- ದಿನವೊಂದಕ್ಕೆ 30 ನಿಮಿಷದ 1 ಪಾಠ
ಉಪ್ಪಿನಂಗಡಿ: ಕೊರೊನಾ ವೈರಸ್ ಮಹಾ ಮಾರಿಯಿಂದಾಗಿ ಅದರ ಮುಂಜಾಗ್ರತಾ ಸಲುವಾಗಿ ಶಾಲಾ-ಕಾಲೇಜು ತೆರೆಯದ ಕಾರಣದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸವೂ ಅತಂತ್ರಮಯವಾಗಿದೆ. ಹಲವೆಡೆ ಆನ್ ಲೈನ್ ಶಿಕ್ಷಣದ ಪ್ರಯೋಗಗಳು ನಡೆಯುತ್ತಿದ್ದು ಪರ ವಿರೋಧ ದ್ವನಿ ಕೇಳಿಸುತ್ತಿದ್ದಂತೆಯೇ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯವು ಪಾಠ ಪ್ರವಚನದ ವಿಡಿಯೋ ಕ್ಲಿಪಿಂಗ್ನ್ನು ವಿದ್ಯಾರ್ಥಿಗಳಿಗೆ ಕಳುಹಿಸುವ ಮೂಲಕ ವಿನೂತನ ಪ್ರಯೋಗ ನಡೆಸುತ್ತಿದೆ.
ದಿನವೊಂದಕ್ಕೆ ಒಂದು ಪಠ್ಯದ ಪಾಠ ಸುಮಾರು ೩೦ ನಿಮಿಷ ಕಾಲದ ಶಾಲಾ ಶಿಕ್ಷಕರೇ ತರಗತಿಯಲ್ಲಿ ಪಾಠ ಮಾಡುವ ದೃಶ್ಯವನ್ನು ವಿಡಿಯೋ ಮೂಲಕ ಸೆರೆ ಹಿಡಿದು ವಿದ್ಯಾರ್ಥಿಗಳಿಗೆ ಕಳುಹಿಸುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಸರಪಳಿಯನ್ನು ಮುರಿಯದಂತೆ ನೋಡಿಕೊಳ್ಳಲಾಗಿದೆ. ತನ್ಮೂಲಕ ವಾರದ ಆರು ದಿನಗಳಲ್ಲಿ ದಿನವೊಂದಕ್ಕೆ ಒಂದು ವಿಷಯದಂತೆ ಆರು ವಿಷಯಗಳ ಕಲಿಕೆಗೆ ಅವಕಾಶ ಒದಗಿಸಲಾಗಿದೆ.
ಕಳುಹಿಸಲಾದ ಪಾಠ ಪ್ರವಚನದ ವಿಡಿಯೋವನ್ನು ವಿದ್ಯಾರ್ಥಿ ತಮಗಿಷ್ಠವೆನಿಸಿದ ಸಮಯದಲ್ಲಿ ತಮಗಿಷ್ಠ ಬಂದಷ್ಟು ಬಾರಿ ವೀಕ್ಷಿಸಿ ಕಲಿಯುವ ಅವಕಾಶ. ತನ್ಮೂಲಕ ಕೊರೊನಾ ಕಾರಣದಿಂದ ಶಾಲೆಗೆ ಹೋಗಲು ಅಸಾಧ್ಯವಾದರೂ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಲ್ಲ ಎಂಬ ಭಾವನೆಯು ವಿದ್ಯಾರ್ಥಿಯ ಮನದಲ್ಲಿ ಮೂಡುವಂತೆ ಮಾಡಲಾಗಿದೆ.
ಪಠ್ಯ ಕ್ರಮದ ವಿಡಿಯೋ ತುಣುಕುಗಳನ್ನು ಪ್ರತಿ ವಿದ್ಯಾರ್ಥಿಯು ತಿಳಿಸಿದ ವಾಟ್ಸಪ್ ಸಂಖ್ಯೆಗೆ ರವಾನಿಸಲಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಯಾವ ರೀತಿ
ಕಲಿಸಲಾಗುತ್ತಿದೆ ಎನ್ನುವುದನ್ನು ಪೋಷಕರಿಗೂ ತಿಳಿಯುವಂತಾಗಿದೆ. ಮಾತ್ರವಲ್ಲ ಮಕ್ಕಳೊಂದಿಗೆ ಪೋಷಕರೂ ಕೂಡಾ ತಮ್ಮ ತಮ್ಮ ಬಿಡುವಿನಲ್ಲಿ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ತಾವೂ ಕೂಡಾ ಕಲಿಯಲು ಮತ್ತು ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸುವ ಅವಕಾಶಗಳನ್ನು ಪಡೆದುಕೊಂಡಂತಾಗಿದೆ.
