HomePage_Banner
HomePage_Banner

ಬಜತ್ತೂರು: ಜಿ.ಪಂ.ಮಾಜಿ ಸದಸ್ಯ ಕೇಶವ ಗೌಡರ ಉತ್ತರಕ್ರಿಯೆ-ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನೇರ-ದಿಟ್ಟ ನಡೆ ನುಡಿಯ ಮೂಲಕ ಜನರ ಪ್ರೀತಿ, ವಿಶ್ವಾಸಗಳಿಸಿದ್ದರು; ಸಂಜೀವ ಮಠಂದೂರು
  • ನೀಡಿದ ಜವಾಬ್ದಾರಿಗೆ ನ್ಯಾಯ ಒದಗಿಸಿದ್ದಾರೆ: ಚನಿಲ
  • ಮಮತೆ, ಮಮಕಾರ ಮರೆಯಲು ಸಾಧ್ಯವಿಲ್ಲ: ಮಲ್ಲಿಕಾ ಪ್ರಸಾದ್
  • ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುತ್ತಿದ್ದರು: ಸಾಜ
  • ಕಾರ್ಯಕರ್ತರ ಸಮಸ್ಯೆಗೆ ತಕ್ಷಣ ಸ್ಪಂದನೆ: ಶಯನಾ
  • ಪ್ರಾಯ ಸಣ್ಣದಾದರೂ ಸಾಹಸ ದೊಡ್ಡದು: ಸುಂದರ ಗೌಡ
  • ಸಹಕರಿಸಿದವರಿಗೆ ಕುಟುಂಬದ ಪರವಾಗಿ ಕೃತಜ್ಞತೆ: ಶಿವಣ್ಣ ಗೌಡ

ಉಪ್ಪಿನಂಗಡಿ: ಅನಾರೋಗ್ಯದಿಂದ ಮೇ ೨೮ರಂದು ನಿಧನರಾದ ಜಿ.ಪಂ.ಮಾಜಿ ಸದಸ್ಯ, ಬಜತ್ತೂರು ಗ್ರಾ.ಪಂ.ಮಾಜಿ ಅಧ್ಯಕ್ಷ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಬಜತ್ತೂರು ಗ್ರಾಮದ ಪುಯಿಲ ನಿವಾಸಿ ದಿ. ಕೇಶವ ಗೌಡರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆ ಜೂ.೮ರಂದು ಪುಯಿಲ ಮನೆಯಲ್ಲಿ ನಡೆಯಿತು.

ಮೃತ ಕೇಶವ ಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಸಂಜೀವ ಮಠಂದೂರುರವರು, ಮನುಷ್ಯ ಎಷ್ಟು ವರ್ಷ ಬದುಕ್ಕಿದ್ದಾನೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದ ಎಂಬುದು ಮುಖ್ಯ. ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿಳ್ಳದಿದ್ದರೂ ಕೇಶವ ಗೌಡರವರು ಸಮಾಜಕ್ಕೆ ಆದರ್ಶರಾಗಿ ಮತ್ತೊಬ್ಬರ ಕಣ್ಣೀರೊರೆಸುವ ಕೆಲಸ ಮಾಡಿದ್ದಾರೆ. ತನ್ನ ನೇರ, ದಿಟ್ಟ ನಡೆ ನುಡಿಯ ಮೂಲಕ ಜನರ ಪ್ರೀತಿ, ವಿಶ್ವಾಸಗಳಿಸಿದ್ದಾರೆ. ಸಮಾಜವೂ ಅವರನ್ನು ಒಪ್ಪಿಕೊಂಡಿದೆ. ಕೇಶವ ಗೌಡರು ಅನ್ಯಾಯದ ವಿರುದ್ಧ ಸೆಟೆದು ನಿಂತು ಸಮಸ್ಯೆ ಬಗೆಹರಿಸುತ್ತಿದ್ದ ರೀತಿ ಯುವ ಜನತೆಗೆ ಮಾದರಿಯಾಗಿದೆ ಎಂದು ಹೇಳಿದರು. ಕಳೆದ ಲೋಕಸಭೆ ಚುನಾವಣೆ ವೇಳೆ ಅವರ ಆರೋಗ್ಯ ಸರಿಯಿಲ್ಲದಿದ್ದರೂ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದ ಅವರ ಕಾರ್ಯಗಳು ಪಕ್ಷದ ಕಾರ್ಯಕರ್ತೆರಿಯರಿಗೆ ಪ್ರೇರಣೆಯಾಗಿದೆ. ರಾಜಕೀಯದ ಜೊತೆ ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಕೊಂಡು ಊರಿನ ದೇವಾಲಯಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಸಲ್ಲಿಸಿರುವ ಸೇವೆ ಮರೆಯಲು ಸಾಧ್ಯವಿಲ್ಲ. ಅಕಾಲಿಕವಾಗಿ ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಮಠಂದೂರು ಹೇಳಿದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ, ಕೇಶವ ಗೌಡರವರು ಜಿ.ಪಂ.ಸದಸ್ಯರಾಗಿ, ಗ್ರಾ.ಪಂ.