ಸರಕಾರದ ನಿಯಮದೊಂದಿಗೆ ಚರ್ಚ್‌ಗಳಲ್ಲಿ ಬಲಿಪೂಜೆಗಳು ಆರಂಭ | ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮೂಲಕ ಭಕ್ತರಿಗೆ ಒಳಪ್ರವೇಶ | ಮಾಸ್ಕ್ ಕಡ್ಡಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

-ಪ್ರವೇಶ ದ್ವಾರದಲ್ಲಿ ಪವಿತ್ರ ತೀರ್ಥವಿಲ್ಲ, ಸಾಮಾಜಿಕ ಅಂತರದೊಂದಿಗೆ ಪರಮಪ್ರಸಾದ ನೀಡುವಿಕೆ
-ಪ್ರವೇಶ ದ್ವಾರದಿಂದ ಒಳಗೆ ಪ್ರವೇಶ, ಬದಲಿ ನಿರ್ಗಮನ ದ್ವಾರದಿಂದ ಹೊರಗೆ ಹೋಗಲು ಅವಕಾಶ
-ಚರ್ಚ್ ನೇಮಿಸಿದ ಧರ್ಮಭಗಿನಿಯರಿಂದ, ವಾಳೆಯ ಸ್ವಯಂಸೇವಕರಿಂದ ಭಕ್ತರ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್‌ಗೆ ಸಾಥ್
-೬೦ ವರ್ಷ ಮೇಲ್ಪಟ್ಟ ಹಿರಿಯರಿಗೆ ವಾರದ ನಡುವೆ ವೈಯಕ್ತಿಕ ಪ್ರಾರ್ಥನೆಗೆ ಅವಕಾಶ
-ಮುಂದಿನ ಆದೇಶ ಬರುವವರೆಗೆ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ತರಬೇತಿಗಳು ನಡೆಯದು

ಪುತ್ತೂರು: ಕೊರೋನಾ ವೈರಸ್(ಕೋವಿಡ್ ೧೯) ಹರಡುವಿಕೆಯನ್ನು ತಡೆಗಟ್ಟುವಿಕೆ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲವೊಂದು ಸೂಚನೆಗಳನ್ನು ಪಾಲಿಸುವಂತೆ ಆಯಾ ಧರ್ಮದ ಧರ್ಮಕೇಂದ್ರಗಳಿಗೆ ರವಾನಿಸಿದ್ದು, ಈ ನಿಟ್ಟಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಚರ್ಚ್‌ಗಳಲ್ಲಿ ಜೂ.೧೩ ರಿಂದ ಕಟ್ಟುನಿಟ್ಟಿನ ಪಾಲನೆಯೊಂದಿಗೆ ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಲು ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ದೇಶವ್ಯಾಪಿ ಜಾರಿಯಾಗಿದ್ದ ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಕ್ರಿಶ್ಚಿಯನ್ ಸಮುದಾಯದ ಚರ್ಚ್‌ಗಳಲ್ಲಿ ದಿವ್ಯ ಬಲಿಪೂಜೆಗೆ ಕ್ರೈಸ್ತ ವಿಶ್ವಾಸಿ ಭಕ್ತರ ಪ್ರವೇಶಕ್ಕೆ ಸರಕಾರ ಅನುಮತಿ ನೀಡಿದ್ದು, ಈ ನಿಟ್ಟಿನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಸರಕಾರದ ನಿಯಮದೊಂದಿಗೆ ಕೆಲವೊಂದು ಸೂಚನೆಯೊಂದಿಗೆ ದಿವ್ಯ ಬಲಿಪೂಜೆ ನೆರವೇರಿಸಲು ಆಯಾ ಚರ್ಚ್‌ಗಳ ಪ್ರಧಾನ ಧರ್ಮಗುರುಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸರಕಾರದ ನಿಯಮದನ್ವಯ ಚರ್ಚ್‌ನೊಳಗೆ ಮತ್ತು ಸುತ್ತಮುತ್ತ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಬೇಕು ಎನ್ನುವ ಕಾನೂನಿಗೆ ಬದ್ಧವಾಗಿ ಆಯಾ ಚರ್ಚ್‌ಗಳಲ್ಲಿ ಸ್ಯಾನಿಟೈಸರ್‌ನಿಂದ ಶುಚಿಗೊಳಿಸುವ ಕಾರ್ಯವನ್ನು ಈಗಾಗಲೇ ಆರಂಭಿಸುವ ಮುಖೇನ ದಿವ್ಯ ಬಲಿಪೂಜೆಗಳು ಆರಂಭಗೊಂಡಿದೆ.

