ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ನ 14 ನೇ ಹಣಕಾಸು ಯೋಜನೆಯಡಿ 1.28 ಲಕ್ಷ ರೂಪಾಯಿ ವೆಚ್ಚದಲ್ಲಿ ತಿಂಗಳಾಡಿಯ ಕಜೆ ಎಂಬಲ್ಲಿ ನಿರ್ಮಾಣಗೊಂಡಿರುವ `ಪ್ರಯಾಣಿಕರ ಬಸ್ಸು ತಂಗುದಾಣ ನಂಜೆ’ ಇದನ್ನು ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿಯವರು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಗ್ರಾಪಂ ಈಡೇರಿಸಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಲಾಗಿದೆ. ಗ್ರಾಮಸ್ಥರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಲಲಿತಾ, ಚಂದ್ರಾವತಿ ರೈ, ಸ್ಥಳೀಯರಾದ ಶಿವಪ್ರಸಾದ್ ರೈ ನಂಜೆ, ಭಾಸ್ಕರ ರೈ ಮಾದೋಡಿ, ರಫೀಕ್ ನಂಜೆ, ಮುಹಮ್ಮದ್ ನಂಜೆ, ತ್ವಾಹ ನಂಜೆ, ಸಂದೀಪ್ ರೈ ನಂಜೆ, ಕಂಟ್ರಾಕ್ಟ್ದಾರ ಲೋಕೇಶ್ ರೈ ಅಮೈ ಮತ್ತಿತರರು ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ವಂದಿಸಿದರು.
ಊರಿನ ಹೆಸರನ್ನೇ ಬದಲಾಯಿಸಿದ ಗ್ರಾಪಂ!?
ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ತಿಂಗಳಾಡಿಯಿಂದ ಮುಂದಕ್ಕೆ ಸಿಗುವ ಸ್ಥಳವೇ ಕಜೆ, ಆ ಬಳಿಕ ಕಟ್ಟತ್ತಾರು, ಅರಿಕ್ಕಿಲ, ಕೆಯ್ಯೂರು ಇತ್ಯಾದಿ ಸ್ಥಳಗಳು ಸಿಗುತ್ತವೆ. ಆದರೆ ಕೆದಂಬಾಡಿ ಗ್ರಾಪಂ ಕಜೆಯಲ್ಲಿ ನಿರ್ಮಾಣ ಮಾಡಿರುವ ತಂಗುದಾಣಕ್ಕೆ ನಂಜೆ ಎಂದು ನಾಮಕರಣ ಮಾಡುವ ಮೂಲಕ ಊರಿನ ಹೆಸರನ್ನು ಬದಲಾಯಿಸಲು ಹೊರಟಿದೆ ಎಂಬುದು ಕಜೆ ಪರಿಸರದ ಗ್ರಾಮಸ್ಥರ ಆಕ್ರೋಶ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿಯವರು ಇದು ನಾನು ಬದಲಾಯಿಸಿದ್ದು ಅಲ್ಲ ನಂಜೆ ಪರಿಸರದ ಬಹುಜನರ ಬೇಡಿಕೆಯಂತೆ ನಂಜೆ ಎಂದು ಹೆಸರು ಬರೆಯಿಸಿದ್ದೇನೆ ಎಂದು ತಿಳಿಸಿದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರು ಪ್ರತಿಕ್ರಿಯೆ ನೀಡಿ, ಈ ಸ್ಥಳಕ್ಕೆ ಹೆಸರು ಕಜೆ ಎಂದೇ ಕರೆಯಲಾಗುತ್ತಿದೆ ಎಂದರು. ಸ್ಥಳೀಯರಾದ ಭಾಸ್ಕರ ರೈ ಮಾದೋಡಿಯವರು ಪ್ರತಿಕ್ರಿಯೆ ನೀಡಿ, ಈ ಬಸ್ಸು ತಂಗುದಾಣದಲ್ಲಿ ನಂಜೆ ಪರಿಸರದವರು ಜಾಸ್ತಿ ಜನ ನಿಲ್ಲುವ ಕಾರಣ ಮತ್ತು ನಂಜೆ ಪರಿಸರದ ಬಹುಜನರ ಬೇಡಿಕೆಯ ಮೇರೆಗೆ ನಂಜೆ ಎಂದು ಬರೆಯಿಸಲಾಗಿದೆ ಎಂದು ಹೇಳಿದರು. ಅಂತೂ ಇಂತೂ ಕಜೆ ಹೆಸರನ್ನು ಬಸ್ಸು ತಂಗುದಾಣದ ಮೂಲಕ ನಂಜೆಯಾಗಿ ಪರಿವರ್ತನೆ ಮಾಡಲು ಹೊರಟಂತಿದೆ. ಏನೇ ಆಗಲಿ ಒಂದು ಊರಿನ ಹೆಸರನ್ನು ಬದಲಾಯಿಸುವ ಅಧಿಕಾರ ಗ್ರಾಪಂಗೆ ಇಲ್ಲ, ಈ ರೀತಿ ಮಾಡಿದ್ದು ಸರಿಯಲ್ಲ ಇದನ್ನು ಸರಿಪಡಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.