ಕೋಡಿಂಬಾಳ-ಕೋರಿಯಾರ್ ರಸ್ತೆ ಕಾಂಕ್ರೀಟಿಕರಣ ಹೊಸ ರಸ್ತೆಯಲ್ಲಿ ಬಿರುಕು, ಕಳಪೆ ಕಾಮಗಾರಿ ಆರೋಪ

Puttur_Advt_NewsUnder_1
Puttur_Advt_NewsUnder_1

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರದ ಕೋಡಿಂಬಾಳ ಗ್ರಾಮದ ಕೋರಿಯಾರ್ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದ್ದು, ಈ ರಸ್ತೆಯನ್ನು ಪೂರ್ಣಗೊಳಿಸಿ 3 ತಿಂಗಳು ಆಗುವ ಮೊದಲೇ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥ ದಾಮೋದರ ಗೌಡ ಕೊಡೆಂಕಿರಿ ಆರೋಪಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ, ಕಳೆದ ಮಾರ್ಚ್ ತಿಂಗಳಿನಲ್ಲಿ ಕೋಡಿಂಬಾಳ-ಕೋರಿಯಾರ್ ರಸ್ತೆಯನ್ನು ಸರಕಾರದ 5054 ವಿಶೇಷ ಅನುದಾನದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿಕರಣ ಗೊಳಿಸಲಾಗಿದೆ. ಆದರೇ ಕಾಮಗಾರಿ ಮುಗಿದು ತಿಂಗಳು ಆಗುವಾಗಲೇ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ, ಬಿರುಕು ಬಿಟ್ಟ ಸ್ಥಳದಲ್ಲಿ ಸಿಮೆಂಟ್‌ ನಿಂದ ತೇಪೆ ಹಾಕಲಾಗಿದೆ. ಈ ರಸ್ತೆ ಅಭಿವೃದ್ಧಿಗೋಸ್ಕರ ಹಲವಾರು ವರ್ಷಗಳಿಂದ ಶಾಸಕರಲ್ಲಿ ಒತ್ತಡ ಹಾಕಿದ ಪರಿಣಾಮ ಈ ಕೆಲಸ ಆಗಿದೆ, ಈ ರೀತಿ ಆದ ಕೆಲಸ ಇದೀಗ ಕಳಪೆ ಆಗಿರುವುದು ಸರಿಯಲ್ಲ, ಆದುದರಿಂದ ಈ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಗ್ರಾಮಸ್ಥರ ಜತೆ ಸೇರಿ ಪ್ರತಿಭಟನೆ ಮಾಡುವುದಾಗಿ ದಾಮೋದರ ಗೌಡರು ಎಚ್ಚರಿಕೆ ನೀಡಿದ್ದಾರೆ.

ಪರಿಶೀಲನೆ ನಡೆಸುತ್ತೇನೆ-ಸಂದೀಪ್, ಕಿರಿಯ ಇಂಜಿನಿಯರ್
ಈ ಬಗ್ಗೆ ಜಿ.ಪಂ. ಪುತ್ತೂರು ಉಪ ವಿಭಾಗದ ಕಿರಿಯ ಇಂಜಿನಿಯರ್ ಸಂದೀಪ್ ಅವರು ಪ್ರತಿಕ್ರಿಯೆ ನೀಡಿ, ನಾನು ಈಗಾಗಲೇ ಈ ಭಾಗಕ್ಕೆ ಕಿರಿಯ ಇಂಜಿನಿಯರ್ ಆಗಿ ಅಧಿಕಾರ ಪಡೆದುಕೊಂಡಿದ್ದೇನೆ, ಈ ರಸ್ತೆಯ ಬಗ್ಗೆ ಮಾಹಿತಿ ಇಲ್ಲ, ಕೂಡಲೇ ರಸ್ತೆಯನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

ಊರಿನವರ ಸಮ್ಮುಖದಲ್ಲಿ ಕಾಂಕ್ರೀಟಿಕರಣ ನಡೆಸಲಾಗಿದೆ-ಗಿರೀಶ್ ಕೆ.ಎಸ್,(ಗುತ್ತಿಗೆದಾರರು)
ಈ ಬಗ್ಗೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಗಿರೀಶ್ ಕೆ.ಎಸ್. ಅವರು ಪ್ರತಿಕ್ರಿಯೆ ನೀಡಿ, ಕೋಡಿಂಬಾಳ ಕೋರಿಯಾರ್ ರಸ್ತೆಯ ಕಾಂಕ್ರೀಟಿಕರಣ ವಿಚಾರದಲ್ಲಿ ನನ್ನದು ಯಾವುದೇ ತಪ್ಪಿಲ್ಲ, ಇಂಜಿನಿಯರ್ ಪ್ರಕಾರ, ಊರಿನವರ ಸಮ್ಮುಖದಲ್ಲಿ ಕಾಮಗಾರಿ ಮಾಡಲಾಗಿದೆ. ಸಿಮೆಂಟ್ ಮಿಕ್ಸಿಂಗ್ ಸೇರಿದಂತೆ ಎಲ್ಲ ವಿಭಾಗದಲ್ಲಿ ಕಾಮಗಾರಿ ಮಾಡುವ ಎಲ್ಲ ದಿನ ಊರಿನವರು ಇದ್ದು, ಅವರು ಹೇಳಿದಂತೆ ಕಾಮಗಾರಿ ಮಾಡಲಾಗಿದೆ. ನಾನು ಕೇವಳ ಸಾಮಾಗ್ರಿಗಳಿಗೆ ದುಡ್ಡು ಹಾಕಿದ್ದೇನೆ ಅಷ್ಟೆ, ಕಾಂಕ್ರೀಟ್ ಬಿರುಕು ಬಿಟ್ಟಿರುವುದು ಅದು ತೊಂದರೆಯಾಗುವ ಬಿರುಕು ಅಲ್ಲ. ಕಾಂಕ್ರೀಟಿಕರಣದಲ್ಲಿ ಆಗುವ ತಾಂತ್ರಿಕ ತೊಂದರೆಯಿಂದ ಮೇಲ್ನೋಟಕ್ಕೆ ಬಿರುಕು ಬಿಟ್ಟಂತೆ ಕಂಡರೂ ಅದು ಸಹಜವಾಗಿ ಬಿಡುವಂತಹ ಸಣ್ಣ ಮಟ್ಟಿನ “ಸೆಲೆ” ರೂಪದಲ್ಲಿದೆ. ಇದರಿಂದ ಯಾವುದೇ ರಸ್ತೆಗೆ ತೊಂದರೆ ಇಲ್ಲ, ಒಂದು ವೇಳೆ ಬಿರುಕು ಬಿಟ್ಟು ರಸ್ತೆ ಕೆಟ್ಟು ಹೋದರೆ ನಾನೇ ದುರಸ್ತಿ ಮಾಡಿಕೊಡುತ್ತೇನೆ. ಆದರೆ ಊರಿನವರ ಮುಂದಾಳತ್ವದಲ್ಲಿ ನಿರ್ಮಾಣವಾದ ಕಾಮಗಾರಿಯನ್ನು ಕಳಪೆ ಎಂದು ಹೇಳಿರುವುದು ಬೇಸರ ತಂದಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.