ಬನ್ನೂರಿನಲ್ಲಿರುವ ಎಸ್.ಐಗಳ ವಸತಿಗೃಹ | ಇನ್ನೂ ಅನಾಥವಾಗಿಯೇ ಇದೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಮೂರು ವರ್ಷಗಳಿಂದ ಪುತ್ತೂರು ನಗರ ಠಾಣೆಯ ಎಸೈಗಳಿಗಾಗಿ ನಿರ್ಮಿಸಲಾದ ಸುಂದರ ವಸತಿಗೃಹವೊಂದು ಯಾರಿಗೂ ಬೇಡವಾಗಿ ಅನಾಥ ಸ್ಥಿತಿಯಲ್ಲಿದೆ.ಕೋಟ್ಯಾಂತರ ರೂ. ಮೌಲ್ಯದ ಈ ಕಟ್ಟಡಕ್ಕೆ ಯಾರೂ ದಿಕ್ಕಿಲ್ಲ.ಎಸ್.ಐ.ಗಳು ವಾಸ್ತವ್ಯ ಮಾಡಲು ಇನ್ನೂ ಯಾಕೆ ಮುಂದಾಗಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಬನ್ನೂರು ಬಲಮುರಿ ಗಣಪತಿ ದೇವಸ್ಥಾನದ ಪಕ್ಕದಲ್ಲೇ ೨೫ ಸೆಂಟ್ಸ್ ನಿವೇಶನ ಪೊಲೀಸ್ ಇಲಾಖೆಯ ಹೆಸರಲ್ಲಿದೆ.ಇದರಲ್ಲಿ ಸ್ವಲ್ಪ ಭಾಗ ಅತಿಕ್ರಮಣವಾಗಿದೆ. ಉಳಿದ ಸ್ಥಳದಲ್ಲಿ ತಲಾ ೮೫೦ ಚದರ ಅಡಿ ವಿಸ್ತೀರ್ಣದ ಕೆಳ ಮತ್ತು ಮೇಲಂತಸ್ತು ಹೊಂದಿರುವ ಕಟ್ಟಡ ನಿರ್ಮಾಣ ಮಾಡಲಾಗಿದೆ.ಈ ವಸತಿಗೃಹಕ್ಕೆ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ಕೊಳವೆ ಬಾವಿ ಮತ್ತಿತರ ಸೌಕರ್ಯ ಒದಗಿಸಲಾಗಿದೆ.ಆದರೂ ಇಲ್ಲಿ ವಾಸ ಮಾಡಲು ಎಸ್.ಐ. ಕುಟುಂಬಗಳು ಇಲ್ಲ.ಈ ಕಟ್ಟಡ ನಿರ್ಮಾಣಗೊಂಡ ಒಂದು ವರ್ಷದ ನಂತರ ೨೦೧೮ರ ಸೆಪ್ಟಂಬರ್ ೨೦ಕ್ಕೆ ಪುತ್ತೂರು ಉಪವಿಭಾಗದ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.ಪೊಲೀಸ್ ಹೌಸಿಂಗ್ ಬೋರ್ಡ್ ನಿರ್ಮಿಸಿದ್ದ ಈ ಕಟ್ಟಡದ ಸುತ್ತ ಆವರಣಗೋಡೆ ಹೊರತು ಪಡಿಸಿದರೆ ಉಳಿದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.ರಾಜ್ಯದ ಬೇರೆ ಬೇರೆ ಕಡೆ ಪೊಲೀಸ್ ವಸತಿ ಗೃಹ ನಿರ್ಮಾಣಕ್ಕಾಗಿ, ಸರ್ಕಾರದ ಸುಮಾರು ರೂ.೩೩ ಕೋಟಿಯ ವರ್ಕ್ ಪ್ರೊಜೆಕ್ಟ್‌ನ್ನು ಹೈದರಾಬಾದ್‌ನ ಎನ್.