HomePage_Banner
HomePage_Banner
HomePage_Banner

ಬಿಳಿ ವಸ್ತ್ರದ ಸೈನಿಕರಿಗೆ ವೈದ್ಯರ ದಿನದ ಶುಭಾಶಯಗಳು

Puttur_Advt_NewsUnder_1
Puttur_Advt_NewsUnder_1

ವೈದ್ಯಕೀಯ ಕ್ಷೇತ್ರವೊಂದು ನಿಜವಾಗಿಯೂ ಅದ್ಭುತ,ಅಚ್ಚರಿಯ ಸೇವಾ ಕ್ಷೇತ್ರ. ತಾಯಿಯ ಗರ್ಭದಲ್ಲಿ ಭ್ರೂಣವೊಂದು ಜನ್ಮತಾಳಿದಲ್ಲಿನಿಂದ ತೊಡಗಿ ಮನುಷ್ಯನ ಕೊನೆಯ ಉಸಿರಿನವರೆಗೂ ನಿರಂತರವಾಗಿ ದೇಹದಲ್ಲಿ ಆಗುವ ದೈಹಿಕ, ಮಾನಸಿಕ ಬದಲಾವಣೆಗಳಿಗೆ , ತೊಂದರೆಗಳಿಗೆ ಪರಿಹಾರವನ್ನು, ಮಾರ್ಗದರ್ಶನವನ್ನು ನೀಡುವವರು ,ನಿಸ್ವಾರ್ಥ ಸೇವೆಯನ್ನು ನಡೆಸುವ ವೈದ್ಯರುಗಳು. ಹಾಗಾಗಿಯೇ ನಾವು ವೈದ್ಯ ದೇವೋ ಭವ ಎನ್ನುತ್ತೇವೆ. ಆಪತ್ಕಾಲದಲ್ಲಿ, ಸಂಕಷ್ಟದಲ್ಲಿ, ನೋವಿನಲ್ಲಿ ಸಹಾಯವನ್ನು ನೀಡುವ ವೈದ್ಯಲೋಕದ ಎಲ್ಲ ವೈದ್ಯರುಗಳಿಗೆ ,ಆರೋಗ್ಯ ಕಾರ್ಯಕರ್ತರುಗಳಿಗೆ , ಸೇವಾನಿರತ ದಾದಿಯರಿಗೆ, ಆರೋಗ್ಯ ಕ್ಷೇತ್ರದ ಚುಕ್ಕಾಣಿ ಹಿಡಿದಿರುವ ಎಲ್ಲ ಬಂಧುಗಳಿಗೆ ‘ ವೈದ್ಯರ ದಿನದ ‘ ವಿಶೇಷ ಅಭಿನಂದನೆಗಳು.

ಭಾರತದಾದ್ಯಂತ ಜುಲೈ 1 ನ್ನು ವೈದ್ಯರ ದಿನವನ್ನಾಗಿ ಆಚರಿಸುತ್ತಾ ಬಂದಿದ್ದಾರೆ. ದೇಶದ ಅತ್ಯುನ್ನತ ಪದವಿಯಾದ ಭಾರತರತ್ನವನ್ನ ಪಡೆದಿರುವ ಡಾ.ಬಿದನ್
ಚಂದ್ರ ರಾಯ್ ಅವರ ಜೀವನದ ಸಾಧನೆಯನ್ನು ಗೌರವಿಸಿ ಅವರ ನೆನಪಿನಲ್ಲಿ ಈ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅವರ ಹುಟ್ಟು, ಸಾವು ಎರಡೂ ಜುಲೈ 1 ಆಗಿರುವುದು ವಿಶೇಷ!

