HomePage_Banner
HomePage_Banner
HomePage_Banner

ಇಂದು ರಾಷ್ಟ್ರೀಯ ವೈದ್ಯರ ದಿನ: ಎ ಸೆಲ್ಯೂಟ್ ಟು ಅವರ್ ಹೆಲ್ತ್ ಕೇರ್ ಹಿರೋಸ್..

Puttur_Advt_NewsUnder_1
Puttur_Advt_NewsUnder_1

✍🏻ಉಮೇಶ್‌ ಮಿತ್ತಡ್ಕ

 

ವೈದ್ಯೋ ನಾರಾಯಣ ಹರಿಃ ಈ ಮಾತು ಪುನರಪಿ ಸತ್ಯದ ಬೆನ್ನು ಹಿಡಿದು ಸಾಗುತ್ತಿದೆ. ವೈದ್ಯನಾದವನು ನಾರಾಯಣ ಸ್ವರೂಪನು. ಅಂದರೆ ಭಗವಂತನ ಸ್ವರೂಪ. ನಾರಾಯಣನು ಸಮಚಿತ್ತವೃತ್ತಿಯುಳ್ಳವನಾಗಿರುವವನು. ಮೇಲು-ಕೀಳು, ಬಡವ-ಬಲ್ಲಿದ, ಸ್ತ್ರೀ-ಪುರುಷ, ಒಳ್ಳೆಯವ-ಕೆಟ್ಟವ ಎನ್ನುವ ಯಾವುದೇ ಬೇಧ ಭಾವವಿಲ್ಲದೆ ಸಕಲರನ್ನೂ ಸಮಾನವಾಗಿ ಅವರವರ ಕರ್ಮಕ್ಕನುಗುಣವಾಗಿ ಅವರನ್ನು ಸಲಹುವವನು. ವೈದ್ಯನು ನಾರಾಯಣ ಸ್ವರೂಪಿಯಾದ ಭಗವಂತನಾಗಿದ್ದಾನೆ. ಈ ಭಗವಂತನಾದ ನಾರಾಯಣ ಸ್ವರೂಪಿಯಾಗಿರುವ ವೈದ್ಯನೇ ಹರಿ. ಹರಿ ಎಂದರೆ ಹರಣ ಮಾಡುವುದು ಎಂಬರ್ಥ. ರೋಗ-ರುಜಿನ, ವೇದನೆ, ಅಶಾಂತಿಯನ್ನು ಬಾಧೆ, ದುಖಃ ಮತ್ತು ವ್ಯಥೆಯನ್ನು ಹರಣ ಮಾಡಿ ತನ್ಮೂಲಕವಾಗಿ ಆರೋಗ್ಯ, ಶಾಂತಿ, ಸಂತೋಷ, ನೆಮ್ಮದಿಯನ್ನು ದಯಪಾಲಿಸುತ್ತಾನೆ ಎನ್ನುವುದೇ ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿನ ಅರ್ಥ. ಬದಲಾದ ಕಾಲಘಟ್ಟದಲ್ಲಿ ಇಡಿಯ ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮತೋಲನ, ಮೌಲ್ಯಗಳ ಅಧಃಪತನ, ಸ್ವಾರ್ಥಬುದ್ಧಿ, ಮಿತಿಮೀರಿದ ಹಣದ ವ್ಯಾಮೋಹದಿಂದ ಉಂಟಾಗಿರುವ ವ್ಯಾವಹಾರಿಕ ಮನೋಭಾವ ಇವುಗಳ ಕಾರಣದಿಂದಲಾಗಿ ಎಲ್ಲವೂ ಕೂಡ ಮರುವ್ಯಾಖ್ಯಾನ ಹೊಂದುತ್ತಿದೆ.

