ಪುತ್ತೂರು: ಕಳೆದ ಹಲವು ಸಮಯಗಳಿಂದ ಕೋಡಿಂಬಾಡಿ ಪರಿಸರದಲ್ಲಿ ಏರ್ಟೆಲ್ ನೆಟ್ವರ್ಕ್ ಕೈ ಕೊಡುತ್ತಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದವರು ಬಹುತೇಕವಾಗಿ ಏರ್ಟೆಲ್ ನೆಟ್ವರ್ಕ್ ಅವಲಂಬಿಸಿದ್ದಾರೆ.
ಸರಕಾರಿ ಸಾಮ್ಯದ ಬಿ.ಎಸ್.ಎನ್.ಎಲ್. ನ ನೆಟ್ವರ್ಕ್ ಸಮಸ್ಯೆಯಿಂದ ಬೇಸತ್ತಿದ್ದ ಈ ಭಾಗದ ಗ್ರಾಹಕರು ಏರ್ಟೆಲ್ ಕಂಪೆನಿಯತ್ತ ತಮ್ಮ ಚಿತ್ತ ಹರಿಸಿದ್ದರು. ಕೋಡಿಂಬಾಡಿಯಲ್ಲಿ ಏರ್ಟೆಲ್ ಟವರ್ ಇದ್ದರೂ ಟವರ್ ನ ಅಡಿಯಲ್ಲಿಯೇ ನೆಟ್ವರ್ಕ್ ಸಿಗದ ಪರಿಸ್ಥಿತಿ ಇದೆ. ಸಂಪರ್ಕ ವ್ಯವಸ್ಥೆ ಹಾಗೂ ಆಧುನಿಕ ವ್ಯವಸ್ಥೆಗಳ ಬಳಕೆಗೆ ನೆಟ್ವರ್ಕ್ ತೀರಾ ಅಗತ್ಯವಾಗಿದೆ. ಆದರೆ ಇಲ್ಲಿ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಸರಿಪಡಿಸುವಂತೆ ಸಂಬಂಧಿಸಿದವರಿಗೆ ಹಲವಾರು ಸಲ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.