HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ನೀಡುತ್ತಿರುವ ಬಜತ್ತೂರಿನ ಪ್ಲಾವಿಯಾ | ಜೀವದ ಹಂಗು ತೊರೆದು ಕೊರೋನಾ ಸೋಂಕಿತರಿಗೆ ಚಿಕಿತ್ಸೆ

Puttur_Advt_NewsUnder_1
Puttur_Advt_NewsUnder_1

ವರದಿ: ಹರೀಶ್ ಬಾರಿಂಜ

ನೆಲ್ಯಾಡಿ: ಕೊರೋನಾ ಎಂಬ ಪದ ಕೇಳಿದಾಕ್ಷಣವೇ ಜನ ಬೆಚ್ಚಿ ಬೀಳುವ ಸಂದರ್ಭವಿದು. ಕೊರೋನಾ ಸೋಂಕಿತರ ಬಗ್ಗೆಯಂತೂ ಸಮಾಜದಲ್ಲಿ ಭಯವೇ ಮನೆ ಮಾಡಿದೆ. ಎಲ್ಲೆಡೆ ಮಾಸ್ಕ್, ಸಾಮಾಜಿಕ ಅಂತರದ್ದೇ ಮಾತು. ಸ್ಯಾನಿಟೈಸರ್ ಬಳಕೆಯೂ ಕಡ್ಡಾಯ. ಇಂತಹ ಸಂದರ್ಭದಲ್ಲಿ ಸೋಂಕಿತರ ಜೊತೆಗಿದ್ದು ಅವರ ಆರೈಕೆ ಮಾಡುವುದೆಂದರೆ ಅದು ಸುಲಭದ ಮಾತೇನಲ್ಲ. ಇಂತಹ ಕಠಿಣ ಕಾಯಕವನ್ನು, ಸೇವೆಯನ್ನು ಜೀವದ ಹಂಗು ತೊರೆದು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತೆಯರು ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ವಿದ್ಯಾನಗರ ನಿವಾಸಿ ಪ್ಲಾವಿಯಾ ಎಂಬ ಯುವತಿ ಕೊರೋನಾ ಸೋಂಕಿತರ ಆರೈಕೆ ಮಾಡುತ್ತಿದ್ದಾರೆ. ಜೀವದ ಹಂಗು ತೊರೆದು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಪ್ಲಾವಿಯಾರವರ ಸೇವೆಗೆ ಹ್ಯಾಟ್ಸಫ್ ಹೇಳಲೇಬೇಕಾಗಿದೆ.

ಕೊರೋನಾ ಸೋಂಕಿನಿಂದ ಇಂದು ಜಗತ್ತೇ ಬೆಚ್ಚಿಬಿದ್ದಿದೆ. ನಮ್ಮ ದೇಶ, ರಾಜ್ಯದಲ್ಲೂ ಸೋಂಕಿತರ, ಸಾವಿನ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಇದಕ್ಕೆ ದ.ಕ.ಜಿಲ್ಲೆಯೂ ಹೊರತಾಗಿಲ್ಲ. ಜಿಲ್ಲೆಯಲ್ಲಿಯೂ ಕೊರೋನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಲಾಗಿದೆ. ಇಲ್ಲಿ ಈಗ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸೋಂಕಿತರ ಮಧ್ಯೆ ಇದ್ದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಪ್ಲಾವಿಯಾರವರ ಸೇವೆಯ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳೇ ಕೇಳಿಬರುತ್ತಿವೆ. ಬಜತ್ತೂರು ಗ್ರಾಮದ ವಿದ್ಯಾನಗರ ನಿವಾಸಿ, ಮೇಸ್ತ್ರಿ ಕೆಲಸ ಮಾಡುತ್ತಿರುವ ಪೀಟರ್ ವೇಗಸ್ ಹಾಗೂ ಗೃಹಿಣಿ ಐರಿನ್ ವೇಗಸ್ ದಂಪತಿಯ ಹಿರಿಯ ಪುತ್ರಿಯಾಗಿರುವ ಪ್ಲಾವಿಯಾರವರು ೨೦೧೯ರ ಅಕ್ಟೋಬರ್ ತಿಂಗಳಿನಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ಎಪ್ರಿಲ್ ತಿಂಗಳಿನಿಂದ ಕೋವಿಡ್ ರೋಗಿಗಳನ್ನು ನೋಡಿಕೊಳ್ಳಲೆಂದೇ ನೇಮಕಗೊಂಡಿದ್ದಾರೆ. ಇವರು ವಳಾಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಳಾಲು ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದಾರೆ. ಮಂಗಳೂರಿನ ಪದವು ಎಂಬಲ್ಲಿ ಪ.ಪೂ.ಶಿಕ್ಷಣ ಪಡೆದುಕೊಂಡ ಬಳಿಕ ವೆನ್ಲಾಕ್‌ನಲ್ಲಿ ಶುಶ್ರೂಷಕಿ ತರಬೇತಿ ಪಡೆದುಕೊಂಡಿದ್ದಾರೆ. ತರಬೇತಿ ಪಡೆದುಕೊಂಡ ನಂತರ ಪ್ಲಾವಿಯಾರವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿಯೇ 1 ವರ್ಷದ ಬಾಂಡ್ ಶುಶ್ರೂಷಕಿಯಾಗಿ ಕೆಲಸ ಆರಂಭಿಸಿದ್ದು, ಕೋವಿಡ್ ಸೋಂಕಿನ ಬಳಿಕ ವೆನ್ಲಾಕ್ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದ್ದು ಪ್ಲಾವಿಯಾರವರು ಕೋವಿಡ್ ರೋಗಿಗಳನ್ನು ನೋಡಿಕೊಳ್ಳಲೆಂದೇ ನೇಮಕಗೊಂಡಿದ್ದಾರೆ.