ಪ್ರತಿವರ್ಷವೂ ಭಾರತೀಯ ವೈದ್ಯಕೀಯ ಸಂಘ(Indian Medical Association)ವಿಶೇಷ ಧ್ಯೇಯವಾಕ್ಯ ವನ್ನ ಹೊರತರುತ್ತದೆ. 2019ರ ವರ್ಷವನ್ನು ” Zero tolorance to voilence against doctors and clinical establishments” , ಎಂಬುದಾಗಿ ,ವೈದ್ಯರ ಮೇಲೆ ಹಾಗೂ ಆಸ್ಪತ್ರೆಗಳ ಮೇಲೆ ನಡೆಯುವ ಹಲ್ಲೆಯನ್ನು ತಡೆಯುವ ಆಶಯದೊಂದಿಗೆ ನಡೆದಿತ್ತು. 

ದೇಶವನ್ನು ಕಾಯುವ ಯೋಧರಂತೆ ದೇಹದ ಕಾಯಿಲೆಗಳಿಂದ ನಮ್ಮನ್ನು ಕಾಯುವ ಬಿಳಿವಸ್ತ್ರದ ಸೈನಿಕರು ಇವರು. ವೈದ್ಯಕೀಯ ಕ್ಷೇತ್ರಕ್ಕೆ ತನ್ನನ್ನು ಸಮರ್ಪಿಸಿಕೊಂಡ ಪ್ರತಿಯೋರ್ವ ವೈದ್ಯನಿಗೂ ಸೇವೆ ಪರಮಧರ್ಮ. ತನ್ನ ಕೌಟಂಬಿಕ ಸಂತೋಷ, ಸಮಯ, ಆಸಕ್ತಿ, ಅಭಿರುಚಿಗಳನ್ನು ಸೀಮಿತಗೊಳಿಸಿ ರೋಗಿಗಳ ಸೇವೆಯಲ್ಲಿ ತೊಡಗಿಸಿ ಕೊಂಡಿರುವುದನ್ನು ನಾವೆಲ್ಲಾ ಕಂಡಿದ್ದೇವೆ. ಸಮುದಾಯದ ಆರೋಗ್ಯ, ರಕ್ಷಣೆಯಲ್ಲಿ ತನ್ನನ್ನು ಸದಾ ತೊಡಗಿಸಿ ಕೊಂಡಿರುವ ವೈದ್ಯ ಕ್ಷೇತ್ರಕ್ಕೆ ಕ್ಷಣ ಕ್ಷಣಕ್ಕೂ ಹೊಸ ಸವಾಲುಗಳು……

ದಿನಕ್ಕೊಂದರಂತೆ ಹುಟ್ಟಿಕೊಳ್ಳುವ ವೈರಸುಗಳು, ಘಳಿಗೆ ಗೊಮ್ಮೆಯೆನ್ನುವಂತೆ ತನ್ನ ಲಕ್ಷಣಗಳನ್ನು ಬದಲಾಯಿಸುವ ಕಾಯಿಲೆಗಳು, ವ್ಯಕ್ತಿ ಯಿಂದ ವ್ಯಕ್ತಿಗೆ ಬಿನ್ನವಾಗಿ ಗೋಚರಿಸುವ ಕಾಯಿಲೆಗಳು…ರೋಗದ ಚಿನ್ಹೆಗಳು… ರೋಗಿಯಿಂದ ರೋಗಿಯಲ್ಲಿ ಭಿನ್ನವಾದ ಪರಿಣಾಮವನ್ನ  ಬೀರುವ ಔಷಧ ಗಳು….

ಈ ಎಲ್ಲ ಸವಾಲುಗಳನ್ನು ,ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸುವ ಮನೋಸ್ಥೆರ್ಯದಿಂದ  ಮಳೆ ಚಳಿ ಎನ್ನದೆ ಸವಾಲುಗಳಿಗೆ ಎದೆಯೊಡ್ಡಿ  ರಕ್ಷಾ ಕವಚ ದಂತೆ ಸೇವೆ ಸಲ್ಲಿಸುವವರು ಈ ನಮ್ಮ ಹೆಮ್ಮೆಯ ವೈದ್ಯಕೀಯ ರಂಗದ ಸಾಧಕರಿವರು.

