HomePage_Banner
HomePage_Banner
HomePage_Banner

ಬಡವರ ಬದುಕಿನ ಮೇಲೆ ಬೆಳಕು ಚೆಲ್ಲಿದ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು

Puttur_Advt_NewsUnder_1
Puttur_Advt_NewsUnder_1

ಎಲ್ಲಾ ಅಧಿಕಾರಿಗಳಿಗೂ ರೋಲ್ ಮೊಡೆಲ್- ಶೀನ ಶೆಟ್ಟಿ
ಒಬ್ಬ ಅಧಿಕಾರಿಯಿಂದ ಉತ್ತಮ ಕೆಲಸ – ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ
ಪುತ್ತೂರಿನ ಕೋಚಣ್ಣ ರೈ ಆಗಿದ್ದಾರೆ – ಸಂಶುದ್ದೀನ್ ಸಂಪ್ಯ
ಜನರ ಮಧ್ಯದಲ್ಲಿ ನಿಂತು ಕೆಲಸ ಮಾಡುವ ತಹಸೀಲ್ದಾರ್ – ರತ್ನಾಕರ ಪ್ರಭು
ಸೆಲ್ಕೋ ಸಂಸ್ಥೆಯಿಂದ ಸಹಕಾರ – ರಂಜಿತ್

ಪುತ್ತೂರು: ಸೂರ್ಯ ಮುಳುಗುವುದಕ್ಕೂ ಮೊದಲು ಉಂಡು ಮಲಗುವ ಜನರು ಇನ್ನೂ ನಮ್ಮಲ್ಲಿ ಇದ್ದಾರೆ ಎಂದರೆ ಇದು ಅಚ್ಚರಿಯೂ ಹೌದು, ಕಠೋರ ಸತ್ಯವೂ ಹೌದು. ಯಾಕೆಂದರೆ ಬಡತನ ಅವರನ್ನು ಬೆಳಕಿನಿಂದ ವಂಚಿತರನ್ನಾಗಿ ಮಾಡುತ್ತಿದೆ. ಹಾಗಾಗಿ ಅವರೆಲ್ಲಾ ಕಗ್ಗತ್ತಲ ಜೊತೆ ಗೆಳೆತನ ಬೆಳೆಸಿಕೊಂಡವರು. ಹುಣ್ಣಿಮೆ ಚಂದ್ರ ಮೂಡಿ ಬಂದಾಗಲೇ ಇವರ ಮನೆಯಲ್ಲಿ, ಮನದಲ್ಲಿ ಹೊಸ ಬೆಳಕು. ಆ ಬೆಳಕೇ ದಾರಿ ದೀಪ. ಆದರೆ ಇಂತವರ ಬಾಳಿಗೆ ಹೊಸ ಬೆಳಕು ಮೂಡಿದೆ. ಸೌರಶಕ್ತಿಯ ರೂಪದಲ್ಲಿ ರಾತ್ರಿಯ ಹೊತ್ತಲ್ಲೂ ಸೂರ್ಯ ಕೆಳಗಿಳಿದು ಬಂದಿದ್ದಾನೆ. ಈ ಹೊಸ ಬೆಳಕು ಮೂಡಿಸಿದವರು ಬೇರಾರೂ ಅಲ್ಲ. ಕಳೆದ ಮೂರು ತಿಂಗಳ ಹಿಂದೆ ಪುತ್ತೂರಿಗೆ ವರ್ಗಾವಣೆ ಆಗಿ ಬಂದಿದ್ದ ತಹಶೀಲ್ದಾರ್ ರಮೇಶ್ ಬಾಬು. ಇದೀಗ ಇವರು ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ.