ಪಿಪಿಇ ಕಿಟ್ ಧರಿಸಿ ಡ್ಯೂಟಿ:
ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆ ಎಂದರೆ ಸರಳ ಸಂಗತಿಯೇನಲ್ಲ. ಆಸ್ಪತ್ರೆಗೆ ಹೋಗುವ ಮುಂಚೆ ಹಾಗೂ ನಂತರ ಕಠಿಣ ಸುರಕ್ಷಾ ನಿರ್ಬಂಧಗಳಿವೆ. ಆಸ್ಪತ್ರೆಗೆ ಪ್ರವೇಶ ಮಾಡುವಾಗಲಂತೂ ಪಿಪಿಇ( ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್‌ಮೆಂಟ್)ಕಿಟ್ ಧರಿಸಬೇಕು. ಕ್ಯಾಪ್, ಕಣ್ಣಿಗೆ ಗೂಗಲ್ಸ್, ಕಾಲಿಗೆ ಶೂ ಕವರ್, ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಗೌನ್, ಓವರ್‌ಕೋಟ್, ಎಫ್ರಾನ್ ಇಷ್ಟು ವ್ಯವಸ್ಥೆಗಳಿರುವ ಪಿಪಿಇ ಕಿಟ್ ಧರಿಸಬೇಕಾಗುತ್ತದೆ. ಕುಡಿಯುವ ನೀರು ಸಹ ಸೇವಿಸುವ ಹಾಗಿಲ್ಲ. ಉಸಿರಾಡಲೂ ಕಷ್ಟ, ಕೋವಿಡ್ ನಿಯಮದನ್ವಯ ರೋಗಿಗಳಿರುವ ವಾರ್ಡ್‌ಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆಯನ್ನೂ ಬಳಸುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಡ್ಯೂಟಿ ಮಾಡಬೇಕು. ರೋಗಿಗಳ ಆರೈಕೆ ಮಾಡಬೇಕು ಮತ್ತು ನಿಗಾ ವಹಿಸಬೇಕು. ಡ್ಯೂಟಿಯ ನಂತರ ತಮ್ಮ ಕೊಠಡಿ ಸೇರಬೇಕು. ಇಂತಹ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪ್ಲಾವಿಯಾರವರ ಸೇವೆ ಮೆಚ್ಚಲೇಬೇಕಾಗಿದೆ.

ಫೆಬ್ರವರಿಯಿಂದ ಮನೆಗೆ ಬಂದಿಲ್ಲ:
ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ಲಾವಿಯಾರವರು ಕಳೆದ ಫೆಬ್ರವರಿ ತಿಂಗಳಿನಿಂದ ಮನೆ ಕಡೆಗೆ ಬಂದಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಸದ್ಯ ಮನೆಗೆ ಬರುವ ಯೋಚನೆಯನ್ನೇ ಇವರು ಮಾಡಿಲ್ಲ. ಕೊರೋನಾ ಎಂಬ ಮಹಾಮಾರಿಗೆ ಜಗತ್ತೇ ತತ್ತರಿಸಿ ಹೋಗಿರುವ ಇಂತಹ ಸಂದರ್ಭದಲ್ಲಿ ಬಜತ್ತೂರಿನ ಯುವತಿ ರೋಗಿಗಳ ರಕ್ಷಣೆಯಲ್ಲಿ ತೊಡಗಿಕೊಂಡಿರುವುದು ಊರಿಗೆ ಹೆಮ್ಮೆಯ ಸಂಗತಿಯಾಗಿದೆ. ಪ್ಲಾವಿಯಾರವರ ತಂಗಿ ಐಸಿಂತಾ ಉಪ್ಪಿನಂಗಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಭಯದಲ್ಲೇ ರೋಗಿಗಳ ಸೇವೆ:
ಕೊರೋನಾ ಸೋಂಕಿನ ಬಗ್ಗೆ ಎಲ್ಲೆಡೆ ಭಯದ ವಾತಾವರಣ ಇದೆ. ಭಯದಲ್ಲೇ ರೋಗಿಗಳ ಸೇವೆ ಮಾಡುತ್ತಿದ್ದರೂ ತೃಪ್ತಿ ಇದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡೇ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಕೋವಿಡ್ ಸೋಂಕಿತರ ಚಿಕಿತ್ಸೆ ಆರಂಭಿಸಿದ ಬಳಿಕ ಸುರಕ್ಷತೆಯ ದೃಷ್ಟಿಯಿಂದ ಮನೆಗೆ ಬಂದಿಲ್ಲ ಪ್ಲಾವಿಯ, ಸ್ಟಾಫ್ ನರ್ಸ್ ವೆನ್ಲಾಕ್ ಕೋವಿಡ್ ಆಸ್ಪತ್ರೆ, ಮಂಗಳೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.