Breaking News

ಧಾರ್ಮಿಕ, ಸಾಮಾಜಿಕ ಕ್ಷೇತ್ರ, ಕಾಂಗ್ರೆಸ್ ಪಕ್ಷದ ಹಿರಿಯರಾದ ಅಲಿಮಾರ ರಘುನಾಥ ರೈ, ಮಾಣಿಕ್ಯರಾಜ್ ಪಡಿವಾಳ್ ರವರಿಗೆ ಶೃದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

 

  • ಸೌಮ್ಯ ಸ್ವಭಾವದ ಬಡವರ ಪರ ಕಾಳಜಿಯ, ಸಮಾಜಮುಖಿ ವ್ಯಕ್ತಿಗಳು-ಹರೀಶ್ ಕುಮಾರ್
  •  ಜನರ ಸೇವೆ ಮಾಡುತ್ತಾ ಜಾತ್ಯಾತೀತ ಸಿದ್ಧಾಂತವನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಿದವರು-ರಮಾನಾಥ ರೈ
  • ಸೊರಕೆಯವರು ಶಾಸಕರಾಗಿದ್ದ ಕಾಲದಿಂದಲೂ ಜನರ ಕೆಲಸ ಮಾಡುತ್ತಿದ್ದವರು-ಎಂ.ಎಸ್. ಮಹಮ್ಮದ್
  • ಮಾನವ ಪ್ರೀತಿ ಏನು ಅನ್ನುವುದನ್ನು ಇವರಿಂದ ಕಲಿಯಬೇಕು-ಶಾಹುಲ್ ಹಮೀದ್

ಉಪ್ಪಿನಂಗಡಿ: ಕಾಂಗ್ರೆಸ್ ಪಕ್ಷದ ಹಿರಿಯ ಕಾರ್‍ಯಕರ್ತರಾಗಿ, ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಪುತ್ತೂರು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದಿಯಾಗಿ, ಧಾರ್ಮಿಕ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಈಚೆಗೆ ನಿಧನ ಹೊಂದಿರುವ ಅಲಿಮಾರ ರಘುನಾಥ ರೈ ಮತ್ತು ಪುತ್ತೂರು ಎ.ಪಿ.ಎಂ.ಸಿ. ಸದಸ್ಯರಾಗಿ, ಬಜತ್ತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದಿಯಾಗಿ ಧಾರ್ಮಿಕ, ಶಿಕ್ಷಣ, ಕಂಬಳ ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಈಚೆಗೆ ನಿಧನ ಹೊಂದಿರುವ ಮಾಣಿಕ್ಯರಾಜ್ ಪಡಿವಾಳ್‌ರವರಿಗೆ ಶೃದ್ಧಾಂಜಲಿ ಸಭೆ ಜೂ. ೧೪ರಂದು ಬಜತ್ತೂರುನಲ್ಲಿ ಜರಗಿತು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅಲಿಮಾರ ರಘುನಾಥ ರೈಯವರು ಅತ್ಯಂತ ವಿನಯಶೀಲ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿ, ಮಾಣಿಕ್ಯರಾಜ್ ಸೌಮ್ಯವಾಗಿದ್ದರೂ ಕೆಲವೊಂದು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದ, ಪ್ರತಿಭಟಿಸುವ ವ್ಯಕ್ತಿತ್ವದ ಗುರುತಿಸಿಕೊಂಡವರು. ಇಬ್ಬರೂ ಬಡವರ ಬಗ್ಗೆ ಕಳಕಳಿ ಇದ್ದವರು, ಸಮಾಜಮುಖಿ ವ್ಯಕ್ತಿಗಳಾಗಿ ಗುರುತಿಸಿದವರು, ಇವರ ಆದರ್ಶ ವ್ಯಕ್ತಿತ್ವ ಇಂದಿನ ಯುವ ಪೀಳಿಗೆಗೆ ಮಾದರಿ ಆಗಬೇಕು, ಅದನ್ನು ಅನುಸರಿಸುವಂತಾಗಬೇಕು ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ರಘುನಾಥ ರೈ ಮತ್ತು ಮಾಣಿಕ್ಯರಾಜ್ ಇಬ್ಬರೂ ಪಕ್ಷದ ತತ್ವ ಸಿದ್ಧಾಂತವನ್ನು ಮೈಗೂಡಿಕೊಂಡು ಸ್ನೇಹಶೀಲ ಕಾರ್‍ಯಕರ್ತರಾಗಿ ಬೆಳೆದವರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಜನರ ಸಂಬಂಧ ಇಟ್ಟುಕೊಂಡು, ಅವರ ಸೇವೆ ಮಾಡುತ್ತಾ ಜಾತ್ಯಾತೀತ ಸಿದ್ಧಾಂತವನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಿದವರು. ಯುವಕರಿಗೆ ಮಾರ್ಗದರ್ಶನ ಕೊಡುತ್ತಾ, ಜಾತ್ಯಾತೀತ ನಿಲುವಿಗೆ ಪ್ರೇರಣೆ ಕೊಡುತ್ತಿದ್ದರು. ಇವರು ಇಬ್ಬರ ಅಗಲಿಕೆ ಪಕ್ಷಕ್ಕೆ ಅಪಾರ ನಷ್ಟ ಉಂಟು ಮಾಡಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ ರಘನಾಥ ರೈ ಮತ್ತು ಮಾಣಿಕ್ಯರಾಜ್ ಅವರನ್ನು ವಿನಯಕುಮಾರ್ ಸೊರಕೆಯವರು ಶಾಸಕರಾಗಿದ್ದ ಕಾಲದಿಂದಲೂ ಅವರು ಜನರ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ, ಅವರ ಪಕ್ಷನಿಷ್ಠೆ ಮರೆಯಲು ಸಾಧ್ಯವೇ ಇಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆ. ಶಾಹುಲ್ ಹಮೀದ್ ಮಾತನಾಡಿ ಇಬ್ಬರು ಹಿರಿಯ ಚೇತನವನ್ನು ಕಳೆದುಕೊಂಡಿದ್ದು, ಪಕ್ಷಕ್ಕೆ ಆಗಿರುವ ನಷ್ಟವನ್ನು ತುಂಬಿಸಲು ಸಾಧ್ಯವೇ ಇಲ್ಲ, ಮಾನವ ಪ್ರೀತಿ ಏನು ಅನ್ನುವುದನ್ನು ಇವರಿಂದ ಕಲಿಯಬೇಕು, ಇವರ ಆದರ್ಶ ಉಳಿಯಲಿ ಎಂದರು.

