ಕಡಬ ತಾ.ಪಂ.ಅಧ್ಯಕ್ಷ, ಉಪಾಧ್ಯಕ್ಷಗೆ ಮೀಸಲಾತಿ | ಅಧ್ಯಕ್ಷತೆ ಅನುಸೂಚಿತ ಜಾತಿ(ಮಹಿಳೆ), ಉಪಾಧ್ಯಕ್ಷತೆ ಸಾಮಾನ್ಯ ಸ್ಥಾನಕ್ಕೆ ಮೀಸಲು

Puttur_Advt_NewsUnder_1
Puttur_Advt_NewsUnder_1

ಬಿಜೆಪಿಯ ಲಲಿತಾ ಈಶ್ವರ ಅಥವಾ ರಾಜೇಶ್ವರಿ ಕನ್ಯಾಮಂಗಲಗೆ ಪ್ರಥಮ ಅಧ್ಯಕ್ಷರಾಗುವ ಭಾಗ್ಯ

ಪುತ್ತೂರು: ಪುತ್ತೂರು ಹಾಗೂ ಸುಳ್ಯ ತಾಲೂಕು ಪಂಚಾಯತ್‌ನಿಂದ ಬೇರ್ಪಟ್ಟು 13 ಕ್ಷೇತ್ರಗಳೊಂದಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಪಂಚಾಯತ್‌ನ ಪ್ರಥಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು ಅಧ್ಯಕ್ಷತೆ ಅನುಸೂಚಿತ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷತೆ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದೆ.