ಅಧ್ಯಕ್ಷರಾಗಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಈ ಊರಿಗೆ, ಕ್ಷೇತ್ರದ ಜನತೆಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ತಳಮಟ್ಟದ ಕಾರ್ಯಕರ್ತರ ಹಾಗೂ ಇತರರ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಸ್ಪಂದನೆ ನೀಡುತ್ತಿದ್ದರು. ಆರ್ಥಿಕ ಸಂಕಷ್ಟ, ಅನಾರೋಗ್ಯವಿದ್ದರೂ ತನಗೆ ನೀಡಿದ ಜವಾಬ್ದಾರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಅವರ ಸೇವಾ ಮನೋಭಾವ, ಬಡವರ ಬಗ್ಗೆ ತೋರುತ್ತಿದ್ದ ಕಾಳಜಿಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಕೇಶವ ಗೌಡರ ಪತ್ನಿ, ಮಕ್ಕಳಿಗೆ ಎಲ್ಲಾ ರೀತಿಯ ಸಹಕಾರವನ್ನು ಪಕ್ಷ ನೀಡಲಿದೆ ಎಂದು ಹೇಳಿದರು. ಮಾಜಿ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್‌ರವರು ಮಾತನಾಡಿ, ಕೇಶವ ಗೌಡರವರು ತನ್ನ ಸಹೋದರನಂತಿದ್ದು ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ತನ್ನ ಮಕ್ಕಳು, ಕುಟುಂಬದ ಬಗ್ಗೆಯೂ ಅವರು ಅತೀವ ಕಾಳಜಿ ಹೊಂದಿದ್ದರು. ಅನ್ಯಾಯದ ವಿರುದ್ಧ ಸೆಟೆದು ನಿಂತು ಕ್ಲಿಷ್ಟಕರ ವಿಚಾರಗಳನ್ನೂ ಬಗೆಹರಿಸುತ್ತಿದ್ದು, ಜನರ ಬಗ್ಗೆ ಅವರು ತೋರುತ್ತಿದ್ದ ಮಮತೆ, ಪ್ರೀತಿ, ಮಮಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಕೇಶವ ಗೌಡರವರು ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕೆಂಬ ತುಡಿತ ಅವರಲ್ಲಿತ್ತು. ಅವರ ಸೇವಾ ಮನೋಭಾವ, ದಿಟ್ಟ ನಿರ್ಧಾರಗಳು ಯುವ ಜನತೆಗೆ ಮಾದರಿಯಾಗಿದೆ ಎಂದರು. ಜಿ.ಪಂ.ಸದಸ್ಯೆ ಶಯಾನಂದ ಜಯಾನಂದರವರು ಮಾತನಾಡಿ, ಕೇಶವ ಗೌಡರವರು ಚುನಾವಣೆಯ ಸಂದರ್ಭದಲ್ಲಿ ಧೈರ್ಯ ತುಂಬಿದ್ದರು. ಪ್ರಚಾರದಲ್ಲಿಯೂ ತೊಡಗಿಕೊಂಡು ನನ್ನ ಗೆಲುವಿಗೂ ಕಾರಣರಾಗಿದ್ದಾರೆ. ಪಕ್ಷದ ಕಾರ್ಯಕರ್ತರು ಕೇಶವ ಗೌಡರ ಮೇಲೆ ವಿಶ್ವಾಸ, ನಂಬಿಕೆ ಇರಿಸಿಕೊಂಡಿದ್ದರು. ಕಾರ್ಯಕರ್ತನಿಗೆ ಯಾವುದೇ ಸಮಸ್ಯೆ ಆದಾಗ ಪೊಲೀಸ್ ಠಾಣೆ ಸೇರಿದಂತೆ ಎಲ್ಲಿಗೆ ಬೇಕಾದರೂ ಯಾವ ಸಮಯದಲ್ಲಾದರೂ ಬಂದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಎಳೆಯ ಪ್ರಾಯದಲ್ಲೇ ಅವರು ಮಾಡಿದ ಸಾಧನೆ ದೊಡ್ಡದಿದೆ. ಅವರು ದೇವರ ಪಾದ ಸೇರಿದರೂ ಅವರು ಮಾಡಿರುವಂತಹ ಕೆಲಸ ಕಾರ್ಯಗಳು ಎಂದಿಗೂ ನೆನಪಿನಲ್ಲಿ ಉಳಿಯುವಂತದ್ದೇ ಆಗಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕೊಡಲೆಂದು ಪ್ರಾರ್ಥಿಸಿದರು. ಉಪ್ಪಿನಂಗಡಿಯ ಉದ್ಯಮಿ ಸಚಿನ್ ಸುಂದರ ಗೌಡರವರು ಮಾತನಾಡಿ, ಕೇಶವ ಗೌಡರವರ ಪ್ರಾಯ ಸಣ್ಣದಾಗಿದ್ದರೂ ಅವರ ಸಾಹಸ ದೊಡ್ಡದು. ಆದ್ದರಿಂದಲೇ ಅವರ ಅಗಲಿಕೆಯ ನೋವು ಎಲ್ಲರಿಗೂ ಕಾಡುತ್ತಿದೆ. ಸಮಾಜ, ಪಕ್ಷ, ಊರು, ಊರಿನ ಜನರ ನೋವಿಗೆ ಸಾಕಷ್ಟು ಸ್ಪಂದನೆ ನೀಡಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರಲಿಲ್ಲ. ಅವರ ಚಿಕಿತ್ಸೆಗೆ ಊರಿನ ಜನರು, ಬಂಧುಮಿತ್ರರು, ಪಕ್ಷದ ಮುಖಂಡರು ನೆರವು ನೀಡಿದ್ದಾರೆ. ಲಕ್ಷಾಂತರ ರೂ.,ಖರ್ಚು ಮಾಡಿ ಚಿಕಿತ್ಸೆ ನೀಡಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು. ಪುತ್ತೂರಿನ ವೈದ್ಯ ಡಾ.