ಜುಲೈನಿಂದ ಪ್ರತಿ ತಿಂಗಳು ಬಾಲವನದಲ್ಲಿ -ನಿರಂತರ ಸಾಂಸ್ಕೃತಿಕ ಚಟುವಟಿಕೆ-ಕೋಟಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸಾಹಿತ್ಯಾಸಕ್ತರೊಂದಿಗೆ ಬಾಲವನ ಅಭಿವೃದ್ಧಿ ಸಭೆ

ಕಾರಂತರನ್ನು ಮತ್ತೊಮ್ಮೆ ದೇಶ, ರಾಜ್ಯಕ್ಕೆ ಪರಿಚಯಿಸುವ ಕೆಲಸ – ಸಂಜೀವ ಮಠಂದೂರು

ಸುಳ್ಯದ ಶಿಕ್ಷಣ ಸಂಯೋಜಕ ಸುಂದರ ಕೇನಾಜೆ ಬಾಲವನದ ಆಡಳಿತಾಧಿಕಾರಿಯಾಗಿ ನೇಮಕ

ಕಾರಂತರ ಭಾವ ಚಿತ್ರ ಸಂಪುಟ
ಬಾಲವನದಲ್ಲಿ ಅಧ್ಯಯನ ಪೀಠ
ಬಾಲವನದಲ್ಲಿ ೫ನೇ ರಂಗಾಯಣ
ಯಕ್ಷಗಾನ ಕೇಂದ್ರ ಆರಂಭಿಸಬೇಕು
ಕಾರಂತರ ಮಕ್ಕಳ ಕೂಟ ಪರಿಕಲ್ಪನೆ

ಪುತ್ತೂರು:ಡಾ|ಶಿವರಾಮ ಕಾರಂತರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾಗಿರದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರಾಗಿದ್ದಾರೆ.ಅವರ ಕರ್ಮಭೂಮಿಯಲ್ಲೇ ಇನ್ನಷ್ಟು ಅಭಿವೃದ್ಧಿ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕಾಗಿತ್ತು.ಜುಲೈ ತಿಂಗಳಿನಿಂದ ಪ್ರತಿ ತಿಂಗಳು ಪ್ರಥಮ ಅಥವಾ ದ್ವಿತೀಯ ಭಾನುವಾರ ಬಾಲವನದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆ ನಡೆಯಲಿದೆ ಎಂದು ಮುಜುರಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪರ್ಲಡ್ಕದ ಬಾಲವನದಲ್ಲಿ ಜೂ.21ರಂದು ಸಂಜೆ ಸಾಹಿತ್ಯ, ಸಂಗೀತ, ರಂಗಭೂಮಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರೊಂದಿಗೆ ಸಭೆ ನಡೆಸಿ ಬಾಲವನದ ಅಭಿವೃದ್ಧಿಯ ಕುರಿತು ಮಾಹಿತಿ ಪಡೆದು ಅವರು ಮಾತನಾಡಿದರು. ಕಾರಂತರ ಬಾಲವನದಲ್ಲಿ ಕಾರಂತರ ಆಶಯಕ್ಕೆ ಪೂರಕವಾದ ನಿರೀಕ್ಷಿತ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿಲ್ಲ ಎಂಬ ದೂರು ಇದೆ. ಇಲ್ಲಿ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇದನ್ನು ಪರಿಹರಿಸಬೇಕಿದೆ ಎಂದ ಅವರು ಬಾಲವನದಲ್ಲಿ ನಿರಂತರವಾಗಿ ಸಾಹಿತ್ಯ, ಕಲೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಕಾರಂತರ ಆಶಯ ಮತ್ತು ಚಿಂತನೆಗೆ ಪೂರಕವಾಗಿರುವ ಕಾರ್ಯಕ್ರಮಗಳು ನಡೆಯುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು. ಕುಪ್ಪಳ್ಳಿ, ಧಾರವಾಢ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜ್ಞಾನ ಪೀಠ ಪುರಸ್ಕೃತರ ಹೆಸರಿನಲ್ಲಿ ನಡೆಯವಂತೆ ಕಾರಂತರ ಕರ್ಮಭೂಮಿಯಾದ ಪುತ್ತೂರಿನಲ್ಲಿಯೂ ಕಾರ್ಯಕ್ರಮಗಳು ನಡೆಯಬೇಕು ಎಂದ ಸಚಿವರು, ಸಾಂಸ್ಕೃತಿಕ ಚಟುವಟಿಕೆಗಾಗಿ ಸಮಿತಿ ರಚನೆ ಮಾಡಬೇಕು.