೧೪-೧೦-೨೦೧೯ರಂದು ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ಕಡಬ ಸೇರಿದಂತೆ ೪೯ ತಾಲೂಕು ಪಂಚಾಯತ್‌ಗಳಿಗೆ ೫ ವರ್ಷಗಳ ಉಳಿದ ಅವಧಿಗೆ ಮಾತ್ರ ಅನ್ವಯವಾಗುವಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿ ಜೂ.೧೮ರ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಅದರಂತೆ ಕಡಬ ತಾಲೂಕು ಪಂಚಾಯತ್‌ನ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
13 ತಾ.ಪಂ.ಕ್ಷೇತ್ರಗಳು: ಪುತ್ತೂರು ತಾ.ಪಂ.ನ ೧೧ ಹಾಗೂ ಸುಳ್ಯ ತಾ.ಪಂ.ನ ೨ ಕ್ಷೇತ್ರಗಳು ನೂತನ ಕಡಬ ತಾ.ಪಂ.ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ಪುತ್ತೂರು ತಾಲೂಕು ಪಂಚಾಯತ್‌ನಲ್ಲಿದ್ದ ಕಡಬ, ಕುಟ್ರುಪ್ಪಾಡಿ, ಐತ್ತೂರು, ಬಿಳಿನೆಲೆ, ಗೋಳಿತ್ತೊಟ್ಟು, ಚಾರ್ವಾಕ, ಸವಣೂರು, ನೆಲ್ಯಾಡಿ, ಕೌಕ್ರಾಡಿ, ಆಲಂಕಾರು, ರಾಮಕುಂಜ ಹಾಗೂ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಎಣ್ಮೂರು ಕ್ಷೇತ್ರಗಳು ಹೊಸದಾಗಿ ರಚನೆಗೊಂಡಿರುವ ಕಡಬ ತಾಲೂಕು ಪಂಚಾಯತ್‌ಗೆ ಸೇರ್ಪಡೆಗೊಂಡಿವೆ. ಫಝಲ್ ಕೋಡಿಂಬಾಳ(ಕಡಬ), ಗಣೇಶ್ ಕೈಕುರೆ(ಕುಟ್ರುಪ್ಪಾಡಿ), ಪಿ.ವೈ.ಕುಸುಮಾ(ಐತ್ತೂರು), ಆಶಾ ಲಕ್ಷ್ಮಣ್(ಬಿಳಿನೆಲೆ), ತೇಜಸ್ವಿನಿಶೇಖರ ಗೌಡ(ಗೋಳಿತ್ತೊಟ್ಟು), ಲಲಿತಾ ಈಶ್ವರ(ಚಾರ್ವಾಕ), ರಾಜೇಶ್ವರಿ ಕನ್ಯಾಮಂಗಲ(ಸವಣೂರು), ಉಷಾ ಅಂಚನ್(ನೆಲ್ಯಾಡಿ), ವಲ್ಸಮ್ಮ ಕೆ.ಟಿ.(ಕೌಕ್ರಾಡಿ), ತಾರಾ ಕೇಪುಳು(ಆಲಂಕಾರು), ಜಯಂತಿ ಆರ್.ಗೌಡ(ರಾಮಕುಂಜ), ಅಶೋಕ್ ನೆಕ್ರಾಜೆ(ಸುಬ್ರಹ್ಮಣ್ಯ), ಶುಭದಾ ಎಸ್.ರೈ.(ಎಣ್ಮೂರು)ಯವರು ಕಡಬ ತಾ.ಪಂ.ಸದಸ್ಯರಾಗಿದ್ದಾರೆ. ಇದರಲ್ಲಿ ೭ ಮಂದಿ ಬಿಜೆಪಿ ಹಾಗೂ ೬ ಮಂದಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ.
ಲಲಿತಾ, ರಾಜೇಶ್ವರಿಗೆ ಅವಕಾಶ: ಕಡಬ ತಾ.ಪಂ.ನ ೧೩ ಸದಸ್ಯರ ಪೈಕಿ ಇಬ್ಬರು ಅನುಸೂಚಿತ ಜಾತಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಚಾರ್ವಾಕ ಕ್ಷೇತ್ರದ ಸದಸ್ಯೆ, ಪುತ್ತೂರು ತಾ.ಪಂ.ನ ಉಪಾಧ್ಯಕ್ಷೆಯಾಗಿದ್ದ ಲಲಿತಾ ಈಶ್ವರ ಹಾಗೂ ಸವಣೂರು ತಾ.ಪಂ.ಸದಸ್ಯೆ, ಕಳೆದ ಅವಧಿಯಲ್ಲಿ ಪುತ್ತೂರು ತಾ.ಪಂ.ನ ಉಪಾಧ್ಯಕ್ಷೆಯಾಗಿದ್ದ ರಾಜೇಶ್ವರಿ ಕನ್ಯಾಮಂಗಲರವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇಬ್ಬರೂ ಬಿಜೆಪಿ ಸದಸ್ಯರುಗಳೇ ಆಗಿರುವುದರಿಂದ ಒಮ್ಮತದ ಅಭ್ಯರ್ಥಿಯ ಆಯ್ಕೆಯಾಗುವ ಸಾಧ್ಯತೆಯಿದೆ. ಇವರಿಬ್ಬರ ಪೈಕಿ ಕಡಬ ತಾ.ಪಂ.ನ ಪ್ರಥಮ ಅಧ್ಯಕ್ಷ ಸ್ಥಾನದ ಭಾಗ್ಯ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಉಪಾಧ್ಯಕ್ಷತೆ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿರುವುದರಿಂದ ೧೩ ಅಭ್ಯರ್ಥಿಗಳಿಗೂ ಸ್ಪರ್ಧಿಸುವ ಅವಕಾಶವಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಶೀಘ್ರ ದಿನಾಂಕ ಘೋಷಣೆಯಾಗಲಿದೆ ಎಂದು ವರದಿಯಾಗಿದೆ.

 

ಪುತ್ತೂರು ತಾ.ಪಂ. ಉಪಾಧ್ಯಕ್ಷ ಹುದ್ದೆ ಖಾಲಿ: ಪ್ರಸ್ತುತ ಪುತ್ತೂರು ತಾಲೂಕು ಪಂಚಾಯತ್ ಉಪಾಧ್ಯಕ್ಷೆಯಾಗಿದ್ದ ಲಲಿತಾ ಈಶ್ವರ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರ ನೂತನ ಕಡಬ ತಾ.ಪಂ.ಕ್ಷೇತ್ರ ವ್ಯಾಪ್ತಿಗೆ ಬರುವ ಕಾರಣ ಅವರ ಉಪಾಧ್ಯಕ್ಷತೆ ಹುದ್ದೆ ತೆರವಾಗಿದೆ.ಇದರಿಂದಾಗಿ ಪುತ್ತೂರು ತಾಲೂಕು ಪಂಚಾಯತ್ ಉಪಾಧ್ಯಕ್ಷ ಸ್ಥಾನ ಖಾಲಿಯಿದ್ದು ನೂತನವಾಗಿ ಉಪಾಧ್ಯಕ್ಷರ ಆಯ್ಕೆ ಆಗಬೇಕಿದೆ. ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ಕುರಿತು ತಾಲೂಕು ಪಂಚಾಯತ್‌ನಿಂದ ಈಗಾಗಲೇ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.