ಮಡಂತ್ಯಾರು ಕಾಲೇಜಿನ ಶಾರೀರಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಫಿಲೋಮಿನಾ ಕಾಲೇಜಿಗೆ ವರ್ಗಾವಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಕೊಂಬೆಟ್ಟು ನಿವಾಸಿ ದಿ.ಆಂಟನಿ ಪಿಂಟೋ ಹಾಗೂ ಜ್ಯುಲಿಯಾನಾ ಪಿಂಟೋರವರ ಪುತ್ರ, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜ್‌ನಲ್ಲಿ ಶಾರೀರಿಕ ಶಿಕ್ಷಣ ನಿರ್ದೇಶಕರಾಗಿ ಕಳೆದ ಹನ್ನೊಂದು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿರುವ ಲೆಫ್ಟಿನೆಂಟ್ ಎಲ್ಯಾಸ್ ಪಿಂಟೋರವರು ಪ್ರಸ್ತುತ ಜುಲೈ ೧ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿಗೆ ಶಾರೀರಿಕ ಶಿಕ್ಷಣ ನಿರ್ದೇಶಕರಾಗಿ ವರ್ಗಾವಣೆಗೊಂಡು ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾರವರಿಂದ ಅಧಿಕಾರ ಸ್ವೀಕರಿಸಿದ್ದಾರೆ.

ಈಗಾಗಲೇ ಫಿಲೋಮಿನಾ ಕಾಲೇಜಿನಲ್ಲಿ ಶಾರೀರಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಡಿ’ಸೋಜರವರು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜ್‌ಗೆ ವರ್ಗಾವಣೆಗೊಂಡಿದ್ದಾರೆ. ಮಡಂತ್ಯಾರು ಕಾಲೇಜಿನಲ್ಲಿ ಶಾರೀರಿಕ ಶಿಕ್ಷಣ ನಿರ್ದೇಶಕ ನಿವೃತ್ತಿ ಹುದ್ದೆಯಿಂದ ತೆರವಾದ ಸ್ಥಾನಕ್ಕೆ ಕರ್ತವ್ಯ ನಿರ್ವಹಿಸಲು ಹೋಗುವ ಮುನ್ನ ಎಲ್ಯಾಸ್ ಪಿಂಟೋರವರು ಸಂತ ಫಿಲೋಮಿನಾ ಕಾಲೇಜಿನಲ್ಲಿಯೇ ಶಾರೀರಿಕ ಶಿಕ್ಷಣ ನಿರ್ದೇಶಕರಾಗಿ ಸ್ಥಳೀಯ ಮಾಯಿದೆ ದೇವುಸ್ ಚರ್ಚ್ ಆಡಳಿತ ಮಂಡಳಿಯಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೆ ತಾನು ಕಲಿತ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆಯಲ್ಲಿ ಶಾರೀರಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುವ ಭಾಗ್ಯವೂ ದೊರಕಿದೆ.
 

ಫಿಲೋಮಿನಾದಲ್ಲಿ ಛಾಪು:
ಕಾಲೇಜ್ ಹಂತದಲ್ಲಿ ಕಬಡ್ಡಿ ತಂಡವು ರಾಜ್ಯಮಟ್ಟದ ಚಾಂಪಿಯನ್ ಆಗಿಯೂ ಎಲ್ಯಾಸ್‌ರವರು ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಮೂಡಿ ಬಂದಿರುತ್ತದೆ. ಸತತ ಹತ್ತು ವರ್ಷ ವೈಟ್‌ಲಿಪ್ಟಿಂಗ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಮಟ್ಟದಲ್ಲಿ ಫಿಲೋಮಿನಾ ಕಾಲೇಜು ದಾಖಲೆಯನ್ನು ಮಾಡಿರುತ್ತದೆ. ಆರೇಳು ಬಾರಿ ಪುರುಷರ ಕಬಡ್ಡಿಯಲ್ಲಿ, ಮೂರ್‍ನಾಲ್ಕು ಬಾರಿ ಅತ್ಲೆಟಿಕ್ಸ್‌ನಲ್ಲಿ ಚಾಂಪಿಯನ್ ಎನಿಸಿಕೊಂಡಿದೆ. ಪದವಿ ಪೂರ್ವ ಕಾಲೇಜ್ ಹಂತದಲ್ಲಿ ಕಬಡ್ಡಿ ತಂಡವು ರಾಜ್ಯಮಟ್ಟದ ಚಾಂಪಿಯನ್ ಆಗಿಯೂ ಎಲ್ಯಾಸ್‌ರವರು ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಮೂಡಿ ಬಂದಿರುತ್ತದೆ.

