HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಜೂ.15: ಬೆಟ್ಟಂಪಾಡಿ ಗ್ರಾ.ಪಂನಿಂದ ಏಕಕಾಲದಲ್ಲಿ ವಾರ್ಡ್‌ವಾರು ಡೆಂಗ್ಯೂ ಜಾಗೃತಿ | ಬೆಟ್ಟಂಪಾಡಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಧಾರ 

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಗ್ರಾಮದಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಏರಿಕೆಯತ್ತಲೇ ಹೋಗುತ್ತಿದ್ದು ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಸ್ವಯಂ ಜಾಗೃತಿ ಆವಶ್ಯಕ ಎಂಬುದನ್ನು ಮನಗಂಡಿರುವ ಪಂಚಾಯತ್ ಆಡಳಿತ ಮಂಡಳಿ ಜೂ.15ರಂದು ಪಂಚಾಯತ್‌ನ 5 ವಾರ್ಡ್‌ಗಳಲ್ಲಿ ಏಕಕಾಲದಲ್ಲಿ ಮನೆ ಮನೆ ಭೇಟಿ ಮಾಡಿ ಜನರಲ್ಲಿ ಡೆಂಗ್ಯೂ ಜ್ವರ ಹರಡದಂತೆ ತಡೆಯಲು ಮುಂಜಾಗ್ರತೆಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗುವುದು ಎಂದು ಬೆಟ್ಟಂಪಾಡಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದಿಂದ ತೀರ್ಮಾನಿಸಿದರು.

ಸಭೆಯು ಜೂ.10ರಂದು ಅಧ್ಯಕ್ಷೆ ಬೇಬಿ ಜಯರಾಮ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪಿಡಿಓ ಶಾಂತರಾಮ್ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಜನರ ಆರೋಗ್ಯ ರಕ್ಷಣೆ ಪ್ರಥಮ ಪ್ರಾಶಸ್ತ್ಯ. ಆ ಬಳಿಕ ಅಭಿವೃದ್ಧಿ ಕಾರ್ಯ. ಈಗಾಗಲೇ ಹಲವು ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಪರಿಸ್ಥಿತಿ ಕೈ ಮೀರಿದರೆ ಪಂಚಾಯತ್‌ಗೆ ಕೆಟ್ಟ ಹೆಸರು ಬರಲಿದೆ. ಹೀಗಾಗಿ ಪಂಚಾಯತ್ ಮುಖಾಂತರ ಇದರ ನಿಯಂತ್ರಣ ಅನಿವಾರ್ಯ ಅಗಬೇಕಿದೆ ಎಂದು ತಿಳಿಸಿ ಸಭೆಯಲ್ಲಿ ಅಭಿಪ್ರಾಯ ಕೇಳಿದರು.

ತಮಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರೂ ಜನರು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಿರುವುದೇ ಪ್ರಕರಣಗಳು ಏರಿಕೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ಲಭ್ಯವಾಗಿರುವುದಾಗಿ ತಾ.ಪಂ ಸದಸ್ಯೆ ಮೀನಾಕ್ಷಿ ಮಂಜುನಾಥ ಹಾಗೂ ಪಿಡಿಓ ಶಾಂತರಾಮ್ ಹೇಳಿದರು. ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಸ್ವಯಂ ಜಾಗೃತಿಯೇ ಬಹುಮುಖ್ಯವಾಗಿದೆ. ಹೀಗಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಗ್ರಾಮದ ಪ್ರತಿ ಮನೆಯ ಮಹಿಳೆಯೊಬ್ಬರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಪಿನ ಸದಸ್ಯರಾಗಿರುತ್ತಾರೆ. ಪ್ರತಿವಾರ ಗುಂಪಿನ ಸಭೆಗಳು ನಡೆಯುತ್ತಿದ್ದು ಈ ಸಭೆಯಲ್ಲಿ ಮುಂಜಾಗ್ರತೆಯ ಕುರಿತು ಅರಿವು ಮೂಡಿಸುವುದು ಉತ್ತಮ. ಯೋಜನೆಯ ಸೇವಾ ಪ್ರತಿನಿಧಿಗಳು ಪ್ರತಿ ಗುಂಪುಗಳ ಸಭೆಗಳಲ್ಲಿ ಭಾಗವಹಿಸುತ್ತಿದ್ದು ಅವರ ಮುಖಾಂತರ ಜಾಗೃತಿ ಮೂಡಿಸಬಹುದು ಎಂದು ತಾ.ಪಂ ಸದಸ್ಯ ಮೀನಾಕ್ಷಿ ಮಂಜುನಾಥ ಸಲಹೆ ನೀಡಿದರು.

ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು ಪಂಚಾಯತ್ ಮುಖಾಂತರ 5 ವಾರ್ಡ್‌ಗಳಲ್ಲಿ ಏಕಕಾಲದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿಕೊಳ್ಳುವುದು ಉತ್ತಮ. ಆಯಾ ವಾರ್ಡ್‌ಗಳ ಸದಸ್ಯರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳಿಯ ಸಂಘ ಸಂಸ್ಥೆಗಳನ್ನು ಬಳಸಿಕೊಳ್ಳುವುದು ಉತ್ತಮ ಎಂದರು ತಿಳಿಸಿದರು. ಮನೆ ಮನೆ ಭೇಟಿಯ ಸಂದರ್ಭದಲ್ಲಿ ಮನೆ ಪರಿಸರ ಶುಚಿಯಾಗಿಟ್ಟುಕೊಳ್ಳದಿದ್ದಲ್ಲಿ ಅಂತಹ ಸ್ಥಳಗಳ ಭಾವಚಿತ್ರವನ್ನು ತೆಗೆಯಲಾಗುವುದು ಎಂದು ಪಿಡಿಓ ತಿಳಿಸಿದರು. ಜೂ.13ರಂದು ಏಕಕಾಲದಲ್ಲಿ ಪಂಚಾಯತ್‌ನ ಇರ್ದೆ ಹಾಗೂ ಬೆಟ್ಟಂಪಾಡಿ ಗ್ರಾಮಗಳಿಗೆ ಸಂಬಂಧಿಸಿದ 5 ವಾರ್ಡ್‌ಗಳಲ್ಲಿ ಏಕ ಕಾಲದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸದಸ್ಯರು ಅಭಿಪ್ರಾಯ ತಿಳಿಸಿದ್ದು ಅದರಂತೆ ನಿರ್ಣಯಕೈಗೊಳ್ಳಲಾಗಿದೆ. 

ಗಡಿಯಲ್ಲಿ ಜಂಪ್:
ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊರ ರಾಜ್ಯದಿಂದ ಆಗಮಿಸಿದವರ ಮಾಹಿತಿಯನ್ನು ನೀಡುವಂತೆ ಪಿಡಿಓ ಶಾಂತರಾಮ್ ಸಭೆಯಲ್ಲಿ ತಿಳಿಸಿದರು. ಹೊರ ರಾಜ್ಯದಿಂದ ಆಗಮಿಸಿ ಪಂಚಾಯತ್ ವ್ಯಾಪ್ತಿಯಲ್ಲಿದ್ದರೆ ಅಂತವರ ಭಾವಚಿತ್ರ ತೆಗೆದು ಆಪ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗಿದೆ. ಮುಂದಿನ ಮೇಲೆ ಮುಂದೆ ಇಲಾಖೆಯೇ ನಿಗಾ ಇಡಲಿದೆ. ಈ ನಿಟ್ಟಿನಲ್ಲಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಹೊರರಾಜ್ಯದವರು ಬಂದಿರುವುದು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು. ಈಗಾಗಲೇ ಎರಡು ಮಂದಿ ಬಂದಿದ್ದು ತಿರುಗಾಡುತ್ತಿದ್ದಾರೆ. ರಾಜ್ಯದ ಗಡಿಯಲ್ಲಿ ಜಂಪ್ ಮಾಡಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಇಲ್ಲಿ ಒಂದು ಬೈಕ್‌ನಲ್ಲಿ ತಿರುಗಾಡಿದರೆ ಅಲ್ಲಿ ಇನ್ನೊಂದು ಬೈಕ್‌ನಲ್ಲಿ ತಿರುಗಾಡುತ್ತಿರುವುದಾಗಿ ಸಭೆಯಲ್ಲಿ ಆರೋಪ ಕೇಳಿಬಂದಿದೆ.