ಇಂದು ವೈದ್ಯಕೀಯ ಕ್ಷೇತ್ರ ಬಹಳಷ್ಟು ಆವಿಷ್ಕಾರಗಳನ್ನು ಕಂಡಿದೆ. ಪ್ರನಾಳ ಶಿಶುಗಳು, ಅಂಗಾಂಗಗಳ ಜೋಡಣೆ/ ಕಸಿ, ಹೃದಯದ ಸಮಸ್ಯೆಗಳನ್ನು, ಕಾಯಿಲೆಯನ್ನು ಸರಿ ಪಡಿಸಲು ಯಂತ್ರಗಳು, … ಒಟ್ಟಾರೆಯಾಗಿ ಸರಾಸರಿ ಜೀವಿತಾವಧಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನಸಾಮಾನ್ಯರ ಬದುಕಿನಲ್ಲಿ ಒತ್ತಡದಿಂದಾಗಿ, ಆಹಾರ ಶೈಲಿ, ನಾಗಾಲೋಟದಿಂದ 60 ರಲ್ಲಿ ಬರುತ್ತಿದ್ದ ಕಾಯಿಲೆಗಳು 30ಕ್ಕೇ ಬರಲು ಪ್ರಾರಂಭವಾಗಿದ್ದರೂ  ಇಂದು ಪರಿಣಾಮಕಾರಿಯಾದ ಔಷಧಿಗಳು, ಚಿಕಿತ್ಸೆಗಳು ಲಭ್ಯವಿವೆ. ಶಸ್ತ್ರ ಚಿಕಿತ್ಸೆ ಯಲ್ಲಿ ಸೂಕ್ಷ್ಮ ರಂದ್ರದ ಚಿಕಿತ್ಸೆ, ರೋಬೋ ತಂತ್ರಜ್ಞಾನಗಳು ಬಳಕೆಯಲ್ಲಿವೆ.  ಈ ಎಲ್ಲ ಬೆಳವಣಿಗೆಗಳಲ್ಲಿ ವೈದ್ಯರೂ ಬದಲಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದೇ ವಿಶೇಷ.

ವೈದ್ಯ ವೃತ್ತಿಯೇ ಸ್ಪೂರ್ತಿ:
ತಮ್ಮ ಕುಟುಂಬದಲ್ಲಿ ಯಾರಾದರೂ ಕಾಯಿಲೆ ಬಿದ್ದಾಗ ವೈದ್ಯರು ನೀಡಿದ ಸೇವೆಯನ್ನು ಕಂಡ  ಎಷ್ಟೋ ಯುವ ಮನಸ್ಸುಗಳಿಗೆ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ವೈದ್ಯರೇ ಸ್ಪೂರ್ತಿ. ಅವರು ನೀಡಿದ ಸೇವೆಯನ್ನು ಗಮನಿಸಿದಾಗ ನೋವನ್ನು ಶಮನಗೊಳಿಸಲು ಭಗವಂತನೇ ಈ ರೂಪಿನಲ್ಲಿ ಬಂದು ನಮ್ಮನ್ನು, ನಮ್ಮ ಕುಟುಂಬದವರನ್ನು ರಕ್ಷಿಸಿದವನು ಎಂದುಕೊಂಡು ತಾನೂ ಓರ್ವ ವೈದ್ಯ/ವೈದ್ಯೆಯಾಗಿ ಸೇವೆಯನ್ನು ಗೈಯಬೇಕೆಂದುಕೊಂಡ ಮನಸುಗಳೆಷ್ಟೋ. ಅದಕ್ಕಾಗಿ ಹಗಲಿರುಳು ಶ್ರಮವಹಿಸಿ ಶಿಕ್ಷಣವನ್ನು ಪಡೆದು ಸೇವೆಯಲ್ಲಿ ತೊಡಗಿಸಿಕೊಂಡು ಧನ್ಯರಾದ ಜನರೆಷ್ಟೋ.

