ಪುತ್ತೂರು: ಮನೆಗೆ ಅಕ್ರಮ ಪ್ರವೇಶ ಮಾಡಿ, ಜೀವ ಬೆದರಿಕೆ ಒಡ್ಡಿ , ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಆರೋಪಿಗಳಿಗೆ ಮಂಗಳೂರು 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಫೆ. 10ರಂದು ಉರುವಾಲು ಗ್ರಾಮದಲ್ಲಿ ಮೂರು ಮಂದಿ ಅಪರಿಚಿತ ವ್ಯಕ್ತಿಗಳು ಮಹಿಳೆಯೊಬ್ಬರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ದಾಂದಲೆ ನಡೆಸಿರುವುದನ್ನು ವಿಚಾರಿಸಿದ ಮಹಿಳೆಗೆ ಹಲ್ಲೆ ನಡೆಸಿ , ಜೀವ ಬೆದರಿಕೆಯೊಡ್ಡಿ, ಮಾನಭಂಗಕ್ಕೆ ಯತ್ನಿಸಿದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಪ್ಪಿನಂಗಡಿ ಪೋಲಿಸರು ಭಾರತೀಯ ದಂಡ ಸಂಹಿತೆಯ ಕಲಂ. 447, 324, 354, 506 ಮತ್ತು 34 ರಂತೆ ಆರೋಪಿಗಳಾದ ಉಪ್ಪಿನಂಗಡಿ ನಿವಾಸಿ ಗಣೇಶ್ ಮತ್ತು ತಣ್ಣಿರುಪಂಥ ನಿವಾಸಿ ಧರ್ಣಪ್ಪ ನಾಯ್ಕ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ. ಆರೋಪಿಗಳ ಪರ ಚಾಣಕ್ಯ ಲಾ ಚೇಂಬರ್ಸನ ಶ್ಯಾಮ್ ಪ್ರಸಾದ್ ಕೈಲಾರ್, ಕೃಷ್ಣ ಪ್ರಸಾದ್ ದೇವ, ಚೇತನಾ ವಿ.ಎನ್ ಮತ್ತು ಜುಬೇದ ಸರಳಿಕಟ್ಟೆ ವಾದಿಸಿದ್ದರು.