೪೮.೦೯ಲಕ್ಷ ೧೫ನೇ ಹಣಕಾಸು ಮಂಜೂರು:
ಪಂಚಾಯತ್‌ಗೆ ಕೇಂದ್ರ ಸರಕಾರದಿಂದ ಈ ಸಾಲಿನಲ್ಲಿ ರೂ.೪೮,೦೯,೮೨೬ ಅನುದಾನ ೧೫ನೇ ಹಣಕಾಸು ಯೋಜನೆಯಲ್ಲಿ ಮಂಜೂರುಗೊಂಡಿದೆ. ಈ ಪೈಕಿ ಶೇ.೨೫ ಪರಿಶಿಷ್ಟ/ಪಂಗಡದ ಅಭಿವೃದ್ಧಿ ಮತ್ತು ಶೇ.೫ ವಿಶೇಷ ಅಗತ್ಯವುಳ್ಳವರ ಅಭಿವೃದ್ಧಿಗೆ ಮೀಸಲಿಡಬೇಕಾಗಿದೆ. ಅನುದಾನವನ್ನು ಶೇ.೫೦ ನಿರ್ಬಂಧಿತ ಹಾಗೂ ಶೇ.೫೦ ಅನಿರ್ಬಂದಿತ ಅನುದಾನವಾಗಿ ವಿಂಗಡಿಸಿ ನಿರ್ಬಂಧಿತ ಅನುದಾನದಲ್ಲಿ ಶೇ.೫೦ ನೀರು ಸರಬರಾಜು ಹಾಗೂ ಶೇ.೫೦ಗ್ರಾಮ ನೈಮರ್ಲ್ಯಕ್ಕೆ ಮೀಸಲಿಡಲಾಗಿದೆ. ಅನಿರ್ಬಂಧಿತ ಅನುದಾನದಲ್ಲಿ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ೫ ವಾರ್ಡ್‌ಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಪಿಡಿಓ ಮಾಹಿತಿ ನೀಡಿದರು.

ಸದಸ್ಯರ ಆಸ್ಥಿ ಘೋಷಣೆ ಕಡ್ಡಾಯ:
ಪಂಚಾಯತ್ ಸದಸ್ಯರು ಪ್ರತಿ ವರ್ಷ ತಮ್ಮ ಆಸ್ಥಿ ವಿವರಣೆಯನ್ನು ಘೋಷಿಸಬೇಕಿದೆ. ಇದು ಕಡ್ಡಾಯ ನಿಯಮವಾಗಿದೆ. ಆಸ್ಥಿ ವಿವರಗಳನ್ನು ಘೋಷಿಸದಿದ್ದಲ್ಲಿ ಅದು ಅಪರಾಧ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ತಮ್ಮ ಆಸ್ಥಿ ವಿವರವನ್ನು ಘೋಷಣೆ ಮಾಡುವಂತೆ ಪಿಡಿಓ ತಿಳಿಸಿದರು.

ಶೌಚಾಲಯವಿದ್ದರೆ ಮಾತ್ರ ಡೋರ್ ನಂಬರ್:
ಸರಕಾರ ನಿಯಮದಂತೆ ಗ್ರಾಮದ ಶುಚಿತ್ವಕ್ಕಾಗಿ ಪ್ರತಿ ಮನೆಯಲ್ಲಿಯೂ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಶೌಚಾಲಯ ನಿರ್ಮಿಸಿದವರಿಗೆ ಮಾತ್ರ ಪಂಚಾಯತ್‌ನಿಂದ ಮನೆ ನಂಬರ್ ನೀಡಲಾಗುವುದು. ಶೌಚಾಲಯ ನಿರ್ಮಿಸದವರಿಗೆ ಮನೆ ನಂಬರ್ ನೀಡಲಾಗುವುದಿಲ್ಲ. ಮನೆ ನಂಬರ್ ಅರ್ಜಿಯ ಜೊತೆಗೆ ಶೌಚಾಲಯ ನಿರ್ಮಿಸಿರುವ ಭಾವಚಿತ್ರವನ್ನು ಲಗತ್ತಿಸುವುದು ಕಡ್ಡಾಯ ಎಂದು ಪಿಡಿಓ ತಿಳಿಸಿದರು.

ಉದ್ಯೋಗ ಖಾತರಿಯಲ್ಲಿ ೩೨೫೦ ಮ್ಯಾನ್‌ಡೇಸ್:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮುಖಾಂತರ ೧೩ ಕಾಮಗಾರಿಗಳು ಈಗಾಗಲೇ ಚಾಲ್ತಿಯಲ್ಲಿದೆ. ೧೧ ಕಾಮಗಾರಿಗಳನ್ನ ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ. ಜೂನ್ ತಿಂಗಳಲ್ಲಿ ೨೪೯೯ ಮಾನವ ದಿನಗಳ ಗುರಿಯಿದ್ದು ಇದರಲ್ಲಿ ೭೩೩ ಮಾನವ ದಿನದ ಕೆಲಸಗಳು ಪೂರ್ಣಗೊಂಡಿದೆ. ಒಟ್ಟು ೩೨೫೦ ಮಾನವ ದಿನ ಗುರುತಿಸಲಾಗಿದೆ ಎಂದು ಪಿಡಿಓ ಮಾಹಿತಿ ನೀಡಿದರು.