ಆರ್ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಯವರು ಗುತ್ತಿಗೆ ಪಡೆದಿದ್ದು, ಅವರ ನೇತೃತ್ವದಲ್ಲೇ ಒಟ್ಟು ೧೭೮ ವಸತಿ ಗೃಹಗಳ ನಿರ್ಮಾಣ ಕಾರ್ಯ ನಡೆದಿದೆ.ಈ ಪೈಕಿ ಪುತ್ತೂರಿನಲ್ಲಿ ಸಾಮೆತ್ತಡ್ಕ, ಸಂಪ್ಯದಲ್ಲಿ ಪೊಲೀಸ್ ಸಿಬಂದಿಗಳ ವಸತಿ ಗೃಹಗಳು ನಿರ್ಮಾಣವಾಗಿದ್ದು ಬನ್ನೂರಿನಲ್ಲಿ ಮಾತ್ರ ೨ ಎಸ್.ಐ.ಗಳ ವಸತಿ ಗೃಹ ನಿರ್ಮಾಣ ಮಾಡಲಾಗಿದೆ.ಸಾಮೆತ್ತಡ್ಕದಲ್ಲಿ ರೂ.೧೨.೨ ಕೋಟಿ, ಸಂಪ್ಯದಲ್ಲಿ ರೂ.೧.೯೯ ಕೋಟಿ ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಆಗಿದ್ದು, ಈ ವಸತಿ ಗೃಹಗಳಲ್ಲಿ ಈಗಾಗಲೇ ಪೊಲೀಸ್ ಸಿಬಂದಿಗಳು ವಾಸ್ತವ್ಯ ಹೂಡಿದ್ದಾರೆ. ಆದರೆ ಬನ್ನೂರಿನ ಕಟ್ಟಡ ಮಾತ್ರ ಯಾರಿಗೂ ಬೇಡವಾಗಿದೆ.

ಮೂಲಭೂತ ಸೌಕರ್ಯ ಪೂರ್ಣವಾಗಿಲ್ಲ:
ಪುತ್ತೂರು ನಗರಠಾಣೆ, ಸಂಚಾರಿ ಠಾಣೆ ಮತ್ತು ಮಹಿಳಾ ಠಾಣೆಗಳಲ್ಲಿ ಪ್ರಸ್ತುತ ೪ ಮಂದಿ ಎಸ್.ಐಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಎಸ್.ಐಗಳಿಗಾಗಿಯೇ ಈ ಬನ್ನೂರಿನ ವಸತಿಗೃಹ ನಿರ್ಮಾಣಗೊಂಡಿದೆ.ಹಾಗಿದ್ದರೂ ಇಲ್ಲಿ ಯಾವ ಪೊಲೀಸ್ ಅಧಿಕಾರಿಗಳು ವಾಸ್ತವ್ಯಕ್ಕೆ ಮುಂದಾಗಿಲ್ಲ ಯಾಕೆಂದರೆ ಮೇಲ್ನೋಟಕ್ಕೆ ಕಟ್ಟಡದ ಸುತ್ತ ಆವರಣಗೋಡೆ ಇಲ್ಲದಿರುವುದೇ ಕಟ್ಟಡದ ಅನಾಥ ಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ.ಜತೆಗೆ ರಕ್ಷಣೆಯ ದೃಷ್ಟಿಯಿಂದ ಎಸ್.ಐ.ಗಳು ಇಲ್ಲಿ ವಾಸ್ತವ್ಯ ಹೂಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.ಪೊಲೀಸ್ ಕುಟುಂಬದ ಮಕ್ಕಳಿಗೆ ಆಟವಾಡಲು ಪಾರ್ಕ್, ಆಟದ ಮೈದಾನದಂತಹ ವ್ಯವಸ್ಥೆಗಳಿಲ್ಲ. ಇಲ್ಲಿನ ಪರಿಸರದಲ್ಲಿ ಪೊಲೀಸ್ ಕುಟುಂಬಗಳಿಗೆ ಪೂರಕ ವಾತಾವರಣ ಇಲ್ಲದಿರುವ ಕಾರಣ ವಾಸ್ತವ್ಯ ಮಾಡಲು ಎಸ್.ಐ ಕುಟುಂಬಗಳು ಸಿದ್ಧವಾಗುತ್ತಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.

