- ಮುರಿದು ಹೋದ ತೂಗುಸೇತುವೆ ಸಾಮಾಗ್ರಿಗಳ ತೆರವು ಕಾರ್ಯ ಆರಂಭ
ಪುತ್ತೂರು: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮಪಂಚಾಯತ್ ವ್ಯಾಪ್ತಿ ಹಾಗೂ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಪಂ ವ್ಯಾಪ್ತಿ ಪ್ರದೇಶಗಳ ನಡುವಿನ ಸಂಪರ್ಕ ಕಲ್ಪಿಸುವ ಮುಗೇರಡ್ಕ ತೂಗುಸೇತುವೆ ನಿರ್ಮಾಣಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ರೂ. ೧.೫೫ಕೋಟಿಯ ಪ್ರಸ್ತಾವನೆಗೆ ಸಂಬಂಧಿಸಿ ಮುಖ್ಯಮಂತ್ರಿಗಳಿಗೆ ಮನವಿಗೆ ಸಂಬಂಧಿಸಿ ಇದಿಗ ಅನುದಾನ ಮಂಜೂರು ಹಂತದಲ್ಲಿದ್ದು ಇದೀಗ ನೆರೆ ನೀರಿಗೆ ಮುರಿದು ಹೋಗಿದ್ದ ತೂಗುಸೇತುವೆ ಸಾಮಾಗ್ರಿಗಳನ್ನು ಶಾಸಕರ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯರು ಮತ್ತು ಊರವರ ಸಹಕಾರದೊಂದಿಗೆ ತೆರವು ಕಾರ್ಯ ನಡೆಯುತ್ತಿದೆ.
೨೦೧೩ರಲ್ಲಿ ತೂಗುಸೇತುವೆ ನಿರ್ಮಾಣದ ಸರದಾರ ಸುಳ್ಯದ ಗಿರೀಶ್ ಭಾರದ್ವಾಜ್ ಅವರ ನೇತೃತ್ವದಲ್ಲಿ ರೂ.೧.೨೫ ಕೋಟಿ ವೆಚ್ಚದಲ್ಲಿ ಈ ಮುಗೇರಡ್ಕ ತೂಗು ಸೇತುವೆ ನಿರ್ಮಾಣಗೊಂಡಿತ್ತು. ೭ ವರ್ಷಗಳ ಬಾಳ್ವಿಕೆ ಬಂದ ಈ ತೂಗುಸೇತುವೆ ಕಳೆದ ಮಳೆಗಾಲದಲ್ಲಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ ಸಂಪರ್ಕ ಕಲ್ಪಿಸುವ ಈ ಸಂಪರ್ಕ ಸೇತು ಭಾರೀ ನೆರೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿ ಎರಡು ಗ್ರಾಮಗಳ ನಡುವಿನ ಸಂಪರ್ಕವೂ ಸ್ಥಗಿತಗೊಂಡಿತ್ತು. ಜಿಲ್ಲಾಡಳಿತದಿಂದ ಈ ತೂಗುಸೇತುವೆ ದುರಸ್ಥಿಗೆ ರೂ ೯೯ ಲಕ್ಷ ನೀಡುವ ಭರವಸೆ ದೊರೆತಿತ್ತು. ಆದರೆ ತೂಗು ಸೇತುವೆ ಪುನರ್ ನಿರ್ಮಾಣಕ್ಕೆ ಕನಿಷ್ಟ ರೂ.೧.೫೫ ಕೋಟಿ ಅಗತ್ಯತೆ ಇದ್ದು, ಈ ಹಿನ್ನಲೆಯಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿಯ ಅನುದಾನಕ್ಕೆ ಪ್ರಸ್ತಾವನೆ ನೀಡಲಾಗಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಭರವಸೆ ಹಿನ್ನಲೆಯಲ್ಲಿ ಸುಮಾರು ೩೦ ಮಂದಿ ಗ್ರಾಮಸ್ಥರು ಹಾಗೂ ಕ್ರೈನ್ ಮೂಲಕ ತೂಗುಸೇತುವೆಯ ಉಪಕರಣಗಳನ್ನು ತೆಗೆಯುವ ಕಾರ್ಯ ನಡೆಸುತ್ತಿದ್ದಾರೆ. ಯಾಕೆಂದರೆ ಮತ್ತೊಮ್ಮೆ ಮಳೆಗಾಲದ ಆರಂಭವಾಗುತ್ತಿರುವ ಕಾರಣ ಈ ತೂಗಸೇತುವೆಯ ಉಳಿದ ಸಾಮಾಗ್ರಿಗಳು ಕೊಚ್ಚಿಹೋಗಬಾರದು ಎಂಬ ಹಿನ್ನಲೆಯಿಂದ ಇದೀಗ ಚುರುಕಿನ ಕಾರ್ಯಾಚರಣೆ ನಡೆಸಲಾಗುತ್ತಿದೆ.