ಪ್ರಸಾದ್‌ರವರು ಎಲ್ಲಾ ರೀತಿಯ ಪ್ರಯತ್ನದೊಂದಿಗೆ ಸಹಕಾರ ನೀಡಿದ್ದಾರೆ. ಕೇಶವ ಗೌಡರ ಮೇಲೆ ಊರಿನ ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ಮರೆಯುವಂತದ್ದಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ನಿವೃತ್ತ ಶಿಕ್ಷಕ ಶಿವಣ್ಣ ಗೌಡ ಬಿದಿರಾಡಿಯವರ ಮಾತನಾಡಿ, ಪ್ರತಿಯೋರ್ವರು ಕೇಶವ ಗೌಡರವರ ಬಗ್ಗೆ ಕಾಳಜಿ ವಹಿಸಿ ಬೇರೆ ಬೇರೆ ರೀತಿಯಲ್ಲಿ ಸಹಾಯ ನೀಡಿರುವುದಕ್ಕೆ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ವೈಕುಂಠವಾಸಿ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಕೇಶವ ಗೌಡರ ಆತ್ಮ ಲೀನವಾಗಲಿ ಎಂದು ಪ್ರಾರ್ಥಿಸಿದರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಪುತ್ತೂರು ಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ, ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ತಾ.ಪಂ.ಸದಸ್ಯರಾದ ಮೀನಾಕ್ಷಿ ಮಂಜುನಾಥ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಸುಜಾತಕೃಷ್ಣ ಆಚಾರ್ಯ, ಮಾಜಿ ಸದಸ್ಯ ಎನ್.ಉಮೇಶ್ ಶೆಣೈ ಉಪ್ಪಿನಂಗಡಿ, ರಾಮಕುಂಜ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಆರ್.ಕೆ., ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಪಂದಾರ್ಜೆ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಗ್ರಾ.ಪಂ.ಸದಸ್ಯ ಸುರೇಶ್ ಅತ್ರಮಜಲು, ಪ್ರಮುಖರಾದ ರಾಮಣ್ಣ ಗೌಡ ಗುಂಡೋಳೆ, ಕರುಣಾಕರ ಸುವರ್ಣ, ಉಷಾ ಮುಳಿಯ ಮತ್ತಿತರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತಾ.ಪಂ.ಸದಸ್ಯ ಮುಕುಂದ ಗೌಡ ಬಜತ್ತೂರು ನಿರೂಪಿಸಿದರು. ಮೃತ ಕೇಶವ ಗೌಡರ ತಾಯಿ ಗಿರಿಜಾ, ಪತ್ನಿ ಪುಷ್ಪಾವತಿ, ಪುತ್ರ ಅಭಿಷೇಕ್, ಪುತ್ರಿ ಅನನ್ಯ, ಸಹೋದರ ಧನಂಜಯ, ಸಹೋದರಿಯರು, ಕುಟುಂಬಸ್ಥರು, ಸಂಬಂಧಿಕರು ಅತಿಥಿಗಳನ್ನು ಸತ್ಕರಿಸಿದರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ೧ ನಿಮಿಷ ಮೌನ ಪ್ರಾರ್ಥನೆಯ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಪ್ರಾರ್ಥಿಸಲಾಯಿತು.

ಕೇಶವ ಗೌಡರ ಇಬ್ಬರು ಮಕ್ಕಳ ಪಿಯುಸಿ ತನಕದ ವಿದ್ಯಾಭ್ಯಾಸದ ಖರ್ಚನ್ನು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ನಾಯಕ್ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಕೇಶವ ಗೌಡರ ಕುಟುಂಬದ ಜೀವನ ನಿರ್ವಹಣೆಗೆ ಪಕ್ಷದಿಂದ ಸಹಕಾರ ನೀಡಲಾಗುವುದು -ಸಂಜೀವ ಮಠಂದೂರು ಶಾಸಕರು, ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.