ಪಾಣಾಜೆ-ಸ್ವರ್ಗ ಅಂತರ್ರಾಜ್ಯ ಗಡಿ ನಿರ್ಬಂಧ ತೆರವುಗೊಳಿಸಿ ಪಾಣಾಜೆ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು;ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಅಂತರ್ರಾಜ್ಯ ಗಡಿ ಪ್ರವೇಶ ನಿರ್ಬಂಧದಿಂದಾಗಿ ಗಡಿ ಭಾಗದಲ್ಲಿರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದು ಪುತ್ತೂರು-ಪಾಣಾಜೆ ರಸ್ತೆಯ ಸ್ವರ್ಗ ಮುಖ್ಯ ರಸ್ತೆಯ ಮೂಲಕ ಅಂತರ್ರಾಜ್ಯ ಪ್ರವೇಶಕ್ಕೆ ಕೂಡಲೇ ಅವಕಾಶ ಕಲ್ಪಿಸಿಕೊಡುವಂತೆ ಪಾಣಾಜೆ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ.

ಸಭೆಯು ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕರವರ ಅಧ್ಯಕ್ಷತೆಯಲ್ಲಿ ಜೂ.೧೮ರಂದು ನಡೆಯಿತು. ಕೊರೋನಾ ಲಾಕ್‌ಡೌನ್ ನಿಂದಾಗಿ ಕರ್ನಾಟಕ-ಕೇರಳ ರಾಜ್ಯಗಳ ಗಡಿ ಭಾಗವಾದ ಪಾಣಾಜೆಯ ಸ್ವರ್ಗ ಸಮೀಪ ರಸ್ತೆಗೆ ಬಂದ್ ಮಾಡಲಾಗಿದೆ. ಈಗ ಲಾಕ್ ಡೌನ್ ನಿಯಮ ಸಡಿಲಿಸಲಾಗಿದ್ದರೂ ಪ್ರವೇಶ ನಿರ್ಬಂಧ ತೆರವುಗೊಂಡಿಲ್ಲ. ಇದರಿಂದಾಗಿ ಗಡಿ ಭಾಗದಲ್ಲಿರುವ ಜನರಿಗೆ ತೀವ್ರ ತೊಂದರೆ ಎದುರಿಸುವಂತಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದ್ದು ಗಡಿ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ತೀವ್ರ ಸಂಕಷ್ಟ ಎದುರಿಸಲಿದ್ದಾರೆ. ಅಲ್ಲದೆ ದಿನ ನಿತ್ಯದ ಜೀವನಕ್ಕೂ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಪುತ್ತೂರು-ಪಾಣಾಜೆ ಮುಖ್ಯ ರಸ್ತೆ ಗಡಿ ನಿರ್ಬಂಧವನ್ನು ತೆರವುಗೊಳಿಸುವಂತೆ ಸಭೆಯಲ್ಲಿ ಆಗ್ರಹಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ತಾ.ಪಂ ಸದಸ್ಯ ಮೀನಾಕ್ಷಿ ಮಂಜುನಾಥ ಮಾತನಾಡಿ, ಜಿಲ್ಲೆಯ ಮೂರು ತಾಲೂಕಿನಲ್ಲಿ ತಲಾ ಒಂದೊಂದು ಭಾಗದಲ್ಲಿ ಗಡಿ ನಿರ್ಬಂಧ ತೆರವುಗೊಳಿಸುವ ಕುರಿತು ಈಗಾಗಲೇ ಶಾಸಕ ಮಾಹಿತಿ ನೀಡಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳು ಆದೇಶ ನೀಡಲಿದ್ದಾರೆ. ಪಾಣಾಜೆ-ಸ್ವರ್ಗದಲ್ಲಿ ಆರೋಗ್ಯ ಇಲಾಖೆ ಸೂಚಿಸುವ ನಿಯಮಗಳನ್ನು ಪಾಲಿಸಿಕೊಂಡು ನಿರ್ಬಂಧ ತೆರವುಗೊಳಿಸಿಕೊಡುವಂತೆ ತಿಳಿಸಿದರು. ಇದರ ಕುರಿತು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಪಾಣಾಜೆ ಪಿ.ಎಚ್.ಸಿಗೆ ಲ್ಯಾಬ್ ಒದಗಿಸಿ;
ಇತ್ತೀಚಿನ ದಿನಗಳಲ್ಲಿ ಗ್ರಾಮದ ವ್ಯಾಪ್ತಿಯಲ್ಲಿ ಡೆಂಗ್ಯು ಹಾಗೂ ಮಲೇರಿಯಾ ಜ್ಚರದ ಲಕ್ಷಣಗಳು ಅತ್ಯಧಿಕವಾಗಿ ಕಂಡು ಬರುತ್ತಿದೆ. ಗಡಿ ಪ್ರದೇಶವಾದ ಪಾಣಾಜೆಯಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ರಕ್ತ ಪರೀಕ್ಷೆಗೆ ಸಂಬಂಧಿಸಿದ ಲ್ಯಾಬ್ ಸೌಲಭ್ಯಗಳಿಲ್ಲ. ರಕ್ತ ಪರೀಕ್ಷೆಗೆ ದೂರದ ಮಂಗಳೂರನ್ನೇ ಅವಲಂಭಿಸುವಂತಾಗಿದೆ. ಗ್ರಾಮಸ್ಥರಿಗೆ ಶೀಘ್ರವಾಗಿ ವರದಿ ಪಡೆಯುವ ನಿಟ್ಟಿನಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲ್ಯಾಬ್ ಒದಗಿಸುತೆ ಸದಸ್ಯರು ಆಗ್ರಹಿಸಿದ್ದು ಆರೋಗ್ಯ ಇಲಾಖೆಗೆ ಬರೆಯುವುದಾಗಿ ನಿರ್ಣಯಿಸಲಾಗಿದೆ.

