- ಲೋಕಾಯುಕ್ತ ಇಲಾಖೆಯಿಂದಾಗಿ ನ್ಯಾಯ ದೊರಕಿದೆ – ವಿಕಲಚೇತನ ಯತೀಂದ್ರ
ಪುತ್ತೂರು: ಸರಕಾರದಿಂದ ವಿಕಲಚೇತನ ಫಲಾನುಭವಿಗಳಿಗೆ ಸಂಬಂಧಿಸಿ ಸಿಗುವ ಸವಲತ್ತಿನ ಕುರಿತು ನನಗೆ ಕಾಣಿಯೂರು ಗ್ರಾ.ಪಂ ಸದಸ್ಯರೊಬ್ಬರು ತಡೆಯುಂಟು ಮಾಡಿದ್ದು ಈ ಬಗ್ಗೆ ನಾನು ಲೋಕಾಯುಕ್ತರಿಗೆ ದೂರು ನೀಡಿದ ಬಳಿಕ ನನಗೆ ನ್ಯಾಯ ದೊರಕಿರುವುದು ನನ್ನ ಕಾನೂನು ಹೋರಾಟಕ್ಕೆ ಸಿಕ್ಕಿದ ಜಯವಾಗಿದೆ ಎಂದು ಕಾಣಿಯೂರು ಗ್ರಾಮದ ಬೀರೋಳಿಗೆ ವಿಕಲಚೇತನ ಯತೀಂದ್ರ ಗೌಡ ಬಿ.ಎಲ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾನೋರ್ವ ಅಂಗವಿಕಲ ವ್ಯಕ್ತಿಯಾಗಿದ್ದು ಸರಕಾರದಿಂದ ಗ್ರಾ.ಪಂ ಮೂಲಕ ವಿಕಲಚೇತನರ ಮನೋಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಮಾಧವಿ ಕೋಡಂದೂರು ಅವರು ನನ್ನ ಹೆಸರನ್ನು ಸೇರಿಸಿ 8 ಮಂದಿ ವಿಕಲಚೇತನರಿಗೆ ಸರಕಾರದ ಸವಲತ್ತನ್ನು ಕೊಡುವ ತೀರ್ಮಾನ ಮಾಡಿದ್ದರು. ತಾ.ಪಂನಿಂದ ಫಲಾನುಭವಿಗಳಿಗೆ ಗೋದ್ರೇಜ್ ಕೊಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಆದರೆ ಬೆಳವಣಿಗೆಯಲ್ಲಿ ನಮ್ಮ ವಾರ್ಡ್ನ ಸದಸ್ಯ ಗಣೇಶ್ ಕೆ.ಎಸ್ ಅವರು ನನಗೆ ಯತೀಂದ್ರ ಅವರಿಗೆ ಯಾವುದೇ ಕಾರಣಕ್ಕೂ ಸವಲತ್ತು ಕೊಡಬಾರದು ಎಂಬುದಾಗಿ ಪಂಚಾಯತ್ನ ಹಾಲಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರಿಗೆ ಒತ್ತ ಹೇರಿ ನನ್ನನ್ನು ಹೊರತು ಪಡಿಸಿ ಇತರ 7 ಜನರಿಗೆ ಮೇ 20ಕ್ಕೆ ಸೊತ್ತು ನೀಡಿದ್ದರು.
ನನಗೆ ಆದ ಅನ್ಯಾಯದ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದಾಗ ಯಾವುದೇ ಸ್ಪಂದನೆ ಸಿಗದಾಗ ನಾನು ಲೋಕಾಯುಕ್ತಕ್ಕೆ ಮೊರೆ ಹೋದೆ. ಅಲ್ಲಿ ನಾನು ದೂರು ನೀಡಿದ ಬಳಿಕ ತಕ್ಷಣ ಅಧಿಕಾರಿಗಳು ಲೋಕಾಯುಕ್ತ ಆದೇಶದಂತೆ ನನಗೆ ವಿಕಲಚೇತನ ಸೌಲಭ್ಯ ಒದಗಿಸಿದ್ದಾರೆ. ಇದು ನನ್ನ ಕಾನೂನು ಹೋರಾಟಕ್ಕೆ ಸಿಕ್ಕಿದ ಜಯ ಎಂದ ಅವರು ವಿಕಲಚೇತನರ ಫಲಾನುಭವಿಗಳ ಪಟ್ಟಿಯಲ್ಲಿ ನನಗೆ ಸೌಲಭ್ಯ ಕೊಡುವುದಿಲ್ಲ ಎಂದು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ಗಣೇಶ್ ಕೆ.ಎಸ್ ಅವರು ನನ್ನನ್ನು ತೇಜೋವಧೆ ಮಾಡಿರುವುದನ್ನು ನಾನು ಸವಾಲನ್ನು ಸ್ವೀಕರಿಸಿ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸರ್ವಾಧಿಕಾರಿ ಧೋರಣೆಯನ್ನು ಧಿಕ್ಕರಿಸಿ ಗ್ರಾ.ಪಂಗೆ ಕಾಯಕಲ್ಪ ನೀಡಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಅವರು ಹೇಳಿದರು.