ಪುತ್ತೂರು ವಲಯದ ಚರ್ಚ್‌ಗಳ ಪೈಕಿ ಪ್ರಧಾನ ಚರ್ಚ್ ಎನಿಸಿದ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಶನಿವಾರ ಸಂಜೆ ಮತ್ತು ಆದಿತ್ಯವಾರ ಬೆಳಿಗ್ಗೆ ಮೂರು ದಿವ್ಯ ಬಲಿಪೂಜೆಗಳು ನಡೆಯಲ್ಪಟ್ಟವು. ಅದರಂತೆ ತಾಲೂಕಿನ ಇತರ ಚರ್ಚ್‌ಗಳಲ್ಲಿಯೂ ಸರಕಾರದ ಹೊರಡಿಸಿದ ನಿಯಮದಂತೆ ದಿವ್ಯ ಬಲಿಪೂಜೆಗಳು ನಡೆಲ್ಪಟ್ಟಿವೆ. ಆದರೆ ಕೆಲವೊಂದು ಚರ್ಚ್‌ಗಳಲ್ಲಿ ಭಕ್ತರ ಅನುಮತಿ ಮೇರೆಗೆ ಜುಲೈ ತಿಂಗಳಿಂದ ದಿವ್ಯ ಬಲಿಪೂಜೆಗಳನ್ನು ಆರಂಭಿಸುವ ಎಂಬ ಸೂಚನೆಯೊಂದಿಗೆ ಅಂತಹ ಚರ್ಚ್‌ಗಳಲ್ಲಿ ದಿವ್ಯ ಬಲಿಪೂಜೆಗಳು ಆರಂಭಗೊಂಡಿಲ್ಲ ಎನ್ನಲಾಗಿದೆ. ಮಾಯಿದೆ ದೇವುಸ್ ಚರ್ಚ್ ಸೇರಿದಂತೆ ಹಲವು ಚರ್ಚ್‌ಗಳಲ್ಲಿ ಚರ್ಚ್‌ನ ಪ್ರವೇಶ ದ್ವಾರದಲ್ಲಿ ಧರ್ಮಭಗಿನಿಯರು ಸೇರಿದಂತೆ ಕ್ರೈಸ್ತ ವಿಶ್ವಾಸಿ ಭಕ್ತರನ್ನೊಳಗೊಂಡ ಸ್ವಯಂಸೇವಕರು ಚರ್ಚ್‌ಗೆ ಆಗಮಿಸಿದ ಭಕ್ತರಿಗೆ ಸ್ಯಾನಿಟೈಸರ್ ನೀಡುವಿಕೆಯ ಜೊತೆಗೆ ದೇಹದ ಉಷ್ಣತೆಯನ್ನು ಪರೀಕ್ಷಿಸುವ ಥರ್ಮಲ್ ಸ್ಕ್ರೀನಿಂಗ್ ನಡೆಸುವ ಮುಖೇನ ಚರ್ಚ್ ಪ್ರವೇಶಕ್ಕೆ ಅನುಮತಿಯನ್ನು ನೀಡಲಾಗಿದೆ. ಚರ್ಚ್ ಒಳಗೆ ಆಗಮಿಸಿದ ಭಕ್ತರು ಕಡ್ಡಾಯ ಮಾಸ್ಕ್‌ನೊಂದಿಗೆ ಜೋಡಿಸಲಾದ ಬೆಂಚ್‌ಗಳಲ್ಲಿ ಆರು ಫೀಟ್ ಅಂತರವನ್ನು ಕಾಯ್ದುಕೊಳ್ಳುವಂತೆ ಕುಳಿತುಕೊಳ್ಳುವುದು ಮತ್ತು ಬಲಿಪೂಜೆಯ ಬಳಿಕ ನಿರ್ಗಮನ ದ್ವಾರದಲ್ಲಿ ಹೊರಗೆ ಹೋಗುವ ಮೂಲಕ ದಿವ್ಯ ಬಲಿಪೂಜೆಯನ್ನು ಭಕ್ತಿಪೂರ್ವಕವಾಗಿ ಆನಂದಿಸಿದ್ದಾರೆ.

