ಅನಧಿಕೃತ ಅಂಗಡಿ ತೆರವಿಗೆ ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ಉಪ್ಪಿನಂಗಡಿ ಗ್ರಾ.ಪಂ. ನಡೆಗೆ ಆಕ್ರೋಶ: ಉದ್ವಿಗ್ನ ವಾತಾವರಣ ಸೃಷ್ಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಒಂದು ಸಮುದಾಯದವರ ಅನಧಿಕೃತ ವ್ಯಾಪಾರಕ್ಕೆ ಮಾತ್ರ ಅಡ್ಡಿ ಆರೋಪ
  • ಗುಂಪು ಜಮಾವಣೆ
  • ಪೊಲೀಸರ ಸಕಾಲಿಕ ಕ್ರಮ
  • ತಪ್ಪಿದ ಕೋಮು ಸಂಘರ್ಷ
  • ಕಾನೂನು ಬದ್ಧವಾಗಿಯೇ ಕೆಲಸ ಮಾಡಲು ಎಚ್ಚರಿಕೆ
  • ಗ್ರಾ.ಪಂ.ನಲ್ಲಿ ಮಾತುಕತೆ

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್‌ನ ರಾಷ್ಟ್ರೀಯ ಹೆದ್ದಾರಿ ಬದಿ ಅನಧಿಕೃತವಾಗಿ ಟೆಂಪೋದಲ್ಲಿ ಮೀನು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ್ದು ಕೆಲವರ ಆಕ್ರೋಶಕ್ಕೆ ತುತ್ತಾಯಿತ್ತಲ್ಲದೆ, ಒಂದು ಸಮುದಾಯಕ್ಕೆ ಸೇರಿದವರಿಗೆ ಮಾತ್ರ ಅನಧಿಕೃತ ವ್ಯಾಪಾರಕ್ಕೆ ಪಿಡಿಒ ಅಡ್ಡಿಪಡಿಸುತ್ತಿದ್ದಾರೆ ಎಂದು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ, ಕೆಲಕಾಲ ಉದ್ವಿಗ್ನತೆಗೆ ಕಾರಣವಾದ ಘಟನೆ ಉಪ್ಪಿನಂಗಡಿಯಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಗಾಂಧಿಪಾರ್ಕ್ ಬಳಿ ಹಿಂದೂ ಸಮುದಾಯದ ಯುವಕರು ಮಿನಿ ಗೂಡ್ಸ್ ಟೆಂಪೋವೊಂದರಲ್ಲಿ ಕಳೆದ ಮೂರು ದಿನಗಳಿಂದ ಮೀನು ಮಾರಾಟಕ್ಕೆ ತೊಡಗಿದ್ದರು. ಗುರುವಾರ ಏಕಾಏಕಿ ಕಾರಿನಲ್ಲಿ ಬಂದ ಉಪ್ಪಿನಂಗಡಿ ಪಿಡಿಒ ಮೀನು ಮಾರಾಟದ ಗೂಡ್ಸ್ ಟೆಂಪೋದ ಕೀಯನ್ನು ಕಿತ್ತುಕೊಂಡಿದ್ದಲ್ಲದೆ, ಟೆಂಪೋಗೆ ತನ್ನ ಕಾರನ್ನು ಅಡ್ಡವಾಗಿ ಇಟ್ಟು ಸಿನಿಮೀಯ ಶೈಲಿಯಲ್ಲಿ, ಮೀನು ಮಾರಾಟದಲ್ಲಿ ತೊಡಗಿದ್ದ ಯುವಕರನ್ನು ತರಾಟೆಗೆ ತೆಗೆದುಕೊಂಡು, ತೆರವಿಗೆ ಸೂಚಿಸಿದರು ಎಂಬ ಆರೋಪ ವ್ಯಕ್ತವಾಗಿದೆ. ಉಪ್ಪಿನಂಗಡಿಯಲ್ಲಿ ಇತರ ಸಮುದಾಯಕ್ಕೆ ಸೇರಿದ ಹಲವರು ಪೇಟೆಯೊಳಗೆ ರಸ್ತೆ ಬದಿ ಅನಧಿಕೃತವಾಗಿ ಹಲವು ಅಂಗಡಿಗಳನ್ನಿಟ್ಟು ರಾಜಾರೋಷವಾಗಿ ವ್ಯಾಪಾರ ನಡೆಸಿದರೂ, ಇದನ್ನು ಪ್ರಶ್ನಿಸದ ಗ್ರಾ.