ತೂಗು ಸೇತುವೆ ನಿರ್ಮಾಣ ಆಗದಿದ್ದರೆ ನಾಡದೋಣಿಯೇ ಗತಿ:
ತೂಗು ಸೇತುವೆ ನಿರ್ಮಾಣಕ್ಕೆ ಮೊದಲು ನೇತ್ರಾವತಿ ನದಿಯ ಎರಡೂ ದಡದ ಊರುಗಳಾದ ಮುಗೇರಡ್ಕ ಮತ್ತು ವಳಾಲು ಪರಿಸರದ ಮಂದಿ ನಾಡದೋಣಿ ಮೂಲಕ ಪರಸ್ಪರ ಸಂಪರ್ಕ ನಡೆಸುತ್ತಿದ್ದರು. ತೂಗುಸೇತುವೆ ಆರಂಭದ ನಂತರ ಈ ನಾಡದೋಣಿ ಇಲ್ಲದಂತಾಗಿತ್ತು. ಜನತೆಯ ಸಂಪರ್ಕಕ್ಕೂ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಶೈಕ್ಷಣಿಕ ಉದ್ದೇಶ ಹಾಗೂ ವ್ಯವಹಾರದ ದೃಷ್ಟಿಯಿಂದ ಎರಡೂ ಗ್ರಾಮಗಳ ಜನತೆ ಈ ತೂಗುಸೇತುವೆ ಅತ್ಯಂತ ಉಪಯುಕ್ತವಾಗಿತ್ತು. ಕಳೆದ ಮಳೆಗಾಲದಲ್ಲಿ ತೂಗುಸೇತುವೆ ಕೊಚ್ಚಿಹೋದ ಕಾರಣ ಮತ್ತೆ ಸಂಪರ್ಕ ಕಡಿತಗೊಂಡಿತ್ತು. ಈ ಸಂದರ್ಭದಲ್ಲಿ ಮತ್ತೆ ನಾಡದೋಣಿ ಮೂಲಕ ಸಂಪರ್ಕ ವ್ಯವಸ್ಥೆ ಮಾಡಲಾಗಿತ್ತು. ತೂಗುಸೇತುವೆ ನಿರ್ಮಾಣವಾಗದೆ ಈ ಬಾರಿಯೂ ನೇತ್ರಾವತಿ ನದಿ ದಂಡೆಯ ಈ ಎರಡೂ ಗ್ರಾಮಗಳ ಜನತೆಗೆ ದೋಣಿ ಸಂಪರ್ಕವೇ ಅನಿವಾರ್ಯವಾಗಲಿದೆ.
ತೂಗು ಸೇತುವೆ ಅನಿವಾರ್ಯ:
ಬಂದಾರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುಗೇರಡ್ಕದಲ್ಲಿರುವ ಈ ತೂಗುಸೇತುವೆ ಕುಸಿತಗೊಂಡ ಕಾರಣದಿಂದ ಪುತ್ತೂರು ತಾಲೂಕು ಮತ್ತು ಬೆಳ್ತಂಗಡಿ ತಾಲೂಕಿನ ಎರಡು ಗ್ರಾಮಗಳ ಸಂಪರ್ಕಕ್ಕೆ ತೊಂದರೆಯಾಗಿದೆ. ಕಳೆದ ಒಂದು ವರ್ಷದಿಂದ ಇಲ್ಲಿನ ಜನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಬಂದಾರು ಭಾಗದಿಂದ ನೆಲ್ಯಾಡಿ ಮತ್ತು ಉಪ್ಪಿನಂಗಡಿಯ ಪ್ರೌಢಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗಿದೆ. ಹಾಗಾಗಿ ತೂಗುಸೇತುವೆ ಈ ಭಾಗಕ್ಕೆ ಅನಿವಾರ್ಯವಾಗಿದೆ. ಪುತ್ತೂರು ಶಾಸಕರ ಮುಖಾಂತರ ಪ್ರಯತ್ನ ನಡೆಸಲಾಗುತ್ತಿದೆ. ಸರಕಾರ ತಕ್ಷಣ ಅನುದಾನ ನೀಡಿ ಜನತೆಯ ಸಮಸ್ಯೆ ಪರಿಹಾರ ಒದಗಿಸಬೇಕು ಎಂದು ಬಂದಾರು ಗ್ರಾಮಪಂಚಾಉಯತ್ ಸದಸ್ಯ ಆನಂದ ಗೌಡ ಆಗ್ರಹಿಸಿದ್ದಾರೆ.
ಮುಂದಿನ ವರ್ಷ ತೂಗುಸೇತುವೆ ನಿರ್ಮಾಣ
ಪುತ್ತೂರು ತಾಲೂಕು ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಪ್ರಯೋಜನಕಾರಿಯಾಗಿದ್ದ ವಳಾಲು-ಮುಗೇರಡ್ಕ ತೂಗುಸೇತುವೆ ನೆರೆ ನೀರಿಗೆ ಕಳೆದ ವರ್ಷ ಕೊಚ್ಚಿ ಹೋಗಿದೆ. ಈ ತೂಗು ಸೇತುವೆ ಪುನರ್ ನಿರ್ಮಾಣಕ್ಕೆ ಈಗಾಗಲೇ ಪ್ರಯತ್ನ ಆರಂಭಿಸಲಾಗಿದೆ. ಕಂದಾಯ ಇಲಾಖೆಯ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಮಲೆನಾಡು ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರ್ಷ ತೂಗು ಸೇತುವೆ ನಿರ್ಮಾಣ ಮಾಡಲು ಕೊರೊನಾ ಸಮಸ್ಯೆ ಉಂಟಾದ ಕಾರಣ ಮುಂದಿನ ಆರ್ಥಿಕ ವರ್ಷದಲ್ಲಿ ತೂಗುಸೇತುವೆ ನಿರ್ಮಾಣ ಮಾಡಲಾಗುವುದು – ಸಂಜೀವ ಮಠಂದೂರು ಶಾಸಕರು ಪುತ್ತೂರು