HomePage_Banner
HomePage_Banner
HomePage_Banner

ನೆಲ್ಯಾಡಿ ಗ್ರಾ.ಪಂ.ಸಾಮಾನ್ಯ ಸಭೆ | ಘನ ತ್ಯಾಜ್ಯ ಘಟಕ ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ಆಗ್ರಹ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: 20 ಲಕ್ಷ ರೂ.ವೆಚ್ಚದಲ್ಲಿ ಗ್ರಾಮ ಪಂಚಾಯತ್‌ನಿಂದ ನಿರ್ಮಾಣಗೊಂಡಿರುವ ಘನ ತ್ಯಾಜ್ಯ ಘಟಕವನ್ನು ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ನೆಲ್ಯಾಡಿ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದಾರೆ.


ಸಭೆ ಜೂ.21ರಂದು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ನಡೆದ ಚರ್ಚೆಯ ವೇಳೆ ವಿಷಯ ಪ್ರಸ್ತಾಪಿಸಿದ ಸದಸ್ಯ ಜಯಾನಂದ ಬಂಟ್ರಿಯಾಲ್‌ರವರು, ಗ್ರಾಮ ಪಂಚಾಯತ್ ವತಿಯಿಂದ 20 ಲಕ್ಷ ರೂ.ವೆಚ್ಚದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಗೊಂಡಿದೆ. ಗ್ರಾ.ಪಂ.ವ್ಯಾಪ್ತಿಯಲ್ಲಿನ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಘಟಕವನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಬೇಕು. ವರ್ತಕರಿಂದ ಕೇವಲ ಒಣಕಸ ಮಾತ್ರ ಸಂಗ್ರಹಿಸುವುದಲ್ಲ, ಹಸಿ ಕಸವನ್ನೂ ಸಂಗ್ರಹಿಸಿ ಸರಿಯಾಗಿ ಬೇರ್ಪಡಿಸಿ ವಿಲೇವಾರಿ ಮಾಡುವ ಕೆಲಸವೂ ಆಗಬೇಕೆಂದು ಆಗ್ರಹಿಸಿದರು. ಘನ ತ್ಯಾಜ್ಯ ಘಟಕ ನಿರ್ಮಾಣಗೊಂಡಿರುವುದರಿಂದ ತ್ಯಾಜ್ಯ ವಿಲೇವಾರಿ ಕ್ರಮಬದ್ಧವಾಗಿ ಆಗಬೇಕೆಂದು ಸದಸ್ಯ ಅಬ್ರಹಾಂ ಕೆ.ಪಿ.,ಹಾಗೂ ಇತರರೂ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರ ಶೆಟ್ಟಿಯವರು, ವರ್ತಕರಿಗೆ ಗ್ರಾಮ ಪಂಚಾಯತ್ ವತಿಯಿಂದ ಕಸ ಸಂಗ್ರಹಕ್ಕಾಗಿ ಬಕೆಟ್ ನೀಡಲಾಗುವುದು. ಬಳಿಕ ಅವರಿಗೆ ನಿಗದಿತ ಶುಲ್ಕ ವಿಧಿಸಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಸ ವಿಲೇವಾರಿ ವಾಹನ ಗ್ರಾಮ ಪಂಚಾಯತ್‌ಗೆ ಬರುವ ತನಕ ಬಾಡಿಗೆ ವಾಹನ ಗೊತ್ತುಪಡಿಸಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ, ಚರ್ಚೆ:
ಕೊರೋನಾ ವೈರಸ್‌ನಿಂದಾಗಿ ಸಂತೆ ಮಾರುಕಟ್ಟೆಯಲ್ಲಿ ಈಗ ವಾರದ ಸಂತೆ ನಡೆಯುತ್ತಿಲ್ಲ. ವಾರದ ಸಂತೆ ವಸೂಲಿ ಹಕ್ಕಿನ ಏಲಂ ಅವಧಿಯೂ ಮುಕ್ತಾಯಗೊಂಡಿದೆ. ಏಲಂ ಆಗುವ ತನಕ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವವರಿಗೆ ದಿನವಹಿ ಶುಲ್ಕ ಪಾವತಿಸಿ ವ್ಯಾಪಾರ ನಡೆಸಲು ಅವಕಾಶ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಪಡುಬೆಟ್ಟುವಿನಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಉಪಯೋಗವಾಗುತ್ತಿಲ್ಲ. ಇದರ ಕಾಮಗಾರಿಯೂ ಅಪೂರ್ಣಗೊಂಡಿದೆ. ಈ ಘಟಕವನ್ನು ಸ್ಥಳೀಯ ಸರಕಾರಿ ಶಾಲೆಗೆ ನೀರಿನ ಬಳಕೆಗೆ ಉಪಯೋಗಿಸಲು ಕ್ರಮಕೈಗೊಳ್ಳಬೇಕೆಂದು ಸದಸ್ಯ ಶಬ್ಬೀರ್ ಸಾಹೇಬ್ ಆಗ್ರಹಿಸಿದರು.
