HomePage_Banner
HomePage_Banner
HomePage_Banner

ಕನಸುಕಂಗಳ ತರುಣರ ಆಲ್ಬಂ ಸಾಂಗ್ `ಮಾಯೆಯೋ, ಮೋಹವೋ’ ರಿಲೀಸ್ | ಚಂದನವನದತ್ತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು

Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಆ ತರುಣನಲ್ಲಿ ಕನಸಿತ್ತು. ಒಂದು ಉತ್ತಮ ಆಲ್ಬಂ ಸಾಂಗ್ ಮಾಡಬೇಕು ಮತ್ತು ಅದೇ ಆಲ್ಬಂ ಸಾಂಗ್‌ನಲ್ಲಿ ನಟಿಸಬೇಕು ಎನ್ನುವ ಆದಮ್ಯ ಉತ್ಸಾಹವಿತ್ತು. ಆ ತರುಣನ ಕನಸಿಗೆ ನೀರೆರೆದವರು ಆ ತರುಣನ ಸಹಪಾಠಿ ಗೆಳೆಯರು ಮತ್ತು ಉಪನ್ಯಾಸಕರೋರ್ವರು. ತನ್ನ ಎರಡು ವರ್ಷದ ಕನಸು ಇದೀಗ ಈ ಆಲ್ಬಂ ಸಾಂಗ್ ಮುಖೇನ ಈಡೇರಿದೆ ಎಂದರೆ ತಪ್ಪೇನಿಲ್ಲ ಮಾತ್ರವಲ್ಲದೆ ಈ ಉತ್ಸಾಹಿ ತರುಣರು ಚಂದನವನದತ್ತ ಹೆಜ್ಜೆ ಇರಿಸಿದ್ದಾರೆ.

ಹೌದು, ಬದುಕು ಹಾಗೂ ಪ್ರೀತಿಯ ವಾಸ್ತವತೆಯನ್ನು ತೆರೆದಿಡುವ ಕಥೆಯನ್ನು ಹಾಡಿನ ಮುಖಾಂತರ ಆಶ್ಕಿ ಪ್ರೊಡಕ್ಷನ್ಸ್‌ನಡಿಯಲ್ಲಿ `ಮಾಯೆಯೋ, ಮೋಹವೋ’ ಎಂಬ ಟೈಟಲ್‌ನೊಂದಿಗೆ ತೋರಿಸಲು ಹೊರಟವರು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಕೀರ್ತನ್ ರಾವ್ ಮತ್ತು ಅವರ ಸಹಪಾಠಿ ಗೆಳೆಯರಾದ ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಸಾತ್ವಿಕ್ ಬೆಡೇಕರ್, ಗೌರೀಶ್, ಶರ್ಮಾನ್ ರೊಡ್ರಿಗಸ್, ಅಶ್ವಿನ್‌ ಬಾಬಣ್ಣ‌ರವರು. ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿರುವ ದಿನಕರ್ ಅಂಚನ್‌ರವರು `ಸ್ನೇಹಿತೆಯೋ, ಸಂಗಾತಿಯೋ ಅರಿಯದೆ ಆದೆ ನಾ’ ಒಂದು ಅದ್ಭುತ ಗೀತೆಯನ್ನು ರಚಿಸಿ ಈ ಉತ್ಸಾಹಿ ತರುಣರ ಬೆನ್ನು ತಟ್ಟಿ ಪ್ರಶಂಸಿದ್ದಾರೆ. ಈ ಆಲ್ಬಂ ಸಾಂಗ್‌ನಲ್ಲಿ ಸ್ವತಃ ಕೀರ್ತನ್ ರಾವ್‌ರವರು ನಟಿಸಿದ್ದು, ನಿರ್ದೇಶನದ ಹೊಣೆಯನ್ನು ಸತ್ಯನಾರಾಯಣರವರು ಹೊತ್ತಿದ್ದಾರೆ. ಜೊತೆಗೆ ಶರ್ಮಾನ್ ರೊಡ್ರಿಗಸ್ ಹಾಗೂ ಬೆಂಗಳೂರು ಮೂಲದ ಯುವತಿ ಸಿಮ್ರಾನ್ ಕಂನ್ಕಾರಿಯಾ ಈ ಆಲ್ಬಂನಲ್ಲಿ ನಟಿಸಿ ಮಿಂಚಿದ್ದಾರೆ. ಮಿಕ್ಸಿಂಗ್‌ನಲ್ಲಿ ಆಶ್ವಿನ್‌ ಬಾಬಣ್ಣ ಹಾಗೂ ವೀಡಿಯೋ ಎಡಿಟಿಂಗ್‌ನ್ನು ಗೌರೀಶ್‌ರವರು ನಿರ್ವಹಿಸಿದರೆ, ಹಾಡನ್ನು ಸಾತ್ವಿಕ್ ಬೆಡೇಕರ್‌ರವರು ತನ್ನ ಅದ್ಭುತ ಕಂಠಸಿರಿಯಿಂದ ಹಾಡಿದ್ದಾರೆ.

