ಪುತ್ತೂರು: ಜಗತ್ತಿನೆಲ್ಲೆಡೆ ಮರಣಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್(ಕೋವಿಡ್-೧೯)ಗೆ ಇಡೀ ಮಾನವ ಜನಾಂಗವೇ ತತ್ತರಿಸಿಹೋಗಿದೆ. ಈ ನಿಟ್ಟಿನಲ್ಲಿ ಭಾರತ ದೇಶದ ಹಲವಾರು ಸಂಘಟನೆಗಳು ಹಸಿವು ನೀಗಿಸುವತ್ತ ಹೆಜ್ಜೆ ಇಟ್ಟಿದೆ ಎಂಬುದು ನಿಜ. ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಭಂಡಾರಿ ಸಮಾಜ ಸೇವಾ ಸಂಘವೂ ಕೂಡ ತಮ್ಮ ಸಮಾಜದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅಕ್ಕಿಯ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಪುತ್ತೂರು ಭಂಡಾರಿ ಸಮಾಜ ಸೇವಾ ಸಂಘವು ತಮ್ಮ ಸಮಾಜದಲ್ಲಿನ ಅರ್ಹ 30 ಮಂದಿ ಫಲಾನುಭವಿ ಕುಟುಂಬವನ್ನು ಗುರುತಿಸಿ ಅವರಿಗೆ ತಲಾ ೧೦ ಕೆ.ಜಿ ಅಕ್ಕಿಯ ಕಿಟ್ನ್ನು ಇತ್ತೀಚೆಗೆ ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಶಾಸಕ ಮಠಂದೂರುರವರು, ತಾಲೂಕಿನಲ್ಲಿ ಭಂಡಾರಿ ಸಮಾಜದ ವರ್ಗವು ಕಡಿಮೆ ಸಂಖ್ಯೆಯಲ್ಲಿದ್ದರೂ ಅವರು ಸಮಾಜಕ್ಕೆ ನೀಡುವ ಕಾರ್ಯ ಚಟುವಟಿಕೆಗಳು ಮಾತ್ರ ಶ್ಲಾಘನೀಯ. ಪ್ರಸಕ್ತ ವಿಶ್ವವೇ ಎದುರಿಸುತ್ತಿರುವ ಕೋವಿಡ್ ಸಮಸ್ಯೆಯು ಜಗತ್ತನೇ ತಲ್ಲಣಗೊಳಿಸಿರುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಕೊರೋನಾ ವೈರಸ್ನಿಂದಾಗ ಜನರ ಜೀವನ ಕೂಡ ಅಸ್ತವ್ಯಸ್ತಗೊಂಡಿರುವುದು ಕೂಡ ಅಷ್ಟೇ ಸತ್ಯ. ಈ ಸಂದರ್ಭದಲ್ಲಿ ಭಂಡಾರಿ ಸಮಾಜವು ತಮ್ಮ ಸಮಾಜದಲ್ಲಿನ ಅಶಕ್ತರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರತಿಯೋರ್ವರು ಮಾಸ್ಕ್ ಧರಿಸುವ ಮೂಲಕ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೊರೋನಾವನ್ನು ನಿಯಂತ್ರಿಸಬೇಕಾಗಿದೆ ಎಂದರು.
ಕಿಟ್ ಹಸ್ತಾಂತರ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಜಗದೀಶ್ ಭಂಡಾರಿ ಗೆಣಸಿನಕುಮೇರು, ಗೌರವಾಧ್ಯಕ್ಷ ಸುರೇಂದ್ರ ಭಂಡಾರಿ, ಪ್ರಮುಖರಾದ ಮೇದಿನಿ ಜನಸೇವಾ ಕೇಂದ್ರದ ನವೀನ್ ಕುಮಾರ್ ಮೂಡಂಬೈಲು, ಸರಿತಾ ನವೀನ್ ಕುಮಾರ್ ಸಹಿತ ಹಲವರು ಉಪಸ್ಥಿತರಿದ್ದರು.
ಶಾಸಕರ ವಾರ್ರೂಂನಿಂದ 25 ಕಿಟ್…
ಭಂಡಾರಿ ಸಮಾಜ ಸೇವಾ ಸಂಘವು ಸಮಾಜದ ಅರ್ಹ ಫಲಾನುಭವಿಗಳನ್ನು ಗುರುತಿಸಿದಂತೆ ಪುತ್ತೂರು ಶಾಸಕರ ವಾರ್ರೂಂನಿಂದಲೂ ಭಂಡಾರಿ ಸಮಾಜದ ಅರ್ಹ ಫಲಾನುಭವಿಗಳಿಗೆ ಕಿಟ್ ನೀಡಿ ಸಹಾಯಹಸ್ತ ಚಾಚಿದೆ. ಶಾಸಕರ ವಾರ್ರೂಂನಿಂದ ಸುಮಾರು ೨೫ ಕಿಟ್ನ್ನು ಭಂಡಾರಿ ಸಮಾಜದ ಅರ್ಹ ಫಲಾನುಭವಿಗಳಿಗೆ ನೀಡುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸಿದೆ. ಈ ಸಂದರ್ಭದಲ್ಲಿ ಶಾಸಕರ ಮುತುವರ್ಜಿಯಲ್ಲಿ ಅಗತ್ಯ ಕಿಟ್ಗಳನ್ನು ವಿತರಿಸುವಲ್ಲಿ ನೆರವಾದುದದಕ್ಕೆ ಶಾಸಕ ಸಂಜೀವ ಮಠಂದೂರುರವರಿಗೆ ತಾಲೂಕು ಭಂಡಾರಿ ಸಮಾಜ ಸೇವಾ ಸಂಘ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಕೇಶವ ಭಂಡಾರಿ ಕೈಪರವರು ಹೇಳಿದ್ದಾರೆ.