Home_Page_Advt
Home_Page_Advt
Home_Page_Advt

ಕೋಡಿಂಬಾಳ ಡೆಂಗ್ಯೂ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

Puttur_Advt_NewsUnder_1
Puttur_Advt_NewsUnder_1
  • ಮನೆಯ ಸುತ್ತಾ ನೀರು ನಿಲ್ಲದಂತೆ ನೋಡಿಕೊಳ್ಳಲು ಪಂಚಾಯತ್‌ಗೆ ಜಿಲ್ಲಾ ಆರೋಗ್ಯಧಿಕಾರಿ ಸೂಚನೆ

ಕಡಬ: ತಾಲೂಕಿನ ಕೋಡಿಂಬಾಳದಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯಾರಿ ಶುಕ್ರವಾರ ಭೇಟಿ ನೀಡಿ ಜ್ವರ ಪೀಡಿತರ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.

ಕೋಡಿಂಬಾಳ ಗ್ರಾಮದ ಮುಳಿಯ ನಿವಾಸಿಗಳಾದ ಲೋಹಿತ್, ತೇಜಸ್ವಿನಿ ಹಾಗೂ ಶೃತಿ ಎಂಬವರಿಗೆ ಡೆಂಗ್ಯೂ ಜ್ವರ ಪತ್ತೆಯಾಗಿತ್ತು. ಕಳೆದ ವರ್ಷ ಇದೇ ಪರಿಸರದಲ್ಲಿ ಮಹಿಳೆಯೊಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದರು, ಇದೀಗ ಮತ್ತೆ ಡೆಂಗ್ಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಜ್ವರ ಪೀಡಿತರ ಮನೆಗೆ ಭೇಟಿ ನೀಡಿ ಬಳಿಕ ಕಡಬ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿ ಪತ್ರಕರ್ತರೊಂದಿಗೆ ಮಾತನಾಡಿದರು. ಕೋಡಿಂಬಾಳದಲ್ಲಿ ಡೆಂಗ್ಯೂ ಪೀಡಿತರಲ್ಲಿ ಒಬ್ಬರು ಈಗಾಗಲೇ ಚೇತರಿಸಿಕೊಂಡಿದ್ದಾರೆ, ಇನ್ನಿಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಜ್ವರ ಹೆಚ್ಚಾಗದಂತೆ ಮುಂಜಾಗೃತೆ ವಹಿಸಬೇಕಾಗಿದೆ ಎಂದರು. ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿ ಆರೋಗ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು ಹತೋಟಿಗೆ ತರಲಾಗಿದೆ. ಡೆಂಗ್ಯೂ ಪ್ರಕರಣ ಪತ್ತೆಯಾದ ಪ್ರದೇಶದಲ್ಲಿ ೪೮ ಗಂಟೆಯಲ್ಲಿ ಫಾಗಿಂಗ್ ಮಾಡಿದರೆ ದೊಡ್ಡ ಪ್ರಮಾಣದ ಸೊಳ್ಳೆಗಳು ನಾಶವಾಗುತ್ತವೆ, ಬಳಿಕ ಸೊಳ್ಳ್ಳೆಗಳ ಸಂಪೂರ್ಣ ನಾಶಕ್ಕೆ ಕ್ರಮಕೈಗೊಳ್ಳುವುದು, ಪ್ರದೇಶದ ಮನೆಮನೆಗೆ ತೆರಳಿ ಜ್ವರ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವುದು ಹಾಗೂ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಇಲಾಖೆ ಸ್ಥಳೀಯಾಡಳಿತದ ಸಹಯೋಗದೊಂದಿಗೆ ಡೆಂಗ್ಯೂ ನಿರ್ಮೂಲನೆಗೆ ಶತ ಪ್ರಯತ್ನ ಮಾಡುತ್ತಿದೆ ಎಂದರು.

ಇದಕ್ಕೂ ಮುನ್ನ ಕಡಬ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಆರೋಗ್ಯಾಧಿಕಾರಿಯವರು ಇಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಹಸಿ ಕಸ ಮತ್ತು ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಇದನ್ನು ಸರಿಪಡಿಸಬೇಕು ಎಂದು ಹೇಳಿದರು. ಮಾತ್ರವಲ್ಲ ಅಲ್ಲಲ್ಲಿ ಕಸ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು, ಡೆಂಗ್ಯೂ ನಿರ್ಮೂಲನೆಗೆ ಇಲಾಖೆಯೊಂದಿಗೆ ಕೈಜೋಡಿಸಬೇಕು, ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು, ರಬ್ಬರ ತೋಟದಲ್ಲಿ ಗೆರೆಟೆಯಲ್ಲಿ ನೀರು ನಿಲ್ಲದಂತೆ, ಅಡಕೆ ತೋಟದಲ್ಲಿ ಸೋಗೆ ಹಾಗೂ ಹಾಳೆಗಳಲ್ಲಿ ನೀರು ನಿಲ್ಲದಂತೆ, ಮನೆಯ ಸುತ್ತಮುತ್ತ ಮಳೆಯ ನೀರು ಅಥವಾ ಇನ್ನಿತರ ಕೊಳಚೆ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್ ಕುಲಾಲ್, ಕಡಬ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಸದಸ್ಯರಾದ ಸೈಮನ್ ಸಿ,ಜೆ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.