ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಪುತ್ತೂರು ಉಪವಿಭಾಗ ಅಬಕಾರಿ ಉಪ ನಿರೀಕ್ಷಕರಾಗಿ, ಸುಳ್ಯ ವಲಯ ಪ್ರಭಾರ ಅಬಕಾರಿ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರಿಗೆ ರಾಜ್ಯ ಸರಕಾರಿ ನೌಕರರ ಸಂಘ ಇದರ ತಾಲೂಕು ಶಾಖೆಯಿಂದ ಬಪ್ಪಳಿಗೆ-ಪುತ್ತೂರು ಇಲ್ಲಿನ ಸಂಘದ ಸಮುದಾಯ ಭವನದ ಕಛೇರಿಯಲ್ಲಿ ಜೂ. 20ರಂದು ಸಂಜೆ ಬೀಳ್ಕೊಡುಗೆ ಸಮ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು.
ಸಮುದಾಯ ಭವನದ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ-ಮೌರಿಸ್ ಮಸ್ಕರೇನ್ಹಸ್:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್ರವರು ಮಾತನಾಡಿ, ಇತ್ತೀಚೆಗೆ ನಿವೃತ್ತರಾದ ಮಹಾಲಿಂಗ ನಾಯ್ಕರವರದ್ದು ಆತ್ಮೀಯತೆಯನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವವಾಗಿದೆ. ಸರಕಾರಿ ಸಮುದಾಯ ಭವನದ ಶಂಕುಸ್ಥಾಪನೆ ಸಂದರ್ಭದಲ್ಲಿ ಮಹಾಲಿಂಗ ನಾಯ್ಕರವರು ಕರ್ತವ್ಯದ ನಿಮಿತ್ತ ಸುಳ್ಯಕ್ಕೆ ವರ್ಗಾವಣೆಗೊಂಡರು. ಸಂಘದ ಸಮುದಾಯ ಭವನದ ನಿರ್ಮಾಣದಲ್ಲಿ ಮಹಾಲಿಂಗ ನಾಯ್ಕರವರು ಆರ್ಥಿಕ ಕ್ರೋಢೀಕರಣದ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಸುದೀರ್ಘ ಅವಧಿಯ ಬಳಿಕ ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರು ಸಂಘದೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸಂಘದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಹೇಳಿ ಅವರ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ಸೇವಾ ಕ್ಷೇತ್ರದಲ್ಲಿ ಕಪ್ಪುಚುಕ್ಕೆ ಬಾರದಂತೆ ಕರ್ತವ್ಯ-ಪುರುಷೋತ್ತಮ್:
ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ರವರು ಮಾತನಾಡಿ, ಅಬಕಾರಿ ಸೇವಾ ಕ್ಷೇತ್ರದಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸಿದವರು ಮಹಾಲಿಂಗ ನಾಯ್ಕರು. ಉನ್ನತ ಅಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ವಿನಯತೆಯನ್ನು ಶಕ್ತಿಯನ್ನಾಗಿ ಮೈಗೂಡಿಸಿಕೊಂಡು ಸೇವೆ ಸಲ್ಲಿಸುವ ಮೂಲಕ ಮಹಾಲಿಂಗ ನಾಯ್ಕರು ಉತ್ತಮ ಹೆಸರನ್ನು ಗಳಿಸಿಕೊಂಡಿದ್ದಾರೆ ಎಂದು ಹೇಳಿ ಅವರ ನಿವೃತ್ತ ಜೀವನವು ಆಯುರಾರೋಗ್ಯದಿಂದ ಕೂಡಿರಲಿ ಎಂದು ಶುಭಹಾರೈಸಿದರು.
ಸೇವೆಯ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು-ಕೆ.ಕೃಷ್ಣಪ್ಪ:
ರಾಜ್ಯ ಪರಿಷತ್ ಮಾಜಿ ಸದಸ್ಯರಾದ ಕೆ.ಕೃಷ್ಣಪ್ಪರವರು ಮಾತನಾಡಿ, ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅದೊಂದು ಪಬ್ಲಿಕ್ ಸ್ಕಿಲ್ನೊಂದಿಗೆ ಜಂಜಾಟದ ಇಲಾಖೆಯಾಗಿದೆ. ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮುಖೇನ ಸರಕಾರದ ಬೊಕ್ಕಸಕ್ಕೆ ಆದಷ್ಟು ರೆವೆನ್ಯೂ ತಂದುಕೊಡುವ ಇಲಾಖೆಯಲ್ಲಿ ಅಬಕಾರಿ ಇಲಾಖೆಯೂ ಒಂದಾಗಿದೆ. ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರು ಕೇವಲ ಅವರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಮರಾಠಿ ಸೇವಾ ಸಂಘದಲ್ಲಿ ಅಧ್ಯಕ್ಷರಾಗಿ ಅಥವಾ ಇತರ ಸಂಘ ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಮುಂದಿನ ಅವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಶುಭಹಾರೈಸಿದರು.
