- ಕುಂಬ್ರ ವರ್ತಕರ ಸಂಘದ ಕೆಲಸ ಸಮಾಜಕ್ಕೆ ಮಾದರಿಯಾಗಿದೆ; ಗಣೇಶ್ ರೈ
ಪುತ್ತೂರು: ಸಾಮಾಜಿಕವಾಗಿ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಕುಂಬ್ರ ವರ್ತಕರ ಸಂಘ ಕೊರೋನ ವಾರಿಯರ್ಸ್ ಗೆ ಮಾಡಿದ ಗೌರವಾರ್ಪಣೆ ಸಮಾಜಕ್ಕೆ ಮಾದರಿ ಕೆಲಸವಾಗಿದೆ.ಕೊರೋನ ಲಾಕ್ಡೌನ್ ಸಮಯದಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಸೇರಿದಂತೆ ಬಹಳಷ್ಟು ಇಲಾಖಾ ಅಧಿಕಾರಿಗಳು ತಮ್ಮ ಜೀವದ ಹಂಗು ಬಿಟ್ಟು ಕೆಲಸ ಮಾಡಿದ್ದಾರೆ.ಇಂಥವರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಪುತ್ತೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಉಪಾಧ್ಯಕ್ಷ ಗಣೇಶ್ ರೈಯವರು ಹೇಳಿದರು.
ಅವರು ಕುಂಬ್ರ ವರ್ತಕರ ಸಂಘದ ವತಿಯಿಂದ ಜೂ. ೨೩ ರಂದು ಕುಂಬ್ರ ಚಂದನಾ ಕಾಂಪ್ಲೆಕ್ಸ್ನಲ್ಲಿ ನಡೆದ ಕೊರೋನ ವಾರಿಯರ್ಸ್ ಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ಮಾಡಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ವರ್ತಕರ ಸಂಘದ ಗೌರವ ಸಲಹೆಗಾರ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು, ಕೊರೋನ ಮಹಾಮಾರಿಯ ವಿರುದ್ಧ ನಾವೆಲ್ಲರೂ ಹೋರಾಡಬೇಕಾದ ಅನಿವಾರ್ಯತೆ ಇದೆ. ಲಾಕ್ಡೌನ್ ಸಮಯದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಆಶಾ ಕಾರ್ಯಕರ್ತೆಯರು, ಪೊಲೀಸರನ್ನು ಗೌರವಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಅದರೊಂದಿಗೆ ವ್ಯಾಪಾರಸ್ಥರಿಗೆ ಮಾನವೀಯ ನೆಲೆಯಲ್ಲಿ ಬಾಡಿಗೆ ಮನ್ನಾ ಮಾಡಿದ ಕಾಂಪ್ಲೆಕ್ಸ್ ಮಾಲಕರನ್ನು ಕೂಡ ನಾವು ಅಭಿನಂದಿಸಬೇಕಾಗಿದೆ. ಈ ಕೆಲಸಗಳನ್ನು ಮಾಡಿದ ವರ್ತಕರ ಸಂಘ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಗೌರವಾರ್ಪಣೆ
ಸಂಪ್ಯ ಗ್ರಾಮಾಂತರ ಠಾಣೆಯ ಎಎಸ್ಐ ತಿಮ್ಮಯ್ಯ ಗೌಡ, ಕಾನ್ಸ್ಸ್ಟೇಬಲ್ಗಳಾದ ಕುಂಬ್ರ ಬೀಟ್ ಪೊಲೀಸ್ ಕರುಣಾಕರ್, ಆಶಾ, ಆಶಾ ಕಾರ್ಯಕರ್ತೆ ಚಂದ್ರಾವತಿ,ಬಾಡಿಗೆ ಮನ್ನಾ ಮಾಡಿದ ಕಾಂಪ್ಲೆಕ್ಸ್ ಮಾಲಕರುಗಳಾದ ಎಂ.ಆರ್.ಆರ್ಕೇಡ್ನ ಮಮ್ಮಾಲಿ ಹಾಜಿ, ಹೇಮಾವತಿ ಸಂಕೀರ್ಣದ ಹೇಮಾವತಿ ರೈ, ಎ.ಆರ್.ಕಾಂಪ್ಲೆಕ್ಸ್ನ ಎ.ಆರ್.ಅಬ್ದುಲ್ ರಹೀಮಾನ್, ನಿಶ್ಮಿತಾ ಕಾಂಪ್ಲೆಕ್ಸ್ನ ಪುರಂದರ ರೈ ಕೋರಿಕ್ಕಾರ್, ಪ್ಯಾಮಿಲಿ ಕಾಂಪ್ಲೆಕ್ಸ್ನ ಅಬ್ದುಲ್ ಹಮೀದ್ರವರ ಪುತ್ರ ನವಾಝ್, ಹರ್ಷ ಕಾಂಪ್ಲೆಕ್ಸ್ನ ಡಾ. ಹರ್ಷ ಕುಮಾರ್ ರೈ ಮಾಡಾವು, ಮಾಸ್ಟರ್ ಕಾಂಪ್ಲೆಕ್ಸ್ನ ಅಲಿ ಮಾಸ್ಟರ್, ರಾಮಣ್ಣ ರೈ ಸಂಕೀರ್ಣದ ಅನಿಲ್, ಚಂದನಾ ಕಾಂಪ್ಲೆಕ್ಸ್ನ ರಾಮ್ಮೋಹನ್ ಭಟ್, ಕುಂಬ್ರ ವ್ಯವಸಾಯ ಸಹಕಾರಿ ಬ್ಯಾಂಕ್ನ ಕಾರ್ಯನಿರ್ವಹಕ ರಾಜೀವಿ ರೈಯವರುಗಳಿಗೆ ಶಾಲು, ಹೂ, ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು. ಗೌರವಾರ್ಪಣೆ ಸ್ವೀಕರಿಸಿದ ಮಾತನಾಡಿದ ಚಂದನಾ ಕಾಂಪ್ಲೆಕ್ಸ್ ಮಾಲಕ ರಾಮ್ಮೋಹನ್ ಭಟ್ರವರು, ನಾನು ಮಾನವೀಯ ದೃಷ್ಟಿಯಲ್ಲಿ ಬಾಡಿಗೆ ಮನ್ನಾ ಮಾಡಿದ್ದೇನೆ. ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಅವರಿಂದ ಬಾಡಿಗೆ ಹಣ ಪಡೆದುಕೊಳ್ಳುವುದು ಸತ್ಯ,ಧರ್ಮ, ನ್ಯಾಯದ ದೃಷ್ಟಿಯಲ್ಲಿ ಸರಿಯಲ್ಲ. ಅಂಥಹ ಹಣ ಒಂದು ಶಾಪದ ಹಣವಾಗಿರುತ್ತದೆ. ಕಷ್ಟ ಎಲ್ಲರಿಗೂ ಬರುತ್ತದೆ. ಕಷ್ಟದಲ್ಲಿ ಸಹಾಯದ ಕೈಜೋಡಿಸುವುದು ನಮ್ಮ ಮಾನವೀಯತೆಯಾಗಿದೆ ಎಂದು ಹೇಳಿದರು. ಅಲಿ ಮಾಸ್ಟರ್, ಡಾ.ಹರ್ಷ ಕುಮಾರ್ ರೈ ಮಾಡಾವು, ಬೀಟ್ ಪೊಲೀಸ್ ಕರುಣಾಕರ್ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವರ್ತಕರ ಸಂಘದ ಗೌರವ ಸಲಹೆಗಾರರಾದ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಚಂದ್ರಕಾಂತ ಶಾಂತಿವನ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಮಾತನಾಡಿ, ಕೊರೋನ ವಾರಿಯರ್ಸ್ ಆಗಿ ಸೇವೆ ಮಾಡುತ್ತಿರುವವರನ್ನು ಗೌರವಿಸುವ ಒಂದು ಒಳ್ಳೆಯ ಕೆಲಸವನ್ನು ಕುಂಬ್ರ ವರ್ತಕರ ಸಂಘ ಮಾಡಿದೆ. ಇದು ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಕೊರೋನ ವಾರಿಯರ್ಸ್ ರವರನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರಲ್ಲಿ ಮೂಡಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ್ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ವರ್ತಕರ ಸಂಘದ ಕಾರ್ಯದರ್ಶಿ ಅಝರ್ ಷಾ ಕುಂಬ್ರ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ವಂದಿಸಿದರು. ಹರೀಶ್ ಕುಮಾರ್ ಜಾರತ್ತಾರು, ಮೆಲ್ವಿನ್ ಮೊಂತೆರೋ, ಸಂಶುದ್ದೀನ್ ಎ.ಆರ್,ಉದಯ ಆಚಾರ್ಯ, ಭವ್ಯ ರೈ, ಶುತಿಚಂದ್ರ ಕಾರ್ಯಕ್ರಮ ನಿರ್ವಹಿಸಿದರು.
ಕೋವಿಡ್ ೧೯ ಲಾಕ್ಡೌನ್ ಸಂದರ್ಭದಲ್ಲಿ ಕೋರೋನ ವಾರಿಯರ್ಸ್ ಆಗಿ ಸೇವೆ ಮಾಡಿದ ಆಶಾ ಕಾರ್ಯಕರ್ತೆ, ಪೊಲೀಸ್ ಅಧಿಕಾರಿಗಳನ್ನು ಹಾಗೆ ವ್ಯಾಪಾರಸ್ಥರಿಗೆ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿದ ಕಾಂಪ್ಲೆಕ್ಸ್ ಮಾಲಕರನ್ನು ಸಣ್ಣ ಮಟ್ಟದಲ್ಲಿ ಗೌರವಿಸುವ ಕೆಲಸವನ್ನು ಸಂಘ ಮಾಡಿದೆ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ.ವರ್ತಕರ ಸಂಘದ ಕಾರ್ಯಕ್ರಮದಲ್ಲಿ ಕೈಜೋಡಿಸುತ್ತಿರುವ ಸಮಸ್ತ ಬಂಧುಗಳಿಗೆ ಈ ಮೂಲಕ ಕೃತಜ್ಞತೆಗಳನ್ನು ಅರ್ಪಿಸುತ್ತಾ ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ – ಎಸ್.ಮಾಧವ ರೈ ಕುಂಬ್ರ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