ಮಡಂತ್ಯಾರಿನಲ್ಲಿ ಕಬಡ್ಡಿ ಮೊದಲ ಬಾರಿಗೆ ವಿನ್ನರ್ಸ್ :
ಫಿಲೋಮಿನಾದಿಂದ ಮಡಂತ್ಯಾರು ಕಾಲೇಜ್‌ಗೆ ತೆರಳಿದ ಬಳಿಕ ಅತ್ಯುತ್ಸಾಹಿ ಯುವಕರನ್ನೊಳಗೊಂಡ ಕಬಡ್ಡಿ ತಂಡವನ್ನು ರಚಿಸಿದ ಪರಿಣಾಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಬಾರಿಗೆ ಮಡಂತ್ಯಾರು ಕಬಡ್ಡಿ ತಂಡ ವಿನ್ನರ್ಸ್ ಆಗಿ ಮೆರೆದಿರುವುದು ಇತಿಹಾಸ. ಬಳಿಕ ಪ್ರತಿ ವರ್ಷ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಮಡಂತ್ಯಾರು ಕಾಲೇಜು ತಂಡ ಸೆಮಿಫೈನಲ್ ಹಾಗೂ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಡುತ್ತಿರುವುದು ವಿಶೇಷವೆನಿಸಿದೆ. ಎಲ್ಯಾಸ್‌ರವರ ಜೊತೆಯಲ್ಲಿ ಒಂದೊಮ್ಮೆ ಫಿಲೋಮಿನಾದಲ್ಲಿ ಕಬಡ್ಡಿ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಬೀಬ್ ಮಾಣಿಯವರ ಸೇವೆಯೂ ಇದೆ ಎಂಬುದು ಸುಳ್ಳಲ್ಲ. ಬಾಲ್ ಬ್ಯಾಡ್ಮಿಂಟನ್ ಹಾಗೂ ಕಬಡ್ಡಿಯಲ್ಲಿ ಅಂತರ್ ವಿಶ್ವವಿದ್ಯಾನಿಲಯದಲ್ಲೂ ಗಮನಾರ್ಹ ಪ್ರದರ್ಶನವನ್ನು ಮಡಂತ್ಯಾರು ಕಾಲೇಜು ತಂಡ ನೀಡಿದೆ.

