HomePage_Banner
HomePage_Banner
HomePage_Banner

ವ್ಯವಹಾರ – ಉದ್ಯೋಗ-ದಿನಗೂಲಿ ನೌಕರಿ ಇನ್ನೂ ಆರಂಭವಾಗಿಲ್ಲ… ಗಡಿ ತೆರವಾಗದೆ ಸಂಕಷ್ಟದಲ್ಲಿವೆ ನೂರಾರು ಕುಟುಂಬಗಳು | ತೆರೆಯುವುದೆಂದೋ ಸ್ವರ್ಗದ ಬಾಗಿಲು..!?

Puttur_Advt_NewsUnder_1
Puttur_Advt_NewsUnder_1

@ ಉಮೇಶ್ ಮಿತ್ತಡ್ಕ

ಇರ್ದೆ-ಎಣ್ಮಕಜೆ ಗಡಿಯಲ್ಲಿ ಮಣ್ಣು ಹಾಕಿ ಮುಚ್ಚಿರುವ ರಸ್ತೆ

ಪುತ್ತೂರು: ಮನೆ ಕೇರಳದಲ್ಲಿ ಉದ್ಯೋಗ ವ್ಯವಹಾರ ಕರ್ನಾಟಕದಲ್ಲಿ. ಇದೇ ಗಡಿನಾಡ ಕನ್ನಡಿಗರ ದೈನಂದಿನ ಜೀವನ. ಕೊರೊನಾ ಲಾಕ್‌ಡೌನ್ ಬಳಿಕ ಈ ಗಡಿ ಕನ್ನಡಿಗರು ನಿಜಕ್ಕೂ ತತ್ತರಿಸಿ ಹೋಗಿದ್ದಾರೆ. ಅಂತರ್‌ರಾಜ್ಯ ಗಡಿ ಸಂಚಾರ ನಿರ್ಭಂಧ ಇನ್ನೂ ತೆರವಾಗದೇ ಇರುವುದರಿಂದ ಉದ್ಯೋಗಿಗಳು, ನಿತ್ಯ ವ್ಯವಹಾರಸ್ಥರು ಚಡಪಡಿಸುವಂತಾಗಿದೆ. ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಇನ್ನೇನು ಉದ್ಯೋಗಕ್ಕಾದರೂ ಹೋಗಿ ಜೀವನ ಸಾಗಿಸೋಣ ಅಂದರೆ ಇವರ ಪಾಲಿಗೆ ಇನ್ನೂ ಸ್ವರ್ಗದ ಬಾಗಿಲು ತೆರೆದಿಲ್ಲ.

ಹೌದು ಇದು ಕೇರಳ ಕರ್ನಾಟಕ ಗಡಿ ಭಾಗದ ಸ್ವರ್ಗ, ಕಾಟುಕುಕ್ಕೆ, ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಕೇರಳ ನಿವಾಸಿಗಳ ಹೇಳತೀರದ ಸಂಕಷ್ಟಕರ ಪರಿಸ್ಥಿತಿ. ನಿತ್ಯ ವ್ಯವಹಾರ, ಉದ್ಯೋಗಕ್ಕೆ ಕೇರಳ ಕರ್ನಾಟಕ ಗಡಿ ನಿರ್ಬಂಧವಿರಲಿಲ್ಲ. ಮನೆ, ಸೌಲಭ್ಯ, ಸರಕಾರ ಎಲ್ಲವೂ ಕೇರಳದ್ದೇ ಆಗಿದ್ದರೂ ಇವರೆಲ್ಲ ಕರ್ನಾಟಕದಲ್ಲಿ ವ್ಯವಹಾರ ಉದ್ಯೋಗ, ದಿನಗೂಲಿ ನೌಕರಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದವರು. ಲಾಕ್‌ಡೌನ್ ಸಮಯದಲ್ಲಿ ಆರಂಭವಾದ ಎರಡೂ ಸರಕಾರಗಳ ಪ್ರತಿಷ್ಠೆ ಗಡಿ ಕನ್ನಡಿಗರನ್ನು ಅಕ್ಷರಶಃ ಹೈರಾಣಾಗಿಸಿದೆ.