ಕರ್ತವ್ಯಲೋಪ ಎಸಗಿದ್ದಲ್ಲಿ ಮರುನಿಮಿಷದಲ್ಲಿಯೇ ನಿರ್ದೇಶನ ಬರುತ್ತೆ-ರಾಮಚಂದ್ರ ಭಟ್:
ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ರವರು ಮಾತನಾಡಿ, ಇತರ ಯಾವುದೇ ಚಟುವಟಿಕೆಗಳಲ್ಲಿ ಯಾರು ಹೊಂದಿಕೊಳ್ಳುತ್ತಾರೋ ಅವರು ಪ್ರವೃತ್ತಿಯಲ್ಲಿ ನಿವೃತ್ತರಾಗೋದಿಲ್ಲ. ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಂದಿಗ್ಧ ಪರಿಸ್ಥಿಯನ್ನು ಎದುರಿಸುವಂತಹ ಸಂದರ್ಭವಿರುತ್ತದೆ. ಸರಕಾರಿ ನೌಕರರು ತಮ್ಮ ಕೆಲಸದಲ್ಲಿ ಏನಾದರೂ ಕರ್ತವ್ಯ ಲೋಪ ಎಸಗಿದರೆ ಮೊದಲು ಟಪ್ಪಾಲುವಿನಲ್ಲಿ ಮೇಲಾಧಿಕಾರಿಯಿಂದ ನಿರ್ದೇಶನ ಬರುತ್ತೆ. ಆದರೆ ಈಗ ಹಾಗಲ್ಲ. ಮರುನಿಮಿಷದಲ್ಲಿಯೇ ಬರುತ್ತೆ. ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಈ ಮೂಲಕ ಹಾರೈಸುತ್ತೇನೆ ಎಂದರು.
ಪತ್ರಿಕೆಯಲ್ಲಿನ ವರದಿಗಳು ಹೇಳುತ್ತೆ, ಮಹಾಲಿಂಗ ನಾಯ್ಕರ ಸೇವೆಗಳು-ರವಿಚಂದ್ರ:
ನರಿಮೊಗರು ವಿಭಾಗದ ಪಿಡಿಒ ರವಿಚಂದ್ರರವರು ಮಾತನಾಡಿ, ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಎಷ್ಟು ಹೆಸರು ಗಳಿಸಿದ್ದಾರೆ ಎಂಬುದು ಪತ್ರಿಕೆಯಲ್ಲಿ ಬಂದಂತಹ ವರದಿಗಳು ಹೇಳುತ್ತವೆ. ಕರ್ತವ್ಯದಲ್ಲಿರುವಾಗ ಮಾಡುವ ಸೇವೆ ಹಾಗೂ ಮೌಲ್ಯಗಳು ನಿವೃತ್ತಿ ಬಳಿಕ ಬೆಳಕಿಗೆ ಬರುವಂತಾಗಿದೆ. ವೃತ್ತಿ ಕ್ಷೇತ್ರದಲ್ಲಿ ಜನಾನುರಾಗಿಯಾಗಿ ಸೇವೆಗೈಯುವ ಮೂಲಕ ಮಹಾಲಿಂಗ ನಾಯ್ಕರವರು ಉತ್ತಮ ಹೆಸರನ್ನು ಸಂಪಾದಿಸಿದ್ದು, ಅವರ ಮುಂದಿನ ನಿವೃತ್ತಿ ಜೀವನವು ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಸಿದರು.
‘ಎಡ್ಡೆ ಜನ ಮಾರ್ರೆ’ ಪ್ರಶಂಸೆಯ ಮಾತುಗಳು ಮಹಾಲಿಂಗ ನಾಯ್ಕರಿಗಿದೆ-ಮಾಮಚ್ಚನ್ ಎಂ:
ಪಡ್ನೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ.ರವರು ಮಾತನಾಡಿ, ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರು ‘ಎಡ್ಡೆ ಜನ ಮಾರ್ರೆ’ ಎಂಬ ಪ್ರಶಂಸೆಯ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದವು. ವೃತ್ತಿ ಜೀವನದಲ್ಲಿ ನಾವು ಉತ್ತಮ ಹೆಸರನ್ನು ಸಂಪಾದನೆ ಮಾಡಿದಾಗ ನಾವು ಮಾಡುವ ಸೇವೆಯು ತೃಪ್ತಿದಾಯಕವಾಗಿರುತ್ತದೆ. ಮುಂದಿನ ನಿವೃತ್ತಿ ಜೀವನದಲ್ಲಿ ಮಹಾಲಿಂಗ ನಾಯ್ಕರವರು ಸಂಘದಲ್ಲಿ ಕೈಜೋಡಿಸಿ ಸಂಘದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಹೇಳಿ ಅವರ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.
ಸಂಘದ ಸದಸ್ಯರಾದ ಸರಕಾರಿ ವಾಹನ ಚಾಲಕರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಸೀತಾರಾಂ, ಶಿಕ್ಷಣ ಇಲಾಖೆಯ ಗಿರಿಧರ್ ಗೌಡ, ಜ್ಯೂಲಿಯಾನ ಮೋರಸ್, ಎಫ್.ಜಿ ಮಂಗನ್ಗೌಡ, ಫಾರೆಸ್ಟ್ ಇಲಾಖೆಯ ಶಿವಾನಂದ ಆಚಾರ್ಯ, ಪುತ್ತೂರು ನ್ಯಾಯಾಲದ ವೆಂಕಟೇಶ್, ಪಶುಸಂಗೋಪನಾ ಇಲಾಖೆಯ ಹೊನ್ನಪ್ಪ ಬಿ.ಗೌಡ, ಪಿಡಬ್ಲ್ಯೂಡಿ ಇಂಜಿನಿಯರ್ ಲಿಂಡ್ಸೆ ಕಾಲಿನ್ ಸಿಕ್ವೇರಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ ಸ್ವಾಗತಿಸಿ, ಸಂಘದ ಕೋಶಾಧಿಕಾರಿ ನಾಗೇಶ್ ವಂದಿಸಿದರು.