ಹೌದು, ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಬನ್ನೂರು ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬೀರಿಗ ಮತ್ತು ಕುಂಬ್ರೊಗ ಎಂಬಲ್ಲಿ ಜನಶಿಕ್ಷಣ ಟ್ರಸ್ಟ್, ತಾಲೂಕು ಪತ್ರಕರ್ತರ ಸಂಘ ಮತ್ತು ಸೆಲ್ಕೂ ಸೋಲಾರ್ ಸಹಯೋಗದ ಯೋಜನೆಯಲ್ಲಿ ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಅವರು ತನ್ನ ವೇತನದ ಒಂದಷ್ಟನ್ನು ಬಡವರಿಗೆ ಮೀಸಲಿಟ್ಟು ಎರಡು ಮನೆಗೆ ಬೆಳಕು ನೀಡುವ ಕೆಲಸ ಮಾಡಿದ್ದರೆ. ಬಡವರ ಮನೆಯಲ್ಲಿ ಒಂದು ಬಲ್ಬ್ ಬೆಳಗುತ್ತಿದೆಯೆಂದರೆ ಅದು ಕೇವಲ ಬೆಳಕಲ್ಲ. ಅದು ಸಾಮಾಜಿಕ ಆರ್ಥಿಕವಾಗಿ ಒಂದು ಕುಟುಂಬದ ಮನಸ್ಥಿತಿಯನ್ನೇ ಬದಲಿಸುವ ಸಾಧನ ಎಂದು ತಹಶೀಲ್ದಾರ್ ರಮೇಶ್ ಬಾಬು ಅವರು ತಾನೆ ಮುಂದೆ ನಿಂತು ಸೋಲಾರ್ ದೀಪ ಅಳವಡಿಸಲು ಆರ್ಥಿಕ ನೆರವು ನೀಡಿದ್ದಲ್ಲದೆ ಜೂ.೨೯ರಂದು ಸೋಲಾರ್ ದೀಪವನ್ನು ಉದ್ಘಾಟಿಸಿ ಎರಡು ಬಡ ಕುಟುಂಬಕ್ಕೆ ಬೆಳಕನ್ನು ಹಸ್ತಾಂತರಿಸಿದ್ದಾರೆ.
ಬೆಳಕು ಪಡೆದು ಕೊಂಡ ಫಲಾನುಭವಿಗಳು:
ಚಿಕ್ಕಮುಡ್ನೂರು ಗ್ರಾಮದ ಬೀರಿಗ ಕಲ್ಯಾಣಿ ಎಂಬವರ ಗುಡಿಸಲು ಮನೆ. ಈ ಮನೆಯಲ್ಲಿ ಕಲ್ಯಾಣಿ ಅವರ ಪುತ್ರ ಕೃಷ್ಣಪ್ಪ, ಸೊಸೆ ಮೀನಾಕ್ಷಿ ಮತ್ತು ಮೊಮ್ಮಕ್ಕಳಾದ ೭ನೇ ತರಗತಿಯ ಅಕ್ಷತ್, ೪ನೇ ತರಗತಿಯ ಪೂಜಶ್ರಿ ಅವರು ವಾಸ್ತವ್ಯ ಹೊಂದಿದ್ದಾರೆ. ಇದೇ ಪರಿಸರದ ಕುಂಬ್ರೊಗೊ ಎಂಬಲ್ಲಿ ಕಮಲಾಕ್ಷಿ ಮತ್ತು ನಾರಾಯಣ ದಂಪತಿ ಮತ್ತು ಇಬ್ಬರು ಮಕ್ಕಳು ವಾಸ್ತವ್ಯ ಹೊಂದಿರುವ ಸಿಮೆಂಟ್ ಶೀಟ್ ಹಾಸಿದ ಮನೆಗೆ ಸೌರ ಬೆಳಕು ನೀಡುವ ಕೆಲಸ ಆಗಿದೆ. ಎರಡು ಬಲ್ಬ್ ಮತ್ತು ಒಂದು ಫ್ಯಾನ್ ಸೌಲಭ್ಯ ಈ ಯೋಜನೆಯಲ್ಲಿದೆ.