ಭಾರತದಲ್ಲಿ ವೈದ್ಯ ದಿನಾಚರಣೆಯನ್ನು ಭಾರತ ರತ್ನ ಪುರಸ್ಕೃತ, ಪಶ್ಚಿಮ ಬಂಗಾಳದಲ್ಲಿ ಎರಡನೇ ಮುಖ್ಯಮಂತ್ರಿಯಾಗಿದ್ದ ಬಿಧಾನ್ ಚಂದ್ರ ರಾಯ್ ಹುಟ್ಟಿದ (ಮತ್ತು ಮರಣಿಸಿದ) ದಿನವಾದ ಜುಲೈ ೧ನ್ನು ರಾಷ್ಟ್ರೀಯ ವೈದ್ಯರ ದಿನವೆಂದು ಪ್ರತಿ ವರ್ಷ ಆಚರಿಸಲಾಗುವುದು. ಬಿಧಾನ್ ಚಂದ್ರ ರಾಯ್ ರವರು ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದರು. ತಮ್ಮ ಜೀವನವನ್ನು ಬಡವ ಬಲ್ಲಿದರ ಸೇವೆಗೋಸ್ಕರವೇ ಮುಡುಪಾಗಿಟ್ಟಿದ್ದರು. ಅವರ ಸೇವೆಗೆ ಗೌರವಾರ್ಥವಾಗಿ ಮತ್ತು ಅವರಂತೆಯೇ ಜನರ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟ ವೈದ್ಯರಿಗೆ ಗೌರವಾರ್ಥಕವಾಗಿ ಈ ವೈದ್ಯ ದಿನಾಚರಣೆಯನ್ನು ಆಚರಿಸಲಾಗುವುದು. ವೈದ್ಯ ದಿನಾಚರಣೆಯ ಮಹತ್ವದ ಕುರಿತು ಜನಸಾಮಾನ್ಯರು ಮತ್ತು ವೈದ್ಯರು ಚಿಂತಿಸಬೇಕಾಗಿದೆ. ಒಬ್ಬ ವ್ಯಕ್ತಿ ಉತ್ತಮ ವೈದ್ಯ ಎಂದು ಕರೆಸಿಕೊಳ್ಳಲು ತನ್ನ ಖಾಸಗಿ ಜೀವನಕ್ಕಿಂತ ವೈದ್ಯಕೀಯ ಜೀವನಕ್ಕೆ ಹೆಚ್ಚು ಮಹತ್ವ ಕೊಡಬೇಕಾಗುತ್ತದೆ. ನೊಂದ ರೋಗಿಯ ಬದುಕಿನಲ್ಲಿ ಭರವಸೆ ಮೂಡಿಸಬೇಕಾಗುತ್ತದೆ. ಎಷ್ಟೇ ಸುಸ್ತು ಇದ್ದರೂ ಅದನ್ನು ತೋರಿಸಿಕೊಳ್ಳದೆ ಅವನನ್ನು ನಂಬಿ ಬಂದ ರೋಗಿಯನ್ನು ಬದುಕಿಸುವ ಅಥವಾ ರೋಗವನ್ನು ಗುಣಪಡಿಸುವುದೇ ಅವರ ಮುಖ್ಯ ಗುರಿಯಾಗಿರುತ್ತದೆ. ಅದೇ ಅವರ ವೃತ್ತಿಧರ್ಮ. ಆದರೆ ಕೆಲವು ವೈದ್ಯರುಗಳು ಹಣದ ದುರಾಸೆಯಿಂದ ವೃತ್ತಿ ಧರ್ಮವನ್ನು ಮರೆತಿರುವ ಕಾರಣ ಜನರಿಗೆ ವೈದ್ಯರ ಬಗ್ಗೆ ಅಸಮಾಧಾನ ಕೂಡ ಇದೆ. ಒಬ್ಬ ವ್ಯಕ್ತಿ ಡಾಕ್ಟರ್ ಆಗಲು ಲಕ್ಷಗಟ್ಟಲೆ ಹಣ ಸುರಿದಿರುತ್ತಾನೆ, ತುಂಬಾ ಸಾಲ ಮಾಡಿ ಓದಿರುತ್ತಾರೆ. ಅವರು ಹಣ ಪಡೆಯಲಿಲ್ಲ ಎಂದರೆ ಅದನ್ನು ತೀರಿಸುವುದು ಹೇಗೆ? ಯಾವುದೇ ವೃತ್ತಿಯಾದರೂ ಹಣ ಗಳಿಸಬೇಕು. ಆದರೆ ಬಡವರಿಗಾಗಿ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯನಾಗಿದ್ದು, ರೋಗಿಗಳ ಹತ್ತಿರ ಹಣ ಪಡೆಯುವುದು ಯಾವ ವೃತ್ತಿ ಧರ್ಮ? ವೈದ್ಯನಾದವನು ತನ್ನ ವೃತ್ತಿ ಧರ್ಮವನ್ನು ಯಾವತ್ತು ಮರೆಯಬಾರದು. ಅಂತಹವರು ಮಾತ್ರ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ, ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ಅಂತೆಯೇ ಜನಸಾಮಾನ್ಯರು ಕೆಲ ವೈದ್ಯರು ಮಾಡುವ ತಪ್ಪಿಗೆ ಇಡೀ ವೈದ್ಯ ಕುಲದ ಬಗ್ಗೆ ಇರುವ ತಿರಸ್ಕಾರ ಬಿಡಬೇಕು. ಅವರೂ ನಮ್ಮಂತೆ ಮನುಷ್ಯರು ಸುಸ್ತು, ಒತ್ತಡ ಎಲ್ಲಾ ಇರುತ್ತದೆ ಎಂದು ಅರ್ಥೈಸಿಕೊಳ್ಳಬೇಕು. ನಮಗಾಗಿ ಜೀವದ ಅಪಾಯ ಲಕ್ಷಿಸದೆ ಚಿಕಿತ್ಸೆ ನೀಡಲು ಮುಂದಾಗುತ್ತಾರೆ ಎಂಬ ಗೌರವ ಭಾವ ಸದಾ ಕಾಪಾಡಿಕೊಳ್ಳಬೇಕು. ಕೊರೊನಾದಂತಹ ಭೀಕರ ಹರಡುವಿಕೆಯ ವೈರಾಣು ರೋಗ ಹತೋಟಿಯಲ್ಲಿ ಇಡೀ ವಿಶ್ವದ ವೈದ್ಯ ಕುಲ ಒಂದಾಗಿ ಹೋರಾಡುತ್ತಿದೆ. ದಾದಿಯರು, ಆರೋಗ್ಯ ಸಹಾಯಕಿಯರು ವಿಶ್ರಾಂತಿಯಿಲ್ಲದೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕೊರೊನಾ ಹೋರಾಟದಲ್ಲಿ ಜನಸಾಮಾನ್ಯನ ಪಾತ್ರ ಅತೀ ವಿರಳವಾದುದು. ಕೊರೊನಾ ವಾರಿಯರ್ಸ್‌ಗೆ ಸಹಕಾರ, ಪ್ರೋತ್ಸಾಹ ನೀಡುವುದೇ ಹೋರಾಟದಲ್ಲಿ ನಾವು ನೀಡುವ ಕೊಡುಗೆಯಾದೀತು.. ಎ ಬಿಗ್ ಸೆಲ್ಯೂಟ್ ಟು ಅವರ್ ಹೆಲ್ತ್ ಕೇರ್ ಹೀರೋಸ್..

