ನಗರದ ಬಹುತೇಕ ಕಡೆಗಳಲ್ಲಿ ಕೋವಿಡ್-19 ನಿಯಮ ಉಲ್ಲಂಘನೆ | ಲೋಕಾಯುಕ್ತರಿಂದ ಪರಿಶೀಲನೆ ವೇಳೆ ಬೆಳಕಿಗೆ-ನಿಯಮಗಳ ಪಾಲನೆಗೆ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಜಾಗೃತಿಗಾಗಿ ಲೋಕಾಯುಕ್ತ ಅಧಿಕಾರಿಗಳ ತಂಡ ಜೂ.8ರಂದು ಪುತ್ತೂರಿಗೆ ಆಗಮಿಸಿ ಸರಕಾರಿ ಕಚೇರಿಗಳು, ಅಂಗಡಿ ಮಳಿಗೆಗಳು, ಪ್ರಮುಖ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಗಳು ಕ್ರಮಬದ್ದವಾಗಿ ಪಾಲಿನೆಯಾಗುತ್ತಿವೆಯಾ ಎಂದು ಪರಿಶೀಲನೆ ನಡೆಸಿದರು. ಬಹುತೇಕ ಸರಕಾರಿ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸರಕಾರದ ನಿಯಮ ಉಲ್ಲಂಘನೆಯಾಗುತ್ತಿರುವುದು ಕಂಡುಬಂದಿರುವುದಾಗಿ ಲೋಕಾಯುಕ್ತ ಡಿವೈಎಸ್‌ಪಿ ವಿಜಯಪ್ರಸಾದ್ ಮಾಹಿತಿ ನೀಡಿದ್ದಾರೆ.