ತಹಶೀಲ್ದಾರ್‌ಗೆ ಮನವಿ:
ಮನೆ ನಿವೇಶನ ಕೋರಿ ಸುಮಾರು ೩೦ ಮಂದಿ ಫಲಾನುಭವಿಗಳು ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ಸರ್ವೆ ನಂಬರ್ ೧೨೪/೧ಬಿಪಿ೧ರಲ್ಲಿ ೮.೯೯ ಹಾಗೂ ೧೨೪ರಲ್ಲಿ ೫.೧೨ ಎಕ್ರೆ ಜಾಗವಿದ್ದು ಇದನ್ನು ಅಳತೆ ಮಾಡಿ ಗಡಿ ಗುರುತು ಮಾಡಿಕೊಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಲೋಕೋಪಯೋಗಿ ಇಲಾಖೆಯಿಂದ ಆಕ್ಷೇಪ:
ನೆಲ್ಲಿತ್ತಿಮಾರ್ ಎಂಬಲ್ಲಿ ಕಟ್ಟಡ ಪರವಾನಿಗೆಗಾಗಿ ಫಲಾನುಭವಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸದರಿ ಕಟ್ಟಡವು ಲೋಕೋಪಯೋಗಿ ಇಲಾಖೆ ರಸ್ತೆಯ ಬದಿಯಲ್ಲಿ ನಿರ್ಮಾಣವಾಗುತ್ತಿದೆ. ರಸ್ತೆಯ ಮಧ್ಯ ಭಾಗದಿಂದ ೨೫ ಮೀಟರ್ ಅಂತರವಿರಬೇಕು ಎಂಬ ನಿಯಮವಿದ್ದರೂ ಈ ಕಟ್ಟಡವು ರಸ್ತೆಯಿಂದ ೧೪.೫ ಮೀಟರ್ ದೂರದಲ್ಲಿದೆ. ಇಲಾಖೆಯ ನಿಯಮಾನುಸಾರ ಸದ್ರಿ ಕಟ್ಟಡಕ್ಕೆ ಪರವಾನಿಗೆ ನೀಡಲು ಇಲಾಖೆಯ ಆಕ್ಷೇಪವನ್ನು ಪತ್ರದಲ್ಲಿ ತಿಳಿಸಿರುವುದರಿಂದ ಪಂಚಾಯತ್‌ನಿಂದ ಪರವಾನಿಗೆ ನೀಡುವುದು ಸಾಧ್ಯವಿಲ್ಲ ಎಂದು ನಿರ್ಣಯಿಸಲಾಗಿದೆ.

ಕೊನೇ ಸಭೆ:
ಪಂಚಾಯತ್‌ನ ಈ ಸಾಲಿನ ಆಡಳಿತ ಅವಧಿಯು ಜೂ.೩೦ಕ್ಕೆ ಮುಕ್ತಾಯಗೊಳ್ಳಲಿದೆ. ಆಡಳಿತ ಮಂಡಳಿಯ ಅಂತಿಮ ಸಾಮಾನ್ಯ ಸಭೆಯಾಗಿದ್ದು ಸಭೆಯಲ್ಲಿ ಸದಸ್ಯರು, ಅಧ್ಯಕ್ಷರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಪವಿತ್ರ, ಸದಸ್ಯರಾದ ಜಗನ್ಮೋಹನ ರೈ, ಜಯಂತ ಕುಮಾರ್, ಶಾಹುಲ್ ಹಮೀದ್, ಮೈಮುನಾತುಲ್‌ಮೆಹ್ರ, ಯಶೋಧ, ಮಮತಾ ಹಾಗೂ ಜಾನುವಾರು ಅಧಿಕಾರಿ ಪುಷ್ಪರಾಜ್ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಚಂದ್ರಮತಿ ಸ್ವಾಗತಿಸಿ, ವಂದಿಸಿದರು. ಸಿಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.