ಕೆ.ಪಿ.ಸಿ.ಸಿ. ಸದಸ್ಯ ಡಾ| ರಘು, ಪುತ್ತೂರು ಕೋಟಿ-ಚೆನ್ನಯ್ಯ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಪುತ್ತೂರು ತಾಲ್ಲೂಕು ರಬ್ಬರ್ ಬೆಳೆಗಾರರ, ಮಾರಾಟ ಸಂಘದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ| ರಾಜಾರಾಮ್, ಉಪ್ಪಿನಂಗಡಿ ಸಿ.ಎ. ಬೇಂಕ್ ಮಾಜಿ ನಿರ್ದೇಶಕ ಅಜೀಝ್ ಬಸ್ತಿಕ್ಕಾರ್ ಮಾತನಾಡಿ ಅಗಲಿದವರ ಗುಣಗಾನ ಮಾಡಿದರು.

ಇಳಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೂಸುಫ್ ಹಾಜಿ ಪೆದಮಲೆ. ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಸ್ಕರ್ ಆಲಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಶ್ರೀಮತಿ ಅನಿತಾ ಕೇಶವ ಗೌಡ, ರಾಧಾಕೃಷ್ಣ ನಾಯಕ್, ಬಜತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ನಝೀರ್ ಬೆದ್ರೋಡಿ, ಶ್ರೀಮತಿ ಪ್ರೆಸಿಲ್ಲಾ ಪಿಂಟೋ, ಶ್ರೀಮತಿ ತೇಜಕುಮಾರಿ, ಪಕ್ಷದ ಪದಾಧಿಕಾರಿಗಳಾದ ನಿರಂಜನ ರೈ ಮಠಂತಬೆಟ್ಟು, ನಝೀರ್ ಮಠ, ರಜಾಕ್ ಬಸ್ತಿಕ್ಕಾರ್, ಅಜೀಜ್ ವಳಾಲು, ಫಾರೂಕ್ ಬೆದ್ರೋಡಿ, ವಿಕ್ರಂ ರೈ ಕೋಡಿಂಬಾಡಿ, ವೆಂಕಪ್ಪ ಪೂಜಾರಿ, ರೂಪೇಶ್ ರೈ ಅಲಿಮಾರ, ಮಹೇಂದ್ರ ವರ್ಮ, ಮಾಣಿಕ್ಯರಾಜ್ ಪತ್ನಿ ಶ್ರೀಮತಿ ಸ್ವರ್ಣಲತಾ ಪಡಿವಾಳ್, ಪುತ್ರ ಗಗನ್, ಅಳಿಯ ಸಂತೋಷ್ ಉಪಸ್ಥಿತರಿದ್ದರು.

ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಲೀಧರ ರೈ ಮಠಂತಬೆಟ್ಟು ಸ್ವಾಗತಿಸಿ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಶೀಫ್ ವಂದಿಸಿದರು. ಅಶ್ರಫ್ ಬಸ್ತಿಕ್ಕಾರ್ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.