`ನರಕ’ ಯಾತನೆ ಪಡುತ್ತಿರುವ `ಸ್ವರ್ಗ’ ವಾಸಿಗಳು
ಹೇಳಲು ಸ್ವರ್ಗದಲ್ಲಿದ್ದಾರೆ ಆದರೆ ಇವರು ಪಡುತ್ತಿರುವ ಯಾತನೆ ನರಕಸದೃಶವಾದುದು. ಅತ್ತ ವ್ಯವಹಾರ, ಉದ್ಯೋಗ ಎಲ್ಲವೂ ಕರ್ನಾಟಕದಲ್ಲಿ ನಡೆಯುತ್ತಿತ್ತು. ಎರಡೂ ರಾಜ್ಯಗಳು ತಮ್ಮೊಳಗೆ ಲಾಕ್‌ಡೌನ್ ಸಡಿಲಿಕೆಗೊಳಿಸುತ್ತಾ ಬಂದರೂ ಇವರಿಗೆ ಯಾವುದೇ ಸೌಲಭ್ಯ, ವ್ಯವಹಾರ ಕ್ಕೆ ಲಾಕ್‌ಡೌನ್ ತೆರವಾಗಿಲ್ಲ. ಎಲ್ಲಾ ಗಡಿ ಪ್ರದೇಶಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಮುಖ್ಯರಸ್ತೆಗಳಲ್ಲಿ ಪೊಲೀಸ್ ನಾಕಾಬಂಧಿ ನಿರ್ಮಿಸಲಾಗಿದೆ. ಅಪ್ಪಿತಪ್ಪಿ ಕಾಲುದಾರಿ ಬಳಸಿ ಕರ್ನಾಟಕಕ್ಕೆ ಬಂದರೆ ಅವರಿಗೆ ಕ್ವಾರಂಟೈನ್ ಖಚಿತ. ಇನ್ನು ಕರ್ನಾಟಕದಿಂದ ವಾಪಾಸ್ ಕೇರಳಕ್ಕೆ ಹೋದರೆ ಅಲ್ಲಿಯೂ ಕ್ವಾರಂಟೈನ್. ಈ ಎಲ್ಲಾ ಅಜಲು ಗೊಜಲು ವಾತಾವರಣದಲ್ಲಿ ದಿನ ಕಳೆಯುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ಕೇರಳ ಕರ್ನಾಟಕದ ಉಭಯ ಜಿಲ್ಲೆಗಳ ನಾಯಕರುಗಳು ಪರಸ್ಪರ ಮಾತುಕತೆ ಮೂಲಕ ಈ ಸಮಸ್ಯೆ ಶೀಘ್ರವಾಗಿ ಪರಿಹರಿಸಿಕೊಳ್ಳಬಹುದಾಗಿದೆ. ತಮ್ಮನ್ನು ನಂಬಿಕೊಂಡು ಇರುವ ಅದೆಷ್ಟೋ ಕುಟುಂಬಗಳು ಇಂದು ಅತಂತ್ರ ಸ್ಥಿತಿಯಲ್ಲಿರುವುದಕ್ಕೆ ಜನಪ್ರತಿನಿಧಿಗಳ ಮೌನವೇ ಕಾರಣವಾಗಿದೆ. ತಲಪಾಡಿಯಲ್ಲಿ ಇರುವಂತೆ ಸ್ಕ್ರೀನಿಂಗ್ ವ್ಯವಸ್ಥೆ ಮೂಲಕ ಪಾಣಾಜೆ ಸ್ವರ್ಗ ಚೆಕ್‌ಪಾಯಿಂಟ್‌ನಲ್ಲೂ ಪಂಚಾಯತ್ ಮಟ್ಟದಲ್ಲಿ ಪಾಸ್ ಮಾಡಿಕೊಟ್ಟು ಪ್ರತಿದಿನ ಹೋಗಿ ಬರುವವರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಆಸ್ಪತ್ರೆಗೂ ಬರಲಾಗುತ್ತಿಲ್ಲ
ಈ ಭಾಗದ ಎಲ್ಲರೂ ಔಷಧಿ ಚಿಕಿತ್ಸೆಗಳಿಗೆ ಪುತ್ತೂರು ಮಂಗಳೂರಿನ ಆಸ್ಪತ್ರೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದರು. ಸಣ್ಣಪುಟ್ಟ ಔಷಧಿಗಳಿಗೂ ಪುತ್ತೂರಿಗೆ ಬರುತ್ತಿದ್ದರು. ಆದರೆ ಈಗ ಅವರು ಬಹುದೂರದ ಕಾಸರಗೋಡನ್ನು ತಲುಪಬೇಕಾಗಿದೆ. ಕೃಷಿ, ವ್ಯವಹಾರಗಳಿಗೆ ಸರಕು ಸಾಗಾಟಗಳ ನಿಷೇಧದಿಂದಾಗಿ ಜನಸಾಮಾನ್ಯರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ರಾಜಕೀಯಕ್ಕೆ ಬಲಿಯಾಗುತ್ತಿದ್ದಾರೆ ಗಡಿ ನಿವಾಸಿಗಳು
ಲಾಕ್‌ಡೌನ್ ಆರಂಭವಾದಾಗಿನಿಂದ ಕೇರಳ ಕರ್ನಾಟಕ ಗಡಿ ವಿವಾದ ಹುಟ್ಟಿತ್ತು. ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಕರ್ನಾಟಕದಲ್ಲಿ ಕಡಿಮೆಯಿದ್ದ ಸಮಯದಲ್ಲಿ ಕರ್ನಾಟಕ ತನ್ನೆಲ್ಲಾ ಗಡಿಗಳಲ್ಲಿ ರಸ್ತೆಗೆ ಮಣ್ಣು ಹಾಕಿ ಸಂಪರ್ಕವನ್ನು ಮುಚ್ಚಿತ್ತು. ಕರ್ನಾಟಕ ಸರಕಾರದ ಈ ಧೋರಣೆಗೆ ಕೇರಳ ಸರ್ಕಾರ ಮುನಿಸಿಕೊಂಡಿತ್ತು. ಬಳಿಕ ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಾ ಬಂತು. ಇದೇ ಸಮಯವನ್ನು ಸಾಧಿಸಿಕೊಂಡ ಕೇರಳ ಸರ್ಕಾರ ಕರ್ನಾಟಕದಿಂದ ಕೇರಳ ಪ್ರವೇಶಿಸಲು ತೆನ್ನೆಲ್ಲಾ ಗಡಿಗಳಿಗೆ ಬಿಗಿ ನಾಕಾಬಂಧಿ ವಿಧಿಸಿತು. ಉಭಯ ರಾಜ್ಯಗಳ ಮುಸುಕಿನ ಗುದ್ದಾಟದಲ್ಲಿ ಗಡಿನಾಡ ಕನ್ನಡಿಗರು ಉಭಯ ಕಡೆಗಳಿಂದಲೂ ಏಟಿನ ಮೇಲೆ ಏಟು ತಿನ್ನಲಾರಂಭಿಸಿರುವುದು ವಿಪರ್‍ಯಾಸ.

ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಮೆಸೇಜ್

ಪುತ್ತೂರಿಗೆ ಬಹಳ ಹತ್ತಿರವಾಗಿದ್ದಾರೆ
ಎಣ್ಮಕಜೆ ಪಂಚಾಯತ್ ವ್ಯಾಪ್ತಿ ಕರ್ನಾಟಕದ ಪಾಣಾಜೆ ಮತ್ತು ಇರ್ದೆ ಗ್ರಾಮಗಳಿಗೆ ನಿಕಟವಾಗಿದೆ. ಪುತ್ತೂರು ಪಾಣಾಜೆ ರಸ್ತೆಯಲ್ಲಿ ಇರ್ದೆಯಿಂದ ದೂಮಡ್ಕ ರಸ್ತೆಯಾಗಿ ೫-೬ ಕಿ.ಮೀ. ಸಾಗಿದೊಡನೆ ಕೇರಳ ಗಡಿ ಸಿಗುತ್ತದೆ. ಎಣ್ಮಕಜೆ ಪಂಚಾಯತ್ ನಿವಾಸಿಗಳು ದಿನಗೂಲಿ, ಸರಕು ಸಾಮಾನುಗಳಿಗೆ ಕರ್ನಾಟಕದ ಇರ್ದೆ, ಬೆಟ್ಟಂಪಾಡಿ ಮತ್ತು ಪುತ್ತೂರನ್ನು ದಿನನಿತ್ಯ ಸಂಪರ್ಕಿಸುತ್ತಾರೆ. ಇಲ್ಲಿಯೂ ರಸ್ತೆಗೆ ಮಣ್ಣು ಹಾಕಿ ಸಂಪರ್ಕ ಕಡಿತಗೊಂಡಿರುವುದರಿಂದ ಇಲ್ಲಿನ ನಿವಾಸಿಗಳು ಅತ್ತ ಕೇರಳದ ಬಹುದೂರದ ಪೇಟೆಗೂ ತೆರಳಲಾರದೆ ಇತ್ತ ಬಹು ಹತ್ತಿರದ ಕರ್ನಾಟಕದ ಪೇಟೆಗಳಿಗೂ ಬರಲಾಗದ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇನ್ನು ಕಾಲುದಾರಿಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸೋಣ ಅಂದರೆ ಉಭಯ ರಾಜ್ಯಗಳ ಪೊಲೀಸರ ಪ್ರತ್ಯಕ್ಷವಾಗಿ ಗದರಿಸುತ್ತಾರೆ ಅನ್ನೋ ಭಯವೂ ಇಲ್ಲಿನ ನಿವಾಸಿಗಳಲ್ಲಿದೆ.