ಎಲ್ಲಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮುಖ್ಯ ಎಂದರು.ಪ್ರಥಮ ಹಂತದಲ್ಲಿ ಕೂಟ ಯಕ್ಷಗಾನ ಮಾಡುವುದು ಉತ್ತಮ ಎಂದು ಅನಿಸುತ್ತಿದೆ. ಜೊತೆಗೆ ಯಕ್ಷಗಾನ ತರಬೇತಿ, ನೃತ್ಯ, ಚಿತ್ರಕಲೆ ತರಬೇತಿಗಾಗಿ ಉಚಿತ ಅವಕಾಶ ನೀಡುವ. ಕೊರೋನಾದ ಬಳಿಕ ಈ ಕುರಿತು ಚಿಂತನೆ ಮಾಡುವ ಎಂದ ಅವರು ಒಟ್ಟು ವ್ಯವಸ್ಥೆಯ ದೃಷ್ಟಿಯಿಂದ ದುಡಿಯುವ, ಅನುಭವ ಮತ್ತು ಸಂಘಟನೆ ಮಾಡುವ ಶಕ್ತಿ ಇರುವ ತಂಡ ರಚನೆ ಆಗಬೇಕು. ಕೊರೋನಾದ ನಡುವೆ ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಯಾವ ರೀತಿಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳಬಹುದು ಹಾಗೂ ಪ್ರೇಕ್ಷಕರಿಗೆ ಹಾಗೂ ಕಾರಂತರಿಗೆ ಧಕ್ಕೆಯಾಗದ ರೀತಿಯಲ್ಲಿ ಅವರ ವ್ಯಕ್ತಿತ್ವಕ್ಕೆ ಅಭಾಸ ಆಗದಂತೆ ಕಾರ್ಯಕ್ರಮ ನಡೆಯಬೇಕು ಎಂದರು.
ಕಾರಂತರನ್ನು ಮತ್ತೊಮ್ಮೆ ದೇಶ, ರಾಜ್ಯಕ್ಕೆ ಪರಿಚಯಿಸುವ ಕೆಲಸ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಬಾಲವನದಲ್ಲಿ ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುವುದರೊಂದಿಗೆ ಕಾರಂತರನ್ನು ಮತ್ತೊಮ್ಮೆ ದೇಶಕ್ಕೆ, ರಾಜ್ಯಕ್ಕೆ ಪರಿಚಯಿಸುವ ಕೆಲಸ ಆಗಲಿದೆ. ಈಗಾಗಲೇ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ೨ನೇ ಸಭೆಯೂ ನಡೆದಿದೆ. ಜೂ.೨೫ ಕ್ಕೆ ಟ್ರಸ್ಟ್‌ನ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಹೀಗೆ ಬಾಲವನದ ಅಭಿವೃದ್ಧಿಗೆ ಚುರುಕು ಮುಟ್ಟಿಸಲಾಗಿದೆ.ಐಟಿಬಿಟಿ ಯುಗದಲ್ಲಿ ಸಾಹಿತ್ಯಗಳ ಪರಿಚಯ ಇವತ್ತಿನ ಪೀಳಿಗೆಗೆ ಆಗಬೇಕು.ಇದರ ಜೊತೆಗೆ ಪರಂಪರೆಯನ್ನು ಉಳಿಸಿ ಸಾಹಿತ್ಯವನ್ನು ಮೈಗೂಡಿಸುವ ಕೆಲಸಕ್ಕಾಗಿ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಒಂದೊಂದು ಪರಿಣತರ ತಂಡ ಸೇರಿಸಿ ಇಡಿ ವರ್ಷ ಏನೇನು ಮಾಡಬಹುದು ಮತ್ತು ಬಾಲವನಕ್ಕೆ ಮಕ್ಕಳು ಸೇರಿದಂತೆ ಹಿರಿಯರು ನಿರಂತರ ಭಾಗವಹಿಸುವಂತೆ ಮಾಡುವ ಜವಾಬ್ದರಿ ಎಲ್ಲರ ಮೇಲೂ ಇದೆ. ಇಲ್ಲಿನ ಪರಂಪರೆ, ಸಂಸ್ಕೃತಿ, ಸಾಹಿತ್ಯ ಎಲ್ಲವನ್ನೂ ಮೈಗೂಡಿಸುವ ಮೂಲಕ ಇದೊಂದು ಅದ್ಭುತ ಲೋಕ ಆಗಬೇಕೆಂದು ಹೇಳಿದರು.