ಸದ್ಯ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕನಸುಕಂಗಳ ತರುಣ ಕೀರ್ತನ್ ರಾವ್‌ರವರು ಸಂಜೆ ಬಳಿಕ ಕೆಫೆಯೊಂದರಲ್ಲಿ ಕ್ಯಾಶಿಯರ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೀರ್ತನ್‌ರವರಲ್ಲೊಂದು ಆಲ್ಬಂ ಸಾಂಗ್ ಅನ್ನು ಮಾಡುವುದು ಮತ್ತು ಆ ಆಲ್ಬಂ ಸಾಂಗ್‌ನ್ನು ತಾನು ಕಾರ್ಯನಿರ್ವಹಿಸುವ ಕೆಫೆಯಲ್ಲಿಯೇ ಚಿತ್ರಿಸಿಕೊಳ್ಳಬೇಕು ಎನ್ನುವ ಕನಸು ಗರಿಗೆದರುತ್ತದೆ. ಜೊತೆಗೆ ತಾನು ಕಲಿತ ಫಿಲೋಮಿನಾ ವಿದ್ಯಾಸಂಸ್ಥೆಗೆ ಏನಾದರೂ ಕೊಡ್ಬೇಕು ಎನ್ನುವ ಆಲೋಚನೆಯೊಂದಿಗೆ ಕೂಡಲೇ ಕೀರ್ತನ್‌ರವರು ಕಾರ್ಯಪ್ರವೃತ್ತರಾಗಿ ತನ್ನ ಸಹಪಾಠಿ ಗೆಳೆಯರಲ್ಲಿ ತನ್ನಲ್ಲಿನ ಕನಸಿನ ಬಗ್ಗೆ ಭಿನ್ನವಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರ ಪ್ರೋತ್ಸಾಹ ಹಾಗೂ ಉಪನ್ಯಾಸಕ ದಿನಕರ್ ಅಂಚನ್‌ರವರು ತಾನು ಗೀತೆಯನ್ನು ರಚಿಸಿಕೊಡುತ್ತೇನೆ ಎಂದು ಹೇಳುವ ಮೂಲಕ ಕನಸಿಗೆ ಪುಷ್ಠಿ ದೊರೆಯುತ್ತಾ ಸಾಗಿ ಕೊನೆಗೆ ಆಲ್ಬಂ ಯಶಸ್ವಿಯಾಗಿ ಮೂಡಿ ಬಂದಿದೆ. ಜೊತೆಗೆ ಎಲ್ಲರ ಪ್ರೋತ್ಸಾಹವಿದ್ದರೆ ಇನ್ನೂ ಹಲವು ಆಲ್ಬಂಗಳನ್ನು ಚಿತ್ರಿಸುವ ಕುರಿತು ಕೀರ್ತನ್‌ರವರು `ಸುದ್ದಿ’ಯೊಂದಿಗೆ ಮನಪೂರ್ವಕವಾಗಿ ಮಾತನಾಡಿದ್ದಾರೆ.

ತಾನು ಕಾರ್ಯನಿರ್ವಹಿಸುವ ಕೆಫೆಯೊಂದಕ್ಕೆ ಯುವಜೋಡಿಯೊಂದು ಆಗಮಿಸಿದ ಸಂದರ್ಭದಲ್ಲಿ ಸಪ್ಲಾಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೀರ್ತನ್‌ರವರಿಗೆ ಯುವತಿಯ ಸೌಂದರ್ಯಕ್ಕೆ ಮರುಳಾಗಿ ಆ ಯುವತಿಯ ಬಾಯ್‌ಫ್ರೆಂಡ್ ನಾನೇ ಯಾಕಾಗಬಾರದು ಎನ್ನುವ ಕನಸಿನ ಗೋಪುರವನ್ನು ಕಟ್ಟಿಕೊಳ್ಳುತ್ತಾನೆ. ಕೊನೆಗೆ ತಾನು ಕಂಡದ್ದು ಕನಸು, ತನಗೆ ಆ ಸುಂದರ ಯುವತಿ ಸಿಗಲಾರಳು ಎಂಬ ಹತಾಶೆ ಮೂಡಿ ಕೊನೆಗೆ ಕೆಟ್ಟ ಚಟಗಳನ್ನು ಬೆಳೆಸಿಕೊಳ್ಳುತ್ತಾನೆ. ಇದೇ ಈ ಆಲ್ಬಂ ಸಾಂಗ್‌ನ ತಿರುಳಾಗಿದ್ದು, ಮುಂದೇನಾಗುತ್ತದೆ ಎಂಬುದನ್ನು ಸಿನಿರಸಿಕರು ಈ ವೀಡಿಯೋ ಆಲ್ಬಂನ್ನು ನೋಡಿ ಈ ತರುಣರ ಕನಸಿಗೆ ಪ್ರೋತ್ಸಾಹವನ್ನೀಯಬೇಕು.