ಇಂದು ವೈದ್ಯಕೀಯ ಕ್ಷೇತ್ರದ ಮುಂದೆ ಹಲವಾರು ಸವಾಲುಗಳಿವೆ. ಸರ್ಕಾರದ ನಿಯಮಗಳು, ವೈದ್ಯರ ಮೇಲೆ ನಡೆಯುವ ಹಲ್ಲೆಗಳು, ವೈದ್ಯಕೀಯ ವೆಚ್ಚದ ಮೇಲಿನ ಮನೋಭಾವನೆಗಳು, ವೈದ್ಯಕೀಯ ವಿಮೆ, ಇತ್ಯಾದಿ..

ಇವೆಲ್ಲದರ ನಡುವೆ ಕೊರೋನ ಎಂಬ ಮಹಾಮಾರಿ ಜಗತ್ತನ್ನೇ ತನ್ನ ಮುಷ್ಟಿಯಲ್ಲಿ ಹಿಡಿದಿಡುವ ಪ್ರಯತ್ನ ದಲ್ಲಿರುವಾಗ ಅವಿರತ ಸೇವೆಯನ್ನು ನೀಡುತ್ತಿರುವ ಎಲ್ಲ ವೈದ್ಯರುಗಳಿಗೂ ಈ ದಿನದ ವಿಶೇಷ ಅಭಿನಂದನೆಗಳು. ವೈದ್ಯ ಲೋಕಕ್ಕೆ ಸವಾಲಾಗಿರುವ ಈ ಕಂಟಕವನ್ನು ಎದುರಿಸುತ್ತಾ ರೋಗಿಗಳಿಗೆ ಸೇವೆಯನ್ನು ನೀಡುತ್ತಿರುವ ವೈದ್ಯರುಗಳು ನಿಜವಾಗಿಯೂ ಅಭಿನಂದನಾರ್ಹರು. ಸಾಂಕೇತಿಕವಾಗಿ ಈ ದಿನವನ್ನು ಅವರಿಗಾಗಿ ಮೀಸ ಲ್ಲಿಟ್ಟರೂ, ಎಲ್ಲ ದಿನಗಳಲ್ಲೂ ನಮ್ಮ ರಕ್ಷಣೆಯನ್ನು ಜವಾಭ್ದಾರಿಯುತವಾಗಿ ಮಾಡುತ್ತಿರುವ ಹೊಣೆಗಾರಿಕೆಯನ್ನು ಹೊಂದಿರುವ ಎಲ್ಲಾ ವೈದ್ಯರುಗಳಿಗೆ ವಂದನೆಗಳನ್ನು ಸಲ್ಲಿಸೋಣ. ಸೇವೆ ಎನ್ನುವುದು ನಿರಂತರವಾಗಿ ನಡೆಯುವ ಪ್ರಕ್ರಿಯೆ.ಅದನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ತುಂಬಿರುವ ಜ್ಞಾನ, ಸದಾ ಹೊಸತನಕ್ಕೆ ತೆರೆದುಕೊಳ್ಳಬೇಕಾದ ಅನಿವಾರ್ಯತೆ, ಸಹಾಯಕ್ಕೆ ತವಕಿಸುವ, ತುಡಿಯುವ , ಮಿಡಿಯುವ, ಪ್ರೀತಿ, ಧೈರ್ಯ ತುಂಬುವ  ವೈದ್ಯರುಗಳಿಗೆ ನಮ್ಮ ಗೌರವದ ನಮನಗಳು.

ಡಾ. ವಿಜಯ ಸರಸ್ವತಿ . ಬಿ.
ಸಂಯೋಜಕರು, ಸ್ನಾತಕೋತ್ತರ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.