ಡಾಕ್ಟರ್ಸ್ ಮನದಾಳದ ಮಾತುಗಳು:

ಕೊರೊನಾ ವಾರಿಯರ್ಸ್ ಅಂತರಂಗದ ನುಡಿ

`ಡಾಕ್ಟರ್ ಪ್ಲೀಸ್, ಹೇಗಾದರು ಮಾಡಿ ಜೀವ ಉಳಿಸಿಕೊಡಿ.. ಎಷ್ಟು ಖರ್ಚಾದರೂ ಪರವಾಗಿಲ್ಲ ಪ್ಲೀಸ್ ಡಾಕ್ಟರ್..` ಬಹುಶಃ ಇಂತಹ ಮಾತುಗಳು ಪ್ರತಿಯೊಬ್ಬರಲ್ಲಿಯೂ ತಮ್ಮ ಜೀವನ ಕಾಲದಲ್ಲಿ ಬಂದಿರಬಹುದು. ನಮ್ಮ ಆತ್ಮೀಯರಾದವರು ಆಸ್ಪತ್ರೆಯಲ್ಲಿ ತೀರಾ ಅಸೌಖ್ಯದಿಂದ ಬಳಲುತ್ತಿದ್ದಾಗ ಅವರನ್ನು ನೋಡುವ ವೈದ್ಯರಲ್ಲಿ ಈ ರೀತಿ ಅಂಗಲಾಚಿಕೊಳ್ಳುತ್ತೇವೆ. ಆದರೆ ಎಲ್ಲೋ ಒಂದು ಕಡೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಸಹಜವಾಗಿ ಮಾಡುವ ತಪ್ಪಿಗೆ ಪ್ರಾಣ ರಕ್ಷಕ ಇಡೀ ವೈದ್ಯ ಸಮೂಹವನ್ನೇ ನಾವು ದೂಷಿಸುತ್ತೇವೆ. ಅದೇ ನಾವು ಕೋವಿಡ್-19  ನಂತಹ ಭೀಕರ ಸಾಂಕ್ರಾಮಿಕ ರೋಗಗಳು ಬಂದಾಗವಂತೂ ವೈದ್ಯ ಸಮೂಹದ ಮೇಲೆ ಅಪಾರ ಪ್ರೀತಿ ಗೌರವ ಎದ್ದು ಕಾಣುತ್ತಿದೆ. ಡಾಕ್ಟರ್ಸ್ ಡೇಯ ಸಂದರ್ಭಕ್ಕೆ ಅನುಗುಣವಾಗಿ ಪುತ್ತೂರಿನ ಪ್ರಮುಖ ವೈದ್ಯರುಗಳನ್ನು ಭೇಟಿಯಾಗಿ ಅವರ ಮನದಾಳದ ಮಾತುಗಳನ್ನು ಪಡೆದುಕೊಂಡು ಇಲ್ಲಿ ನೀಡಿದ್ದೇವೆ.