ಪವಿತ್ರ ತೀರ್ಥವಿಲ್ಲ, ಅಂತರದೊಂದಿಗೆ ಪರಮಪ್ರಸಾದ:
ಕ್ರಿಶ್ಚಿಯನ್ ಸಮುದಾಯದಲ್ಲಿ ಶುದ್ಧೀಕರಿಸಿದ ತೀರ್ಥ ಹಾಗೂ ಪವಿತ್ರ ಪರಮಪ್ರಸಾದಕ್ಕೆ ದಿವ್ಯ ಬಲಿಪೂಜೆಯಲ್ಲಿ ಬಹಳ ಪ್ರಾಮುಖ್ಯ ಸ್ಥಾನವಿದೆ. ಈ ಮೊದಲು ಚರ್ಚ್‌ನ ಪ್ರವೇಶ ದ್ವಾರದಲ್ಲಿ ಪವಿತ್ರ ತೀರ್ಥವನ್ನು ಇಡುವ ಮೂಲಕ ಭಕ್ತರು ಆ ಪವಿತ್ರ ತೀರ್ಥವನ್ನು ಕೈಯನ್ನು ಬಳಸಿ ಸ್ವೀಕರಿಸುತ್ತಿದ್ದರು. ಪವಿತ್ರ ಪರಮಪ್ರಸಾದವನ್ನು ಧರ್ಮಗುರುಗಳ, ಧರ್ಮಭಗಿನಿಯರ ಅಥವಾ ಚರ್ಚ್ ನೇಮಿಸಿದ ಅಧಿಕೃತ ವ್ಯಕ್ತಿಗಳ ಕೈಯಿಂದ ಭಕ್ತರು ಬಾಯಲ್ಲಿ ಅಥವಾ ಕೈಯಲ್ಲಿ ಸ್ವೀಕರಿಸುತ್ತಿರುವುದು ವಾಡಿಕೆಯಾಗಿತ್ತು. ಪ್ರಸ್ತುತ ಎದುರಿಸುವ ಕೊರೋನಾ ವೈರಸ್‌ನಿಂದಾಗಿ ಎಲ್ಲದಕ್ಕೂ ಕಡಿವಾಣ ಬಿದ್ದಿರುವುದರಿಂದ ಚರ್ಚ್‌ನ ಪ್ರವೇಶ ದ್ವಾರದಲ್ಲಿ ಪವಿತ್ರ ತೀರ್ಥಕ್ಕೆ ಅವಕಾಶವಿಲ್ಲ. ಆದರೆ ಪವಿತ್ರ ಪರಮಪ್ರಸಾದವನ್ನು ಧರ್ಮಗುರುಗಳು ಮಾತ್ರ ಸಾಮಾಜಿಕ ಅಂತರವನ್ನು ಕಾಯ್ದಿಟ್ಟುಕೊಂಡು ಭಕ್ತರ ಕೈಗೆ ನೀಡುವುದಾಗಿದೆ. ಜೊತೆಗೆ ಪವಿತ್ರ ವೇದಿಕೆಯಲ್ಲಿ ನಡೆಯಲ್ಪಡುವ ದೇವಸ್ತುತಿಯಲ್ಲಿ ಧರ್ಮಗುರುಗಳು ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್‌ನ್ನು ಹೊಂದುವ ಮೂಲಕ ಬಲಿಪೂಜೆಯನ್ನು ನಡೆಸುತ್ತಿದ್ದಾರೆ.

