- ಮಾವನ ರಕ್ಷಿಸಲು ಹೋಗಿ ಅಳಿಯ ಬಲಿಯಾದರೇ…?
ಪುತ್ತೂರು: ಕಾಣಿಯೂರು ಸಮೀಪದ ಮುರುಳ್ಯ ಗ್ರಾಮದ ಕುಕ್ಕಟ್ಟೆಯ ಯುವಕ ಮೂಡಬಿದಿರೆಯಲ್ಲಿ ಸ್ವರ್ಣೋದ್ಯಮ ನಡೆಸುತ್ತಿರುವ ಯುವಕ ಅಬ್ದುಲ್ ಲತೀಫ್ ಅವರನ್ನು ಮುಲ್ಕಿಯಲ್ಲಿ ಅಡ್ಡಗಟ್ಟಿ ಕೊಲೆ ನಡೆಸಿ ಲತೀಫ್ ಜೊತೆಗಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಾಲ್ವರು ದುಷ್ಕರ್ಮಿಗಳನ್ನು ಮುಲ್ಕಿ ಠಾಣಾ ಪೊಲೀಸರು ಜೂ.6ರಂದು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಬಂಧಿತರನ್ನು ಉಚ್ಚಿಲ ಬಡಾ ಗ್ರಾಮದ ಅಬೂಬಕ್ಕರ್ ಸಿದ್ದೀಕ್ (೨೭), ಮುಹಮ್ಮದ್ ರಾಝಿಂ(೨೪), ಕಾರ್ನಾಡ್ ಬಪ್ಪನಾಡಿನ ಮುಹಮ್ಮದ್ ಹಾಸಿಮ್ (೨೬) ಮತ್ತು ನಿಸಾರ್ ಯಾನೆ ರಿಯಾಜ್ (೩೨), ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣದ ದಾಖಲಾಗಿತ್ತು. ಅದರಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ಪೊಲೀಸರು ಮತ್ತು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಘಟನೆಯಲ್ಲಿ ಗಾಯಗೊಂಡಿರುವ ಅಬ್ದುಲ್ ಲತೀಫ್ ಅವರ ಮಾವ ಹಾಗೂ ಬಾವ ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿದ್ದಾರೆ.
ಹಳೆ ದ್ವೇಷವೇ…ರಾಜಕೀಯ ವೈಷಮ್ಯವೇ…?
ಅಬ್ದುಲ್ ಲತೀಫ್ ಅವರ ಕೊಲೆಗೆ ಈ ಹಿಂದಿನ ಹಳೇ ದ್ವೇಷವೇ ಕಾರಣ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗುತ್ತಿದೆ.
ಮುನೀರ್ ಅವರನ್ನು ಕೊಲ್ಲುವ ಯೋಜನೆಯನ್ನು ದುಷ್ಕರ್ಮಿಗಳ ತಂಡ ಹೊಂದಿದ್ದು ಗಲಾಟೆ ಸಂದರ್ಭ ಮುನೀರ್ ಅವರ ಅಟ್ಯಾಕ್ ಮಾಡಲು ದುಷ್ಕರ್ಮಿಗಳು ಯತ್ನಿಸಿದಾಗ ಅವರ ವಿರುದ್ಧ ಅಬ್ದುಲ್ ಲತೀಫ್ ಅವರು ಎದುರು ನಿಂತು ಹೋರಾಡಿದ ಪರಿಣಾಮ ಅವರು ದುಷ್ಕರ್ಮಿಗಳ ಚಾಕು ಇರಿತಕ್ಕೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುನೀರ್ ಅವರು ನಿರ್ದಿಷ್ಟ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು ರಾಜಕೀಯ ವಿಚಾರದಲ್ಲೇ ಅವರನ್ನು ಕೊಲೆ ನಡೆಸಲು ದುಷ್ಕರ್ಮಿಗಳು ಯೋಜನೆ ರೂಪಿಸಿದ್ದರು ಎಂದೂ ಹೇಳಲಾಗುತ್ತಿದೆ. ಘಟನೆಯ ಪೂರ್ಣ ಚಿತ್ರಣ ಪೊಲೀಸ್ ತನಿಖೆಯಿಂದಷ್ಟೇ ತಿಳದು ಬರಬೇಕಿದೆ.