ಕೇರಳಕ್ಕೂ ತೆರಳುವ ಹಾಗಿಲ್ಲ
ಅತ್ತ ಕೇರಳದಿಂದ ಕರ್ನಾಟಕ್ಕೆ ವ್ಯವಹಾರ ಉದ್ಯೋಗಗಳಿಗೆ ಬರುವವರು ಬಹುಸಂಖ್ಯೆಯಲ್ಲಿದ್ದರೆ ಇನ್ನು ಕರ್ನಾಟಕದಿಂದಲೂ ಕೇರಳಕ್ಕೆ ಉದ್ಯೋಗಿಗಳು ತೆರಳುವವರಿದ್ದಾರೆ. ಅವರಿಗೂ ತಿಂಗಳುಗಟ್ಟಲೆಯಿಂದ ಕೇರಳ ಪ್ರವೇಶಿಸಲು ಸಾಧ್ಯವಾಗಿಲ್ಲ. ಉಭಯ ರಾಜ್ಯಗಳ ಗಡಿಭಾಗದಲ್ಲಿರುವ ನಿವಾಸಿಗಳು ಇಲ್ಲಿಯವರೆಗೆ ಇರದ ಕೇರಳ ಕರ್ನಾಟಕ ವೈಮನಸ್ಸಿಗೆ ಬಲಿಪಶುಗಳಾಗುತ್ತಿದ್ದಾರೆ.

ಕೊರೊನಾ ಮನುಷ್ಯರಿಗಾ ? ವಾಹನಗಳಿಗಾ ?
ಈ ಒಂದು ಪ್ರಶ್ನೆಯೂ ಮೂಡಿದರೆ ಆಶ್ಚರ್ಯವಿಲ್ಲ. ಸಾರಡ್ಕ ಚೆಕ್‌ಪಾಯಿಂಟ್‌ನಲ್ಲಿ ಕೇರಳ ಕರ್ನಾಟಕ ಉಭಯ ಕಡೆಗಳಲ್ಲೂ ದಿನನಿತ್ಯ ವಾಹನಗಳ ಸಾಲು. ಯಾಕಂತೀರಾ ? ಈ ಗೇಟ್‌ನಲ್ಲಿ ಜನರನ್ನು ಅತ್ತಿಂದಿತ್ತ ನಡೆದುಕೊಂಡು ಹೋಗಲು ಬಿಡುತ್ತಿದ್ದಾರೆ. ಆದರೆ ವಾಹನಗಳಿಗೆ ಎರಡೂ ಕಡೆ ನಿರ್ಬಂಧವಿದೆ. ದಿನನಿತ್ಯ ಸಂಚರಿಸುವವರು ಎರಡೂ ಕಡೆಗಳಲ್ಲಿ ಎರಡೆರಡು ವಾಹಗಳನ್ನು ಇಟ್ಟು ತೆರಳುತ್ತಿದ್ದಾರೆ. ಹಾಗಾದರೆ ಇಲ್ಲಿ ಕೊರೊನಾ ಸೋಂಕು ತಗುಲುವುದು ಜನರಿಗಾ ? ವಾಹನಗಳಿಗಾ ? ಎಂಬ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.

ಸ್ವರ್ಗ -ತೂಂಬಡ್ಕ- ಭರಣ್ಯ ಆರ್ಲಪದವು ರಸ್ತೆಗೆ ತೂಂಬಡ್ಕದಲ್ಲಿ ಅಗೆದು ಮುಚ್ಚಿ ಹಾಕಿರುವುದು

ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಚರ್ಚೆ
ಸ್ವರ್ಗ, ಸಾರಡ್ಕ ಸೇರಿದಂತೆ ವಿವಿಧ ಕಡೆಗಳಲ್ಲಿನ ಕರ್ನಾಟಕ ಕೇರಳ ಗಡಿ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಉಭಯ ರಾಜ್ಯಗಳ ಜನನಾಯಕರ ಬಗ್ಗೆ ತೀವ್ರ ಆರೋಪ ಟೀಕೆಗಳು ವ್ಯಕ್ತವಾಗುತ್ತಿವೆ. ಎಷ್ಟು ಬಾರಿ ಮನವಿ ಸಲ್ಲಿಸಿದರೂ ಉಭಯ ರಾಜ್ಯಗಳ ನಾಯಕರುಗಳು ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಣಾಜೆ ಸ್ವರ್ಗ ಚೆಕ್ ಪಾಯಿಂಟ್