ಡಾಕ್ಟರ್ ಆಗಿ ಸೇವೆ ಸಲ್ಲಿಸುವುದು ಪೂರ್ವ ಜನ್ಮದ ಪುಣ್ಯದ ಫಲ


ಡಾಕ್ಟರ್ ಆಗಿ ಸೇವೆ ಸಲ್ಲಿಸುವುದು ಪೂರ್ವ ಜನ್ಮದ ಪುಣ್ಯದ ಫಲ. ಯಾರಿಗೂ ತೊಂದರೆಯಿಲ್ಲದೇ ಜನರ ಸೇವೆ ಮಾಡುವುದು ಡಾಕ್ಟರ್ ಕಾರ್ಯವಾಗಿದೆ. ಹೊಸ ಡಾಕ್ಟರ್‌ಗಳು ಎಷ್ಟು ಅಧ್ಯಯನ ಮಾಡಿದರೂ ಅವರಲ್ಲಿ ಸೇವಾ ಮನೋಭಾವ ಇರಬೇಕು. ಭಾರತ ಬಡ ದೇಶ. ಆದಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ರೋಗಿಗಳನ್ನು ಗುಣಮುಖರನ್ನಾಗಿಸಿ ಮನೆಗೆ ಕಳುಹಿಸುವ ಕಾರ್ಯ ವೈದ್ಯರು ಮಾಡಬೇಕು. ವೈದ್ಯನಾದವನು ತನ್ನ ಸುಖ ಇಟ್ಟುಕೊಂಡು ಕೆಲಸ ಮಾಡಬಾರದು. ಅದು ತನ್ನಿಂದತಾನೇ ಬರುತ್ತದೆ. ತಮ್ಮ ಪ್ರಾಣದ ಹಂಗು ತೊರೆದು ಕೋವಿಡ್ ವಿರುದ್ಧ ಕೆಲಸ ಮಾಡುತ್ತಿರುವ ವೈದ್ಯರಿಗೆ ನನ್ನ ನಮನ – ಡಾ. ಎಂ.ಕೆ. ಪ್ರಸಾದ್  ವೈದ್ಯಕೀಯ ತಜ್ಞರು,  ಸರ್ಜನ್, ಆದರ್ಶ ಆಸ್ಪತ್ರೆ ಪುತ್ತೂರು

ಕೋವಿಡ್ ೧೯ ವೈದ್ಯಕೀಯ ಕ್ಷೇತ್ರದಲ್ಲಿ ಕೋಲಾಹಲ ಸೃಷ್ಟಿಸಿದೆ


ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ನರ್ಸಸ್ ಮತ್ತು ಸಾರ್ವಜನಿಕರು ನೆನಪು ಮಾಡಿದಾಗ ಮಾತ್ರ ವೈದ್ಯರ ದಿನದ ನೆನಪಾಗುತ್ತದೆ. ಕೋವಿಡ್ ೧೯ ವೈದ್ಯಕೀಯ ಕ್ಷೇತ್ರದಲ್ಲಿ ಕೋಲಾಹಲ ಸೃಷ್ಟಿಸಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ತೊಂದರೆಗಿಂತಲೂ ಅಧಿಕವಾಗಿ ವೈದ್ಯ ವೃತ್ತಿ ಯಲ್ಲಿರುವವರಿಗೆ ಸಾಕಷ್ಟು ಸಂಕಷ್ಟವನ್ನು ತಂದಿದೆ. ಆದಷ್ಟು ಶೀಘ್ರ ಭಾರತ ಕೊರೊನಾ ಮುಕ್ತವಾಗಬೇಕೆಂಬ ಆಶಯ ನಮ್ಮದು. ಮುಂದಿನ ದಿನಗಳಲ್ಲಿ ನಿಜವಾಗಿಯೂ ಡಾಕ್ಟರ್‍ಸ್ ಡೇ ಹರ್ಷದಿಂದ ಆಚರಿಸುವಂತಾಗಲಿ – ಡಾ. ಶ್ರೀಪತಿ ರಾವ್ ವೈದ್ಯಕೀಯ ತಜ್ಞರು ಪ್ರಗತಿ  ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು

ಡೆಂಗ್ಯೂ ಬಗ್ಗೆಯೂ ಜಾಗ್ರತೆ ವಹಿಸಿಕೊಳ್ಳಿ

ವೈದ್ಯರು ಮತ್ತು ಸಪೋರ್ಟಿಂಗ್ ಸ್ಟಾಫ್ ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ಹತೋಟಿಗೆ ಬಂದಿದೆ. ನಮಗೆ ಹೆಮ್ಮೆಯ ಸಂಗತಿ ಇದು. ಆದರೂ ವೈದ್ಯಕೀಯ ವರ್ಗದವರ ಶ್ರಮವನ್ನು ಇಡೀ ಜಗತ್ತು ಸ್ಮರಿಸಬೇಕಾಗಿದೆ. ಇಡೀ ಜಗತ್ತು ಕೊರೊನಾ ಮುಕ್ತವಾಗಲಿ ಎಂಬುದೇ ನಮ್ಮ ಆಶಯ. ನಮ್ಮ ಪರಿಸರದಲ್ಲಿ ಕೊರೊನಾಕ್ಕಿಂತ ಡೆಂಗ್ಯೂ ಅಪಾಯಕಾರಿಯಾಗಿದೆ. ಈ ಬಗ್ಗೆ ಎಲ್ಲರೂ ಜಾಗೃತೆವಹಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ – ಡಾ. ಶ್ರೀಕಾಂತ್ ರಾವ್ ಮಕ್ಕಳ ತಜ್ಞರು ಚೇತನಾ ಆಸ್ಪತ್ರೆ ಪುತ್ತೂರು