ಪಂ. ಏಕಾಏಕಿ ಹಿಂದೂ ಸಮುದಾಯಕ್ಕೆ ಸೇರಿದ ಯುವಕರ ಅನಧಿಕೃತ ವ್ಯಾಪಾರಕ್ಕೆ ತಡೆಯೊಡ್ಡಲು ಬಂದಿದ್ದಾರೆ ಎಂದು ಕೆರಳಿದ ಒಂದು ಸಮುದಾಯದವರು ಪಿಡಿಒ ಕ್ರಮವನ್ನು ಖಂಡಿಸಿದರಲ್ಲದೆ, ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದರು. ಇದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಯಿತು. ಈ ವೇಳೆ ಕೆಲವರಿಂದ ಪಿಡಿಒ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆಯು ಕೇಳಿ ಬಂತು ಪರಿಸ್ಥಿತಿ ಉದ್ವಿಗ್ನತೆಗೆ ಒಳಗಾಗುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚುದುರಿಸಿ ಯಾರೂ ಯಾವುದೇ ಕೆಲಸ ಮಾಡುವುದಿದ್ದಲ್ಲಿ ಕಾನೂನು ಬದ್ಧವಾಗಿಯೇ ಮಾಡಬೇಕೆಂದು ಎಚ್ಚರಿಕೆ ನೀಡಿದರು.
ಬಳಿಕ ಗ್ರಾ.ಪಂ.ನಲ್ಲಿ ಈ ಬಗ್ಗೆ ಮಾತುಕತೆ ನಡೆಯಿತು. ಈ ಸಂದರ್ಭ ಉಪ್ಪಿನಂಗಡಿಯಲ್ಲಿ ಹಲವಾರು ಅನಧಿಕೃತ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದರೂ ಅವುಗಳ ಬಗ್ಗೆ ಗಮನಹರಿಸದೆ ತನ್ನದೊಂದೇ ಅಂಗಡಿಯನ್ನು ಕಾನೂನುಕ್ರಮಕ್ಕೆ ಒಳಪಡಿಸುವಲ್ಲಿ ಅಧಿಕಾರಿಯ ತಾರತಮ್ಯ ಧೋರಣೆ ಇದೆ ಎನ್ನುವುದು ಮೀನು ಮಾರಾಟಗಾರ ಯುವಕರ ಆರೋಪವಾದರೆ, ಉಪ್ಪಿನಂಗಡಿಯಲ್ಲಿ ಈಗಾಗಲೇ ಪಂಚಾಯತ್ ವತಿಯಿಂದಲೇ ಮೀನು ಮಾರುಕಟ್ಟೆ ಚಾಲ್ತಿಯಲ್ಲಿರುವುದರಿಂದ ಅನಧಿಕೃತ ಮೀನು ಮಾರಾಟಕ್ಕೆ ಅವಕಾಶವಿಲ್ಲ ಎನ್ನುವುದು ಪಂಚಾಯತ್ ಆಡಳಿತದ ವಾದವಾಗಿತ್ತು. ಕೊನೆಗೆ ಉಪ್ಪಿನಂಗಡಿ ಪೇಟೆಯಲ್ಲಿ ಗ್ರಾ.ಪಂ. ವತಿಯಿಂದ ಮೀನು ಮಾರುಕಟ್ಟೆ ಚಾಲ್ತಿಯಿರುವುದರಿಂದ ವಾರ್ಡ್ ನಂಬರ್ ೧ರಲ್ಲಿ ಅನಧಿಕೃತವಾಗಿ ಮೀನು ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಗ್ರಾ.ಪಂ. ಸೂಚನೆ ನೀಡಿತು. ಮಾತುಕತೆ ತಾರ್ಕಿಕ ಅಂತ್ಯ ಕಾಣದಿದ್ದರೂ, ಬಳಿಕ ಗುಂಪು ಸೇರಿದವರು ಚದುರಿದರು.