ಸ್ವಯಂಸೇವಕರಿಂದ ಸಾಥ್:
ಮಾಯಿದೆ ದೇವುಸ್ ಚರ್ಚ್‌ನಲ್ಲಿ ೧೯ ವಾಳೆಗಳು ಇದ್ದಾಗೆ ಆಯಾ ಚರ್ಚ್‌ಗಳಲ್ಲಿ ಕುಟುಂಬದ ಆಧಾರದಲ್ಲಿ ವಾಳೆಗಳನ್ನು ನಿರ್ಧರಿಸಲ್ಪಡುತ್ತದೆ. ಕೋವಿಡ್‌ನಿಂದಾಗಿ ಚರ್ಚ್‌ಗೆ ಬರುವ ಭಕ್ತರಿಗೆ ಸರಕಾರವು ಕೆಲವು ನಿಬಂಧನೆಗಳನ್ನು ಹಾಕಿದ್ದು ಮುಖ್ಯವಾಗಿ ವಯಸ್ಸು ೬೦ ದಾಟಿದವರು, ವಯಸ್ಸು ೧೦ರ ಒಳಗಿನವರು, ಕ್ವಾರಂಟೈನ್‌ನಲ್ಲಿರುವವರು, ಕೋವಿಡ್ ರೋಗವನ್ನು ಹೊಂದಿರುವವರು, ಗರ್ಭಿಣಿ ಸ್ತ್ರೀಯರು, ವಿವಿಧ ರೋಗ ಬಾಧಿತರು ಚರ್ಚ್ ಪ್ರವೇಶವನ್ನು ಮಾಡಬಾರದಾಗಿದೆ. ಆಯಾ ಚರ್ಚ್‌ಗಳಲ್ಲಿ ದಿವ್ಯ ಬಲಿಪೂಜೆಗೆ ಆಗಮಿಸುವ ಭಕ್ತರನ್ನು ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷಿಸಲು ಧರ್ಮಭಗಿನಿಯರು ಸೇರಿದಂತೆ ವಾಳೆಯ ಪ್ರಮುಖರನ್ನು ಸ್ವಯಂಸೇವಕರನ್ನಾಗಿ ಕಾರ್ಯನಿರ್ವಹಿಸಲು ಕೋರಲಾಗಿರುವ ಹಿನ್ನೆಲೆಯಲ್ಲಿ ಚರ್ಚ್ ನೇಮಿಸಿದ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಹಿರಿಯರಿಗೆ ವಾರದ ನಡುವೆ ಅವಕಾಶ:
ವಯಸ್ಸು ೬೦ ದಾಟಿದವರಿಗೆ ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಲು ಚರ್ಚ್ ಪ್ರವೇಶವನ್ನು ನಿಷಿದ್ಧಗೊಳಿಸಿರುವ ಕೇಂದ್ರ ಹಾಗೂ ರಾಜ್ಯ ಸರಕಾರವು, ದಿವ್ಯ ಬಲಿಪೂಜೆ ಸಂದರ್ಭ ಅಲ್ಲದೆ ಇತರ ಸಂದರ್ಭದಲ್ಲಿ ಅಂದರೆ ವಾರದ ಸೋಮವಾರದಿಂದ ಶನಿವಾರ ಚರ್ಚ್‌ಗೆ ಆಗಮಿಸಿ ವೈಯಕ್ತಿಕ ಪ್ರಾರ್ಥನೆಯನ್ನು ಸಲ್ಲಿಸಬಹುದಾಗಿದೆ. ಮಾಯಿದೆ ದೇವುಸ್ ಚರ್ಚ್‌ನಲ್ಲಿ ಪ್ರತೀ ಶುಕ್ರವಾರ ಚರ್ಚ್‌ನ್ನು ಸ್ಯಾನಿಟೈಸರ್‌ನಿಂದ ಶುದ್ಧಗೊಳಿಸುವ ಕಾರ್ಯವಿರುವುದರಿಂದ ಅಂದು ಭಕ್ತರಿಗೆ ಚರ್ಚ್ ಪ್ರವೇಶಿಸಲು ಅವಕಾಶವನ್ನು ನಿರಾಕರಿಸಲಾಗಿದೆ. ಪ್ರತೀ ವಾರದಲ್ಲಿ ಒಂದು ದಿನ ಸ್ಯಾನಿಟೈಸರ್‌ನಿಂದ ಶುದ್ಧಗೊಳಿಸಬೇಕು ಎನ್ನುವ ನಿಯಮ ಆಯಾ ಚರ್ಚ್‌ಗಳಿಗೂ ಅನ್ವಯಿಸಲ್ಪಡುತ್ತದೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರಿಂದ ಮುಂದಿನ ಆದೇಶ ಬರುವವರೆಗೆ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ತರಬೇತಿಗಳು ನಡೆಯುವುದಿಲ್ಲ.

ಒಗ್ಗೂಡಿ ಪ್ರಾರ್ಥಿಸಿದಾಗ ಕೊರೋನಾವನ್ನು ಹೋಗಲಾಡಿಸಲು ಸಾಧ್ಯ…
ಕೊರೋನಾ ವೈರಸ್ ಎಂಬ ಮಹಾಮಾರಿಯಿಂದಾಗಿ ಮಾನವ ದೈಹಿಕ ಮತ್ತು ಮಾನಸಿಕವಾಗಿ ನಿರಂತರ ಬಳಲುತ್ತಿದ್ದಾನೆ. ಈ ಕೊರೋನಾದಿಂದಾಗಿ ಮಾನವನ ಜೀವನ ಕುಂಠಿತವಾಗಿದೆ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದ ದಿನೇ ದಿನೇ ವ್ಯತಿರಿಕ್ತ ಪರಿಣಾಮವನ್ನು ಎದುರಿಸುತ್ತಿದ್ದಾನೆ. ಕೊರೋನಾ ವೈರಸ್ ಬಂದ ಮೂರು ತಿಂಗಳ ಬಳಿಕವಾದರೂ ಚರ್ಚ್‌ಗಳಲ್ಲಿ ದಿವ್ಯ ಬಲಿಪೂಜೆಗಳು ನಡೆಯುತ್ತಿರುವುದು ದೇವರಿಗೆ ಸ್ತುತಿಯನ್ನು ಹಾಡಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮವನ್ನು ಪಾಲಿಸುವ ಮೂಲಕ ಬಲಿಪೂಜೆಗಳನ್ನು ನಡೆಸಬೇಕಾಗಿರುವುದರಿಂದ ಭಕ್ತರು ಈ ನಿಟ್ಟಿನಲ್ಲಿ ಸಹಕರಿಸಬೇಕಾಗಿರುವುದು ಆದ್ಯ ಕರ್ತವ್ಯವೆನಿಸಿದೆ. ಕೊರೋನಾ ರೋಗವನ್ನು ಹಿಮ್ಮೆಟ್ಟಿಸಬೇಕಾದರೆ ಸರ್ವರೂ ಒಗ್ಗೂಡಿ ಪ್ರಾರ್ಥಿಸಿದಾಗ ಈ ಮಹಾಮಾರಿಯನ್ನು ಹೋಗಲಾಡಿಸಲು ಸಾಧ್ಯ ವಂ|ಸುನಿಲ್ ಜಾರ್ಜ್ ಡಿ’ಸೋಜ, ದಿವ್ಯ ಬಲಿಪೂಜೆಯಲ್ಲಿ ಸಂದೇಶ ನುಡಿದ ಧರ್ಮಗುರುಗಳು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.