ವೈದ್ಯರನ್ನು ಗೌರವದಿಂದ ಕಾಣುವ ಕಾಲ ಬಂದಿದೆ


ಈ ವರ್ಷದ ವೈದ್ಯರ ದಿನಾಚರಣೆಗೆ ವಿಶೇಷ ಮಹತ್ವ ಬಂದಿದೆ. ನಾವೆಲ್ಲಾ ಕೋವಿಡ್ ೧೯ರ ಮಧ್ಯದಲ್ಲಿzವೆ. ಸಾರ್ವಜನಿಕರಿಗೆ ಮತ್ತು ವೈದ್ಯರಿಗೆ ಒಂದೇ ರೀತಿಯ ರಿಸ್ಕ್ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಎಲ್ಲಾ ಜನರು ವೈದ್ಯರು ಮತ್ತು ವೈದ್ಯಕೀಯ ರಂಗಕ್ಕೆ ಪ್ರೋತ್ಸಾಹವಾಗಿ ನಿಲ್ಲಬೇಕಾಗಿದೆ. ಸಮಾಜದಲ್ಲಿ ವೈದ್ಯರ ಅಗತ್ಯ ಮತ್ತು ಅವರ ಮಹತ್ವ ಈ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿದೆ. ಒಂದು ಕಾಲದಲ್ಲಿ ವೈದ್ಯರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲಾಗುತ್ತಿತ್ತು. ಮತ್ತೆ ಅದು ನಿಂತು ಹೋಗಿತ್ತು. ಇದೀಗ ಮತ್ತೆ ವೈದ್ಯರನ್ನು ಗೌರವದಿಂದ ಕಾಣುವ ಪರಿಸ್ಥಿತಿ ಬಂದೊದಗಿದೆ – ಡಾ. ಭಾಸ್ಕರ ರಾವ್ ಎಂ.ಡಿ. ಪುತ್ತೂರು ಸಿಟಿ ಆಸ್ಪತ್ರೆ

ಕೊರೊನಾಕ್ಕೆ ಪುರಾತನ ಚಿಕಿತ್ಸಾ ಕ್ರಮ ಅನುಸರಿಸಬಹುದು

೩೦ ವರ್ಷಗಳಿಂದ ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ೧೮ ವರ್ಷಗಳಿಂದ ಆಯುರ್ವೇದ ಆಸ್ಪತ್ರೆಯನ್ನು ನಡೆಸುತ್ತಿದ್ದೇನೆ. ವಿದೇಶಿ ರೋಗಿಗಳೂ ಇಲ್ಲಿ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಜನರ ಸೇವೆಯಲ್ಲಿ ಸಂತೃಪ್ತಿ ಇದೆ. ಕೊರೊನಾದ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ದಿನಾ ಮೂರು ಸಲ ಬಿಸಿಬಿಸಿ ನೀರು ಕುಡಿಯುತ್ತಿರುವುದರಿಂದ ದೇಹದಲ್ಲಿ ಅಗ್ನಿಬಲ ವೃದ್ಧಿಸಬಹುದಾಗಿದೆ. ಇದರಿಂದಾಗಿ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ವೃದ್ಧಿಯಾಗಿ ಕೊರೊನಾ ಸೋಂಕು ತಗುಲಿದರೂ ಸುಲಭವಾಗಿ ಗುಣಮುಖವಾಗಬಹುದಾಗಿದೆ. ಈ ಚಿಕಿತ್ಸಾ ಕ್ರಮ ಪುರಾತನ ಗ್ರಂಥಗಳಲ್ಲಿಯೇ ಉಲ್ಲೇಖಿಸಲ್ಪಟ್ಟಿದೆ – ಡಾ. ರವಿಶಂಕರ ಪೆರುವಾಜೆ ಆಯುರ್ವೇದ ತಜ್ಞರು, ಸುಶ್ರುತ ಆಯುರ್ವೇದ ಆಸ್ಪತ್ರೆ ಪುತ್ತೂರು

ಜನರ ಸೇವೆಗೆ ವೈದ್ಯ ವೃತ್ತಿ ಉತ್ತಮ ಅವಕಾಶ


ಡಾಕ್ಟರ್ಸ್ ಡೇ ಪ್ರಯುಕ್ತ ಜನರಿಗೆ ತಿಳಿಯಪಡಿಸುವುದೇನೆಂದರೆ `ನಾವು ನಿಮ್ಮ ಸೇವೆಗೆ ಸದಾ ಸಿದ್ದರಿದ್ದೇವೆ. ಆದರೆ ನಿಮ್ಮ ಜಾಗರೂಕತೆ ನೀವೇ ಮಾಡಿಕೊಳ್ಳಬೇಕು. ಲಾಕ್‌ಡೌನ್ ಸಂದರ್ಭದಲ್ಲಿದ್ದ ಹಾಗೇ ಹೆಚ್ಚು ಕಾಲ ಮನೆಯಲ್ಲಿಯೇ ಇರಲಿ. ಮಾಸ್ಕ್‌ನ್ನು ಕೂಡಾ ಸಮರ್ಪಕವಾಗಿ ಧರಿಸಿಕೊಳ್ಳಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಜನರ ಸೇವೆ ಮಾಡುವಲ್ಲಿ ನಮ್ಮ ವೃತ್ತಿ ಒಂದು ಉತ್ತಮ ಅವಕಾಶ. ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಕಾರಣ ನಾವು ಎಲ್ಲರಿಗೂ ಉತ್ತರ ನೀಡುವವರಾಗಿzವೆ. ನಮಗೆ ಒತ್ತಡವಿಲ್ಲದಿದ್ದರೆ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಬಹುದು – ಡಾ. ಆಶಾಜ್ಯೋತಿ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಪುತ್ತೂರು