ಕಾರಂತರ ಭಾವ ಚಿತ್ರ ಸಂಪುಟ:
ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ|ಶ್ರೀಧರ್ ಹೆಚ್.ಜಿ ಅವರು ಮಾತನಾಡಿ ಬಾಲವನಕ್ಕೆ ಬಂದಾಗ ಕಾರಂತರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ವ್ಯವಸ್ಥೆ ಆಗಬೇಕು.ಇದಕ್ಕಾಗಿ ಕಾರಂತರ ಭಾವಚಿತ್ರ ಸಂಪುಟ ಆಗಬೇಕು.ಕಾರಂತರ ವಿಮರ್ಶೆಗೆ ಸಂಪುಟ ರಚನೆ, ಕಾರಂತರ ಸಾಹಿತ್ಯ ಮರುಮದ್ರಣ, ಕಾರಂತರ ಕೃತಿಯನ್ನು ವಿಶ್ವವಿದ್ಯಾನಿಲಯದ ಪಠ್ಯಕ್ಕೆ ಸೇರಿಸುವ ಕೆಲಸ ಆಗಬೇಕು.ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯದಲ್ಲೂ ಕಾರಂತರ ಒಂದು ಕೃತಿ ಬರಬೇಕೆಂದು ಪ್ರಸ್ತಾಪಿಸಿದರು.
ಕಾರಂತರ ವಿಚಾರ ರಾಜ್ಯಮಟ್ಟದಲ್ಲಿರಬೇಕು:
ಸಂಸ್ಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿಯವರು ಮಾತನಾಡಿ ಕೇವಲ ಕಾರಂತರು ಪುತ್ತೂರಿಗೆ ಸೀಮಿತವಾಗಿರದೆ ರಾಜ್ಯಮಟ್ಟದಲ್ಲೂ ಇರಬೇಕು ಎಂದಾಗ ಸಚಿವರು ಮಾತನಾಡಿ ಶಾಲಾ ಮಕ್ಕಳ ಪ್ರವಾಸದ ಪಟ್ಟಿಯಲ್ಲಿ ಕಾರಂತರ ಹೆಸರನ್ನೂ ಸೇರಿಸುವ ಕೆಲಸ ಮಾಡುವ ಎಂದರು.
ಬಾಲವನದಲ್ಲಿ ಅಧ್ಯಯನ ಪೀಠ:
ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸ ಡಾ|ನರೇಂದ್ರ ರೈ ದೇರ್ಲ ಅವರು ಮಾತನಾಡಿ ಕಾರಂತರ ಮಂಗಳೂರಿನಲ್ಲಿರುವ ಸಂಶೋಧನಾ ಕೇಂದ್ರ ನಿಷ್ಕ್ರಿಯವಾಗಿದೆ.ಅದನ್ನು ಪುತ್ತೂರಿಗೆ ವರ್ಗಾವಯಿಸಬೇಕೆಂದರು.ಆದರೆ ಅಲ್ಲಿಂದ ಸ್ಥಳಾಂತರಕ್ಕೆ ಆಸ್ಪದ ಇರಬಹುದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾದಾಗ ಸಚಿವರು ಮಾತನಾಡಿ ಪುತ್ತೂರಿನಲ್ಲಿ ಕಾರಂತರ ಬಾಲವನದಲ್ಲೇ ಪ್ರತ್ಯೇಕ ಸಂಶೋಧನಾ ಕೇಂದ್ರ ಆಗಲಿ ಮತ್ತು ಕಾರಂತರ ಅಧ್ಯಯನ ಪೀಠ ಬಾಲವನದಲ್ಲಿ ಆರಂಭಿಸೋಣ ಎಂದರು.