ಅಂಗನವಾಡಿ ಜಾಗಕ್ಕೆ ಆರ್‌ಟಿಸಿ ಆಗಿಲ್ಲ:
ನೆಲ್ಯಾಡಿ ಪೇಟೆ ಅಂಗನವಾಡಿ ಜಾಗಕ್ಕೆ ಇನ್ನೂ ಆರ್‌ಟಿಸಿ ಆಗಿಲ್ಲ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಸದಸ್ಯ ಅಬ್ದುಲ್ ಹಮೀದ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರ ಶೆಟ್ಟಿಯವರು, ಸ್ಥಳದ ಅಳತೆ ನಡೆದು ಕಂದಾಯ ಇಲಾಖೆಗೆ ಹಸ್ತಾಂತರವಾಗಿದೆ. ಬಳಿಕದ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲ ಎಂದರು. ಇಲ್ಲಿ ಅಂಗನವಾಡಿ ಕಟ್ಟಡಕ್ಕೆ ೧ ಕಾನೂನು, ಬೇರೆಯವರಿಗೆ ೧ ಕಾನೂನು ಎಂಬಂತೆ ಆಗಿದೆ. ಅಂಗನವಾಡಿಗೆ ಬೇರೆ ಜಾಗವಾದರೂ ಗುರುತಿಸಬೇಕೆಂದು ಅಬ್ದುಲ್ ಹಮೀದ್‌ರವರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಜಯಾನಂದ ಬಂಟ್ರಿಯಾಲ್‌ರವರು, ಗ್ರಾ.ಪಂ.ನಿಂದ ಅಂಬೇಡ್ಕರ್ ಭವನ, ಸ್ತ್ರೀಶಕ್ತಿ ಭವನಕ್ಕೂ ಜಾಗ ಗುರುತಿಸಲಾಗಿದೆ. ಆದರೆ ಇಲ್ಲಿಯ ತನಕವೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಿದರು.
ಶಿಥಿಲಗೊಂಡ ಸೇತುವೆ:
ನೆಲ್ಯಾಡಿಯಿಂದ ಪಡುಬೆಟ್ಟು ಸಂಪರ್ಕಿಸುವ ರಸ್ತೆಯ ಬೈಲು ಎಂಬಲ್ಲಿ ಇರುವ ಸೇತುವೆ ಶಿಥಿಲಗೊಂಡಿದೆ. ಸೇತುವೆಯ ಹಿಂದೆ ಹಾಗೂ ಮುಂದೆ ರಸ್ತೆಯು ಹೊಂಡಗಳಿಂದ ಕೂಡಿದೆ. ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಸದ್ರಿ ಸೇತುವೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಶಬ್ಬೀರ್‌ರವರು ಆಗ್ರಹಿಸಿದರು. ನೆಲ್ಯಾಡಿಯಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಕೆ, ನಿರ್ವಹಣೆ ಬಗ್ಗೆಯೂ ಚರ್ಚೆ ನಡೆಯಿತು.
ತಾ.ಪಂ.ಸದಸ್ಯೆ ಉಷಾ ಅಂಚನ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಉಪಾಧ್ಯಕ್ಷೆ ಉಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರುಗಳಾದ ಉಷಾ ಜೋಯಿ, ತೀರ್ಥೇಶ್ವರ ಉರ್ಮಾನು, ವಿನೋದರ, ಉಮಾವತಿ ದರ್ಖಾಸು, ಮೋಹಿನಿ, ಚಿತ್ರಾ ರಾಮನಗರ, ಫ್ಲೋರಿನಾ ಡಿ.ಸೋಜರವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಪಿಡಿಒ ಮಂಜುಳ ಎನ್.,ರವರು ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿ, ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು. ಕಾರ್ಯದರ್ಶಿ ದೇವರಾಜ್ ಸ್ವಾಗತಿಸಿ, ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಸಿಬ್ಬಂದಿಗಳಾದ ಭವ್ಯ, ಲಲಿತಾ, ಸೋಮಶೇಖರ, ಗಿರೀಶ್, ಲೀಲಾವತಿ, ಅಬ್ದುಲ್ ರಹಿಮಾನ್‌ರವರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.