ವೈದ್ಯರಿಗೆ ಧನ್ಯವಾದ ಅರ್ಪಿಸುವ ದಿನ


ತಮ್ಮ ಪ್ರಾಣವನ್ನೂ ಒತ್ತೆಯಿಟ್ಟು ತನ್ನ ರೋಗಿಗಳ ಆರೈಕೆ ಮಾಡುವ ವೈದ್ಯರಿಗೆ ಧನ್ಯವಾದ ಅರ್ಪಿಸುವ ದಿನವಿದು. ರಾಜಕೀಯದ ನಡುವೆ ವೈದ್ಯರುಗಳ ತಪ್ಪುಗಳನ್ನು ಎತ್ತಿಹಿಡಿಯುವ ಕಾರ್ಯ ನಡೆಯುತ್ತಿದೆ. ಆದರೆ ಪ್ರಸ್ತುತ ಸಮಯದಲ್ಲಿ ಕೋವಿಡ್ ಮಾರಕ ಕಾಯಿಲೆ ಇರುವುದರಿಂದ ವೈದ್ಯರ ಬಗ್ಗೆ ಜನಸಾಮಾನ್ಯರಿಗೆ ಗೌರವ ತೋರುವ ಲಕ್ಷಣ ಕಾಣಿಸುತ್ತಿದೆ. `ರೋಗವನ್ನು ಚಿಕಿತ್ಸಿಸುವುದಕ್ಕಿಂತ ರೋಗವನ್ನು ತಡೆಗಟ್ಟುವುದು ಸೂಕ್ತ’ ಎಂಬ ಮಾತನ್ನು ಈ ದಿನ ಹೇಳಲು ಇಚ್ಚೆಪಡುತ್ತೇನೆ – ಡಾ. ನಿತ್ಯಾನಂದ ಪೈ
ಹಿರಿಯ ವೈದ್ಯರು ಪುತ್ತೂರು

ನಮಗೆ ಆತ್ಮಾವಲೋಕನದ ದಿನವಿದು

  
ವೈದ್ಯರು ಮತ್ತು ರೋಗಿಗಳಿಗೆ ವೈದ್ಯರ ಮಹತ್ವದ ಅರಿವಿನ ಬಗ್ಗೆ ತಿಳಿಸುವ ಉದ್ದೇಶದಿಂದ ವೈದ್ಯರ ದಿನ ಆಚರಿಸಲಾಗುತ್ತಿದೆ. ವೈದ್ಯರಾದ ನಮಗೆ ಈ ದಿನ ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಿದೆ. ಕೋವಿಡ್ ವೀರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೂ ಸಹಕರಿಸಬೇಕಾಗುತ್ತದೆ. ವೈದ್ಯರಾದ ನಮಗೂ ವೈಯಕ್ತಿಕ ಜೀವನವಿರುತ್ತದೆ. ನಮಗೂ ಒತ್ತಡವಿರುತ್ತದೆ. ವೈದ್ಯರು ತಮ್ಮ ರೋಗಿಯ ಬಗ್ಗೆ ಚಿಂತಿಸುವ ಜೊತೆಗೆ ತಮ್ಮ ವೈಯಕ್ತಿಕ ಆರೋಗ್ಯವನ್ನೂ ನೋಡಿಕೊಳ್ಳಬೇಕೆಂದು ನನ್ನೆಲ್ಲಾ ವೈದ್ಯ ಮಿತ್ರರಲ್ಲಿ ವಿನಂತಿ – ಡಾ. ಪ್ರವೀಣ್ ಕುಮಾರ್ ರೈ ಹೋಮಿಯೋಪತಿ ವೈದ್ಯರು, ಡಾ. ರೈ ಹೋಮಿಯೋಪತಿ ಸೆಂಟರ್ ಮಂಗಳೂರು

ಸವಾಲುಗಳ ಮಧ್ಯೆ ವೈದ್ಯ ವೃತ್ತಿ
ಹೊಸತಾಗಿ ಕಾಡುವ ರೋಗಗಳು ಒಡ್ಡುವ ಸವಾಲುಗಳೊಂದಿಗೆ ಅಕ್ರಮವಾಗಿ ಚಿಕಿತ್ಸೆ ನೀಡುವ ವೈದ್ಯರು (ಕಿಖಿಅಇಓಖ), ಅನಗತ್ಯ ಚಿಕಿತ್ಸೆ ನೀಡುವ ವೈದ್ಯರು, ವೈದ್ಯ ವೃಂದದೊಳಗೆ ಆಗುವ ಸ್ಪರ್ಧೆ, ವೈದ್ಯರಿಂದ ಆಗುವ ತಪ್ಪುಗಳನ್ನು ವೈಭವೀಕರಿಸಿ ಅದನ್ನು ಅಪಪ್ರಚಾರ ಮಾಡುವ ರೋಗಿಗಳು, ಚಿಕಿತ್ಸೆ ಪಡೆದು ನಂತರ ಹಣ ಪಾವತಿಸದೇ ಸತಾಯಿಸುವ ರೋಗಿಗಳು, ಹಲವಾರು ಯೋಜನೆಗಳನ್ನು ನಿರೂಪಿಸಿ ನಂತರ ಆಸ್ಪತ್ರೆಯ ಖಾತೆಗೆ ಹಣವನ್ನೇ ಕೊಡದೆ ವಂಚಿಸುವ ಸಂಸ್ಥೆಗಳು. ಹೀಗೆ ಸವಾಲುಗಳು ಒಂದೇ ಎರಡೇ !? ಇದೆಲ್ಲವನ್ನೂ ಹಿಮ್ಮೆಟ್ಟಿ ಕಲಿತ ವೃತ್ತಿಗೆ ದ್ರೋಹ ಬಗೆಯದೇ ಅತ್ಯುತ್ತಮ ರೀತಿಯಲ್ಲಿ ವೃತ್ತಿಪಾಲನೆ ಮಾಡುವ ವೈದ್ಯರೆಲ್ಲರಿಗೂ ನಮ್ಮ ನಮನ – ಡಾ. ಸೀಮಾ ಅಜಿತ್ ವೈದ್ಯಾಧಿಕಾರಿ ಹಿತ ಆಸ್ಪತ್ರೆ ಪುತ್ತೂರು