ಕ್ರೀಡೆಯಲ್ಲಿ ವಿವಿಯನ್ನು ಪ್ರತಿನಿಧಿಸಿದ್ದರು:
ಸ್ವತಃ ಎಲ್ಯಾಸ್ ಪಿಂಟೋರವರು ಓರ್ವ ಕ್ರೀಡಾಪಟುವಾಗಿದ್ದು, ಮೈಸೂರಿನಲ್ಲಿ ಬಿಪಿಎಡ್ ಹಾಗೂ ಎಂಪಿಎಡ್ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾವೆಲಿನ್, ವೈಟ್‌ಲಿಪ್ಟಿಂಗ್ ಹಾಗೂ ಕಬಡ್ಡಿಯನ್ನು ಪ್ರತಿನಿಧಿಸಿ ಅದರಲ್ಲಿ ಚಿನ್ನದ ಪದಕವನ್ನು ಅವರು ಗಳಿಸಿದ್ದರು. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮಂಗಳೂರು ಡಿವಿಷನ್ ಕ್ರಿಕೆಟ್ ಲೀಗ್, ಸೂಪರ್ ಡಿವಿಷನ್ ಕ್ರಿಕೆಟ್‌ನಲ್ಲಿ ಎಲ್ಯಾಸ್‌ರವರು ತಾನೂ ಆಡಿ, ಹುಡುಗರನ್ನು ಹುರಿದುಂಬಿಸುವ ಕಲೆಯನ್ನು ಕರಗತ ಮಾಡಿಕೊಂಡಿದಿದ್ದರು. ಕೊಂಬೆಟ್ಟುನಲ್ಲಿರುವ ತನ್ನ ಮನೆಯ ಆವರಣದಲ್ಲಿ ಉಚಿತವಾಗಿ ಕೋಚಿಂಗ್ ಕೊಡುವ ಮೂಲಕ ಹಲವಾರು ಮಂದಿ ಕ್ರಿಕೆಟ್‌ಪಟುಗಳನ್ನು ಹುರಿಗೊಳಿಸಿದ್ದರು. ಕರ್ನಾಟಕದ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಎನಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಆಸೋಸಿಯೇಶನ್(ಕೆಎಸ್‌ಸಿಎ) ಇದರ ಪುತ್ತೂರು ಯೂನಿಯನ್ ಕ್ರಿಕೆಟ್ ಕ್ಲಬ್‌ನ ಅಧಿಕೃತ ತರಬೇತುದಾರರಾಗಿ ನೂರಾರು ಮಕ್ಕಳಿಗೆ ಉಚಿತವಾಗಿ ಕೋಚಿಂಗ್ ನೀಡಿದ್ದರು.

ಎಲ್ಯಾಸ್ ಪಿಂಟೋರವರು ಕೇವಲ ಓರ್ವ ಶಾರೀರಿಕ ಶಿಕ್ಷಣ ನಿರ್ದೇಶಕರಾಗದೆ ಅವರೋರ್ವ ಉತ್ತಮ ನೃತ್ಯಪಟುವೂ ಆಗಿದ್ದಾರೆ. ಪಿಂಟೋ ಬ್ರದರ್ಸ್ ಎಂಬ ನೃತ್ಯ ತಂಡದ ರುವಾರಿಯೂ ಎಲ್ಯಾಸ್ ಪಿಂಟೋರವರು ಆಗಿದ್ದು, ಪುತ್ತೂರಿನ ಪ್ರಥಮ ನೃತ್ಯಸಂಸ್ಥೆ ಎಂಬ ಬಿರುದು ಕೂಡ ಪಿಂಟೋ ಬ್ರದರ್ಸ್ ನೃತ್ಯ ತಂಡಕ್ಕಿದೆ. ನೂರಾರು ವಿದ್ಯಾರ್ಥಿಗಳಿಗೆ ಭಾರತೀಯ ಹಾಗೂ ಪಾಶ್ಚಾತ್ಯ ನೃತ್ಯವನ್ನು ಕಲಿಸಿ ವಿದ್ಯಾರ್ಥಿಗಳು ಹೆಸರು ಗಳಿಸುವಂತೆ ಮಾಡಿರುವುದು ಎಲ್ಯಾಸ್‌ರವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಪುತ್ತೂರು ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿ ಬರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ಪ್ರಸ್ತುತ ಸದಸ್ಯರಾಗಿ, ರೋಟರಿ ಕ್ಲಬ್‌ ಪುತ್ತೂರು ಯುವದ ಸದಸ್ಯರಾಗಿ ಎಲ್ಯಾಸ್‌ರವರು ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರಿನಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ರವರ ಸಾರಥ್ಯದಲ್ಲಿ ನಡೆಯುವ ಪ್ರೊ ಕಬಡ್ಡಿ ಸಂದರ್ಭದಲ್ಲಿ ಎಲ್ಯಾಸ್ ಪಿಂಟೋರವರು ಸಕ್ರಿಯ ಕಾರ್ಯ ನೀಡಿರುತ್ತಾರೆ.

