Breaking News

ಐದನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ರದ್ದು | 6-10ನೇ ತರಗತಿಗೆ ಆನ್‌ಲೈನ್ ಶಿಕ್ಷಣದ ಸಾಧಕ ಬಾಧಕಗಳ ಚರ್ಚಿಸಿ, ಮಾರ್ಗಸೂಚಿ ರೂಪಿಸಲು ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಗಳಲ್ಲೂ ಎಲ್‌ಕೆಜಿಯಿಂದ ಐದನೇ ತರಗತಿಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ಬೋಧನೆ ಮಾಡುತ್ತಿದ್ದರೆ, ಅದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜೂ.10ರಂದು ಹಿರಿಯ ಶಿಕ್ಷಣ ತಜ್ಞರು, ಮಾನಸಿಕ ಆರೋಗ್ಯ ವಿಭಾಗದ ಪರಿಣಿತರು, ಖಾಸಗಿ ವಿದ್ಯಾಸಂಸ್ಥೆಗಳ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಶೈಕ್ಷಣಿಕ ಹಾಗೂ ಮಕ್ಕಳ ಸುಧಾರಣೆ ವಿಷಯದ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸುದೀರ್ಘ ಸಮಾಲೋಚನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಾಥಮಿಕ ಹಂತದಲ್ಲಿ ರಾಜ್ಯದ ಯಾವುದೇ ಶಾಲೆಯಲ್ಲೇ ಆಗಲಿ ಆನ್‌ಲೈನ್ ಬೋಧನೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಹಾಗೆಯೇ ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುವುದು ಕಂಡು ಬಂದರೆ ಅಂತಹ ಶಾಲೆಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ತಜ್ಞರ ಸಮಿತಿ ರಚನೆ: ಆರನೇ ತರಗತಿಯಿಂದ 10ರವರೆಗಿನ ಉನ್ನತ ತರಗತಿಗಳಲ್ಲಿ ಆನ್‌ಲೈನ್ ಶಿಕ್ಷಣದ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಮತ್ತು ಆ ಕುರಿತಂತೆ ಮಾರ್ಗಸೂಚಿಗಳನ್ನು ರೂಪಿಸಲು ಹಿರಿಯ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ. ಅಂತೆಯೇ ಎಲ್‌ಕೆಜಿ ಯಿಂದ ಐದನೇ ತರಗತಿವರೆಗೆ ಆನ್‌ಲೈನ್ ಹೊರತುಪಡಿಸಿ ತಂತ್ರಜ್ಞಾನಾಧಾರಿತವಾದ ಬೋಧನೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಸಹ ಈ ಸಮಿತಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದ್ದು, ಸಮಿತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಪ್ರೊ.ಎಂ.ಕೆ. ಶ್ರೀಧರ್, ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಗುರುರಾಜ ಕರ್ಜಗಿ, ಡಾ.ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಪ್ರತಿನಿಧಿಗಳಾದ ಹೃಷಿಕೇಶ್, ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು, ಅರ್ಲಿ ಚೈಲ್ಡ್ ಹುಡ್ ಸಂಘಟನೆಯ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇರುತ್ತಾರೆ ಎಂದು ಸಚಿವರು ತಿಳಿಸಿದರು. ಈ ಸಮಿತಿ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಿಕೊಳ್ಳಬೇಕು, ತರಗತಿ ಇಲ್ಲದಿರುವಾಗ ಮಕ್ಕಳ ಶಿಕ್ಷಣ ನಿರಂತರತೆಗೆ ಮಾತ್ರ ಇದನ್ನು ಎಷ್ಟು ಬಳಕೆ ಮಾಡಬೇಕು, ರಜಾ ಅವಧಿಯಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಹೇಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಮತ್ತು ಕೋವಿಡ್‌ನಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ತರಗತಿಗಳಿಗೆ ಪರ್ಯಾಯವೆನ್ನುವ ಭಾವನೆಯನ್ನು ಮೂಡಿಸದೇ ಅವರ ಕಲಿಕೆಗೆ ಪ್ರೇರೇಪಣೆಯಾಗುವಂತೆ ಮಾತ್ರವೇ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು, ವಿಶೇಷವಾಗಿ ನಮ್ಮ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿ/ ಪೋಷಕರ ಸಾಮಾಜಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ವಿದ್ಯಾರ್ಥಿ ಕಲಿಕೆಯಿಂದ ವಂಚಿತವಾಗದೇ ಮುಖ್ಯವಾಹಿನಿಯಲ್ಲಿ ಒಳಗೊಳ್ಳುವುದು ಸೇರಿದಂತೆ ಈ ಪರ್ಯಾಯ ಬೋಧನಾ ಕ್ರಮದ ಸಾಧಕ ಬಾಧಕಗಳೊಂದಿಗೆ ಮಾರ್ಗಸೂಚಿಗಳನ್ನು ರೂಪಿಸಿ ಈ ಸಮಿತಿಯು 10 ದಿನಗಳಲ್ಲಿ ವರದಿ ನೀಡಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಶುಲ್ಕ ಹೆಚ್ಚಳದ ವಿರುದ್ಧ ಕ್ರಮ:
ಈ ಶೈಕ್ಷಣಿಕ ಸಾಲಿಗೆ ಬೋಧನಾ ಶುಲ್ಕ ಹೆಚ್ಚಳ ಮಾಡಬಾರದು ಎಂದು ಈಗಾಗಲೇ ಶಿಕ್ಷಣ ಇಲಾಖೆ ಸ್ಪಷ್ಟವಾದ ಸುತ್ತೋಲೆ ಹೊರಡಿಸಿದ್ದು, ಇದನ್ನು ಉಲ್ಲಂಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲು ಇಲಾಖಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.