ಮಧುಮೇಹ ರೋಗದ ಬಗ್ಗೆ ಜಾಗೃತಿ ಬೇಕಾಗಿದೆ


ಸಣ್ಣಪ್ರಾಯದವರಲ್ಲಿ, ಗರ್ಭಿಣಿ ಹೆಂಗಸರಲ್ಲಿ ಹೆಚ್ಚಾಗಿ ಮಧುಮೇಹ ಕಾಣುತ್ತಿದೆ. ಎಲ್ಲಾ ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ ತಮ್ಮ ಬ್ಯುಸಿ ಸಮಯದಲ್ಲಿಯೂ ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ರೋಗಿಗಳ ರೋಗವನ್ನು ನಾವು ಕೇವಲ ಶೇ.೧೦ ರಷ್ಟು ಗುಣಮುಖರಾಗಿಸಬಹುದು. ಆದರೆ ಉಳಿದ ೯೦ ಶೇಕಡಾವೂ ರೋಗಿಗಳೇ ತಮ್ಮ ದೈನಂದಿನ ವಿಧಾನದಲ್ಲಿ ರೋಗಗಳನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯರಿಗೂ ಕೊರೊನಾ ಬಾಧಿಸಲ್ಪಡುತ್ತಿದೆ. ಹಾಗಂತ ವೈದ್ಯರಾದ ನಾವು ಭಯಪಟ್ಟು ಕೂರುವುದು ಸರಿಯಲ್ಲ – ಡಾ. ನಝೀರ್ ಅಹಮ್ಮದ್ ವೈದ್ಯಕೀಯ ಮತ್ತು ಮಧುಮೇಹ ತಜ್ಞರು, ಡಾ, ನಝೀರ್ ಡಯಾಬಿಟೀಸ್ ಸೆಂಟರ್ ಪುತ್ತೂರು

ದುಡ್ಡಿನ ಮನೋಭಾವ ಯಾವ ವೈದ್ಯರಿಗೂ ಇರಲ್ಲ


ಈಗಿನ ಕಾಲಘಟ್ಟದಲ್ಲಿ ವೈದ್ಯರ ಬಗ್ಗೆ ಇರುವ ಭಾವನೆ ಮತ್ತು ೨೦-೩೦ ವರ್ಷಗಳ ಹಿಂದೆ ವೈದ್ಯರನ್ನು ಕಾಣುತ್ತಿದ್ದಕ್ಕೂ ಅಜಗಜಾಂತರವಿದೆ. ಎಲ್ಲಾ ವೃತ್ತಿಯಂತೆ ವೈದ್ಯರೂ ಒಂದು ವೃತ್ತಿಪರರು. ಒಬ್ಬ ರೋಗಿಯನ್ನು ಚಿಕಿತ್ಸೆ ಮಾಡುವಾಗ ಎಷ್ಟೇ ಡೊನೇಷನ್ ಕೊಟ್ಟು ಅಥವಾ ಖರ್ಚು ಮಾಡಿ ವೈದ್ಯ ವೃತ್ತಿ ಪಡೆದುಕೊಂಡಿದ್ದರೂ ದುಡ್ಡಿನ ಮನೋಭಾವ ಇಟ್ಟು ಯಾವುದೇ ವೈದ್ಯನು ತನ್ನ ವೃತ್ತಿ ಮಾಡುವುದಿಲ್ಲ. ವೈದ್ಯರ ಮುಂದೆ ರೋಗಿ ಬಂದಾಗ ಅಪರೂಪದ ಸಂಬಂಧ ಏರ್ಪಟ್ಟಿರುತ್ತದೆ – ಡಾ. ಅಶ್ವಿನ್ ಆಳ್ವ ಕೆ.
ಕೀಹೋಲ್ ಸರ್ಜನ್ – ಎಂಡೋಸ್ಕೋಪಿಸ್ಟ್