ಬಾಲವನದಲ್ಲಿ ೫ನೇ ರಂಗಾಯಣ:
ಆಳ್ವಾಸ್ ಶಿಕ್ಷಣ ಸಂಸ್ಥೆಯ ಜೀವನ್‌ರಾಮ್ ಸುಳ್ಯ ಅವರು ಮಾತನಾಡಿ ಈಗಾಗಲೇ ಮೈಸೂರಿನಲ್ಲಿ ಆರಂಭಗೊಂಡ ರಂಗಾಯಣ ಬೇರೆ ಬೇರೆ ನಾಲ್ಕು ಕಡೆಗಳಲ್ಲಿ ರಂಗಾಯಣ ಆರಂಭಗೊಂಡಿದ್ದು, ೫ನೇ ರಂಗಾಯಣ ಪುತ್ತೂರು ಬಾಲವನದಲ್ಲಿ ಆರಂಭಿಸುವ ಕುರಿತು ಈಗಾಗಲೇ ಸಚಿವರ ಚಿಂತನೆಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಬಾಲವನದಲ್ಲಿ ದೇಶೀಯ ಕಲೆಗಳಿಗೆ ಮಾತ್ರ ಅವಕಾಶ ನೀಡಬೇಕೆಂದರು.
ಯಕ್ಷಗಾನ ಕೇಂದ್ರ ಆರಂಭಿಸಬೇಕು:
ಸುಳ್ಯದ ಶಿಕ್ಷಣ ಸಂಯೋಜಕ ಸುಂದರ ಕೇನಾಜೆ ಅವರು ಮಾತನಾಡಿ ಯಕ್ಷಗಾನ ಪಠ್ಯದಲ್ಲಿ ಆರಂಭಗೊಂಡಿದೆ.ಆದರೆ ಅದು ಇನ್ನೂ ಚಾಲ್ತಿಗೆ ಬಂದಿಲ್ಲ. ಕಾರಂತರ ಆಶಯಕ್ಕೆ ತಕ್ಕಂತೆ ಮುಂದಿನ ದಿನ ಬಾಲವನ ಕಾರ್ಯಕ್ರಮದ ಮೂಲಕವೇ ಯಕ್ಷಗಾನ ಕೇಂದ್ರ ಆರಂಭಗೊಳ್ಳಲಿ ಎಂದರು.
ಕಾರಂತರ ಮಕ್ಕಳ ಕೂಟ ಪರಿಕಲ್ಪನೆ:
ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ|ಶ್ರೀಶಕುಮಾರ್ ಅವರು ಮಾತನಾಡಿ ಕಾರಂತರ ಬಾಲವನಕ್ಕೆ ಬರುವ ವಿದ್ಯಾರ್ಥಿಗಳು ಕಾರಂತರ ಕುರಿತು ಅಭ್ಯಾಸ ಮಾಡಲು ಕಾರಂತರ ಡಾಕ್ಯುಮೆಂಟರಿ ರಚನೆ ಮಾಡಬೇಕು.ಬಾಲವನದ ಉದ್ದಕ್ಕೂ ಒಂದು ವಾಕಿಂಗ್ ಪಾತ್ ಇದೆ.ಈ ಪಾತ್‌ನಲ್ಲಿ ಅಲ್ಲಲ್ಲಿ ಕಾರಂತರ ಜೀವನ ಚರಿತ್ರೆಯ ಆಡಿಯೋ ಕೇಳುವಂತಿರಬೇಕು.ಮ್ಯೂಸಿಯಂನಲ್ಲಿರುವ ಪೈಂಟಿಂಗ್‌ನಿಂದ ವಿವರಣೆ ಸಿಗಬೇಕು. ಕಾರಂತರ ಮಕ್ಕಳ ಕೂಟ ಪರಿಕಲ್ಪನೆ ಆಗಬೇಕೆಂದರು.
