ರಾತ್ರಿ ಶ್ರಮದಾನದ ಮೂಲಕ ಮನೆ ಪುನರ್ ನಿರ್ಮಾಣಗೊಳಿಸಲಾಯಿತು. ಮನೆಗೆ ಬೇಕಾದ ಸಾಮಾಗ್ರಿಗಳನ್ನು ದಾನಿಗಳ ನೆರವಿನೊಂದಿಗೆ ವೇದಿಕೆ ವತಿಯಿಂದಲೇ ಖರೀದಿಸಲಾಯಿತು. ಅನಾರೋಗ್ಯ ಪೀಡಿತರಾಗಿರುವ ಮನೆ ಯಜಮಾನ ಬಾಬು ಆಚಾರ್ಯರವರಿಗೆ ಮಲಗಲು ಮಂಚವನ್ನೂ ಈ ಸಂದರ್ಭದಲ್ಲಿ ನೀಡಲಾಯಿತು. ಸಮಾನ ಮನಸ್ಕರ ವೇದಿಕೆಯ ಈ ಕಾರ್ಯಕ್ಕೆ ಹೊಸಮಜಲು ಅಶ್ವತ್ಥ ಗೆಳೆಯರ ಬಳಗ ಹಾಗೂ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಎಸ್‌ಎಂವೈಎಂ ಸಂಘಟನೆಯವರೂ ಸಾಥ್ ನೀಡಿ ಸ್ವಯಂ ಸೇವಕರಾಗಿ ಶ್ರಮದಾನದಲ್ಲಿ ಪಾಲ್ಗೊಂಡರು. ವೃದ್ಧ ದಂಪತಿಯ ಮನೆಯನ್ನು ಪುನರ್‌ನಿರ್ಮಾಣಗೊಳಿಸುವ ಮೂಲಕ ಸಂಘಟನೆಯವರ ಮಾದರಿ ಕೆಲಸಕ್ಕೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಯಿತು.

ಪುನರ್ ನಿರ್ಮಾಣಗೊಂಡ ಮನೆಯ ಕೀ ಹಸ್ತಾಂತರ

ಜೂ.೧ರಂದು ಪುನರ್ ನಿರ್ಮಾಣಗೊಂಡ ಮನೆಯ ಕೀ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ನೆಲ್ಯಾಡಿ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ರೆ.ಫಾ. ಡಾ| ವರ್ಗೀಸ್ ಕೈಪುನಡ್ಕ, ನೆಲ್ಯಾಡಿ ಸಂತ ಆಲ್ಫೋನ್ಸಾ ಚರ್ಚ್‌ನ ಫಾ. ಆದರ್ಶ್ ಜೋಸೆಫ್, ಫಾ. ಸನೀಶ್ ಜೋಸೆಫ್, ಉದನೆ ಸೈಂಟ್ ಆಂಟನೀಸ್ ವಿದ್ಯಾ ಸಂಸ್ಥೆಯ ಸಂಚಾಲಕ ಫಾ. ಹನಿ ಜೇಕಬ್, ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು, ಲಿಜೋಯ್ ಅಬ್ರಹಾಂ ಮಾಥ್ಯೂ, ನೆಲ್ಯಾಡಿ ಮಾತಾ ಲ್ಯಾಬ್‌ನ ಜೋಸ್ ಕೆ.ಜೆ., ನೆಲ್ಯಾಡಿ ನಯನ್ ಟ್ರೇಡರ್ಸ್ ನ ಮಾಲಕ ವಿ.ಜೆ.ಜೋಸೆಫ್(ಬೇಬಿ), ಉದ್ಯಮಿ ಟಿಟ್ಟಿ ಕೆ.ಪಿ., ಅಶ್ವಥ್ಥ ಗೆಳೆಯರ ಬಳಗದ ಲೋಕೇಶ್ ಬಾಣಜಾಲು, ಸೋವಿತ್ ಮತ್ತಿತರರು ಉಪಸ್ಥಿತರಿದ್ದರು.

ಕೀ ಹಸ್ತಾಂತರ:
ಪುನರ್ ನಿರ್ಮಾಣಗೊಂಡ ಮನೆಯ ಕೀಲಿಯನ್ನು ಜೂ.೧ರಂದು ವೃದ್ಧ ದಂಪತಿಗೆ ಸಮಾನ ಮನಸ್ಕರ ವೇದಿಕೆಯ ವತಿಯಿಂದ ಹಸ್ತಾಂತರಿಸಲಾಯಿತು. ಈ ವೇಳೆ ಮನೆಯೊಡತಿ ಸರೋಜರವರು ಹಿರಿಯರು, ಕಿರಿಯರೆನ್ನದೆ ಎಲ್ಲರ ಕಾಲುಮುಟ್ಟಿ ನಮಸ್ಕರಿಸಿ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಗಂಡು ಮಕ್ಕಳಿದ್ದರೂ ಸೂರು ಇಲ್ಲದೇ ಸಂಕಷ್ಟಕ್ಕೆ ಬಿದ್ದ ಸಮಯದಲ್ಲಿ ಯಾರೂ ನೆರವಿಗೆ ಬಂದಿಲ್ಲ. ಯಾವ ಜಾತಿ ಸಂಬಂಧವೂ ಇಲ್ಲದ ನೀವುಗಳೇ ನಮ್ಮ ಸಂಕಷ್ಟಕ್ಕೆ ನೆರವಾಗಿದ್ದೀರಿ. ನಮ್ಮ ಕಷ್ಟಕ್ಕೆ ನೆರವಾದ ನಿಮ್ಮ ಋಣ ಸಂದಾಯ ಮಾಡಲು ಸಾಧ್ಯವೇ ಇಲ್ಲ ಎಂದು ಸರೋಜರವರು ಭಾವುಕರಾಗಿ ಹೇಳಿ ಕಣ್ಣೀರು ಹಾಕಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.