ಪಾಲಕರು ಜಾಗ್ರತೆ ವಹಿಸಿಕೊಳ್ಳಬೇಕು


ಪುತ್ತೂರಿನಲ್ಲಿ ಕಾರ್ಯನಿರ್ವಹಿಸಲು ತುಂಬಾ ಖುಷಿಯಾಗುತ್ತಿದೆ. ನಮ್ಮದೇ ಜನತೆಗೆ ಸೇವೆ ನೀಡುವುದು ಸಂತೋಷ ತಂದಿದೆ. ಪುತ್ತೂರಿನ ಜನತೆ ತುಂಬಾ ಸಹಕಾರ ನೀಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲೂ ನಮ್ಮೊಡನೆ ಸಾರ್ವಜನಿಕರು ಸಹಕರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೈದ್ಯರ ಪರಿಸ್ಥಿತಿಯ ಬಗ್ಗೆಯೂ ಸಾರ್ವಜನಿಕರಿಗೆ ಅರಿವು ಇರಬೇಕು. ೧೦ ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಅತ್ಯಂತ ರಿಸ್ಕ್ ಆಗಿರುತ್ತದೆ. ಮಕ್ಕಳಿಗೆ ಕಾಯಿಲೆ ಹರಡದಂತೆ ಜಾಗ್ರತೆ ವಹಿಸುವುದು ಪಾಲಕರ ಕರ್ತವ್ಯವಾಗಿದೆ – ಡಾ. ಶ್ರೀದೇವಿ ವಿಕ್ರಂ ಮಕ್ಕಳ ತಜ್ಞರು, ಮಕ್ಕಳ ಚಿಕಿತ್ಸಾಲಯ, ಪುತ್ತೂರು

ವ್ಯಾಧಿಕ್ಷಮತೆಗೆ ಆಯುರ್ವೇದದಲ್ಲಿ
ಸೂಕ್ತ ಕ್ರಮಗಳಿವೆ


ಕೋವಿಡ್ ೧೯ ಈ ವರ್ಷದಲ್ಲಿ ವೈದ್ಯರ ದಿನ ವಿಶೇಷತೆ ಪಡೆದುಕೊಂಡಿದೆ. ಪ್ರತಿದಿನ ಸಸ್ಯಾಹಾರ ಸೇವನೆ ಮತ್ತು ವ್ಯಾಯಾಮದಿಂದಾಗಿ ಒಂದಷ್ಟು ವೈರಸ್ ಸೋಂಕಿನ ಪರಿಣಾಮವನ್ನು ತಡೆಗಟ್ಟಬಹುದು. ಆಯುರ್ವೇದ ಮೂಲಕ ಇಮ್ಯುನಿಟಿ ವೃದ್ಧಿಸಲು ಒಂದಷ್ಟು ವಿಧಾನಗಳಿವೆ. ವ್ಯಾಧಿಕ್ಷಮತೆಗಾಗಿ ಆಯುರ್ವೇದ ಮದ್ದುಗಳನ್ನು ಪಡೆಯುವುದರಿಂದ ನಿರಂತರ ಯಾವುದೇ ವ್ಯಾಧಿ ಬಾರದಂತೆ ತಡೆಗಟ್ಟಬಹುದಾಗಿದೆ.
ಡಾ. ಹರಿಕೃಷ್ಣ ಪಾಣಾಜೆ ಆಯುರ್ವೇದ ತಜ್ಞರು, ಎಸ್‌ಡಿಪಿ ರೆಮಿಡೀಸ್ – ರೀಸರ್ಚ್ ಸೆಂಟರ್ ಪರ್ಲಡ್ಕ ಪುತ್ತೂರು

ಕೋವಿಡ್‌ನಿಂದ ಕ್ಲೀನ್ ಪ್ರಾಕ್ಟೀಸ್


೨೫ ವರ್ಷಗಳಿಂದ ಆಯುರ್ವೇದ ತಜ್ಞನಾಗಿ ಕೆಲಸ ಮಾಡುತ್ತಿದ್ದೇನೆ. ಸರಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಕೋವಿಡ್ ನಿಂದಾಗಿ ಭಾರತದಲ್ಲಿ ಮರಣ ಪ್ರಮಾಣ ತುಂಬಾ ಕಡಿಮೆಯಾಗಿದೆ. ಕೋವಿಡ್‌ನಿಂದಾಗಿ ಕ್ಲೀನ್ ಪ್ರಾಕ್ಟೀಸ್ ಪರಿಕಲ್ಪನೆ ಬಂದಿದೆ. ಮೊದಲು ಸ್ವಚ್ಛತೆಯ ಬಗ್ಗೆ ಕೇರ್ ಮಾಡುತ್ತಿರಲಿಲ್ಲ. ಇನ್ನು ಮುಂದಕ್ಕೂ ನಮ್ಮ ಪ್ರಾಕ್ಟೀಸ್ ಹೀಗೆ ಇರಬೇಕೆಂಬುದು ನಮ್ಮ ಆಶಯ – ಡಾ. ಪ್ರದೀಪ್ ಕುಮಾರ್ ವೈದ್ಯರು, ಕೋಟಕ್ಕಲ್ ಆಯುರ್ವೇದ ವೈದ್ಯಶಾಲಾ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.