ಸಭೆಯಿಂದ ಬಂದ ಸಲಹೆಗಳು:
ಡಾ|ಶಿವರಾಮ ಕಾರಂತರ ಒಡನಾಡಿಯಾಗಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಅವರು ಮಾತನಾಡಿ ಕಲೆ ಸಾಹಿತ್ಯದ ಪರಿಚಯ ಇದ್ದವರಿಂದ ಸಾಂಸ್ಕೃತಿಕ ಸಮಿತಿ ಕೆಲಸ ಆಗಬೇಕು.ಗೋಷ್ಠಿಗಳು, ಕೃತಿಗಳು ನಿರಂತರ ನಡೆಯಬೇಕೆಂದರು.ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್ ಅವರು ಮಾತನಾಡಿ ಎಲ್ಲಾ ಕಾರ್ಯಕ್ರಮಗಳಿಗೆ ಆರಂಭದಲ್ಲಿ ಉಪಸಮಿತ ರಚನೆ ಮಾಡುವುದು ಉತ್ತಮ ಎಂದರು.ನಿವೃತ್ತ ಉಪನ್ಯಾಸಕ ಪ್ರೊ|ದತ್ತಾತ್ರೆಯ ರಾವ್ ಅವರು ಮಾತನಾಡಿ ಸಾಹಿತ್ಯ ಗೋಷ್ಠಿ ಸಂಜೆ ಕಾರಂತರ ಬಹಳ ಮೆಚ್ಚುಗೆಯ ಯಕ್ಷಗಾನ ಮಾಡುವ ಕುರಿತು ಸಲಹೆ ನೀಡಿದರು.ಬೀರಮಲೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುಬ್ರಾಯ ಅಮ್ಮಣ್ಣಾಯ ಅವರು ಯಕ್ಷಗಾನ ಕೂಟ ಮಾಡುವ ಕುರಿತು ಸಲಹೆ ನೀಡಿದರು.ಧ್ವನಿಗೂಡಿಸಿದ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ|ಶ್ರೀಧರ್ ಹೆಚ್.ಜಿ ಅವರು ಮಳೆಗಾಲದ ಸಂದರ್ಭ ಆಗಿದ್ದರಿಂದ ದೊಡ್ಡ ವೇಷ ಕಷ್ಟ. ಸಣ್ಣ ಚೌಕಟ್ಟಿನಲ್ಲಿ ಕಾರ್ಯಕ್ರಮಕ್ಕೆ ಕೂಟ ಯಕ್ಷಗಾನ ಉತ್ತಮ ಎಂದರು.ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕ್ಷೇವಿಯರ್ ಡಿಸೋಜ ಅವರು ಮಾತನಾಡಿ ಯಾವುದೇ ಕಾರ್ಯಕ್ರಮ ನಡೆದರೂ ಪ್ರೇಕ್ಷಕರನ್ನು ಸೇರಿಸುವ ಕೆಲಸ ಆಗಬೇಕು. ಕೊನೆಗೆ ಕಾಲೇಜಿನ ಮಕ್ಕಳ ಮೇಲೆ ಒತ್ತಡ ಬರುತ್ತದೆ.ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್ ಸದಸ್ಯ ವಸಂತ್ ಭಟ್ ಅವರು ಮಾತನಾಡಿ ಪುತ್ತೂರಿನಲ್ಲಿ ಹಲವಾರು ಸಂಘ ಸಂಸ್ಥೆಗಳಿವೆ ಅವರಿಗೆ ಅವಕಾಶ ಕೊಡಬಹುದು.ಜೊತೆಗೆ ಬಾಲವನಕ್ಕೆ ಮುಕ್ತ ಪ್ರವೇಶ ನೀಡಬೇಕೆಂದರು.ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ಡಾ|ವರದರಾಜ ಚಂದ್ರಗಿರಿ ಅವರು ಮಾತನಾಡಿ ಪ್ರತಿ ತಿಂಗಳು ನಡೆಯಬೇಕಾದ ಕಾರ್‍ಯಕ್ರಮ ಆಗಿದ್ದರಿಂದ ಕಾರ್ಯಕ್ರಮದಲ್ಲಿ ಕಾರಂತರ ಆಶಯವಾಗಿದ್ದ ಉಪನ್ಯಾಸ ಉತ್ತಮ.ಬಳಿಕ ತಾಳಮದ್ದಳೆ ಮಾಡುವ ಎಂದು ಸಲಹೆ ನೀಡಿದರು.