ಎಲ್ಲಾ ಅಧಿಕಾರಿಗಳಿಗೂ ರೋಲ್ ಮೊಡೆಲ್:
ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕರಾಗಿರುವ ದ.ಕ.ಜಿಲ್ಲೆಯ ಸ್ವಚ್ಛತರಾಯಬಾರಿ ಶೀನ ಶೆಟ್ಟಿಯವರು ಮಾತನಾಡಿ ಪ್ರತಿ ಮನೆಯಲ್ಲೂ ಬೆಳಕು ಕಾಣಬೇಕು ಎಂಬುದು ನಮ್ಮ ಉದ್ದೇಶ. ಇಂತಹ ಕಟ್ಟಕಡೆಯ ಕುಟುಂಬದಿಂದಲೇ ಸೌರಶಕ್ತಿ ಬೆಳಕು ಕಾಣಲು ಸಾಧ್ಯ. ಇದಕ್ಕೂ ಒಂದಷ್ಟು ಹಣದ ಶಕ್ತಿ ಬರುವುದು ಕೊನೆಗೆ. ಅದಕ್ಕೆ ಒಬ್ಬ ಅಧಿಕಾರಿಯಾಗಿ ಸಹಕಾರ ನೀಡಿ ಗುಡಿಸಲ ಮುಂದೆ ಬಂದು ನಿಂತಿರುವುದೇ ವಿಶೇಷ. ಇಂತಹ ತಹಸೀಲ್ದಾರ್ ಎಲ್ಲರಿಗೂ ರೋಲ್ ಮೋಡೆಲ್ ಆಗಲಿದ್ದಾರೆ ಎಂದ ಅವರು ಮುಂದಿನ ದಿನ ಜನಶಿಕ್ಷಣ ಟ್ರಸ್ಟ್‌ಮೂಲಕ ಮಳೆ ನೀರು ಕೊಯ್ಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಒಬ್ಬ ಅಧಿಕಾರಿಯಿಂದ ಉತ್ತಮ ಕೆಲಸ:
ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಅವರು ಮಾತನಾಡಿ ಒಬ್ಬ ಅಧಿಕಾರಿ ಯಾವ ರೀತಿ ಇದ್ದಾರೆ ಎಂಬುದು ಅವರ ಇಂತಹ ಸಾಮಾಜಿಕ ಚಟುವಟಿಕೆಯಿಂದ ತಿಳಿಯುತ್ತಿದೆ. ಇದು ಎಲ್ಲರಿಗೂ ಮಾದರಿಯಾಗಲಿದೆ ಎಂದರು.
ಪುತ್ತೂರಿನ ಕೋಚಣ್ಣ ರೈ ಆಗಿದ್ದಾರೆ:
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಅವರು ಮಾತನಾಡಿ ಪುತ್ತೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಹಿಂದೆ ತಹಶೀಲ್ದಾರ್ ಆಗಿದ್ದ ಪುತ್ತೂರಿನ ಕೋಚಣ್ಣ ರೈ ಬಡವರ ಪಾಲಿಗೆ ವರದಾನವಾಗಿದ್ದರು. ಅಂತಹ ತಹಶೀಲ್ದಾರ್ ಮತ್ತೆ ಇದೀಗ ರಮೇಶ್ ಬಾಬು ರೂಪದಲ್ಲಿ ಬಂದಿದ್ದಾರೆ. ಯೋಜನೆಯ ಕುರಿತು ತಹಶೀಲ್ದಾರ್ ಅವರನ್ನು ಸಂಪರ್ಕಿಸಿದಾಗ ತಹಸೀಲ್ದಾರ್ ಅವರು ಬಡವರ ಮನೆಗೆ ಬೆಳಕು ಕೊಡುವ ಕೆಲಸ ಉತ್ತಮ ಯೋಜನೆ. ಅದನ್ನು ನಾನೇ ಮಾಡುತ್ತೇನೆ ಎಂದು ತಿಳಿಸಿ ಮುಂದೆ ಬಂದಿರುವುದು ಉತ್ತಮ ತಹಸೀಲ್ದಾರ್ ಆಗಿ ಗುರುತಿಸಿಕೊಂಡಿದ್ದಾರೆ ಎಂದರು.