೨೦ ವರ್ಷಗಳಿಂದ ವಾರಕ್ಕೆ ಎರಡು ಬಾರಿ ಕಾಸರಗೋಡುಗೆ ಹೋಗಿ ವೃತ್ತಿ ಮಾಡುತ್ತಿzನೆ. ಶಿಕ್ಷಕರು, ವೈದ್ಯರು, ಅಂಗಡಿಮುಂಗಟ್ಟು ಹೊಂದಿದ ನನ್ನಂತಹ ಅದೆಷ್ಟೋ ಮಂದಿ ವೃತ್ತಿಪರರು ತೊಂದರೆಗೊಳಗಾಗಿದ್ದಾರೆ. ಕೋವಿಡ್ ೧೯ ನಿಯಂತ್ರಣಕ್ಕೆ ಗಡಿ ಸಂಚಾರ ಬಂದ್ ಮಾಡಿರುವುದು ಉತ್ತಮ ಕ್ರಮವಾದರೂ ತಲಪಾಡಿ ಗಡಿಯಲ್ಲಿ ಮಾಡಿರುವಂತೆ ಪಾಣಾಜೆ ಸ್ವರ್ಗ ಗಡಿಯಲ್ಲಿಯೂ ಸ್ಕ್ರೀನಿಂಗ್ ಮತ್ತು ನೋಂದಣಿ ಪ್ರಕ್ರಿಯೆ ಮಾಡುವ ಮೂಲಕ ದಿನಂಪ್ರತಿ ಹೋಗಿ ಬರುವವರಿಗೆ ಅನುಕೂಲ ಮಾಡಿಕೊಡುವಲ್ಲಿ ಎರಡೂ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. – ಡಾ. ಅಖಿಲೇಶ್ ಪಿ.ಎಂ. ಪ್ರಾಂಶುಪಾಲರು ಫಾದರ್ ಮುಲ್ಲರ್ ವಾಕ್ ಶ್ರವಣಾಲಯ ಮಂಗಳೂರು


ನಾವು ಕರ್ನಾಟಕ ಕೇರಳ ಎರಡೂ ರಾಜ್ಯಗಳಲ್ಲಿ ವ್ಯವಹಾರ, ಉದ್ಯೋಗ ಮಾಡಿ ಜೀವನ ಸಾಗಿಸುವವರು. ಸಂಪರ್ಕ ರಸ್ತೆ ಬಂದ್ ಮತ್ತು ಸಂಚಾರಕ್ಕೆ ನಿಷೇಧ ಹಾಕಿದಾಗಿನಿಂದ ನಮ್ಮ ನಿತ್ಯ ಜೀವನದಲ್ಲಿ ಬಹುದೊಡ್ಡ ಸಮಸ್ಯೆ ತಲೆದೋರಿದೆ. ಹಾಲು, ಕೃಷಿ, ಮೆಡಿಕಲ್ ಹೀಗೆ ಎಲ್ಲದಕ್ಕೂ ಹತ್ತಿರವಾಗಿರುವ ಕರ್ನಾಟಕವನ್ನೇ ಅವಲಂಬಿಸಿದ್ದೆವು. ಆದರೆ ಈಗ ಎಲ್ಲಾ ಕಡೆ ಲಾಕ್‌ಡೌನ್ ಸಡಿಲಿಕೆಯಾದರೂ ನಾವು ಮಾತ್ರ ಇನ್ನೂ ಬಂಧನದಲ್ಲಿದ್ದೇವೆ. – ರಮೇಶ್ ಬಿ., ಕೃಷಿಕ ಕೇರಳ ನಿವಾಸಿ


ನಾನು ವಾಣಿನಗರ ನಿವಾಸಿ. ಪುತ್ತೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದೇನೆ. ಗಡಿ ಸಂಚಾರ ಬಂದ್ ಆಗಿರುವುದರಿಂದ ಶಾಲೆಗೆ ಹೋಗಿ ಬರಲಾಗುತ್ತಿಲ್ಲ. ಪರೀಕ್ಷೆ, ಆನ್‌ಲೈನ್ ತರಗತಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಇದ್ದ ಉದ್ಯೋಗವನ್ನೂ ಕಳೆದುಕೊಳ್ಳುವ ಆತಂಕ ನಿರ್ಮಾಣವಾಗಿದೆ. – ಗಣೇಶ್ ಪಿ. ಶಿಕ್ಷಕರು


 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.