ಯಾವಾಗ ಮುಗಿಯುವುದು:
೨೦೧೮-೧೯ ಮತ್ತು ೨೦೧೯-೨೦ನೇ ಸಾಲಿನ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಜೊತೆಗೆ ೧೫ನೇ ಹಣಕಾಸು ಯೋಜನೆ ಅನುದಾನ ಬಂದಿದ್ದ ಅದಕ್ಕೆ ಸಂಬಂಧಿಸಿದ ಕಾಮಗಾರಿಗಳು ನಡೆಯಬೇಕಿದೆ. ಹೀಗಾಗಿ ಈ ಎಲ್ಲಾ ಕಾಮಗಾರಿಗಳು ಯಾವಾಗ ಪೂರ್ಣಗೊಳ್ಳುವುದು. ಕಾಮಗಾರಿಗಳನ್ನು ಗುತ್ತಿಗೆದಾರರು ಅರ್ಧ ಮುಗಿಸಿ ಹೋಗುತ್ತಾರೆ. ಅಲ್ಲಿ ಗ್ರಾಮಸ್ಥರು ನಮ್ಮಲ್ಲಿ ಪ್ರಶ್ನಿಸುತ್ತಾರೆ ಎಂದು ಆರೋಪಿಸಿದ ಸದಸ್ಯರು ಕಾಮಗಾರಿ ಪೂರ್ಣ ಗೊಂಡ ಬಳಿಕವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸುವಂತೆ ಸದಸ್ಯರು ಸಲಹೆ ನೀಡಿದರು. ಬೀದಿ ದೀಪದ ಸ್ಚಿಚ್ ಬದಲಾಯಿಸುವುದು, ೧೪ನೇ ಹಣಕಾಸು ಯೋಜನೆ ಹಾಗೂ ೨೦೧೮-೧೯ನೇ ಸಾಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅದಕ್ಕೆ ಸಂಬಂಧಿಸಿದ ಬಿಲ್ ಪಾವತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜೂ.೨೯ ವಿಶೇಷ ಸಭೆ:
ಪಂಚಾಯತ್‌ನ ಈ ಸಾಲಿನ ಆಡಳಿತ ಮಂಡಳಿಯ ಅವಧಿಯು ಜೂ.೩೦ಕ್ಕೆ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜೂ.೨೯ರಂದು ವಿಶೇಷ ಸಭೆಯನ್ನು ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶ್ರದ್ಧಾಂಜಲಿ:
ಕಳೆದು ಹತ್ತು ವರ್ಷಗಳಿಂದ ಪಂಚಾಯತ್‌ನ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಗುಣಮಟ್ಟದಲ್ಲಿ ಕಾಮಗಾರಿಗಳನ್ನು ನಿರ್ವಹಿಸಿ ಮನರ ಮೆಚ್ಚುಗೆಗೆ ಪಾತ್ರರಾಗಿದ್ದು, ಅಕಾಲಿಕವಾಗಿ ಅಗಲಿದ ಗುತ್ತಿಗೆದಾರ ಜನಾರ್ದನ ರೈಯವರಿಗೆ ಸಭೆಯ ಪ್ರಾರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜೂ.೧೩ ಶಿಲಾನ್ಯಾಸ:
ಪಂಚಾಯತ್ ಕಚೇರಿ ಕಟ್ಟಡದ ಸಮೀಪದಲ್ಲಿ ಗ್ರಾಮಕರಣಿಕರ ನೂತನ ಕಟ್ಟಡ ನಿರ್ಮಾಣವಾಗಲಿದ್ದು ಇದರ ಶಿಲಾನ್ಯಾಸವು ಜೂ.೧೩ರಂದು ಬೆಳಿಗ್ಗೆ ೧೧ಗಂಟೆಗೆ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿರುವುದಾಗಿ ಅಧ್ಯಕ್ಷ ಬೇಬಿ ಜಯರಾಮ ಪೂಜಾರಿ ತಿಳಿಸಿದರು.

ಉಪಾಧ್ಯಕ್ಷೆ ಭವಾನಿ ಕಜೆ, ಸದಸ್ಯರಾದ ಮೊದು ಕುಂಞಿ, ಭವಾನಿ ಪಂಜೊಟ್ಟು, ಪುಷ್ಪಲತಾ, ಪಾರ್ವತಿ, ಪದ್ಮಾವತಿ, ದಿನೇಶ್ ಕಲ್ಪಣೆ, ಜಗನ್ನಾಥ ರೈ ಕೊಮ್ಮಂಡ, ವಿನೋದ್ ಕುಮಾರ್ ರೈ ಗುತ್ತು, ಪ್ರಕಾಶ್ ರೈ ಬೈಲಾಡಿ, ರಮೇಶ್ ಶೆಟ್ಟಿ ಕೊಮ್ಮಂಡ, ರಕ್ಷಣ್ ರೈ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಶಾಂತರಾಮ್ ಸುತ್ತೋಲೆ ಹಾಗೂ ಅರ್ಜಿಯನ್ನು ಓದಿದರು. ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿ, ವಂದಿಸಿದರು. ಸಿಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.