ಕಲಿಕಾ ಪ್ರಕ್ರಿಯೆ ನಿರಂತರವಾಗಿರಿಸಲು ಕ್ರಮ: ಯು.ಎಸ್.ಎ. ನಾಯಕ್
ಕೊರೊನಾ ಸಮಸ್ಯೆಯಿಂದ ಇಡೀ ಜನ ಜೀವನವೇ ಅಸ್ತವ್ಯಸ್ತವಾಗಿದೆ. ಶಾಲಾರಂಭ ಯಾವಾಗ ಎನ್ನುವುದು ಯಾರಿಗೂ ತಿಳಿಯದಾಗಿದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಸುರಕ್ಷಿತವಾಗಿರುವುದು ಅನಿವಾರ್ಯವಾಗಿದೆ. ಆದರೆ ಯಾವೊಂದು ಕಾರ್ಯ ಚಟುವಟಿಕೆ ಇಲ್ಲದೆ ಮಕ್ಕಳು ಮನೆಯಲ್ಲಿದ್ದರೆ ಮಕ್ಕಳಿಗೂ ಮನೆಯವರಿಗೂ ಸಮಸ್ಯೆಯಾಗುವುದು ಸಹಜ. ಅದಕ್ಕಾಗಿ ವಿದ್ಯಾರ್ಥಿಗಳು ಮನೆಯಲ್ಲಿ ಸುರಕ್ಷಿತವಾಗಿರುವ ಜೊತೆಜೊತೆಗೆ ದಿನದ ಅರ್ಧಗಂಟೆ ಅವರು ಇಚ್ಚಿಸಿದ ಸಮಯದಲ್ಲಿ ಅವರವರ ಮನೆಮಂದಿಯ ಜೊತೆ ಕುಳಿತು ಕಲಿಯುವಂತಾಗಲು ಯೋಜನೆಯೊಂದನ್ನು ರೂಪಿಸಿದೆವು. ಶಾಲಾ ಪ್ರಾಂಶುಪಾಲರ ಮತ್ತು ಶಿಕ್ಷಕ ವರ್ಗದ ಸಹಕಾರ ಪಡೆದು ತರಗತಿಯಲ್ಲಿ ಮಾಡುವ ಪಾಠದ ದೃಶ್ಯವನ್ನು ವಿಡಿಯೋ ಮಾಡಿ ವಿದ್ಯಾರ್ಥಿಗಳಿಗೆ ಕಳುಹಿಸುವ ಪ್ರಕ್ರಿಯೆಯನ್ನು ಜೂನ್ ೧ರಿಂದಲೇ ಪ್ರಾರಂಭಿಸಿದ್ದೇವೆ. ನಮ್ಮ ಯೋಜನೆಯಲ್ಲಿ ವಿದ್ಯಾರ್ಥಿಗಳನ್ನು ನಿರ್ಧಿಷ್ಠ ಸಮಯ ಕಂಪ್ಯೂಟರ್ ಯಾ ಮೊಬೈಲ್ ಮುಂದೆ ಬಂಧಿಸಿಡುವ ಹಾಗೂ ಅವರ ಜೊತೆ ಹೆತ್ತವರನ್ನೂ ಅವರವರ ಕೆಲಸ ಬಿಟ್ಟು ಮಕ್ಕಳ ಜೊತೆಗಿರಿಸುವ ಸಂಕಷ್ಠವಿಲ್ಲ. ಮಕ್ಕಳ ಅಭಿಷ್ಠೆಯ ಸಮಯದಲ್ಲಿ ವಿಡಿಯೋ ನೋಡುತ್ತಾ ಶಾಲೆಯಲ್ಲೇ ಕಲಿಯುವ ಭಾವವನ್ನು ಹೊಂದುವ ಅವಕಾಶ ನೀಡಲಾಗಿದೆ. ಹೆತ್ತವರಿಗೂ ಕೂಡಾ ಕಲಿಕಾ ಪ್ರಕ್ರಿಯೆಯನ್ನು ತಿಳಿಯಲು ಅವಕಾಶ ಲಭಿಸಿದೆ ಎಂದು ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ತಿಳಿಸಿದ್ದಾರೆ.