ಅರೆಭಾಷೆ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆಯವರು ಮಾತನಾಡಿ ಮೂಲಭೂತ ಸೌಕರ್ಯ ಅಗತ್ಯ ಒದಗಿಸಬೇಕೆಂದರು.ರಂಗಕರ್ಮಿ ಐ.ಕೆ.ಬೊಳುವಾರು ಅವರು ಮಾತನಾಡಿ ಕಾರಂತರ ಹೆಸರಿನಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳು ಹಲವು ಶಾಲೆಗಳಲ್ಲಿ ನಡೆಯುತ್ತಿವೆ. ಅದನ್ನು ಜೀವಂತವಾಗಿ ಉಳಿಸುವ ಕೆಲಸ ಆಗಬೇಕೆಂದರು.ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ|ಶೋಭಿತಾ ಸತೀಶ್ ಅವರು ಮಾತನಾಡಿ ಬಾಲವನಕ್ಕೆ ಹೋಗುವ ತುಡಿತ ಆಗಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಅಧ್ಯಕ್ಷ ಐತ್ತಪ್ಪ ನಾಯ್ಕ್ ಅವರು ಮಾತನಾಡಿ ಕಾರಂತರು ದಸರಾ ನಾಡ ಹಬ್ಬ ಪ್ರಾರಂಭಿಸಿದ್ದು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ. ಆ ಶಾಲೆ ಇದೀಗ ಶಿಥಿಲಗೊಂಡಿದೆ. ಅದನ್ನು ದುರಸ್ತಿಗೊಳಿಸಿ ಉಳಿಸುವ ಪ್ರಕ್ರಿಯೆ ಆಗಬೇಕೆಂದರು.
ಕಾರಂತರ ಸಾರಥಿಗೆ ಸನ್ಮಾನ:
ಡಾ|ಶಿವರಾಮ ಕಾರಂತರ ಕಾರಿನ ಚಾಲಕರಾಗಿದ್ದ ಸುಳ್ಯ ತಾಲೂಕಿನ ಕನಕಮಜಲು ನಿವಾಸಿ ಮೋನಪ್ಪ ಗೌಡ(೯೯ವ)ಅವರನ್ನು ಸಚಿವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಕಾರಂತರ ಒಡನಾಡಿಗಳನ್ನು ಗುರುತಿಸಿ ತಿಂಗಳ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದರು.ಪುತ್ತೂರು ಉಪವಿಭಾಗಾಧಿಕಾರಿ ಡಾ|ಯತೀಶ್ ಉಳ್ಳಾಲ್ ಸ್ವಾಗತಿಸಿ, ಹಿಂದಿನ ತಿಂಗಳಲ್ಲಿ ಬಾಲವನದಲ್ಲಿ ಸಚಿವರು ನಡೆಸಿದ ಸಭೆಯಲ್ಲಿನ ವರದಿಯನ್ನು ಮಂಡಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ತಹಸೀಲ್ದಾರ್ ರಮೇಶ್‌ಬಾಬು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಹವ್ಯಾಸಿ ಯಕ್ಷಗಾನ ಕಲಾವಿದ ಪಿ.ಜಿ.ಜಗನ್ನಿವಾಸ ರಾವ್, ರಾಜೇಶ್ ಪವರ್ ಪ್ರೆಸ್‌ನ ರಘುನಾಥ ರಾವ್, ಮಂಜುಳಾ ಸುಬ್ರಹ್ಮಣ್ಯ, ಪ್ರೊ|ವಿ.ಬಿ ಅರ್ತಿಕಜೆ, ವಿಜಯ ಕುಮಾರ್ ಮೊಳೆಯಾರ್, ಡಾ|ಶ್ರೀಪ್ರಕಾಶ್, ಎಸ್.ಆರ್.