ಅಂತರ್ರಾಷ್ಟ್ರೀಯ ಕಬಡ್ಡಿಪಟು ರೋಸ್‌ಮೇರಿ ಪ್ರೆಸಿಲ್ಲಾ,  ಪ್ರೊ ಕಬಡ್ಡಿ ಪ್ರಶಾಂತ್ ರೈ ಎಲ್ಯಾಸ್ ಗರಡಿಯಲ್ಲಿ ಮಿಂಚಿಂಗ್…
೨೦೦೯ರಲ್ಲಿ ಫಿಲೋಮಿನಾದಿಂದ ಮಡಂತ್ಯಾರು ಕಾಲೇಜ್‌ಗೆ ತೆರಳುವ ಮುನ್ನ ಫಿಲೋಮಿನಾದಲ್ಲಿ ಪ್ರಥಮ ಬಾರಿ ಮಹಿಳೆಯರ ಕಬಡ್ಡಿ, ವೈಟ್‌ಲಿಪ್ಟಿಂಗ್ ಹಾಗೂ ಪವರ್‌ಲಿಪ್ಟಿಂಗ್‌ನ್ನು ಪರಿಚಯಿಸಿ ಅದರಲ್ಲಿ ಗೆಲುವನ್ನೂ ಕಂಡಿದ್ದರು. ಕಬಡ್ಡಿಯಲ್ಲಿ ರೋಸ್‌ಮೇರಿ ಪ್ರೆಸಿಲ್ಲಾರವರು ಅಂತರ್ರಾಷ್ಟ್ರೀಯ ಕಬಡ್ಡಿಗೆ ಆಯ್ಕೆಯಾದವರು, ಅಲ್ಲದೆ ಕಬಡ್ಡಿ, ವೈಟ್‌ಲಿಪ್ಟಿಂಗ್ ಹಾಗೂ ಪವರ್‌ಲಿಪ್ಟಿಂಗ್‌ನಲ್ಲಿ ಚಾಂಪಿಯನ್ ಎನಿಸಿಕೊಂಡದ್ದು ಎಲ್ಯಾಸ್‌ರವರ ಮಹತ್ಸಾಧನೆಯಾಗಿದೆ. ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ, ಡೆಕಾತ್ಲಾನ್‌ನಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ರಾಮಚಂದ್ರ ಪಾಟ್ಕರ್, ಜಾವೆಲಿನ್‌ನಲ್ಲಿ ಹರೀಶ್ ಕೆ.ವಿ ಅಲ್ಲದೆ ಸುಮಾರು ೨೦೦ಕ್ಕೂ ಮಿಕ್ಕಿ ಫಿಲೋಮಿನಾ ಹಾಗೂ ಮಡಂತ್ಯಾರು ಕಾಲೇಜ್‌ನ ಕ್ರೀಡಾಪಟುಗಳು ಎಲ್ಯಾಸ್‌ರವರ ಗರಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುತ್ತಾರೆ.

ಮಡಂತ್ಯಾರು ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಸುಮಾರು ರೂ.೪ ಕೋಟಿ ಯುಜಿಸಿ ಅನುದಾನ, ಕಾಲೇಜ್ ಮತ್ತು ಸಾರ್ವಜನಿಕರ ಸಹಕಾರದಿಂದ ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಮಲ್ಟಿ ಜಿಮ್, ಟೇಬಲ್ ಟೆನ್ನಿಸ್, ವೈಟ್‌ಲಿಪ್ಟಿಂಗ್ ಒಳಗೊಂಡ ಕ್ರೀಡೆಗಳನ್ನು ಆಡಬಹುದಾದ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಹಾಗೂ ೪೦೦ಮೀ. ಟ್ರ್ಯಾಕ್‌ನ ಕ್ರೀಡಾಂಗಣವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದು ಎಲ್ಯಾಸ್ ಪಿಂಟೋರವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಮಾತ್ರವಲ್ಲದೆ ಸ್ಥಳೀಯವಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಕೂಡ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.