ಜನರ ಮಧ್ಯದಲ್ಲಿ ನಿಂತು ಕೆಲಸ ಮಾಡುವ ತಹಸೀಲ್ದಾರ್:
ಬನ್ನೂರು ಗ್ರಾ.ಪಂ ಸದಸ್ಯ ರತ್ನಾಕರ ಪ್ರಭು ಅವರು ಮಾತನಾಡಿ ಬಹುತೇಕ ಅಧಿಕಾರಿಗಳು ಕಚೇರಿಯಲ್ಲಿ ಕೂತು ಕೆಲಸ ಮಾಡುತ್ತಾರೆ. ಅಂತಹವ ಪೈಕಿ ಜನರ ಮಧ್ಯೆ ನಿಂತು ಅವರ ಕಷ್ಟ ಸುಖಗಳನ್ನು ಅರಿತು ಕೆಲಸ ಮಾಡುವ ತಹಶೀಲ್ದಾರ್ ರಮೇಶ್ ಬಾಬು ಅವರಿಂದ ಉತ್ತಮ ಕೆಲಸ ನಡೆದಿದೆ ಎಂದರು.
ಸೆಲ್ಕೋ ಸಂಸ್ಥೆಯಿಂದ ಸಹಕಾರ:
ಸೆಲ್ಕೋ ಸೋಲಾರ್‌ನ ರಂಜಿತ್ ಅವರು ಮಾತನಾಡಿ ಬಡವರ ಮನೆಗೆಯ ಬೆಳಕಿಗಾಗಿ ನಮ್ಮಲ್ಲಿ ಹಲವಾರು ಯೋಜನೆಗಳಿವೆ. ನಮ್ಮ ಕಡೆಯಿಂದ ಏನು ವ್ಯವಸ್ಥೆ ಮಾಡಬಹುದೋ ಅದಕ್ಕೆ ನಾವು ಸಹಕಾರ ನೀಡಲಿದ್ದೇವೆ ಎಂದು ಭರವಸೆ ನೀಡಿದರು. ಬನ್ನೂರು ಗ್ರಾ.ಪಂ ಸದಸ್ಯೆ ಗಿರಿಜಾ, ಸಾಮಜಿಕ ಕಾರ್ಯಕರ್ತೆ ಗೀತಾ, ಸೆಲ್ಕೋ ಸೋಲಾರ್‌ನ ಸುಧಾಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಂಗವನಾಡಿ ಕಾರ್ಯಕರ್ತೆ ಅರುಣಾ ವಂದಿಸಿದರು. ಜನಶಿಕ್ಷಣ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

ಪುಣ್ಯದ ಕೆಲಸ: ಬಡವರ ಪಾಲಿಗೂ ಬೆಳಕು ಇರಬೇಕು. ಅವರು ಕತ್ತಲಿನಲ್ಲೂ ಬೆಳಕು ಕಾಣಬೇಕು. ಅವರ ಮಕ್ಕಳಿಗೂ ಬೆಳಕಿನ ದೀಪದಿಂದ ಶಿಕ್ಷಣ ಜ್ಞಾನ ಸಿಗಲಿ ಮತ್ತು ಉತ್ತಮ ಯೋಜನೆ ಕುರಿತು ಮಾಹಿತಿ ನೀಡಿದಾಗ ಸಹಕಾರ ನೀಡಿದ್ದೇನೆ. -ರಮೇಶ್ ಬಾಬು, ತಹಸೀಲ್ದಾರ್ ಪುತ್ತೂರು

ಸೌರಶಕ್ತಿಯ ಬೆಳಕು ಬಡವರ ಮನೆಯಲ್ಲಿ ಬೆಳಗಳು ತಹಸೀಲ್ದಾರ್ ರಮೇಶ್ ಬಾಬು ಅವರು ಆರ್ಥಿಕ ನೆರವು ನೀಡಿದ ಕಾರ್ಯಕ್ರಮದಲ್ಲಿ ಸ್ಥಳದಲ್ಲಿ ಉಪಸ್ಥಿತರಿದ್ದ ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಅವರು ಕೂಡಾ ಒಂದು ಮನೆಗೆ ತನ್ನ ಕಡೆಯಿಂದಲೂ ಆರ್ಥಿಕ ನೆರವು ನೀಡಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.