ಲೋಕಾಯುಕ್ತ ಇಲಾಖೆ ಬೆಂಗಳೂರು ಇದರ ಎಡಿಜಿಪಿಯವರ ನಿರ್ದೇಶನದಂತೆ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಪ್ರಸಾದ್ ಹಾಗೂ ಸಿಬಂದಿ ವೇಣುಗೋಪಾಲ್ ನಗರದ ಪ್ರಮುಖ ಸರಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಕಾರಿ ಕಚೇರಿಗಳಾದ ಮಿನಿ ವಿಧಾನ ಸೌಧ, ನಗರ ಸಭೆ, ತಾಲೂಕು ಪಂಚಾಯತ್ ಕಚೇರಿ, ವಲಯಾರಣ್ಯಾಧಿಕಾರಿ ಕಚೇರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ, ಬನ್ನೂರು ಆರ್‌ಟಿಓ, ಮೆಸ್ಕಾಂ, ಕೃಷಿ ಇಲಾಖೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಅತೀ ಹೆಚ್ಚು ಜನ ಸಂದಣಿಯಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಬಹುತೇಕ ಕಡೆಗಳಲ್ಲಿ ನಿಯಮಗಳ ಉಲ್ಲಂಘನೆ: ಸರಕಾರಿ ಕಚೇರಿ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಹಾಗೂ ಕಚೇರಿಗೆ ಬರುವ ಸಾರ್ವಜನಿಕರ ನೋಂದಾವಣೆ ಕಡ್ಡಾಯವಾಗಿದ್ದರೂ ಬಹುತೇಕ ಕಡೆಗಳಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಬಹುತೇಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಮಾತ್ರವೇ ಕಂಡುಬಂದಿದೆ. ಇನ್ನು ಕೆಲವು ಕಡೆಗಳಲ್ಲಿ ಮಾತ್ರ ಥರ್ಮಲ್ ಸ್ಕ್ರೀನಿಂಗ್ ಕಂಡು ಬಂದರೆ ಬಹುತೇಕ ಕಚೇರಿಗಳಲ್ಲಿ ಸಾರ್ವಜನಿಕರ ನೋಂದಾವಣೆ ಮಾಡುವ ನಿಯಮವನ್ನು ಗಾಳಿಗೆ ತೂರಿರುವುದು ಕಂಡುಬಂದಿದೆ. ಸೆಲೂನ್‌ಗಳಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಸಿರುವುದು ಕಂಡುಬಂದಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಲೋಕಾಯುಕ್ತ ಡಿವೈಎಸ್ಪಿ ಸೂಚಿಸಿದರು. ಸಾರ್ವಜನಿಕರು ಮಾಸ್ಕ್ ಹಾಕದೇ ಸಂಚರಿಸುವುದು, ಅಂಗಡಿ ಮಳಿಗೆಗಳಲ್ಲಿ ಮ್ಹಾಲಕರು ಹಾಗೂ ಸಿಬಂದಿಗಳು ಮಾಸ್ಕ್ ಧರಿಸದೇ ಕರ್ತವ್ಯದಲ್ಲಿ ನಿರತರಾಗಿರುವುದು, ಮೆಡಿಕಲ್ ಶಾಪ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಮೀರಿರುವುದು, 10 ವರ್ಷದ ಕೆಳಗಿನ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು, ಧೂಮಪಾನ ಹಾಗೂ ೬೦ವರ್ಷ ಮೇಲ್ಪಟ್ಟವರು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿರುವುದು ಗಮನಕ್ಕೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರಸಭಾ ಅಧಿಕಾರಿಗಳೊಂದಿಗೆ ಪರಿಶೀಲನೆ: ಸರಕಾರಿ ಕಚೇರಿ ಹಾಗೂ ಸಾರ್ವಜನಕ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಲೋಕಾಯುಕ್ತ ಅಧಿಕಾರಿಗಳು ನಗರ ಸಭಾ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್ ಹಾಗೂ ರಾಮಚಂದ್ರರವರೊಂದಿಗೆ ಮುರ ಜಂಕ್ಷನ್‌ನಿಂದ ದರ್ಬೆ ತನಕ ಇರುವಂತಹ ತರಕಾರಿ ಅಂಗಡಿ, ಹೊಟೇಲ್, ದಿನಸಿ ಅಂಗಡಿ, ಬ್ಯಾಂಕ್, ಬಟ್ಟೆ ಅಂಗಡಿ, ಎಲೆಕ್ಟ್ರೋನಿಕ್ ಮಳಿಗೆ, ನಗರದ ಬೃಹತ್ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ನಿಯಮ ಉಲ್ಲಂಸಿರುವುದು ಕಂಡು ಬಂದಿದ್ದು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಡಿಎಸ್ಪಿ ಸೂಚಿಸಿದರು. ಕೆಲವು ಮಳಿಗೆಗಳಲ್ಲಿ ಎಸಿ ಹಾಕಿರುವುದು ಕಂಡು ಬಂದಿದ್ದು ಎಸಿ ಬಳಕೆ ಮಾಡದಂತೆ ಸೂಚನೆ ನೀಡಿ ಬಳಕೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ನಗರಸಭಾ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಅಧಿಕಾರಿಗಳಿಗೆ ಅಲ್ಲಿ ರಟ್, ಪೇಪರ್ ಮೊದಲಾದ ತ್ಯಾಜ್ಯಗಳ ರಾಶಿ ಕಂಡು ಬಂದಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂಬ ನಿಯಮಗಳನ್ನು ಗಾಳಿಗೆ ತೂರಿರುವುದು ಗಮನಕ್ಕೆ ಬಂದಿದೆ. ಸ್ವಚ್ಚತೆ ಕಾಪಾಡುವಂತೆ ಸೂಚಿಸಿರುವುದಲ್ಲದೆ ನಿಯಮ ಮೀರಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ನಗರ ಸಭಾ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಕ್ವಾರಂಟೈನ್ ಕೇಂದ್ರ ಭೇಟಿ: ಪುತ್ತೂರಿನಲ್ಲಿರುವ ಕ್ವಾರಂಟೈನ್ ಕೇಂದ್ರಗಳಾದ ಬೈಪಾಸ್ ರಸ್ತೆಯಲ್ಲಿರುವ ಆಸ್ಮೀ ಕಂಫರ್ಟ್ಸ್ ಹಾಗೂ ಪರ್ಪುಂಜದ ವಿರಾಮದ ಮನೆ, ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೂ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿಯುತ ಶಾಲಾ ಕ್ವಾರಂಟೈನ್ ಕೇಂದ್ರದಲ್ಲಿ ಸಿಬಂದಿಗಳಿಗೆ ಸೂಕ್ತ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ಅಲ್ಲಿನ ಸಿಬಂದಿಗಳು ಲೋಕಾಯುಕ್ತ ಅಧಿಕಾರಿಗಳಲ್ಲಿ ತಿಳಿಸಿದರು. ಸಿಬಂದಿಗಳಿಗೆ ಪಿಪಿಇ ಕಿಟ್, ಸ್ಯಾನಿಟೈಸರ್‌ನ್ನು ಆರೋಗ್ಯ ಇಲಾಖೆಯು ಸರಬರಾಜು ಮಾಡದಿರುವುದು ಕಂಡುಬಂದಿದ್ದು ಕ್ವಾರಂಟೈನ್ ಕೇಂದ್ರದ ಸಿಬಂದಿಗಳಿಗೆ ಕರ್ತವ್ಯ ನಿರ್ವಹಣೆಗೆ ಆವಶ್ಯಕವಾದ ಸೌಲಭ್ಯಗಳನ್ನು ಒದಗಿಸುವಂತೆ ಆರೋಗ್ಯ ಇಲಾಖೆಗೆ ಲೋಕಾಯುಕ್ತ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.

 

ಕೊರೋನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುವ ಮಾರ್ಗದರ್ಶ, ಸೂಚನೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಉಲ್ಬಣವಾದರೆ ತಡೆಯುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಯಾರೂ ಅನಗತ್ಯವಾಗಿ ತಿರುಗಾಡಬಾರದು. ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಬೇಕು. ಸರಕಾರ ನೀಡುವ ಮುನ್ನೆಚ್ಚರಿಕಾ ಕ್ರಮಗಳಿಗೆ ಬದ್ದರಾಗಿರಬೇಕು. -ವಿಜಯ ಪ್ರಸಾದ್, ಲೋಕಾಯುಕ್ತ ಡಿವೈಎಸ್‌ಪಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.