ಒಟ್ಟಾರೆಯಾಗಿ ಪಿಡಿಒ ಅವರು ಅನಧಿಕೃತ ವ್ಯಾಪಾರಕ್ಕೆ ಬ್ರೇಕ್ ಹಾಕಲು ಹೊರಟಿದ್ದು ಸ್ವಾಗತಾರ್ಹವಾದರೂ, ನಿರ್ದಿಷ್ಟ ಸಮುದಾಯಕ್ಕೆ ಸೇರಿದವರ ಮೀನಿನ ಟೆಂಪೋ ತೆರವಿಗೆ ಮುಂದಾಗಿದ್ದು, ಕೋಮು ಸಂಘರ್ಷಕ್ಕೆ ಕಾರಣವಾಗುವ ಭೀತಿಯನ್ನು ಹುಟ್ಟು ಹಾಕಿತ್ತಾದರೂ ಉಪ್ಪಿನಂಗಡಿ ಎಸ್.ಐ. ಈರಯ್ಯರವರು ಸಕಾಲಿಕ ಕ್ರಮದಿಂದಾಗಿ ಅದು ಭೀತಿ ದೂರವಾಯಿತು.

ಅನಧಿಕೃತ ಅಂಗಡಿಗಳಿಗೆ ಅವಕಾಶ ನೀಡಬಾರದೆಂದು ಉಪ್ಪಿನಂಗಡಿ ಗ್ರಾ.ಪಂ.ನ ಕಳೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರ ಅನುಷ್ಠಾನಕ್ಕೆ ತಾನು ಮುಂದಾಗಿದ್ದೆ. ಪ್ರಮುಖವಾಗಿ ಸ್ವಚ್ಛತೆಗೆ ಆದ್ಯತೆ ನೀಡಿ ಹಾಗೂ ಇಲ್ಲಿ ಮೀನು ಮಾರುಕಟ್ಟೆ ಟೆಂಡರ್ ಕೊಡಲಾಗಿದೆ ಎಂಬ ಕಾರಣದಿಂದ ಮೊದಲಾಗಿ ಮೀನಿನ ಅಂಗಡಿ ತೆರವಿಗೆ ನಾನು ಮುಂದಾದೆ. ತಾನು ಹೊಸದಾಗಿ ಇಲ್ಲಿಗೆ ಬಂದಿರುವುದರಿಂದ ಈ ಹಿಂದೆಯೂ ಅನಧಿಕೃತ ಅಂಗಡಿಗಳ ತೆರವಿಗೆ ಮಾಡಲಾದ ನಿರ್ಣಯ ಅನುಷ್ಠಾನವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಈ ನಿರ್ಣಯಗಳನ್ನೆಲ್ಲಾ ನಾನು ಅನುಷ್ಠಾನಕ್ಕೆ ತರುತ್ತೇನೆ. ಅನಧಿಕೃತ ಅಂಗಡಿಗಳ ಬಗ್ಗೆ ಯಾವುದೇ ರಾಜಕೀಯ ಬರಬಾರದು. ಸಮಾನವಾಗಿ ಎಲ್ಲರಿಗೂ ನ್ಯಾಯ ಕಲ್ಪಿಸಬೇಕು. ಆದ್ದರಿಂದ ಎಲ್ಲಿಯೂ ಅನಧಿಕೃತ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಪ್ರತಿಯೊಂದು ಅನಧಿಕೃತ ಅಂಗಡಿಗಳನ್ನೂ ಹಂತಹಂತವಾಗಿ ತೆಗೆಯುವ ಕಾರ್ಯ ಮಾಡುತ್ತೇನೆ.
-ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್,
ಅಭಿವೃದ್ಧಿ ಅಧಿಕಾರಿ, ಉಪ್ಪಿನಂಗಡಿ ಗ್ರಾ.ಪಂ.

ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಅನಧಿಕೃತ ಅಂಗಡಿಗಳು ಸಾಕಷ್ಟಿವೆ. ಇವುಗಳಿಂದ ತೊಂದರೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ನನ್ನಲ್ಲಿಗೆ ಬಂದಿದೆ. ಆದ್ದರಿಂದ ಅನಧಿಕೃತ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲು ಸೂಚಿಸುವಂತೆ ನಾನು ಈಗಾಗಲೇ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿzನೆ. ಅನಧಿಕೃತ ಅಂಗಡಿಗಳ ತೆರವಿನಲ್ಲಿ ಯಾವುದೇ ಧರ್ಮ ಭೇದ, ರಾಜಕೀಯ ಭೇದ ಇರಬಾರದು. ಎಲ್ಲರಿಗೂ ಸಮಾನ ನ್ಯಾಯ ಒದಗಬೇಕು.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ

ಉಪ್ಪಿನಂಗಡಿ ಗ್ರಾ.ಪಂ.ನವರೇ ಆದ ನಮ್ಮ ಸಂಘಟನೆಯ ಯುವಕರು ಮೀನು ಮಾರಾಟದಲ್ಲಿ ತೊಡಗಿದ್ದು, ಲೈನ್‌ಸೇಲ್ ಮುಗಿಸಿ ಬಂದು ಗುರುವಾರ ಗಾಂಧಿಪಾರ್ಕ್‌ನಲ್ಲಿ ಟೆಂಪೋ ನಿಲ್ಲಿಸಿ ಮೀನು ಮಾರಾಟದಲ್ಲಿ ತೊಡಗಿದ್ದರು. ಈ ಸಂದರ್ಭ ಉಪ್ಪಿನಂಗಡಿ ಪಿಡಿಒ ಅವರು ಏಕಾಏಕಿ ಸಿನಿಮೀಯ ಶೈಲಿಯಲ್ಲಿ ಅಲ್ಲಿಗೆ ಬಂದು ಅವರ ಕಾರನ್ನು ನಮ್ಮ ಯುವಕರ ಮೀನಿನ ಗಾಡಿಗೆ ಅಡ್ಡ ಇಟ್ಟಿದ್ದಲ್ಲದೆ, ವಾಹನದ ಕೀಯನ್ನು ಎಳೆದು ತೆಗೆದಿದ್ದಾರೆ. ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಕೀಯನ್ನು ಕೊಟ್ಟು ಮೀನಿನ ಗಾಡಿಯನ್ನು ಗ್ರಾ.ಪಂ.ಗೆ ತರಲು ಹೇಳಿದ್ದಾರೆ. ಅದರಂತೆ ನಾವು ಗ್ರಾ.ಪಂ.ಗೆ ತೆರಳಿ ಮಾತುಕತೆ ನಡೆದಿದ್ದು, ಒಂದನೇ ವಾರ್ಡ್‌ನಲ್ಲಿ ನಿಲ್ಲಿಸಿ ಮೀನು ಮಾರಾಟಕ್ಕೆ ಅವಕಾಶವಿಲ್ಲವೆಂದು ತಿಳಿಸಿದ್ದಾರೆ. ಅದನ್ನು ನಾವು ಪಾಲಿಸುತ್ತೇವೆ. ಆದರೆ ಉಪ್ಪಿನಂಗಡಿಯಲ್ಲಿ ಸಾಕಷ್ಟು ಅನಧಿಕೃತ ಅಂಗಡಿಗಳು ಇದ್ದರೂ ಏಕಾಏಕಿ ಹಿಂದೂ ಸಮುದಾಯದವರ ಅಂಗಡಿಯನ್ನೇ ಟಾರ್ಗೆಟ್ ಮಾಡಲು ಕಾರಣವೇನು? ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ಭಿನ್ನ ಸಮುದಾಯದಕ್ಕೆ ಸೇರಿದವರೋರ್ವರು ಕೆಲವು ವರ್ಷದಿಂದ ಉಪ್ಪಿನಂಗಡಿಯ ಹಳೆಬಸ್ ನಿಲ್ದಾಣದಲ್ಲಿ ಮಿನಿ ಗೂಡ್ಸ್ ಟೆಂಪೋದಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಪರಿಸರದ ಸ್ವಚ್ಛತೆ ಕೆಡುತ್ತಿದೆ ಎಂದು ಸಾರ್ವಜನಿಕರ ದೂರಿನ ಮೇರೆಗೆ ಇದನ್ನು ತೆರವುಗೊಳಿಸಲು ಗ್ರಾ.ಪಂ. ಈ ಹಿಂದೆಯೇ ನಿರ್ಣಯ ಕೈಗೊಂಡಿದೆ. ಆದರೆ ಅದನ್ನು ಯಾಕೆ ಅನುಷ್ಠಾನ ಮಾಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಇರಬೇಕು. ಧರ್ಮ, ರಾಜಕೀಯ ಭೇದವನ್ನು ನಾವು ಒಪ್ಪುವುದಿಲ್ಲ. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವುದಿದ್ದಲ್ಲಿ ನಿರ್ದಿಷ್ಟ ಸಮುದಾಯವನ್ನು ನೋಡದೇ ಎಲ್ಲಾ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು.