ಪ್ರತಿಭಾವಂತರಿಗೆ ಯಾವುದೇ ಕ್ಷೇತ್ರವಾದರೂ ಚಿಂತಿಲ್ಲ. ಪ್ರತಿಭೆಯನ್ನು ತೋರ್ಪಡಿಸಲು ಸೂಕ್ತ ವೇದಿಕೆ ಸಿಗಬೇಕಾಗಿದೆ. ಆದರೆ ಯಾರು ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ನೆಲೆಯನ್ನು ಕಂಡುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಓದಿನ ಜೊತೆಗೆ ತನ್ನ ಪ್ರತಿಭೆಯಿಂದ ನಟನೆಯತ್ತ ಗಮನಹರಿಸಿದ ಈ ಕನಸುಕಂಗಳ ತರುಣರು ಮುಂದೆ ಸಿನಿರಂಗದಲ್ಲಿ ಮಿಂಚುವತ್ತ ಉತ್ತಮ ಅವಕಾಶಗಳು ಲಭಿಸಲಿ, ಭವಿಷ್ಯ ಉಜ್ವಲವಾಗಲಿ ಎಂಬುದಾಗಿ ನಾವು ಹಾರೈಸೋಣ.

ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಿ, ಪ್ರೋತ್ಸಾಹಿಸಿ…
ತುಂಬಾ ದಿನಗಳ ಪ್ರಯತ್ನದ ಫಲವಾಗಿ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳಿಂದ `ಮಾಯೆಯೋ, ಮೋಹವೋ’ ಆಲ್ಬಂ ಸಾಂಗ್ ಸಾಕಷ್ಟು ಕ್ರಿಯೆಟಿವಿಟಿಯಿಂದ ಕೂಡಿದ್ದು ಅತ್ತ್ಯುತ್ತಮವಾಗಿ ಮೂಡಿ ಬಂದಿದೆ. ಕೀರ್ತನ್, ಗೌರೀಶ್, ಸಾತ್ವಿಕ್, ಶರ್ಮಾನ್‌ರವರ ಕೂಡುವಿಕೆಯಿಂದ ಈ ಆಲ್ಬಂ ಸಾಂಗ್ ಇಂದು ಸಮಾಜಕ್ಕೆ ಅರ್ಪಣೆಗೊಂಡಿದೆ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯಲ್ಲಿ ತೊಡಗಿಸಿಗೊಂಡು ಈಗೊಂದು ಆಲ್ಬಂ ಸಾಂಗ್‌ನ್ನು ಚಿತ್ರೀಕರಿಸಿಕೊಳ್ಳಬಹುದು ಎಂಬ ಊಹೆಯತ್ತ ಈ ತರುಣರು ಚಿತ್ತ ಹರಿಸಿರುವುದು ಪ್ರಶಂಸನೀಯ. ಪ್ರತಿಯೋರ್ವರು ಯೂಟ್ಯೂಬ್ ಚಾನೆಲ್‌ನಲ್ಲಿ ಈ ಆಲ್ಬಂ ಸಾಂಗ್‌ನ್ನು ವೀಕ್ಷಿಸಿ ಈ ಉತ್ಸಾಹಿ ತರುಣರ ಕನಸಿಗೆ ಪ್ರೋತ್ಸಾಹ ನೀಡಬೇಕಾಗಿದೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇವರಿಂದ ಮತ್ತಷ್ಟು ಆಲ್ಬಂ ಸಾಂಗ್‌ಗಳು ಬರಲಿ ಎನ್ನುವುದೇ ಆಶಯವಾಗಿದೆ ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಸಂತ ಫಿಲೋಮಿನಾ ಪಿಯು ಕಾಲೇಜು

ಉತ್ತಮ ಸಂದೇಶವುಳ್ಳ ಈ ಆಲ್ಬಂ ಸಾಂಗ್ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಜೂ.೨೦ ರಂದು ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಲೋಕಾರ್ಪಣೆಗೊಳಿಸಿದ್ದಾರೆ. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಗೋವಿಂದ ಪ್ರಕಾಶ್ ಹಾಗೂ ಹರ್ಷದ್ ಇಸ್ಮಾಯಿಲ್, ಕೆಮಿಸ್ಟ್ರಿ ವಿಭಾಗದ ಉಪನ್ಯಾಸಕರಾದ ಅಶ್ವಿನಿ ಕೆ ಹಾಗೂ ದಿವ್ಯ, ಆಡಳಿತ ಸಿಬ್ಬಂದಿ ವಿಭಾಗದ ಮುಖ್ಯಸ್ಥ ಮೆಲ್ವಿನ್ ಗೊನ್ಸಾಲ್ವಿಸ್ ಸಹಿತ ಇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.