Home_Page_Advt
Home_Page_Advt
Home_Page_Advt

ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಪಡಿಸಿರುವುದನ್ನು ರದ್ದುಗೊಳಿಸುವಂತೆ ಆಗ್ರಹ | ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿಯಿಂದ ಉಪತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕೊರೋನ ಸೋಂಕಿತ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಪಡಿಸಿರುವುದನ್ನು ರದ್ದು ಗೊಳಿಸಿ ಕಡ್ಡಾಯ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ಉಪತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳು ಆಳುವ ಸರಕಾರಗಳ ನಿರ್ಲಕ್ಷ್ಯದಿಂದಾಗಿ ಅಗತ್ಯ ಡಾಕ್ಟರ್-ಸಿಬ್ಬಂದಿ ಕೊರತೆ, ಔಷಧ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಇದರಿಂದಾಗಿ ಸಾಮಾನ್ಯ ಜನತೆಗೆ ಉತ್ತಮ ಆರೋಗ್ಯ ಲಭಿಸದೇ ಖಾಸಗಿ ಆಸ್ಪತ್ರೆಗಳ ಧನ ದಾಹಕ್ಕೆ ಬಲಿಯಾಗುವ ಆತಂಕವಿದೆ.. ಸಾಮಾನ್ಯ ರೋಗಿಗಳು ಈಗ ಆಸ್ಪತ್ರೆಗಳಿಗೆ ಹೋಗಲಾರದ ಸ್ಥಿತಿ ಬಂದೊದಗಿದೆ.

ರಾಜ್ಯ ಸರಕಾರ ಇಂತಹ ಗಂಭಿರ ಸ್ಥಿತಿಯಲ್ಲಿ ಕೋವಿಡ್-೧೯ ಸೋಂಕಿತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಗಳನ್ನು ಡಾಕ್ಟರ್, ಸಿಬ್ಬಂದಿ, ಔಷಧ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಸಜ್ಜುಗೊಳಿಸಬೇಕು. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಎಲ್ಲರಿಗೂ ಉಚಿತ ಚಿಕಿತ್ಸೆ ಕೊಡಬೇಕು. ಆದರೆ ಕರ್ನಾಟಕ ರಾಜ್ಯ ಸರಕಾರ ದ (ಉಪ ಮುಖ್ಯಮಂತ್ರಿ, ಗೃಹ ಸಚಿವ, ಆರೋಗ್ಯ ಸಚಿವರನ್ನೊಳಗೊಂಡ) ಕಾರ್ಯಪಡೆಯು ಕರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದರ ನಿಗದಿಗೊಳಿಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಗೆ ಸಚಿವ ಸಂಪುಟದ ಒಪ್ಪಿಗೆಯಷ್ಟೆ ಬಾಕಿಯಿದೆ. ಕಾರ್ಯಪಡೆಯು ಸಿದ್ಧಪಡಿಸಿದ ವರದಿ ಪ್ರಕಾರ, ಸಮಾನ್ಯ ರೋಗಿಗೆ ಸಾಮಾನ್ಯ ವಾರ್ಡ್‌ನಲ್ಲಿ ರೂ.೧೦,೦೦೦/-, ಆಮ್ಲಜನಕ ಸಹಿತ ವಾರ್ಡ್ ನಲ್ಲಿ ರೂ.೧೨,೦೦೦/-, ಐಸಿಯು ಹಾಸಿಗೆ- ರೂ.೧೫,೦೦೦/-, ವೆಂಟಿಲೇಟರ್ ಸಹಿತ ಐಸಿಯುಗೆ ರೂ.೨೫,೦೦೦/- ದರ ನಿಗದಿಗೊಳಿಸಿದೆ.

ಇದಕ್ಕೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬದ ರೋಗಿಗಳಿಗೆ ಕ್ರಮವಾಗಿ ಸಾಮಾನ್ಯ ವಾರ್ಡ್‌ಗೆ ರೂ.೫,೨೦೦, ಆಮ್ಲಜನಕ ಸಹಿತ ವಾರ್ಡ್‌ಗೆ ರೂ.೭೦೦೦, ತೀವ್ರ ನಿಗಾ ಘಟಕಕ್ಕೆ ರೂ.೮೫೦೦, ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ ರೂ.೧೦,೦೦೦ ನಿಗದಿಗೊಳಿಸಿ ವರದಿ ಸಿದ್ದಪಡಿಸಿದೆ. ಆದರೆ ಗ್ರಾಮೀಣ, ನಗರ ಪ್ರದೇಶದ ಬಹುತೇಕರು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೊಳಪಟ್ಟಿಲ್ಲವೆಂಬುದು ವಾಸ್ತವವಾಗಿದೆ. ಹೀಗಿರುವಾಗ ಈ ಹಂತದಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಯು ಜನ ಸಾಮಾನ್ಯರಿಗೆ ಗಂಭೀರ ಹೊರೆಯಾಗಿ ಪರಿಣಮಿಸುವುದು ಸ್ಪಷ್ಟ. ಈಗಾಗಲೇ ಕೊರೋನಾ ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಈ ಚಿಕಿತ್ಸೆಯ ದರ ನಿಗದಿಯು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಕೊರೋನಾ ಸೋಂಕಿತ ರೋಗಿ ಚಿಕಿತ್ಸೆಗಾಗಿ ಕನಿಷ್ಠ ಹತ್ತು ದಿನಗಳ ವರೆಗೆ ಸಾಮಾನ್ಯವಾರ್ಡ್ ನಲ್ಲಿ ಚಿಕಿತ್ಸೆ ಪಡೆದರೂ ದಿನಕ್ಕೆ ೧೦,೦೦೦ ದಂತೆ ಹತ್ತು ದಿನಕ್ಕೆ ಒಂದು ಲಕ್ಷ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪ್ರಸ್ತುತ ವರದಿಯನ್ನು ಕೂಡಲೇ ರದ್ದುಗೊಳಿಸಿ ಕೊರೋನಾ ಸೋಂಕಿತರೆಲ್ಲರಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಬೇಕಾದ ಸಕಲ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಸರಕಾರದ ವಶಕ್ಕೆ ಪಡೆದು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಎಂದು ಆಗ್ರಹಿಸಿರುವ ಮನವಿ ಪತ್ರವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ವಿಟ್ಲ ವಲಯ ಸಮಿತಿ ವತಿಯಿಂದ ರಾಜ್ಯ ಸರಕಾರಕ್ಕೆ ವಿಟ್ಲ ಉಪತಹಶೀಲ್ದಾರರ ಮುಖಾಂತರ ಮನವಿ ನೀಡಲಾಯಿತು. ನಿಯೋಗದಲ್ಲಿ ಡಿ.ವೈ.ಎಫ್.ಐ ವಿಟ್ಲ ವಲಯ ಅಧ್ಯಕ್ಷ ನುಜುಂ ಅಳಿಕೆ, ಕಾರ್ಯದರ್ಶಿ ಜಮೀಲ್.ಎಂ ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ಡಿ.ವೈ.ಎಫ್.ಐ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಇರ್ಫಾನ್ ಒಕ್ಕೆತ್ತೂರು, ತಮೀಮ್, ಆರೀಫ್ ಬಿ.ಕೆ ಮನವಿ ನೀಡುವ ನಿಯೋಗದಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.