– ಸಂದೀಪ್ ಕುಪ್ಪೆಟ್ಟಿ, ಅಧ್ಯಕ್ಷರು, ವಿಶ್ವಹಿಂದೂ ಪರಿಷತ್ ಉಪ್ಪಿನಂಗಡಿ ಘಟಕ

ಅಧಿಕೃತ ವ್ಯಾಪಾರಸ್ಥರಲ್ಲಿ  ಚಿಗುರಿದ ಆಶಾಭಾವನೆ
ಉಪ್ಪಿನಂಗಡಿಯಲ್ಲಿ ತರಕಾರಿಯಿಂದ ಹಿಡಿದು ಬಟ್ಟೆಬರೆಗಳವರೆಗೆ ಹೆಚ್ಚಿನ ವಸ್ತುಗಳನ್ನು ರಸ್ತೆ ಬದಿ ಅನಧಿಕೃತವಾಗಿ ಮಾರಲಾಗುತ್ತದೆ. ಗ್ರಾ.ಪಂ.ನ ಪರವಾನಿಗೆ ಪಡೆದು, ಸಾವಿರಾರುಗಟ್ಟಲೆ ತಿಂಗಳಿಗೆ ಬಾಡಿಗೆ ನೀಡಿ ಅಧಿಕೃತವಾಗಿ ಅಂಗಡಿ ಹಾಕಿಕೊಂಡು ವ್ಯಾಪಾರ ನಡೆಸುವವರಿಗೆ ಇದರಿಂದ ತುಂಬಾ ನಷ್ಟವಾಗುತ್ತಿದೆ. ಅನಧಿಕೃತ ಅಂಗಡಿಗಳ ತೆರವಿಗೆ ಗ್ರಾ.ಪಂ.ಗೆ ಹಲವು ಮನವಿಗಳು ಹಲವು ವರ್ಷಗಳಿಂದ ಬರುತ್ತಿದೆ. ಹಲವು ನಿರ್ಣಯಗಳು ಆಗಿವೆ. ಆದರೆ ನಿರ್ಣಯ ಮಾತ್ರ ಈವರೆಗೆ ಅನುಷ್ಠಾನವಾಗಿಲ್ಲ. ಆದ್ದರಿಂದ ರಸ್ತೆ ಬದಿ ನಾಯಿಕೊಡೆಗಳಂತೆ ಅನಧಿಕೃತ ಅಂಗಡಿಗಳು ತಲೆಯೆತ್ತುತ್ತಿವೆ. ಈ ಪಿಡಿಒ ಆದರೂ ಅನಧಿಕೃತ ಅಂಗಡಿಗಳ ತೆರವಿಗೆ ಮುಂದಾಗುವರೋ ಎಂಬ ಆಶಾ ಭಾವನೆ ಇದೀಗ ಅಧಿಕೃತ ವ್ಯಾಪಾರಸ್ಥರಲ್ಲಿ ಚಿಗುರುವಂತಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.