ಪಾಳು ಬಿದ್ದ ಕಟ್ಟಡ:
ಈ ವಸತಿಗೃಹ ಪೊಲೀಸ್ ಇಲಾಖೆಗೆ ಹಸ್ತಾಂತರಗೊಂಡು ೨ ವರ್ಷಗಳು ಪೂರ್ಣಗೊಂಡಿವೆ. ಇಲ್ಲಿ ವಾಸ ಮಾಡಲು ಯಾವ ಎಸೈಗಳೂ ಮುಂದಾಗಿಲ್ಲ. ಹಾಗಾಗಿ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿದೆ.ಈ ಕಟ್ಟಡದ ಬಾಗಿಲಿಗೆ ಬೀಗ ಹಾಕಿಲ್ಲ.ಕಟ್ಟಡ ಒಳಭಾಗದಲ್ಲೂ ಸ್ವಚ್ಛತೆ ಇಲ್ಲ. ಕಟ್ಟಡದ ಜಗಲಿ ಮೇಲೆ ಆಡುಗಳು, ನಾಯಿಗಳು ವಾಸ ಮಾಡುತ್ತಿವೆ.ಮೆಸ್ಕಾಂ ವತಿಯಿಂದ ವಿದ್ಯುತ್ ಬಿಲ್ ಕೂಡಾ ಬರುತ್ತಿದೆ. ಈ ಬಿಲ್ ಪಾವತಿ ಮಾಡುವುದು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.ಈ ನಡುವೆ ಕಟ್ಟಡದ ಕೋಣೆಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಪಾಳು ಬಿದ್ದಿರುವ ಈ ಕಟ್ಟಡವನ್ನು ರಕ್ಷಣೆ ಮಾಡದಿದ್ದರೆ ಇಲ್ಲಿ ಹಲವು ದಂಧೆಗಳು ಆರಂಭವಾಗುವುದಕ್ಕೆ ಯಾವುದೇ ಸಂದೇಹ ಇಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮುಂದಿನ ಬಜೆಟ್‌ನಲ್ಲಿ ಉಳಿದ ಕೆಲಸ:
ಪೊಲೀಸ್ ವಸತಿ ಗೃಹ ನಿರ್ಮಾಣ ಕಾರ್ಯ ಪುತ್ತೂರಿನಲ್ಲಿ ಮೂರು ಕಡೆ ಆಗಿದೆ.ಆದರೆ ಅವೆಲ್ಲಕ್ಕೂ ಆವರಣಗೋಡೆ ನಿರ್ಮಿಸಲು ಬಜೆಟ್‌ನಲ್ಲಿ ಅವಕಾಶ ಇಲ್ಲ. ಅನಿವಾರ್ಯ ಎಂದಾದರೆ ಮುಂದಿನ ಬಜೆಟ್‌ನಲ್ಲಿ ಮಾಡಬೇಕಾಗುತ್ತದೆ.ಬನ್ನೂರಿನಲ್ಲಿ ಎಸೈಗಳಿಗೆ ಮಾಡಿರುವ ವಸತಿ ಗೃಹದಲ್ಲಿ ೨ ಬೆಡ್ ರೂಮ್, ೧ ಕಿಚನ್, ೧ ಹಾಲ್, ೨ ಶೌಚಾಲಯ ಹಾಗೂ ನೀರಿಗೆ ಸಂಪ್ ಮತ್ತು ಬೋರ್‌ವೆಲ್ ಹಾಗೂ ನಗರಸಭೆ ನಳ್ಳಿನೀರಿನ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಹೌಸಿಂಗ್ ಕಾರ್ಪೋರೇಶನ್ ಮಂಗಳೂರು ಡಿವಿಜನ್‌ನ ಅಧಿಕಾರಿ ಈ ಹಿಂದೆಯೇ ತಿಳಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.