ಮಲ್ಲ, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರಾಂಶುಪಾಲೆ ಆಶಾ ಬೆಳ್ಳಾರೆ, ನೃತ್ಯಾಂತರಂಗದ ಶಾಲಿನಿ ಆತ್ಮಭೂಷಣ್, ಸುಬ್ರಹ್ಮಣ್ಯ, ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ್, ಸುರೇಶ್ ಕಣಿಮರಡ್ಕ, ಪೇಸ್ ಮಾಜಿ ಅಧ್ಯಕ್ಷ ಶಂಕರ್ ಭಟ್, ಮುರಳೀಧರ, ರಾಘವೇಂದ್ರ ಭಟ್, ಜಯಪ್ರಕಾಶ್ ರೈ, ಪದ್ಮಾ ಕೆ.ಆರ್ ಆಚಾರ್ಯ, ಇಂದಿರಾ ಆಚಾರ್ಯ, ನಿತಿನ್ ಪಕ್ಕಳ, ಶಾಂತಕುಮಾರ್, ಡಾ.ಹರಿಕೃಷ್ಣ ಪಾಣಾಜೆ, ಕೆ.ಎಸ್ ಬಾಬು ಮತ್ತಿತರರು ಉಪಸ್ಥಿತರಿದ್ದರು. ಬಾಲವನದ ಅಶೋಕ್, ಸುಂದರ ನಾಕ್ ಮತ್ತು ಕೃಷ್ಣಪ್ಪ ಬಂಬಿಲ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕಾರಂತರ ಬಾಲವನ ಆಡಳಿತಾಧಿಕಾರಿಯಾಗಿ ಡಾ| ಸುಂದರ ಕೇನಾಜೆ ನೇಮಕ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ| ಶಿವರಾಮ ಕಾರಂತರು ಪುತ್ತೂರಲ್ಲಿ ನೆಲೆಸಿ ಕಾರ್ಯ ಚಟುವಟಿಕೆ ನಡೆಸುತ್ತಿದ್ದ ಬಾಲವನದ ಆಡಳಿತಾಧಿಕಾರಿಯಾಗಿ ಸುಳ್ಯದ ಶಿಕ್ಷಣ ಸಂಯೋಜಕರಾದ ಡಾ| ಸುಂದರ ಕೇನಾಜೆಯವರನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ನೇಮಿಸಿದ್ದಾರೆ.
ಜೂ.21ರಂದು ಅಪರಾಹ್ನ ಪುತ್ತೂರು ಬಾಲವನದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಸಾಹಿತ್ಯಾಸಕ್ತ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಸಚಿವರು ಈ ನೇಮಕವನ್ನು ಘೋಷಿಸಿದರು.ಕಾರಂತರ ಬಾಲವನದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉzಶದಿಂದ, ಡಾ| ಶಿವರಾಮ ಕಾರಂತರ ಸಾಹಿತ್ಯ ಮತ್ತು ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಿರುವ ಕ್ರಿಯಾಶೀಲ ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ಜಿಲ್ಲಾಡಳಿತ ಶೋಧನೆ ನಡೆಸಿ, ಸಮರ್ಥ ವ್ಯಕ್ತಿ ಎಂಬ ನೆಲೆಯಲ್ಲಿ ಡಾ| ಸುಂದರ ಕೇನಾಜೆಯವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲು ನಿರ್ಧರಿಸಿತ್ತೆನ್ನಲಾಗಿದೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.